ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೆಯಾಚೆ... ನಜ್ಮಾ ಬಾಂಗಿ

Published 2 ಡಿಸೆಂಬರ್ 2023, 0:30 IST
Last Updated 2 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಅ ಭಿ ಸಂಘರ್ಷ್‌ ಜಾರಿ ಹೈ.. ಮಸ್ಜಿದ್‌ ಮೆ ಹಮೆ ಜಗಾ ಮಿಲ್ನಿ ಚಾಹಿಯೆ..

(ಸಂಘರ್ಷವಿನ್ನೂ ಜಾರಿ ಇದೆ. ಮಸೀದಿಗಳಲ್ಲಿ ನಮಗೆ ಜಾಗ ಸಿಗಬೇಕು) ಹೀಗೆ ಖಡಾಖಂಡಿತವಾಗಿ ಹೇಳಿದವರು ವಿಜಯಪುರದ ನಜ್ಮಾ ಬಾಂಗಿ.

1982ರಲ್ಲಿ ಸಿನಿಮಾ ನೋಡಿದರು ಎಂಬ ಕಾರಣಕ್ಕೆ ಧಾರ್ಮಿಕ ಬಹಿಷ್ಕಾರಕ್ಕೆ ಒಳಗಾದವರು. ಮತ್ತೆ ಅದರ ವಿರುದ್ಧ ಹೋರಾಡಿದವರು. ಗೋಷಾ ಪದ್ಧತಿ ಒಪ್ಪದೆ ಸಿನಿಮಾ ನೋಡಿದ ನಜ್ಮಾಗೆ ಅದು ಹೋರಾಟ ಅಂತನಿಸಲೇ ಇಲ್ಲ. ‘ಸರಿ ಅಥವಾ ತಪ್ಪು ಎರಡೇ ಇರುವುದು. ಸರಿಯಾಗಿರುವುದಕ್ಕೆ ಪ್ರತಿಭಟಿಸುವುದು ಅನಿವಾರ್ಯವಾದರೆ ಅದಕ್ಕೆ ಹೋರಾಟ ಅನ್ನಿ’ ಎನ್ನುತ್ತ ನಕ್ಕರು.

’ಗಡಿದಾಟಿದ ಹೆಣ್ಣುಗಳ ಕಥನ’ ಎಚ್‌.ಎಸ್‌. ಅನುಪಮಾ ಅವರ ಹೊಸ ಪುಸ್ತಕದಲ್ಲಿ ನಜ್ಮಾಬಾಂಗಿ ಅವರ ಕುರಿತು ಓದಿದ್ದೇ ಆ ಹೆಣ್ಣುಮಗಳನ್ನು ಒಮ್ಮೆ ಭೇಟಿಯಾಗಬೇಕು ಅನಿಸಿತು.

ಹಾಗೆನಿಸಿದ ಮೂರನೆಯ ದಿನದ ಬೆಳಗು ನಜ್ಮಾ ಅವರನ್ನು ಭೇಟಿಯಾಗುವುದರೊಂದಿಗೆ ಆಗಿತ್ತು. ಅನಿಸಿದ  ಆ ಕ್ಷಣದಲ್ಲಿ ದೇವರು ಅಸ್ತು ಅಂದಿರಬೇಕು. ವಿಜಯಪುರದ ಅವರ ಮನೆಯಂಗಳದಲ್ಲಿದ್ದೆ. 

ಮಸೀದಿಗೆ ಹೋಗಿ.. ನನಗೇನು ಮಾಡಬೇಕಾಗಿಲ್ಲ ಆದರೆ ಔರತ್‌ನ ಹಕ್ಕದು. ದೇವರ ಪ್ರಾರ್ಥನೆಯಲ್ಲಿ ಹೆಣ್ಣು ಪ್ರಾರ್ಥನೆ, ಗಂಡು ಪ್ರಾರ್ಥನೆ ಅಂತಿರೂದಿಲ್ಲ. ಇಬಾದತ್‌ (ಆರಾಧನೆಗೆ)ಗೆ ಯಾವ ಲಿಂಗದ ಹಂಗೂ ಇಲ್ಲ.  ನಿಮ್ಮ ದುವಾದಲ್ಲಿಯೂ ಹೆಣ್ಣುಮಗಳ ದುವಾ, ಗಂಡುಮಗನ ದುವಾ ಅಂತಿರೂದಿಲ್ಲ. ಸೃಷ್ಟಿಕರ್ತನ ಮುಂದೆ ಎಲ್ಲರೂ ಸಮಾನರು. ಹಂಗಿರುವಾಗ ಇವರೆಲ್ಲ ಕೀಲಿ ಜಡಿದು ಕೂರುವುದು ಯಾವ ಪುರುಷಾರ್ಥಕ್ಕೆ?

ಮಹಿಳಾ ಅರ್ಚಕರಿಗೆ ಅವಕಾಶ ಕೊಡ್ತಿದಾರಂತಲ್ಲ.. ನಮ್ಮಲ್ಲಿಯೂ ದೇವರನ್ನು ಮುಕ್ತಗೊಳಿಸಬೇಕು. ಮಸೀದಿಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕು. ವಕ್ಫ್‌ ಮತ್ತು ಮಸೀದಿ ನಿರ್ವಹಿಸುವ ಸಮಿತಿ, ಮಂಡಳಿ ಇರ್ತಾವಲ್ಲ, ಅದರಲ್ಲಿಯೂ ಮಹಿಳೆಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಖಡಾಖಂಡಿತವಾಗಿ ಹೇಳುತ್ತಲೇ ತಮ್ಮ ಸಿನಿಮಾ ಪ್ರಕರಣದತ್ತ ಹೊರಳಿದರು.

ಹೌದು. ನನಗಾಗ ಸಿನಿಮಾ ನೋಡಬೇಕು ಅನಿಸಿತು. ನೋಡಿ ಬಂದೆ. ಉಳಿದವರಿಗೆಲ್ಲ ಅದು ತಪ್ಪೆನಿಸಿತು. ಪರದೆಯಲ್ಲಿಲ್ಲ, ಗೋಷಾ ಮಾಡಲಿಲ್ಲ ಅಂತೆಲ್ಲ ಹೇಳಿದರು. ನಾನು ಈಗಲೂ ಬುರಖಾ ಧರಿಸುವುದಿಲ್ಲ. ಪರಪುರುಷನಿಗೆ ಅತ್ಯಾಕರ್ಷಕವಾಗಿ ಕಾಣಬಾರದು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ನನ್ನ ಈ ದೊಗಳೆ ಬಟ್ಟೆಗಳಲ್ಲಿ ಇನ್ನಿಬ್ಬರು ಸೇರಬಹುದು. ಇದೀಗ ಬುರಖಾಗಳೂ ದೇಹದ ಉಬ್ಬುತಗ್ಗುಗಳನ್ನು ಪ್ರದರ್ಶಿಸುವಂತಿವೆಯಲ್ಲ.. ಅವೆಲ್ಲ ಕಣ್ಣಿಗೆ ಬೀಳುವುದಿಲ್ಲವೇ.. ಇವರು ಧರ್ಮದ ಅಂಧಾನುಕರಣೆಯನ್ನು ಮಾಡ್ತಾರೆ ಅಷ್ಟೆ.

ಇವರಷ್ಟೇ ಅಲ್ಲ, ಎಲ್ಲರೂ ಧರ್ಮವನ್ನು ಅಂಧಾನುಕರಣೆಗೆ ಮಾತ್ರ ಬಳಸಿಕೊಳ್ಳುತ್ತಾರೆ. ನಿಮ್ಮ ಧರ್ಮ ಏನು ಹೇಳ್ತದೆ..? ಶಾಂತಿ, ಸಂಯಮ, ಸಹೋದರತ್ವ, ಕೆಡುಕಿನ ವಿರುದ್ಧ ಹೋರಾಟ. ನನ್ನ ಧರ್ಮವೂ ಅದನ್ನೇ ಹೇಳುತ್ತದೆ. ನಿಮ್ಮ ಧರ್ಮ ಏನೆನ್ನುತ್ತದೆ? ಅನ್ಯರ ಸಂಪತ್ತಿಗೆ ಆಸೆ ಪಡಬೇಡಿ, ದಾಸೋಹ ಮಾಡಿ, ಕೆಡುಕು ಬಯಸಬೇಡಿ.. ನಮ್ಮ ಧರ್ಮವೂ ಅದನ್ನೇ ಹೇಳುತ್ತದೆ. ಶಾಲೆಯಲ್ಲಿ ಧರ್ಮವೆಂದರೆ ಜಾತಿಗಳ ಬಗ್ಗೆ ಮಾತಾಡುವುದಲ್ಲ, ಬದುಕುವುದು ಕಲಿಸಬೇಕು. 

ನಾನೂ ಶಾಲೆಯಲ್ಲಿ ಕಲಿಸ್ತಿದ್ದೆ. ನನ್ನ ಸಿನಿಮಾ ಸಹಾಸದಿಂದಾಗಿ ಕೆಲಸ ಬಿಡುವಂತಾಯಿತು. ನೆಮ್ಮದಿಗಿಂತ ಮುಖ್ಯ ಮತ್ತೊಂದಲ್ಲ ಅನಿಸಿತು. ರಾಜೀನಾಮೆ ನೀಡಿದೆ.. ತಮ್ಮ ಪಾದಗಳನ್ನು ನಿಟ್ಟಿಸುತ್ತ ಸುಮ್ಮನಾದರು.

ಮತ್ತೊಂದು ಅವಕಾಶ ಸಿಕ್ಕರೆ ಏನು ಕಲಿಸುವಿರಿ?

ನನಗೆ ಮತ್ತೊಂದು ಅವಕಾಶ ಸಿಕ್ಕರೆ, ತಪ್ಪುಗಳ ವಿರುದ್ಧ ಹೋರಾಡುವುದನ್ನು ಕಲಿಸುವೆ. ಸತ್ಯ ಮಾತಾಡುವುದನ್ನು ಹೇಳಿಕೊಡುವೆ. ಅಧಿಕಾರ, ಹಣಕ್ಕಿಂತಲೂ ಮುಖ್ಯವಾಗಿ ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಹೇಳಿಕೊಡುವೆ. ಇದು ಕೇವಲ ಪ್ರಭುತ್ವ ಮತ್ತು ಪ್ರಜೆಗಳ ಮಾತಲ್ಲ, ಗುಡಿಯಾ.. 

ಗುಡಿಯಾ.. ಮೈ ತೊ ಬುಢಿಯಾ ಹೂಂ (ಗುಡಿಯಾ.. ಅಂದ್ರೆ ಗೊಂಬೆ.. ನನಗಂತೀರಿ.. ನಾ ಅಂತೂ ಮುದುಕಿ ಅದೀನಿ)

ಅರೆರೆ.. ನೀವೊಮ್ಮೆ ನನ್ನ ವಯಸ್ಸು ಕೇಳ್ರಿ... ನಾನಂತೂ ಸದಾ ಸೋಲಾ ಸತ್ರಾ (ಹದಿನಾರು, ಹದಿನೇಳು) ಅಂತೀನಿ, ವಯಸ್ಸು ದೇಹಕ್ಕೆ. ಚೇತನಕ್ಕಲ್ಲ.. ಅಷ್ಟು ಅರಿವಿದ್ದರೆ ಕನಸು ಕಾಣುವ ಮನಸು, ನನಸಾಗಿಸುವ ಕಸುವು ಎರಡೂ ಸಿಗುತ್ತವೆ. ಇದೇ ನನ್ನ ಸಂಘರ್ಷದ ಹಾದಿಯ ಮಂತ್ರವಾಗಿದೆ.

ಶಿಕ್ಷಣ ಅಂದ್ರೆ ಕೆಲಸ ಕೊಡಿಸೋದಲ್ಲ. ಶಿಕ್ಷಣ ನಮ್ಮ ನಡಾವಳಿಯನ್ನು ಬದಲಿಸಬೇಕು. ಪ್ರಮಾಣಪತ್ರಗಳು ದೊರೆತು, ಉಣ್ಣಲು ಮಾರ್ಗ ನೀಡುವುದು ಶಿಕ್ಷಣ ಆಗಿ ಬದಲಾಗಿದೆ. ಶಿಕ್ಷಣವೆಂದರೆ...  ಪಾಠಗಳೊಟ್ಟಿಗೆ ಬದುಕುವುದು ಕಲಿಸಬೇಕು. ಬದುಕುವುದು ಎಂದರೆ ಸತ್ಯಕ್ಕಾಗಿ ಹೋರಾಡುವುದು, ಸರಿಯಾಗಿರುವುದಕ್ಕೆ, ಬೆಂಬಲಿಸುವುದು, ತಪ್ಪೆನಿಸಿದ ತಕ್ಷಣ ಪ್ರತಿರೋಧಿಸುವುದು, ರುಚಿಯಾಗಿರುವುದನ್ನು ಆಸ್ವಾದಿಸಲು ಕಲಿಸಬೇಕು. ಜೀವನ ಎದುರಿಸುವುದಲ್ಲ, ಸೋಲುಗೆಲುವುಗಳ ಆಟವಲ್ಲ. ಆದರಿಸುವುದು, ಆನಂದಿಸುವುದು ಕಲಿಸಬೇಕು. 

ಮಕ್ಕಳು ಇವನ್ನೆಲ್ಲ ಕಲೀಬೇಕು. ನಮಗೆ ಇಕ್ಬಾಲ್‌ ಸಾಹೇಬರ ಕವಿತೆಯಿತ್ತು.. ‘ಜುಗನು’ ಅಂತ. ಆ ಮಿಂಚು ಹುಳ, ಮಿನುಗುವಂತೆ ಆಗಬೇಕು ನಮ್ಮ ಬದುಕು. ಸಣ್ಣ ಜೀವವಾದರೂ ಕಾಡಕರಿಗತ್ತಲೆಯನ್ನು ಬೆಳಕು ಮಾಡುವ ಛಲ ಇರುವ ಹುಳುವದು. 

ಅಷ್ಟೇ ಆದರೂ ಸರಿ, ಬೆಳಕಾಗಿಸಬೇಕು. ಬೆಳಕಿನ ಕುಡಿಯಾಗಬೇಕು.. ಅನ್ನುತ್ತಲೇ ಖುದಾಫೀಸ್‌ ಎಂದರು. 

ಯಾರು ನಜ್ಮಾ ಬಾಂಗಿ

ವಿಜಯಪುರದಲ್ಲಿ ಗೋಷಾ ಪದ್ಧತಿಯನ್ನು ವಿರೋಧಿಸಿ ಸಿನಿಮಾ ನೋಡಿದ ತಪ್ಪಿಗೆ ಹಲವಾರು ವರ್ಷ ಹೋರಾಡಿದವರು. ಹೋರಾಟದ ಧ್ವನಿಯಾಗಿ, ಮಹಿಳೆಯರ ಹಕ್ಕುಗಳಿಗಾಗಿ, ಸಮಾನತೆಗಾಗಿ ಈಗಲೂ ಶ್ರಮಿಸುತ್ತಿರುವ 70ರ ಹರೆಯದ ಯುವತಿ!

1982ರಲ್ಲಿ ಪರದಾ ಇಲ್ಲದೆ, ಪುರುಷರ ನಡುವೆ ಕುಳಿತು ಸಿನಿಮಾ ನೋಡುವ ಸುದ್ದಿ ಹರಡಿದ ಕೂಡಲೆ, ಚಲನಚಿತ್ರ ಮಂದಿರದ ಮುಂದೆ ಗಲಾಟೆ ಆರಂಭವಾಗಿತ್ತು. ಸಿನಿಮಾಗ್ರಹದಿಂದ ಆಚೆ ಹೋಗಲು ಆಗಿನ ಎಸ್‌ಪಿ ಬಂದು ವಿನಂತಿಸಿಕೊಳ್ಳುತ್ತಾರೆ. ’ಟಿಕೆಟ್‌ ಪಡೆದು ನೋಡುತ್ತಿರುವೆ‘ ಗಲಾಟೆ ಆದರೆ ಅದು ನಿಮ್ಮ ಜವಾಬ್ದಾರಿ. ನನ್ನದಲ್ಲ‘ ಎಂದು ಸಿನಿಮಾ ಪೂರ್ಣಗೊಳಿಸಿ ಆಚೆ ಬರುತ್ತಾರೆ. ಆಗಿನ ಗಲಭೆ ನಿಯಂತ್ರಿಸಲು, ನಜ್ಮಾ ಅವರಿಗೆ ಎಸ್‌ಪಿಯವರೇ ಭದ್ರತೆಯ ನಡುವೆ ಮನೆಗೆ ತಂದುಬಿಡುತ್ತಾರೆ.

ಆಗಿನಿಂದಲೂ ಸಂವಿಧಾನದ ಹಕ್ಕು, ಸಮಾನತೆ, ಮಹಿಳಾಪರ ಹೋರಾಟಗಳಲ್ಲಿ ನಜ್ಮಾ ಧ್ವನಿ ಭಿನ್ನವಾಗಿದೆ.

ಪ್ರಜಾಪ್ರಭುತ್ವದ ಪ್ರತಿಪಾದಕಿ. ಸಮಾನತೆಗಾಗಿ ಸದಾ ಶ್ರಮಿಸುವ, ಮಿಡಿಯುವ ಜೀವ. ಉರ್ದು ಭಾಷೆಯಲ್ಲಿ ತಮ್ಮ ವಿಚಾರಗಳನ್ನು ಬರೆಯುವ ನಜ್ಮಾ ಅವರಿಗೆ ತಾವು ಹಕೀಮ್‌ರ ಮೊಮ್ಮಗಳು ಎಂಬ ಹೆಮ್ಮೆಯಿದೆ. ರೋಗಗುಣಮಾಡಿಸುವ ಶಕ್ತಿ ಇದೆ ಎಂಬ ನಂಬಿಕೆಯೂ. 

ಬಿಎಎಸ್ಸಿ ಬಿಎಡ್‌ ಮಾಡಿಕೊಂಡು, ಇಂಗ್ಲಿಷ್‌ ಸಹ ಪಾಠ ಮಾಡುತ್ತಿದ್ದ ನಜ್ಮಾ ಬಾಂಗಿ ಇನ್ನೂ ಹದಿನೈದು ವರ್ಷ ಶಿಕ್ಷಕಿ ಸೇವೆ ಇರುವಾಗಲೇ ಕೆಲಸ ಬಿಡುವಂತಾಯಿತು. ಒಂತುಸು ಪಿಂಚಣಿಯಲ್ಲಿ ತಮ್ಮ ಸಹೋದರಿಯೊಂದಿಗೆ ವಾಸವಾಗಿರುವ ನಜ್ಮಾರಲ್ಲಿ ಈಗಲೂ ಕ್ರಾಂತಿಯ ಕಿಡಿ ಇದೆ. ಬೆಳಕಿನ ಕುಡಿ ಇದೆ.

ಪ್ರಜಾಪ್ರಭುತ್ವ ಎಂದರೆ ಪರಸ್ಪರ ಗೌರವ

ಪ್ರಜಾಪ್ರಭುತ್ವ ಅಂದ್ರೆ... ನಗುತ್ತ ಕತೆ ಹೇಳುವೆ ಎಂದರು. ಠಕ್ಕನರಿ, ಜಾಣ ಕಾಗೆಯ ಕತೆ ಹೇಳಿ, ಕರ್ನಾಟಕದ ಜನತೆ ಜಾಣ ಕಾಗೆಗಳಾದರು. ನಿಮ್ಮ ರಾಜ್ಯ ಚಂದ, ಬಸವಣ್ಣ ಅಂದ ಎಂದು ತೊದಲಿ ಹೋದ ಠಕ್ಕನರಿ ಸೋತು ಸುಣ್ಣವಾದ.

ಆದ್ರೆ ಬಂದವರು ಈ ಭಾಗ್ಯಗಳನ್ನೆಲ್ಲ ಯಾಕೆ ಕೊಟ್ರು? ಇವು ನಮ್ಮನ್ನು ಆಲಸಿಗಳಾಗಿಸುತ್ತವೆ. ಕುದುರೆಗೆ ಬಾವಿ ತೋರಿಸಬೇಕೆ ಹೊರತು, ನೀರುಣಿಸಬಾರದು. ದುಡಿಮೆಗೆ ಕೆಲಸ ಕೊಡಬೇಕೆ ಹೊರತು, ಭತ್ಯ ಕೊಡಬಾರದು. ರಟ್ಟೆ ಗಟ್ಟಿ ಇರುವ ಪ್ರಜೆಗಳಿಗೆ ಕುಳಿತು ಉಣ್ಣಲು ಅಕ್ಕಿ ಹಂಚಬಾರದು. ಕೆಲಸ ಕೊಡಲಿ. ಹಗಲು ರಾತ್ರಿ ದುಡಿಸಿಕೊಳ್ಳಲಿ. ಇಷ್ಟಕ್ಕೂ ಪ್ರಜಾಪ್ರಭುತ್ವ ಅಂದರೆ ಪರಸ್ಪರ ಗೌರವ ಇರಬೇಕು. ಪ್ರಜೆಗಳನ್ನು ಭಿಕ್ಷುಕರಂತೆ ನೋಡಬಾರದು. ನಾಯಕರನ್ನು ದೇವರಂತೆ ಆರಾಧಿಸಬಾರದು. ಸಮಯ ಬಂದರೆ ಏನು ಮಾಡಿದ್ರಿ ನೀವು ಎಂದು ಪ್ರಶ್ನಿಸುವಂತಿರಬೇಕು. ನನ್ನ ಜನರು ಇವರು ಎಂದು ರಕ್ಷಿಸುವಂಥ ನಾಯಕರು ಇರಬೇಕು.

ಸ್ವಾವಲಂಬನೆ ಎಂದರೆ:

ಗಳಿಸುವುದರಿಂದ ಸ್ವಾವಲಂಬಿಗಳಾಗುವುದಿಲ್ಲ. ನಮ್ಮ ನಿರೀಕ್ಷೆಗಳಿಂದ, ನಿರಾಸೆಗಳಿಂದ ಮುಕ್ತರಾದಾಗ ಸ್ವಾವಲಂಬಿಗಳಾಗುತ್ತೇವೆ. ಔರತ್‌ನ ಅರ್ಥ ಅದೇನೆ. ಕಿಸಿ ಔರ್‌ಸೆ ಔರ್ ಮತ್ ಪೂಛ್. (ಯಾರಿಂದಲೂ ಮತ್ತೇನೂ ಕೇಳಬೇಡ) ನಾನು ಮತ್ತು ನನ್ನಕ್ಕ ಇಬ್ಬರೂ ಆರಾಮಾಗಿದ್ದೇವೆ. ಯಾವತ್ತೂ ಪುರುಷನ ಸಖ್ಯ ಸಾಂಗತ್ಯ ಬೇಕೆನಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT