ಗುರುವಾರ , ಅಕ್ಟೋಬರ್ 22, 2020
22 °C

ಪೇಟಿಎಂನಿಂದ 'ಮಿನಿ ಆ್ಯಪ್‌ ಸ್ಟೋರ್' ಬಿಡುಗಡೆ; ಗೂಗಲ್‌ಗೆ ಪೈಪೋಟಿ?

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪೇಟಿಎಂ 'ಮಿನಿ ಆ್ಯಪ್‌ ಸ್ಟೋರ್'

ಬೆಂಗಳೂರು: ಕೆಲವು ದಿನಗಳ ಹಿಂದೆ ಗೂಗಲ್‌ ಪ್ಲೇಸ್ಟೋರ್‌ನಿಂದ ಡಿಜಿಟಲ್‌ ಪಾವತಿ ಆ್ಯಪ್‌ 'ಪೇಟಿಎಂ' ದಿಢೀರ್‌ ನಾಪತ್ತೆಯಾಗಿತ್ತು. ಆ ವಿಚಾರ ಭಾರತದ ನವೋದ್ಯಮಗಳ ವಲಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ್ಯಪ್‌ ಡೆವಲಪರ್‌ಗಳಿಗಾಗಿಯೇ ಪೇಟಿಎಂ ಆ್ಯಂಡ್ರಾಯ್ಡ್‌ 'ಮಿನಿ–ಆ್ಯಪ್‌ ಸ್ಟೋರ್‌' ಬಿಡುಗಡೆ ಮಾಡಿರುವುದಾಗಿ ಪ್ರಕಟಿಸಿದೆ.

ಭಾರತೀಯ ಡೆವಲಪರ್‌ಗಳು ತಮ್ಮ ಆ್ಯಪ್‌ಗಳನ್ನು ಮಾರಾಟ ಮಾಡಲು ಆ್ಯಂಡ್ರಾಯ್ಡ್‌ ಮಿನಿ–ಆ್ಯಪ್‌ ಸ್ಟೋರ್‌ ರೂಪಿಸಲಾಗಿದ್ದು, ಗೂಗಲ್‌ ಪಾರಮ್ಯದ ಎದುರು ಹೋರಾಡುವ ಮೊದಲ ಹೆಜ್ಜೆಯಂತೆ ಕಾಣುತ್ತಿದೆ.

ಮಿನಿ ಆ್ಯಪ್‌ಗಳು ಮೊಬೈಲ್‌ ವೆಬ್‌ಸೈಟ್‌ಗಳಾಗಿದ್ದು, ಆ್ಯಪ್‌ ಡೌನ್‌ಲೋಡ್‌ ಮಾಡದೆಯೇ ಆ್ಯಪ್‌ ಬಳಕೆ ರೀತಿಯ ಅನುಭವ ಸಿಗಲಿದೆ ಎಂದು ಪೇಟಿಎಂ ಹೇಳಿದೆ. ಮೊಬೈಲ್‌ ಫೋನ್‌ನಲ್ಲಿ ಮೆಮೊರಿ ಮತ್ತು ಡೇಟಾ ಉಳಿತಾಯ ಮಾಡಲು 'ಮಿನಿ ಆ್ಯಪ್ಸ್‌' ಸಹಕಾರಿಯಾಗಲಿದೆ ಎಂದಿದೆ.

ಮಿನಿ ಆ್ಯಪ್‌ ಸ್ಟೋರ್‌ ಬಿಡುಗಡೆ ಮಾಡಿರುವ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್‌ ಶೇಖರ್‌ ಶರ್ಮಾ, 'ಆ್ಯಪ್‌ ಅಭಿವೃದ್ಧಿ ಪಡಿಸುವ ಭಾರತದ ಪ್ರತಿಯೊಬ್ಬರಿಗೂ ಅವಕಾಶಗಳನ್ನು ಸೃಷ್ಟಿಸಬಹುದಾದ ವೇದಿಕೆಯೊಂದನ್ನು ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ಭಾವನೆ ಮೂಡಿಸಿದೆ. ನಮ್ಮ ವ್ಯಾಪ್ತಿ ಮತ್ತು ಪಾವತಿ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ಹೊಸ ರೀತಿಯ ಸೇವೆಗಳನ್ನು ಅಭಿವೃದ್ಧಿ ಪಡಿಸಲು ದೇಶದ ಯುವ ಡೆವಲಪರ್‌ಗಳಿಗೆ ಪೇಟಿಎಂ ಮಿನಿ ಆ್ಯಪ್‌ ಸ್ಟೋರ್‌ ಅನುವಾಗಲಿದೆ' ಎಂದಿದ್ದಾರೆ.

ಓಲಾ, ಡೆಕಥ್ಲಾನ್‌, ಪಾರ್ಕ್‌+, ರ್‍ಯಾಪಿಡೊ, ನೆಟ್‌ಮೆಡ್ಸ್‌, 1ಎಂಜಿ, ಡಾಮಿನೋಸ್ ಪಿಜ್ಜಾ, ಫ್ರೆಷ್‌ಮೆನು, ನೋಬ್ರೋಕರ್‌ ಸೇರಿದಂತೆ ಸುಮಾರು 300 ಉದ್ಯಮಗಳ ಆ್ಯಪ್‌ಗಳು ಆಗಲೇ ಪೇಟಿಎಂ ಮಿನಿ ಆ್ಯಪ್‌ ಸ್ಟೋರ್‌ನಲ್ಲಿವೆ.


ಪೇಟಿಎಂ ಆ್ಯಪ್‌ನಲ್ಲಿ ಮಿನಿ ಆ್ಯಪ್ಸ್‌

ಪ್ರಸ್ತುತ ಆ್ಯಪ್‌ ಸ್ಟೋರ್‌ ಪರೀಕ್ಷಾ ಹಂತದಲ್ಲಿದ್ದು, ನಿರ್ದಿಷ್ಟ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 1.2 ಕೋಟಿ ಬಾರಿ ಬಳಕೆದಾರರು ಭೇಟಿ ನೀಡಿದ್ದಾರೆ.

ಗೂಗಲ್‌ ಪ್ಲೇ ಸ್ಟೋರ್‌ನಿಂದ ಬಳಕೆದಾರರು ಖರೀದಿಸುವ ಆ್ಯಪ್‌ಗಳಿಗೆ ಶೇ 30ರಷ್ಟು ಕಡಿತಗೊಳಿಸುವುದಾಗಿ ಗೂಗಲ್‌ ಸೆಪ್ಟೆಂಬರ್‌ 28ರಂದು ಪ್ರಕಟಿಸಿದೆ. ಆದರೆ, ಸೋಮವಾರ ಪ್ರಕಟಿಸಿರುವ ಬ್ಲಾಗ್‌ ಪೋಸ್ಟ್‌ನಲ್ಲಿ ಗೂಗಲ್‌, ಹೊಸ ಬಿಲ್ಲಿಂಗ್‌ ವ್ಯವಸ್ಥೆ ಅನುಸರಿಸಲು ಕೊನೆಯ ದಿನವನ್ನು ಭಾರತದಲ್ಲಿ 2022ರ ಮಾರ್ಚ್‌ 31ರ ವರೆಗೂ ವಿಸ್ತರಿಸಿರುವುದಾಗಿ ಹೇಳಿದೆ. ಜಗತ್ತಿನಾದ್ಯಂತ 2021ರ ಸೆಪ್ಟೆಂಬರ್‌ 30 ಹೊಸ ವ್ಯವಸ್ಥೆ ಒಪ್ಪಿಗೆಗೆ ಕೊನೆಯ ದಿನವಾಗಿದೆ.

ವರದಿಗಳ ಪ್ರಕಾರ, ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಆ್ಯಪ್‌ ವಿತರಣೆಯ ಮೂಲಾಧಾರವನ್ನು ಗೂಗಲ್‌ ನಿಯಂತ್ರಿಸುತ್ತಿರುವುದಾಗಿ ವಿಜಯ್‌ ಶೇಖರ್‌ ಶರ್ಮಾ ದೇಶದ ನವೋದ್ಯಮ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಹೇಳಿದ್ದಾರೆ.

ಪೇಟಿಎಂ ಮಿನಿ–ಆ್ಯಪ್‌ಗಳಗಳನ್ನು ಯಾವುದೇ ಶುಲ್ಕ ಪಡೆಯದೆಯೇ ಪಟ್ಟಿ ಮಾಡುತ್ತದೆ ಹಾಗೂ ವಿತರಿಸಲು ವೇದಿಕೆ ನೀಡಲಿದೆ. ಆ್ಯಪ್‌ ಬಳಕೆದಾರರ ಪಾವತಿಗಾಗಿ ಡೆವಲಪರ್‌ಗಳು ಪೇಟಿಎಂ ವ್ಯಾಲೆಟ್‌, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌, ಯುಪಿಐ, ನೆಟ್‌ ಬ್ಯಾಂಕಿಂಗ್‌ ಹಾಗೂ ಕಾರ್ಡ್‌ ಮೂಲಕ ಪಾವತಿಸಲು ಅವಕಾಶ ನೀಡಬಹುದಾಗಿದೆ.

ಗೂಗಲ್‌ನ ಇತ್ತೀಚೆಗಿನ ಕೆಲವು ತೀರ್ಮಾನಗಳು ದೇಶದ ಹಲವು ಕಂಪನಿಗಳಲ್ಲಿ ಅಸಮಾಧಾನ ತರಿಸಿದೆ. ಗೂಗಲ್‌ ನಡೆ ‘ನ್ಯಾಯಬದ್ಧವಾಗಿಲ್ಲ’ ಎಂಬುದು ಹಲವು ನವೋದ್ಯಮ ಕಂಪನಿಗಳ ವಾದ. ಗೂಗಲ್‌ ಪ್ಲೇಸ್ಟೋರ್‌ಗೆ ಪ್ರತಿ ಸ್ಪರ್ಧಿಯಾಗಿ ಸ್ಥಳೀಯವಾಗಿ ಆ್ಯಪ್‌ ಸ್ಟೋರ್‌ ಅಭಿವೃದ್ಧಿ ಪಡಿಸುವ ಸಲಹೆಗಳು ದೇಶದ ನವೋದ್ಯಮ ಕಂಪನಿಗಳ ಸಭೆಯಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು