ಗುರುವಾರ , ಆಗಸ್ಟ್ 11, 2022
27 °C

PV Web Exclusive| ನಾಟ್‌ ರೀಚೆಬಲ್‌, ಸರ್ವರ್‌ ಡೌನ್‌ ಸಮಸ್ಯೆಗೆ ಕೊನೆಯೆಂದು?

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

5ಜಿ ನೆಟ್‌ವರ್ಕ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌... ಹೀಗೆ ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಎಗ್ಗಿಲ್ಲದೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಹಾಲಿ ಇರುವ ವ್ಯವಸ್ಥೆಗಳಲ್ಲಿ ಇರುವ ದೋಷಗಳನ್ನು ಸರಿಪಡಿಸುವವರು ಯಾರು? ಅಂಥಾ ಸಮಸ್ಯೆಗಳೇನಿವೆ ಎನ್ನುವಿರಾ? ಹಾಗಾದರೆ ಈ ಕೆಳಗಿನ ಕೆಲವು ಘಟನೆಗಳನ್ನು ಓದಿ ನೋಡಿ...

ಘಟನೆ 1: ಕಳೆದ ಭಾನುವಾರ ಬೆಳಿಗ್ಗೆಯೇ ಮನೆಗೆ ಬರುವುದಾಗಿ ಸ್ನೇಹಿತನೊಬ್ಬ ಹೇಳಿದ್ದ. ಎಲ್ಲಿದ್ದಾನೆ ಕೇಳುವ ಅಂತ ಕಾಲ್‌ ಮಾಡಿದರೆ ‘ಎಲ್ಲಿದ್ದೆ ಮಾರಾಯಾ ನೀನು? ಅರ್ಧ ಗಂಟೆಯಿಂದ ಕಾಲ್‌ ಮಾಡ್ತಿದೀನಿ, ಸ್ವಿಚ್ಡ್‌ ಆಫ್‌ ಅಂತ ಬರ್ತಿದೆ ಅಂದ’. ಎಲ್ಲಿ ಹೋಗ್ಲಿ ಮನೆಲೇ ಇದೀನಿ ಅಂತ ಹೇಳಿ, ಅಂಗಡಿ ಮುಂದೆ ನಿಂತಿದ್ದವನನ್ನು ಮನೆಗೆ ಕರೆದುಕೊಂಡು ಬಂದೆ. ಸ್ನೇಹಿತನಾಗಿದ್ದಕ್ಕೆ ‘ನಾ ಬರ್ತಿನಿ ಅಂತ ಹೇಳಿದ್ಕೆ ಸ್ವಿಚ್ಡ್ ಆಫ್‌ ಮಾಡಿ ಕೂತಿದ್ದೆಯಾ?’ ಅಂತ ತಮಾಷೆಗೆ ಕಾಲೆಳೆದ. ಅದೇ ಕಚೇರಿ ಕೆಲಸವೋ ಅಥವಾ ಇನ್ಯಾವುದಾದರೂ ಮುಖ್ಯವಾಗಿದ್ದರೆ ಬೇಕು ಅಂತಲೇ ಹೀಗೆ ಮಾಡಿದ್ದಾರೆ ಎಂದು ಆಗುತ್ತಿತ್ತು ಅಲ್ವೇ?

5ಜಿ ಯುಗಕ್ಕೆ ಕಾಲಿಟ್ಟಿದ್ದರೂ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಅಲ್ವೇ?  ಬೆಂಗಳೂರು ನಗರವನ್ನೇ ನೋಡಿದರೂ, ಕೂಗಳತೆ ದೂರದಲ್ಲಿ ಇರುವವರಿಗೆ ಕರೆ ಮಾಡಿದರೂ ನಾಟ್‌ ರೀಚೆಬಲ್, ನಗರದಲ್ಲೇ ಇದ್ದಾರೆ ಎಂದು ತಿಳಿದಿದ್ದರೂ ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದಾಗುವುದು, ಐದು ನಿಮಿಷದ ಹಿಂದೆ ಕರೆ ಮಾಡಿದವರಿಗೆ ಮರಳಿ ಕರೆ ಮಾಡಿದರೆ ಇನ್ಯಾರೋ ಮಾತನಾಡುವುದು ನಿತ್ಯದ ಸಮಸ್ಯೆಯಾಗಿ ಹೋಗಿದೆ.

ಹಳ್ಳಿ ಹಳ್ಳಿಯ ಮೂಲೆ ಮೂಲೆ ತಲುಪಿದ್ದೇವೆ ಎಂದು ಕಂಪನಿಗಳು ಜಾಹೀರಾತು ಕೊಡುತ್ತಿವೆಯೇ ಹೊರತು ವಾಸ್ತವದಲ್ಲಿ ಈಗಲೂ ಹಲವೆಡೆ ಮೊಬೈಲ್‌ ಅನ್ನು ಮೆತ್ತಿಯಲ್ಲಿ ಇಡುವುದು, ಪಕಾಸಿಗೆ ಒಂದು ಮೊಳೆ ಜಡಿದು ಅದಕ್ಕೆ ತೂಗು ಹಾಕುವುದು ತಪ್ಪಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಹಳ್ಳಿಗಳಲ್ಲಿ ನೆಟ್‌ವರ್ಕ್‌ಗಾಗಿ ಮಕ್ಕಳು ಮರಹತ್ತುವುದು, ಗುಡ್ಡಗಾಡು ಅಲೆಯುವುದು ಸುದ್ದಿಯಾಗಿದೆ.

ಮೂರ್ನಾಲ್ಕು ಹಳ್ಳಿಗೊಂದು ಬಿಎಸ್‌ಎನ್‌ಎಲ್‌ ಟವರ್‌ ಇದ್ದಾಗಲೇ ಕವರೇಜ್‌ ಚೆನ್ನಾಗಿತ್ತು. ನೆಟ್‌ವರ್ಕ್‌ ಸಿಗಬೇಕಾದರೆ ಮೊಬೈಲ್‌ ಅನ್ನು ಇಂತಲ್ಲೇ ಇಡಬೇಕು, ಸ್ಪಷ್ಟವಾಗಿ ಮಾತು ಕೇಳಲು ಎಲ್ಲಿ ನಿಲ್ಲಬೇಕು, ಯಾವ ಗುಡ್ಡ ಹತ್ತಬೇಕು ಎನ್ನುವುದು ಸರಿಯಾಗಿ ಗೊತ್ತಿತ್ತು. ಮಳೆ ಬಂದಾಗ ಮಾತ್ರ ಇದರಲ್ಲಿ ಸ್ವಲ್ಪ ವ್ಯತ್ಯಾಸ ಆಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಈಗ ಟವರ್‌ ಕೆಳಗೆ ನಿಂತರೂ ನೆಟ್‌ವರ್ಕ್‌ ಸಿಗುವುದೇ ಇಲ್ಲ. ನಗರಗಳಲ್ಲಿ ಮನೆ, ಕಟ್ಟಡಗಳ ಮೇಲೆ ಇರುವ ಟವರ್‌ಗಳಿಗೇನೂ ಕೊರತೆ ಇಲ್ಲವಾದರೂ ಸಮಸ್ಯೆ ಮತ್ತಷ್ಟು ಹೆಚ್ಚುತ್ತಲೇ ಇದೆ.


ಸಾಂದರ್ಭಿಕ ಚಿತ್ರ

ಘಟನೆ 2: ಸ್ನೇಹಿತರ ಕುಟುಂಬ ಬೆಂಗಳೂರಿನಿಂದ ಮೂಡಿಗೆರೆಗೆ ರಾತ್ರಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಬಂಕ್‌ಗೆ ಹೋಗಿ ₹ 4 ಸಾವಿರದ ಪೆಟ್ರೋಲ್‌ ಹಾಕಿದ ಮೇಲೆ ಕೋಡ್ ಸ್ಕ್ಯಾನ್‌ ಮಾಡಿದರೆ ಹಣ ಪಾವತಿ ಆಗಲೇ ಇಲ್ಲ. ಅವರ ಕೈಯಲ್ಲಿ ಅಷ್ಟು ಕ್ಯಾಷ್‌ ಇರಲಿಲ್ಲ, ಹತ್ತಿರದಲ್ಲಿ ಎಟಿಎಂ ಸಹ ಇಲ್ಲ. ಮತ್ತೇನು ಮಾಡೋದು, ಪೆಟ್ರೋಲ್‌ ಬಂಕ್‌ ಹುಡುಗನಿಗೆ ರಿಕ್ವೆಸ್ಟ್‌ ಮಾಡಿ, ಆತನ ಖಾತೆಗೆ ಹಣ ಹಾಕಿ, ಅಡ್ಜೆಸ್ಟ್‌ ಮಾಡಿಕೊಳ್ಳಲು ಹೇಳಿ ಅಲ್ಲಿಂದ ಹೊರಟರು.

ಘಟನೆ 3: ಸರ್ವರ್‌ ಡೌನ್‌; ‘ರೇಷನ್‌ ಕಾರ್ಡ್‌ ಮಾಡಿಸಲು ಹೋದಾಗೆಲ್ಲಾ ಸರ್ವರ್‌ ಡೌನ್‌. ತಿಂಗಳಿಗೆ ನಾಲ್ಕು ಬಾರಿ ಫುಡ್‌ ಆಫೀಸಿಗೆ ಹೋಗಿಬಂದೆ. ಮಾಹಿತಿಗಳೆಲ್ಲವನ್ನೂ ತುಂಬಿ ಆಗುವ ಹೊತ್ತಿಗೇ ಸರಿಯಾಗಿ ಸರ್ವರ್‌ ಡೌನ್‌ ಆಗುತ್ತಿದೆ. ಲಾಕ್‌ಡೌನ್‌ಗೂ ಮೊದಲೇ ಅರ್ಜಿ ಕೊಟ್ಟಿದ್ದೆ. ಆದರೆ, ಜನವರಿವರೆಗೆ ಅರ್ಜಿ ಸಲ್ಲಿಸಿದ್ದವರಿಗೆ ಕಾರ್ಡ್‌ ಸಿಕ್ಕಿದೆ. ಆ ಬಳಿಕ ಅರ್ಜಿ ಸಲ್ಲಿಸಿದವರಿಗೆ ಕೊರೊನಾ ಸೇರಿಕೊಂಡು ಇನ್ನೂ ಹಲವು ಕಾರಣಗಳಿಗೆ ಅರ್ಜಿ ಸ್ವೀಕೃತ ಆಗಿರಲಿಲ್ಲ. ಐದು ವರ್ಷಕ್ಕೆಂದು ಮಾಡಿಸಿರುವ ಆದಾಯ ಪ್ರಮಾಣಪತ್ರದ ಅವಧಿ ಡಿಸೆಂಬರ್‌ ತಿಂಗಳಿಗೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಮಾಡಿಸೋಣ ಅಂತ ಒಂದು ತಿಂಗಳಿನಿಂದ ಅಲೆಯುತ್ತಿದ್ದೇನೆ. ಕೆಲಸ ಮಾಡಿಕೊಡಲು ಅಧಿಕಾರಿಗಳು ಸಿದ್ಧರಿದ್ದಾರೆ, ಆದರೆ ಸರ್ವರ್‌ ಡೌನ್‌ನಿಂದ ಕೆಲಸ ಆಗುತ್ತಿಲ್ಲ. ಹೀಗೆಯೇ ಆದರೆ, ಆದಾಯ ಪ್ರಮಾಣಪತ್ರಕ್ಕಾಗಿ ಮತ್ತೆ ಅಲೆಯುವ ಪರಿಸ್ಥಿತಿ ಬರಲಿದೆ’ ಎಂದು ಮಹಾಲಕ್ಷ್ಮಿ ಲೇಔಟ್‌ನ ಪ್ರಕಾಶ್‌ ಎನ್ನುವವರು ತಮ್ಮ ಅಳಲು ತೋಡಿಕೊಂಡರು.

ಘಟನೆ 4: ಸಿಲಿಂಡರ್‌ಗೆ ಡಿಜಿಟಲ್‌ ಪಾವತಿ; ಗ್ಯಾಸ್ ಸಿಲಿಂಡರ್‌ಗೆ ಪೇಟಿಎಂ, ಫೋನ್‌ಪೇ ಅಥವಾ ಇನ್ಯಾವುದೇ ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸಬೇಕು ಎನ್ನುವುದು ಸಿಲಿಂಡರ್‌ ವಿತರಕರ ಆದೇಶ. ಎಲ್ಲರ ಬಳಿಯೂ ಸ್ಮಾರ್ಟ್‌ಪೋನ್‌ ಇರಲೇ ಬೇಕು ಎಂದೇನಿಲ್ಲವಲ್ಲ. ವೃದ್ಧ ದಂಪತಿ ಪಿಂಚಣಿಯಲ್ಲಿ ಜೀವನ ಸವೆಸುತ್ತಿದ್ದಾರೆ. ವಿದೇಶದಲ್ಲೆಲ್ಲೋ ಮಕ್ಕಳಿದ್ದಾರೆ, ಅವರಿಗೆ ವಿಡಿಯೊ ಕಾಲ್‌ ಮಾಡಬೇಕು ಅನ್ನೋಕೆ ಅವರಿಗೆ ಮಕ್ಕಳೇ ಇಲ್ಲ. ಹಾಗಾಗಿ, ಸ್ಮಾರ್ಟ್‌ಫೋನ್‌ ಖರೀದಿಸುವುದು ಅವರ ಪಾಲಿಗೆ ಅನಗತ್ಯ ಖರ್ಚೇ ಸರಿ. ಇಂತಹವರ ಬಳಿ ಪ್ರತಿ ಸಾರಿ ಸಿಲಿಂಡರ್‌ ಕೊಡಲು ಬರುವ ವಿತರಕ, ಮುಂದಿನ ಸಲ ಕ್ಯಾಷ್‌ ಆಗಲ್ಲ ಅಂತ ಗದರಿಸೋದು ನಡೆಯುತ್ತಲೇ ಇದೆ.

ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಬೇಕು ಎಂದೇ ಅಂದುಕೊಳ್ಳೋಣ. ಆದರೆ, ಅದಕ್ಕೆ ವ್ಯವಸ್ಥೆ ಸರಿ ಇರಬೇಕಲ್ಲಾ! ನಾನು ಸಿಲಿಂಡರ್‌ ಪಡೆಯುವಾಗ ಒಮ್ಮೆ ಪೇಟಿಎಂ ಮೂಲಕ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿದೆ. ಎರರ್‌ ಬಂತು. ಆಗ ಮತ್ತೊಮ್ಮೆ ಸ್ಕ್ಯಾನ್‌ ಮಾಡಲು ಆಗುವುದಿಲ್ಲ ಕ್ಯಾಷೇ ಕೊಡಿ ಎಂದರು. ಇನ್ನೊಂದು ಸಲ ಕೋಟಕ್‌ ಬ್ಯಾಂಕ್‌ ಮೊಬೈಲ್‌ ಆ್ಯಪ್‌ ಬಳಸಿದಾಗಲೂ ಕೋಡ್‌ ಸ್ಕ್ಯಾನ್‌ ಆಗುವಲ್ಲಿ ಸಮಸ್ಯೆ ಆಯಿತು. ಆಗಲೂ ಕ್ಯಾಷ್‌ ಪಡೆದರು!

ಇನ್ನು, ಬ್ಯಾಂಕಿಂಗ್‌ ಸೇವೆಯ ವಿಷಯಕ್ಕೆ ಬರುವುದಾದರೆ, ತಾಂತ್ರಿಕ ಸಮಸ್ಯೆ ಇಲ್ಲ ಎನ್ನುವ ದಿನವೇ ಇಲ್ಲ. ಯಾರನ್ನೇ ಕೇಳಿದರೂ ಭೀಮ್ ಆ್ಯಪ್‌ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಮಾತು ಬರುತ್ತದೆ. ಇನ್ನು ಎಸ್‌ಬಿಐ ಯುನೊ ಆ್ಯಪ್‌ ಆಗಾಗ್ಗೆ, ತಾಂತ್ರಿಕ ಕಾರಣಕ್ಕೆ ಕೆಲಸ ಮಾಡುವುದಿಲ್ಲ.

ಕೆಲವು ಬ್ಯಾಂಕಿಂಗ್‌ ಸರ್ವರ್‌ಗಳಂತೂ ಕೈಕೊಡುವುದೇ ಹೆಚ್ಚು. ಪಾಸ್‌ಬುಕ್‌ ಎಂಟ್ರಿ ಮಾಡಲು ಬ್ಯಾಂಕ್‌ ಶಾಖೆಗಳಲ್ಲಿ, ಎಟಿಎಂಗಳಲ್ಲಿ ಮಷಿನ್‌ ಇಟ್ಟಿರುತ್ತಾರೆ. ಆದರೆ, ಸರ್ವರ್‌ ಡೌನ್‌ ಕಾರಣಕ್ಕೆ ಎಂಟ್ರಿ ಮಾಡಲು ಆಗುವುದಿಲ್ಲ. ಮಷಿನ್‌ ಇಟ್ಟಿದ್ದೇವೆ ಎನ್ನುವ ಕಾರಣಕ್ಕೆ ಬ್ಯಾಂಕ್‌ನಲ್ಲಿ ಆ ಕೆಲಸಕ್ಕೆಂದು ಯಾರನ್ನೂ ನಿಯೋಜಿಸಿರುವುದಿಲ್ಲ. ಹಾಗಾಗಿ ಅಲ್ಲಿದ್ದವರನ್ನೇ ಕೇಳಿದರೆ, ನಮಗೆ ಬೇರೆ ಕೆಲಸ ಇದೆ. ಮಷಿನ್‌ನಲ್ಲಿ ಮಾಡಿಕೊಳ್ಳಿ ಎನ್ನುವ ಉತ್ತರ ಬರುತ್ತದೆ. ಅದು ಸರಿ ಇಲ್ಲ ಅಂದ್ರೆ, ನಿಮಗೆ ಮಾಡಿಕೊಳ್ಳಲು ಬರುತ್ತಿಲ್ಲವಷ್ಟೇ ಎನ್ನುತ್ತಾರೆ. ಅವರನ್ನೇ ಕರೆದು ತೋರಿಸಿದರೆ, ನಾಳೆ ಸರಿ ಹೋಗುತ್ತೆ ಅನ್ನುತ್ತಾರೆ. ಒಟ್ಟಿನಲ್ಲಿ ಕೆಲಸ ಮಾತ್ರ ಆಗುವುದಿಲ್ಲ. 

ಈಚೆಗಷ್ಟೇ ದೇಶದ ಅತಿದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಎಸ್‌ಬಿಐನ ಯುನೊ ಆ್ಯಪ್‌ ತಾಂತ್ರಿಕ ಕಾರಣಕ್ಕೆ ಕೆಲಸ ಮಾಡಲಿಲ್ಲ. ಅದೇ ರೀತಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನ ಡಿಜಿಟಲ್‌ ಸೇವೆಗಳಲ್ಲಿಯೂ ಸಮಸ್ಯೆ ಆಯಿತು. ಎಚ್‌ಡಿಎಫ್‌ಸಿ ಬ್ಯಾಂಕ್‌ಗಂತೂ ಹೊಸ ಡಿಜಿಟಲ್‌ ಸೇವೆಗಳನ್ನು ಜಾರಿಗೊಳಿಸದಂತೆ ಆರ್‌ಬಿಐ ತಾತ್ಕಾಲಿಕ ನಿರ್ಬಂಧವನ್ನೇ ಹೇರಿದೆ.

ಡಿಜಿಟಲ್‌ ಸೌಲಭ್ಯಗಳನ್ನು ಹೆಚ್ಚಿಸುವುದಕ್ಕೆ ಗಮನ ನೀಡುವ ಜತೆ ಜತೆಗೆ ಸೌಲಭ್ಯದ ನಿರ್ವಹಣೆ ಮತ್ತು ಅದು ಸಮರ್ಪಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಅಗತ್ಯವೂ ಇದೆ. ಆಗ ಮಾತ್ರವೇ ಡಿಜಿಟಲ್‌ ಭಾರತಕ್ಕೆ ಭದ್ರ ಬುನಾದಿ ಹಾಕಲು ಸಾಧ್ಯವಾದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು