ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

Published : 5 ಜನವರಿ 2024, 23:41 IST
Last Updated : 5 ಜನವರಿ 2024, 23:41 IST
ಫಾಲೋ ಮಾಡಿ
Comments
ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ. ಈ ಬಗ್ಗೆ ಇನ್ನಷ್ಟು ಚರ್ಚೆಗಳು ನಡೆಯಬೇಕಿದೆ.

ಅವಳು ಮಗುವಾದ ನಂತರವೂ ಕೆಲಸಕ್ಕೆ  ಹೋಗುತ್ತಾಳೆಯೇ? ಹೋಗುತ್ತಿದ್ದರೆ ಹೇಗೆ? ಮನೆಯಲ್ಲಿ ಏನು ಕತೆ?  ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅಷ್ಟು ಕಲಿತಿದ್ದರೂ  ಕೆಲಸಕ್ಕೆ ಹೋಗುತ್ತಿಲ್ಲವಾ? ಯಾಕಂತೆ? ಅಷ್ಟು ಕಲಿತಿದ್ದರೂ  ಇಷ್ಟು ಚಿಕ್ಕ ಕೆಲಸವಾ? ಅದಕ್ಕಿಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಹುದಲ್ಲಾ... ? ಹೀಗೆ ಅಗಣಿತ ಪ್ರಶ್ನೆಗಳ ನಡುವೆ ಈಗಲೂ ನಲುಗುತ್ತಿರುವುದು ಮಹಿಳೆಯ ಉದ್ಯೋಗದ ಆಯ್ಕೆಗಳು.

ಈ  ಪ್ರಶ್ನೆಗಳೆಲ್ಲಾ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2023 (ಭಾರತೀಯ ದುಡಿಯುವ ವರ್ಗದ ಸ್ಥಿತಿ ವರದಿ 2023)ಯಲ್ಲಿ ಪ್ರತಿಫಲಿಸಿದೆ.  ಉದ್ಯೋಗ-ಕಾರ್ಮಿಕ  ಮಾರುಕಟ್ಟೆಯಲ್ಲಿ ಮಹಿಳೆಯರ  ಬದುಕಿನ ಮುಖ್ಯ ಘಟ್ಟಗಳಾದ ವಿವಾಹ ಮತ್ತು ಮಗುವಿನ ಜನನದಂತಹ ಸಂದರ್ಭಗಳು ಮಹಿಳೆಯರು ತಮ್ಮ ಉದ್ಯೋಗದ ಕುರಿತ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಮಹಿಳೆಯೊಬ್ಬಳ ಜೀವನದಲ್ಲಿ ಮಗುವಿನ ಆಗಮನ ಆಕೆಗೆ ತನ್ನ ಆದ್ಯತೆ ವೃತ್ತಿ ಜೀವನವೋ ಅಥವಾ ಕುಟುಂಬವಾಗಿರಬೇಕೋ ಎಂಬ ಸಂದಿಗ್ಧಕ್ಕೆ ನೂಕುತ್ತದೆ.  ಈ ವರದಿ ಉದ್ಯೋಗ ಆಯ್ಕೆಯಲ್ಲಿ ಮಹಿಳೆ ಎದುರಿಸುವ ನೂರೆಂಟು ಸವಾಲುಗಳೆಡೆಗೆ ಬೆಳಕು ಚೆಲ್ಲುತ್ತದೆ.  

ಬಡ ಕುಟುಂಬಗಳಲ್ಲಿ, ಕಡಿಮೆ ಓದಿರುವ ಮಹಿಳೆಯರು ಮನೆಯನ್ನು ನಡೆಸಬೇಕೆಂದರೆ ಕುಟುಂಬದ ಆರ್ಥಿಕತೆಗೆ ಹೆಗಲು ನೀಡಲೇಬೇಕಿರುತ್ತದೆ. ಅವರಿಗೆ  ಹೆಚ್ಚು ಆದಾಯದ ಕುಟುಂಬದ ಮಹಿಳೆಯರ ರೀತಿ ಕೆಲಸಕ್ಕೆ ಹೋಗುವುದನ್ನು ಬಿಡುವ ಆಯ್ಕೆಗಳಿರುವುದಿಲ್ಲ. ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆಗಳಿರುತ್ತವೆ. ತಾಯ್ತನ ಮತ್ತು ಮಕ್ಕಳ ಆರೈಕೆಗಾಗಿ ವೃತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾವಾಗಲೂ ಅವರಿಗೆ ದುಬಾರಿಯಾಗಿ ಪರಿಣಮಿಸುತ್ತದೆ.

ಮನೆಯಲ್ಲಿ ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ʻಮೆಟರ್ನಿಟಿ ಪೆನಾಲ್ಟಿʼ ಅಥವಾ ʻತಾಯ್ತನದಿಂದಾಗಿ ತೆರಬೇಕಾಗಿರುವ ದಂಡʼ ಎಂಬುದಾಗಿ ಸಮಾಜ ಶಾಸ್ತ್ರಜ್ಞರು ಉಲ್ಲೇಖಿಸುತ್ತಾರೆ. ತಾಯ್ತನದ ಪೂರ್ವದ ಸಂದರ್ಭದಲ್ಲಿ ಮಗುವಿನ ಆರೈಕೆಯ ಜವಾಬ್ದಾರಿ ಇಲ್ಲದ ಸಂದರ್ಭದಲ್ಲಿಯೂ, ಮಗುವಿನ ಆಗಮನವನ್ನು ಮುಂದಿಟ್ಟುಕೊಂಡು ಪ್ರಸವಕ್ಕೂ ಮೊದಲೇ ಮಹಿಳೆಯರು ತಮ್ಮ ಕೆಲಸವನ್ನು ತೊರೆದು ಬಿಡುತ್ತಾರೆ.

ಹೀಗೆ ದುಡಿಯುವ ವರ್ಗದ ಸ್ಥಿತಿಗತಿಗಳ ಕುರಿತಾದ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2023 (ಭಾರತೀಯ ದುಡಿಯುವ ವರ್ಗದ ಸ್ಥಿತಿ ವರದಿ 2023) ವರದಿಯನ್ನು ಅಜೀಂ ಪ್ರೇಮ್‌ಜಿ ವಿದ್ಯಾಲಯವು, ಐಡಬ್ಲ್ಯುಡಬ್ಲ್ಯುಎಜಿಇ (IWWAGE) ಮತ್ತು ಐಐಎಮ್‌ (IIM) ಬೆಂಗಳೂರು ಇದರ ಸಹಯೋಗದೊಂದಿಗೆ ತಯಾರಿಸಿದೆ. ಈ ಮಹತ್ತರ ಪ್ರಾಥಮಿಕ ಸಮೀಕ್ಷೆ,  ಇಂಡಿಯನ್‌ ವರ್ಕಿಂಗ್‌ ಸರ್ವೇ/ ಭಾರತೀಯ ದುಡಿಯುವ ವರ್ಗದ ಸಮೀಕ್ಷೆ (ಎಸ್‌ಡಬ್ಲ್ಯುಐ)ಯ ವರದಿಯನ್ನು  ಅಧಿಕೃತ ಮೂಲಗಳಿಂದ ಪಡೆದ ದತ್ತಾಂಶಗಳ ಪುರಾವೆಯೊಂದಿಗೆ ನಿರೂಪಿಸಲಾಗಿದೆ.

ಭಾರತವು  ಸರಿ ಸುಮಾರು 1980 ರ ದಶಕದಿಂದ ಇತ್ತೀಚೆಗೆ ದುಡಿಯುವ ವರ್ಗಕ್ಕೆ ನಿರ್ದಿಷ್ಟ  ವೇತನವನ್ನು ನಿಗದಿಪಡಿಸುವುದರೊಂದಿಗೆ, ಶ್ರಮಿಕ ಮಾರುಕಟ್ಟೆಯಲ್ಲಿ ಕಾರ್ಮಿಕರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ; ಜಾತಿ ಆಧಾರಿತ ಪ್ರತ್ಯೇಕತೆಯನ್ನು ಆದಷ್ಟು ಕನಿಷ್ಠವಾಗಿಸಿದೆ ಮತ್ತು ಉದ್ಯೋಗಿಗಳಲ್ಲಿ ಲಿಂಗ ಆಧಾರಿತ ಅಸಮಾನತೆಗಳನ್ನು ಸಾಕಷ್ಟು ನಿವಾರಿಸಿದೆ. ಆದರೆ ಈ ವಲಯದ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮಾತ್ರ ಹಾಗೆಯೇ ಉಳಿದಿವೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ  'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2023' (ಭಾರತೀಯ ದುಡಿಯುವ ವರ್ಗದ ಸ್ಥಿತಿ ವರದಿ 2023) ವರದಿ ತಿಳಿಸುತ್ತದೆ.

ಪ್ರಸ್ತುತ ಲೇಖನದಲ್ಲಿ ಈ ವರದಿಯಲ್ಲಿನ ಮಹಿಳೆಯರ ಕುರಿತಾದ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಅವರ ಭಾಗವಹಿಸುವಿಕೆಯ ದರ, ಮಹಿಳೆಯರು ಎದುರಿಸುತ್ತಿರುವ ಸವಾಲುಗಳು, ಸ್ವ ಉದ್ಯೋಗದ ಸ್ಥಿತಿಗತಿಗಳು,  ಇತ್ಯಾದಿ ಅಂಶಗಳ ಬಗೆಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.

ಇಳಿಮುಖಗೊಂಡ ಲಿಂಗ-ಆಧಾರಿತ ಗಳಿಕೆಯ ಅಸಮಾನತೆಗಳು: ಅಧ್ಯಯನವು ಸುಮಾರು 2004 ರ ವೇಳೆಗೆ ಮಹಿಳಾ ಉದ್ಯೋಗಿಗಳು ಪುರುಷರು ಗಳಿಸುವ ವೇತನದಲ್ಲಿ ಶೇಕಡಾ 70 ರಷ್ಟು ಭಾಗವನ್ನು ಗಳಿಸಲು ಶಕ್ತರಾಗಿದ್ದರು ಎಂಬುದನ್ನು ಸೂಚಿಸುತ್ತದೆ. 2017 ರ ಹೊತ್ತಿಗೆ, ಮಹಿಳೆಯರು ಮತ್ತು ಪುರುಷರ ನಡುವಿನ ವೇತನದ ಅಂತರವು ಇನ್ನಷ್ಟು  ಕಡಿಮೆಯಾಗಿ ಪುರುಷರು ಮಾಡುವ ಕೆಲಸಗಳನ್ನು ಮಹಿಳೆಯರೂ ಮಾಡುವ ಮೂಲಕ ಪುರುಷರ ವೇತನದ ಶೇಕಡಾ 76 ರಷ್ಟನ್ನು  ಗಳಿಸಲು ಮಹಿಳೆಯರಿಗೆ ಸಾಧ್ಯವಾಗಿದೆ ಮತ್ತು ಅಂದಿನಿಂದ, 2021-22 ರವರೆಗೆ ಈ ಅಂತರವು ಸ್ಥಿರವಾಗಿದೆ ಎಂದು ವರದಿಯು ತಿಳಿಸುತ್ತದೆ.

ಹಲವು ವರ್ಷಗಳವರೆಗೆ ಸತತವಾಗಿ  ಕುಸಿತ ಕಂಡಿದ್ದ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಭಾಗವಹಿಸುವ ದರದ(ಡಬ್ಲ್ಯುಪಿಆರ್‌ ವರ್ಕ್‌ ಪ್ಲೇಸ್‌ ಪಾರ್ಟಿಸಿಪೇಶನ್‌ ರೇಟ್‌ -WPR) ಪ್ರಮಾಣವು ಒಮ್ಮೆಲೆ ಏರುತ್ತಿದೆ. ಆದರೆ ಈ ಏರಿಕೆಯ ಹಿಂದಿರುವ ಕಾರಣಗಳು ಅಷ್ಟೊಂದು ಸಮಾಧಾನಕರವಾಗಿಲ್ಲ ಎಂಬುದನ್ನು ವರದಿಯು ಸೂಚಿಸುತ್ತದೆ. 2004 ರ ನಂತರ ಸ್ಥಿರಗೊಳ್ಳುತ್ತಿದೆ ಎಂದುಕೊಂಡಿದ್ದರೂ, ಸ್ವಯಂ-ಉದ್ಯೋಗದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳಿಂದಾಗಿ ಸ್ತ್ರೀ ಉದ್ಯೋಗ ದರಗಳು 2019 ರಿಂದ ಮಾತ್ರವೇ ಏರಿಕೆ ಕಂಡಿದೆ. ಕೋವಿಡ್ ಮೊದಲು, 50 ಶೇಕಡಾ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿದ್ದರು. ಕೋವಿಡ್ ನಂತರ ಇದು 60 ಶೇಕಡಾಕ್ಕೆ ಏರಿತು. ಪರಿಣಾಮವಾಗಿ, ಈ ಅವಧಿಯಲ್ಲಿ ಸ್ವಯಂ-ಉದ್ಯೋಗ ವಲಯದ ಗಳಿಕೆಯು ನಿಜವಾಗಿಯೂ ಕುಸಿಯಿತು. 2020 ರ ಲಾಕ್‌ಡೌನ್‌ನ ಎರಡು ವರ್ಷಗಳ ನಂತರವೂ, ಸ್ವ-ಉದ್ಯೋಗದ ಗಳಿಕೆಗಳು ಏಪ್ರಿಲ್-ಜೂನ್ 2019 ತ್ರೈಮಾಸಿಕದ ಅವಧಿಯಲ್ಲಿ ಇದ್ದ ಆದಾಯದ ಪ್ರಮಾಣದ ಶೇಕಡಾ 85ರಷ್ಟು  ಮಾತ್ರವೇ ಇದೆ, ಇನ್ನೂ ಚೇತರಿಸಿಕೊಂಡಿಲ್ಲ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ.

ಕರ್ನಾಟಕ ಮತ್ತು ರಾಜಸ್ಥಾನದದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಮದುವೆಯ ಮೊದಲು ಉದ್ಯೋಗದಲ್ಲಿ ಇರುವ ಮಹಿಳೆಯರ ಪ್ರಮಾಣ 26 ಶೇಕಡಾ ಇದ್ದರೆ ಮದುವೆಯ ನಂತರದ ಐದು ವರ್ಷಗಳಲ್ಲಿ ಅದರ ಸರಾಸರಿ 49 ಶೇಕಡಾಕ್ಕೆ ಏರಿದೆ. ಇದು ಹೆಚ್ಚಾಗಿ ಕುಟುಂಬದ ಉದ್ಯೋಗದಲ್ಲಿ ಪಾಲ್ಗೊಳ್ಳುವುದು ಅಥವಾ ಕೃಷಿಗೆ ಸಂಬಂಧಿಸಿದಂತೆ ಸ್ವ ಉದ್ಯೋಗ ಇತ್ಯಾದಿಗಳನ್ನು ಒಳಗೊಂಡಿದೆ. ಮಗುವಿನ ಜನನದೊಂದಿಗೆ ಮಹಿಳೆಯರು ಉದ್ಯೋಗದಲ್ಲಿ ಪಾಲ್ಗೊಳ್ಳುವ ದರವೂ ಹೆಚ್ಚಾಗುತ್ತದೆ ಎನ್ನುವುದನ್ನು ಸಮೀಕ್ಷೆ ಸಾಬೀತುಪಡಿಸುತ್ತದೆ. ಮಗುವಿನ ಜನನದ ಸಮಯದಲ್ಲಿ ಉದ್ಯೋಗಕ್ಕೆ ಸೇರಬೇಕಾದ ಅಗತ್ಯ 5 ಶೇಕಡಾ ಎಂದು ಕಂಡುಬಂದರೆ ನಂತರದ ಐದು ವರ್ಷಗಳಲ್ಲಿ ಇದರ ಅಗತ್ಯ 30 ಶೇಕಡಾ ಹೆಚ್ಚಾಗಿರುವುದು ಕಂಡು ಬರುತ್ತದೆ.

ಉದ್ಯೋಗದಲ್ಲಿಲ್ಲದ ವಧುಗಳಿಗೇ ಹೆಚ್ಚಾಗಿ ಕುದುರುವ ವಿವಾಹ ಸಂಬಂಧ

ಆನ್‌ಲೈನ್‌ನಲ್ಲಿ ಹುಡುಗಿಯರ ನಕಲಿ ಪ್ರೋಫೈಲ್‌ಗಳನ್ನು ಸೃಷ್ಟಿಸಿ ನಡೆಸಿದ ಪ್ರಯೋಗದಲ್ಲಿ ಮದುವೆಗೆ ಮೊದಲು ಉದ್ಯೋಗದಲ್ಲಿದ್ದ ಹುಡುಗಿಯರಿಗೆ ಬಂದ ಮದುವೆಯ ಪ್ರಸ್ತಾಪಗಳು ಕಡಿಮೆ. ಅದೇ ಉದ್ಯೋಗದಲ್ಲಿಲ್ಲದ ಹುಡುಗಿಯರಿಗೆ ಬಂದ ಮದುವೆಯ ಪ್ರಸ್ತಾಪಗಳು ಹೆಚ್ಚಿದ್ದವು. ಆದರೆ ಮದುವೆಯ ನಂತರ ತಮ್ಮ ಕುಟುಂಬದ ವ್ಯವಹಾರಕ್ಕೆ ಸಹಕರಿಸಬೇಕೆಂಬ ನಿರೀಕ್ಷೆಗಳೂ ಅದರ ಹಿಂದಿದ್ದದ್ದು ಬೇರೆಯ ವಿಚಾರ.

ಅನೌಪಚಾರಿಕ ಕಾರ್ಮಿಕ ಮಾರುಕಟ್ಟೆ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಒದಗಿಸುತ್ತದೆ. ಏಕೆಂದರೆ ಇಲ್ಲಿನ  ಉದ್ಯೋಗಕ್ಕೆ ಯಾವಾಗ ಬೇಕಾದರೂ ಸೇರಬಹುದು ಇಲ್ಲಾದರೆ ಬಿಡಬಹುದು ಇದಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಉದಾಹರಣೆಗೆ ಮಹಿಳೆಯರು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ಸುಲಭದ ಆಯ್ಕೆ. ಇದು ಕಟ್ಟುನಿಟ್ಟಾದ ಸಮಯದ ಅವಧಿಯನ್ನು ಹೊಂದಿಲ್ಲದ ಕಾರಣ ಮಗುವಿನ ಪ್ರಸವದ ನಂತರವೂ ಆಕೆ ಈ ಕೆಲಸಗಳಲ್ಲಿ ಭಾಗವಹಿಸಬಹುದು. ಕೆಲಸದ ಅವಧಿ, ಬರುವ ಹೋಗುವ ಸಮಯಗಳಲ್ಲಿ ಅಷ್ಟು ಕಟ್ಟು ನಿಟ್ಟಾದ ನಿಯಮಗಳಿರುವುದಿಲ್ಲ. ಈ ಅನೌಪಚಾರಿಕ ಕಾರ್ಮಿಕ ಮಾರುಕಟ್ಟೆಯ ಕೆಲಸಗಳು ಮಹಿಳೆಯರ ಆಯ್ಕೆಗಳಾಗಿರುವುದಿಲ್ಲ. ಆದರೆ ಬೇರೆ ಅವಕಾಶಗಳ ದುರ್ಲಬತೆಯಿಂದಾಗಿ ಅವರು ಇದನ್ನು ಪರಿಗಣಿಸಬೇಕಾಗುತ್ತದೆ.

ಮಹಿಳೆಯರ ಕಾರ್ಯಾವಧಿ

ಸರಾಸರಿಯಾಗಿ, ಮಹಿಳೆಯರು ವಾರಕ್ಕೆ 55 ಗಂಟೆಗಳ ಕಾಲ ಮನೆಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಈ ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ, ಅದೇ ಪುರುಷರು ಕೇವಲ 21 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿರುವುದಾಗಿ ವರದಿ ಮಾಡಿದ್ದಾರೆ. ಇದಕ್ಕೂ (ಸರಾಸರಿ) ಹೆಚ್ಚಿನ ಕೆಲಸದ ಸಮಯವನ್ನು ವರದಿ ಮಾಡಿದ ಮಹಿಳೆಯರು ಮನೆಯ ಕೆಲಸದಲ್ಲಿ ಇನ್ನೂ ಹೆಚ್ಚಿನ ಸಮಯವನ್ನು ಕಳೆದಿದ್ದೇವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಈ ವರದಿಯು ಔದ್ಯೋಗಿಕ ಮಾರುಕಟ್ಟೆಯಲ್ಲಿ ಮಹಿಳೆಯರು ಎದುರಿಸುತ್ತಿರುವ ವಿವಿಧ ಸವಾಲುಗಳು ಹಾಗು ಪ್ರಸ್ತುತ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಆದರೆ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತಾಗಿ ಸಾಕಷ್ಟು ಅಧ್ಯಯನಗಳು ನಡೆದಿದ್ದರೂ, ಅಂಕಿಅಂಶಗಳ ಪುರಾವೆಗಳಿದ್ದರೂ ಮಹಿಳೆಯರು ತೆರುತ್ತಿರುವ ʻಮೆಟರ್ನಿಟಿ ಪೆನಾಲ್ಟಿʼಯ ಬಗ್ಗೆ ಸಾರ್ವಜನಿಕ ಅಥವಾ ಖಾಸಗೀ ವಲಯಗಳು ಗಂಭೀರವಾಗಿ ಗಮನ ಹರಿಸದಿರುವುದು ದುರದೃಷ್ಟಕರ ಸಂಗತಿ.

ಕುಟುಂಬವೇ ದೊಡ್ಡ ಶಕ್ತಿ

ಸಬಿತಾ ಶೆಟ್ಟಿಫ್ರೀಲಾನ್ಸ್ ಜರ್ನಲಿಸ್ಟ್/ ಸೇಲ್ಸ್ ಹೆಡ್, ಡಿಟಿಡಿಸಿ ಕೊರಿಯರ್ & ಲಾಜಿಸ್ಟಿಕ್

ಸಬಿತಾ ಶೆಟ್ಟಿ
ಫ್ರೀಲಾನ್ಸ್ ಜರ್ನಲಿಸ್ಟ್/ ಸೇಲ್ಸ್ ಹೆಡ್, ಡಿಟಿಡಿಸಿ ಕೊರಿಯರ್ & ಲಾಜಿಸ್ಟಿಕ್

ಉದ್ಯೋಗ ಮತ್ತು ತಾಯ್ತನ ಒಂದೇ ನಾಣ್ಯದ ಎರಡು ಮುಖಗಳು. ಉದ್ಯೋಗ ಅಸ್ತಿತ್ವವಾದರೆ, ಸಂತಾನ ಅಸ್ಮಿತೆ! ಉದ್ಯೋಗ ಅನಿವಾರ್ಯತೆಯಾದರೆ, ತಾಯ್ತನ ಶಕ್ತಿ. ಉದ್ಯೋಗ ಮತ್ತು ತಾಯ್ತನ ಎರಡರ ಸಮತೋಲನ ಹೇಗೆಂಬ ಗೊಂದಲ ಒಬ್ಬಿಬ್ಬರದ್ದಲ್ಲ. ಯಾವುದರಿಂದ ತಪ್ಪಿಸಿಕೊಂಡರೂ ಕಷ್ಟ.  ಈ ವಿಚಾರದಲ್ಲಿ ನನಗೂ ಗೊಂದಲ, ಪಾಪಪ್ರಜ್ಞೆಯ ಅನುಭವವಾಗಿದೆ. ಆದರೆ ಯಾವುದರಿಂದಲೂ ದೂರ ಓಡಲಿಲ್ಲ.

ವೃತ್ತಿ ಜೀವನದಲ್ಲಿ ಮಾಡುವ ಸಾಧನೆಯೇ ಜೀವನದ ಪರಮೋಚ್ಛ ಗುರಿ- ಸಾರ್ಥಕತೆ ಎಂಬ ಅಮಲು ನನ್ನ ತಲೆಗೂ ಏರಿದ್ದ ಸಂದರ್ಭವದು. ಇದರ ಜೊತೆಗೆ ಮೊದಲ ಮಗು ಎಂಬ ಭಯದ ಸೆರಗು ಕಣ್ಣನ್ನು ಮುಚ್ಚಿ ಬಿಟ್ಟಿತ್ತು. ‘ನಾವಿದ್ದೇವೆ... ಮಗುವನ್ನು ನಾವು ನೋಡಿಕೊಳ್ಳುತ್ತೇವೆ, ನಿನ್ನ ಕೆಲಸ‌ ಮುಂದುವರಿಸು’ ಎಂದು ಕುಟುಂಬ ಕೊಟ್ಟ‌ ಧೈರ್ಯ ಹಾಗೂ ‘ಕೆಲಸಕ್ಕೆ ಕೂಸು ಅಡ್ಡಿಯಾದೀತೆ? ಹುಚ್ಚು ಹುಡುಗಿ!’ ಎಂದು ಒಂದು ಗಂಟೆ ಕೂರಿಸಿಕೊಂಡು ಗೆಳತಿಯಂತೆ ಕಿವಿ ಹಿಂಡಿ ಕಳಿಸಿದ ವೈದ್ಯರನ್ನು ಎಂದೂ ಮರೆಯಲಾರೆ.

ಬಾಣಂತನ ಮುಗಿಸಿ ಬಂದ ನನಗೆ ಅತ್ತೆ ಅಮ್ಮನಂತೆ ಕಂಡರು. ತಡವಾಗುತ್ತಿದೆ ಎಂದು ಮೂರು ತಿಂಗಳ ಮಗುವಿಗೆ ತರಾತುರಿಯಲ್ಲಿ ಎದೆಹಾಲುಣಿಸಿ ಕಣ್ತುಂಬಿಕೊಂಡೆ ಹೊರನಡೆದಾಗ, ನನ್ನತ್ತೆಯೇ ನನ್ನ ಮಗಳಿಗೆ ಅಮ್ಮನಂತಾದರು. ಅನಂತರ ನನ್ನಮ್ಮನೇ ನನ್ನ ಮಗಳ ಪಾಲಿಗೂ ಅಮ್ಮನಾದರು. ಅದೆಷ್ಟೋ ಸಲ ಕ್ಯಾಮೆರಾ ಮುಂದೆ ಸುದ್ದಿ ವಾಚಿಸುವಾಗ ನನ್ನ ಕೂಸು ಕಣ್ಣ ಮುಂದೆ ಬಂದಂತಾಗಿ ಸಂಕಟವೇಳುತ್ತಿತ್ತು, ಎದೆಯಲ್ಲಿ ಹಾಲು ಉಕ್ಕಿದಾಗೆಲ್ಲ ಕಣ್ಣಾಲೆ‌ಗಳು ತುಂಬಿ ಬರುತ್ತಿತ್ತು. ಆದರೆ ಗಂಡ, ಅಮ್ಮ–ಅಪ್ಪ–ಅತ್ತೆ–ಮಾವ ಒಟ್ಟೂ ಸೇರಿ ‘ನಾವಿದ್ದೇವೆ’ ಎನ್ನುವ ಭರವಸೆ ನೀಡಿದಾಗ ಉದ್ಯೋಗ–ಕುಟುಂಬ ನಿರ್ವಹಣೆ ಸುಲಭವಾಗುತ್ತ ಹೋಯಿತು. 

ರಾಜಿ ಅನಿವಾರ್ಯ

ಮಾಳವಿಕಾ ದೇವಘರಿಯಾಲೀಡ್ ಕನ್ಸಲ್ಟೆಂಟ್ - ಇನ್ಫೊಸಿಸ್ ಲಿಮಿಟೆಡ್

ಮಾಳವಿಕಾ ದೇವಘರಿಯಾ

ಲೀಡ್ ಕನ್ಸಲ್ಟೆಂಟ್ - ಇನ್ಫೊಸಿಸ್ ಲಿಮಿಟೆಡ್

ಹೊಟ್ಟೆಯಲ್ಲಿ ಕೂಸು ಮೂಡಿದ ಮರುಗಳಿಗೆಯೇ ಎದುರಾಗುವ ಪ್ರಶ್ನೆಗಳು ಕೆಲವೊಮ್ಮೆ ಹೊರಗಿನಿಂದಲೂ, ಒಳಗಿನಿಂದಲೂ ಏಕಕಾಲಕ್ಕೆ ಘರ್ಷಣೆಗಿಳಿದಂತೆನಿಸುತ್ತದೆ. ಈ ಪ್ರಶ್ನೆಗಳಿಗೆ ನಾವು ಮಾತ್ರವಲ್ಲ, ಗೂಗಲ್‌ ಕೂಡ ಉತ್ತರಿಸಲಾರದು. ದುಡಿಯುವ ಹೆಣ್ಣುಮಕ್ಕಳ ಜೀವನ ಕಷ್ಟದಾಯಕ ಮಾತ್ರವಲ್ಲ, ಕರುಣಾಜನಕವೂ. ಜೀವನ ಸಮರ ಶುರುವಾಗುವುದು ತಾಯ್ತನ ಆರಂಭವಾದ ತರುವಾಯವೇ. ಜೀವನದ ಒಂದಲ್ಲ ಒಂದು ಹಂತದಲ್ಲಿ, ಒಂದಲ್ಲ ಒಂದು ಕಾರಣಕ್ಕೆ ಅವಳು ರಾಜಿ ಮಾಡಿಕೊಳ್ಳುತ್ತಲೇ ಹೋಗಬೇಕು.  ಇದಕ್ಕೆ ನಾನೂ ಹೊರತಲ್ಲ. ಅಲ್ಲಲ್ಲಿ, ಅಷ್ಟಷ್ಟು ರಾಜಿಯಾಗುತ್ತಲೇ ಎಲ್ಲವನ್ನೂ ನಿಭಾಯಿಸಬೇಕಾಯಿತು. ಅದರಲ್ಲೂ, ‘ಕಾರ್ಪೊರೇಟ್’ ವಲಯದ ಸ್ಪರ್ಧಾತ್ಮಕ ವೃತ್ತಿಗಳಲ್ಲಿರುವ ಮಹಿಳೆಗೆ ತಾಯ್ತನದ ಜವಾಬ್ದಾರಿ ಬಹುದೊಡ್ಡ ಸವಾಲು. ಸ್ವಂತ ಅನುಭವಕ್ಕೆ ಬರುವತನಕ ಇದರ ಕಠಿಣ ರೂಪ ನನ್ನ ಗಮನಕ್ಕೆ ಬಂದಿರಲಿಲ್ಲ.

24 ಗಂಟೆ ನಮ್ಮ ಮಮತೆ, ಪ್ರೀತಿ ಹಾಗೂ ಸ್ಪರ್ಶವನ್ನು ಬಯಸುವ ಪುಟ್ಟ ಕಂದನನ್ನು ಮಡಿಲಲ್ಲಿಟ್ಟುಕೊಂಡು, ಕೌಟುಂಬಿಕ ಸಹಾಯವೂ ಇಲ್ಲದೆ, ಅಮೆರಿಕದ ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವುದು, ವೃತ್ತಿಯಲ್ಲಿ ಹಿಂದೆ ಬೀಳದಂತೆ ಕಾರ್ಯಕ್ಷಮತೆ ಪ್ರದರ್ಶಿಸುವುದು, ಕಂದನ ಆರೈಕೆಗೆ ಕುಂದಿಲ್ಲದಂತೆ ನಡೆದುಕೊಳ್ಳುವುದು, ವೃತ್ತಿ ಮಹಾತ್ವಾಕಾಂಕ್ಷೆಯೂ ಬತ್ತದಂತೆ ನೋಡಿಕೊಳ್ಳುವುದು ಎಂತಹ ದೊಡ್ಡ ಜವಾಬ್ದಾರಿ ಎನ್ನುವುದು ಅನುಭವಿಸಿದವರಿಗಷ್ಟೇ ಅರ್ಥವಾಗಬಹುದಾದ ಸ್ಥಿತಿ.

ಹೆರಿಗೆಯ ನಂತರ ದಣಿದು ಹೋದ ದೇಹ, ಉಡುಗಿಹೋದ ಚೈತನ್ಯ ಸಂಪೂರ್ಣ ಆರೈಕೆಯನ್ನು ಬಯಸುವ ಹೊತ್ತಿನಲ್ಲಿಯೇ ಮೂರನೇ ತಿಂಗಳಲ್ಲಿ ಎದ್ದು ಡ್ಯೂಟಿಗೆ ಹಾಜರಾಗಬೇಕಾಯಿತು. ಅಳುವ ಕಂದನನ್ನು ಇನ್ನೊಬ್ಬರ ಮಡಿಲಿಗೆ ಹಾಕಿ ಕೆಲಸದಲ್ಲಿ ಮನಸು ತೂರಿಸುವುದು ಕಷ್ಟವಾಗುತ್ತಿತ್ತು. ಆದರೆ ನನ್ನ ಕಂಪನಿಯಲ್ಲಿ ದುಡಿಯುವ ಅಮ್ಮಂದಿರಿಗೆ ಅನುಕೂಲವಾಗುವಂತಹ ನಿಯಮಗಳಿರುವುದರಿಂದ ಇದನ್ನೆಲ್ಲಾ ಗೆಲ್ಲಲು ಸಾಧ್ಯವಾಯಿತು. ಅದನ್ನೆಲ್ಲಾ ಹೇಗೆ ನಿಭಾಯಿಸಿದೆ ಎಂದು ನೆನೆದರೆ ಈಗಲೂ ರೋಮಾಂಚನವಾಗುತ್ತದೆ.

ಪರಿಪೂರ್ಣತೆ, ಪಾಪಪ್ರಜ್ಞೆಯ ನಡುವೆ...

ವಿಜಯಾ ಯೋಗೇಶ್ಗೃಹಿಣಿ, ಮಲ್ಲತ್ತಹಳ್ಳಿ

ವಿಜಯಾ ಯೋಗೇಶ್
ಗೃಹಿಣಿ, ಮಲ್ಲತ್ತಹಳ್ಳಿ

‘ಒಂದು ಹೆಣ್ಣು ಪರಿಪೂರ್ಣವಾಗೋದು ಅವಳು ತಾಯಿಯಾದ ಮೇಲೆಯೇ’ ಎನ್ನುವ ಆದರ್ಶದ ಮಾತುಗಳನ್ನು ಕೇಳಿಕೊಂಡೇ ಬೆಳೆದವರು ನಾವು. ಆದರೆ, ತಾಯಿಯಾದ ಮೇಲೆ ನಮ್ಮ ಅಸ್ತಿತ್ವವೇ ಕಡೆಗಣಿಸುವಂತಾಗುವುದು ಗಮನಕ್ಕೆ ಬಂದಾಗ ಕ್ಷೀಷೆ ಎನಿಸಿತು. ಅಷ್ಟಕ್ಕೂ ಮಗುವಾದ ಮೇಲೆ ವೃತ್ತಿಯನ್ನು ಮುಂದುವರೆಸಬೇಕೇ ಬೇಡವೇ ಎನ್ನುವ ಆಯ್ಕೆ ನಮ್ಮ ಕೈಯಲ್ಲಿ ಇರುವುದಿಲ್ಲ. ಅದು ಮನೆಯವರ ಕೈಯಲ್ಲಿ ಇರುತ್ತದೆ.

ನಮ್ಮನ್ನೇ ನಂಬಿ ಈ ಭೂಮಿಗೆ ಬರುವ ಕಂದಮ್ಮಗಳಿಗೆ ಸಿಗಬೇಕಾದ ಸಮಯ, ಆರೈಕೆ, ಮಮತೆಯನ್ನು ನೀಡಿ ಪೊರೆಯಬೇಕಾದುದು ನಮ್ಮ ಕರ್ತವ್ಯ. ಆದರೆ ಅದಕ್ಕಾಗಿ ನಮ್ಮ ವೈಯಕ್ತಿಕ ಆಸೆ–ಆಕಾಂಕ್ಷೆ, ವೃತ್ತಿ, ಬೆಳವಣಿಗೆಯನ್ನು ಕಡೆಗಣಿಸಬೇಕಾಗಿ ಬಂದಾಗ ಸಹಜವಾಗಿಯೇ ಬೇಸರ ಹುಟ್ಟುತ್ತದೆ. ಈ ಸಮಯದಲ್ಲಿ ಮನೆಯ ಕಡೆಯಿಂದ ಒಂದಷ್ಟು ಸಹಕಾರ ದೊರೆತರೆ ವೃತ್ತಿಯನ್ನೂ, ತಾಯ್ತನವನ್ನೂ ಸರಿದೂಗಿಸಿಕೊಂಡು ಹೋಗಬಹುದು. ಅದರ ಬದಲು ‘ನೀನು ದುಡಿದು ಯಾರನ್ನು ಸಾಕಬೇಕು, ಮಕ್ಕಳನ್ನು ನೋಡಿಕೊ ಸಾಕು’ ಎನ್ನುವಂಥ ಮಾತುಗಳು ಮನೋಬಲವನ್ನು ಕುಗ್ಗಿಸುತ್ತವೆ. ನನಗೆ ವೃತ್ತಿ ಹಾಗೂ ಮಕ್ಕಳು–ಎರಡರ ನಡುವೆ ಮಕ್ಕಳ ಭವಿಷ್ಯವನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಯಿತು. ವೃತ್ತಿಬದುಕಿನಿಂದ ಒಮ್ಮೆ ಹಿಂದೆ ಹೆಜ್ಜೆ ಇಟ್ಟ ಮೇಲೆ ಮತ್ತೆ ಅಲ್ಲಿ ಜಾಗ ಪಡೆಯುವುದು ಅಷ್ಟು ಸುಲಭವಲ್ಲ. ಇಷ್ಟು ಕಷ್ಟ ಪಟ್ಟು ಸ್ನಾತಕೋತ್ತರ ಪದವಿ ಪಡೆದರೂ ಮನೆಯಲ್ಲಿ ಉಳಿಯುವಂತಾಯಿತಲ್ಲ ಎನ್ನುವ ಬೇಸರವಿದೆ. ಪರಿಪೂರ್ಣ ಅಮ್ಮನಾಗುವುದರ ನಡುವೆ, ಅಷ್ಟೊಳ್ಳೆ ಕೆಲಸ ಬಿಟ್ಟು ಬಿಟ್ಟೆ ಎನ್ನುವ ಪಾಪಪ್ರಜ್ಞೆಯೂ ಇದ್ದೇ ಇದೆ. 

ನನ್ನ ಆಯ್ಕೆ ನನ್ನ ಖುಷಿ

ಕೆ.ವಿ. ರಾಜಲಕ್ಷ್ಮಿ, ನಿವೃತ್ತ ಲೆಕ್ಕಾಧಿಕಾರಿ

ಕೆ.ವಿ. ರಾಜಲಕ್ಷ್ಮಿ, ನಿವೃತ್ತ ಲೆಕ್ಕಾಧಿಕಾರಿ

‘ಇಷ್ಟು ಸಂಬಳವಿದೆ, ಇನ್ನೂ ಪ್ರಗತಿಯಿದೆ. ಮತ್ತೊಮ್ಮೆ ಪರಿಶೀಲಿಸು' ದಶಕದ ಹಿಂದೆ, ಸ್ವಯಂ ನಿವೃತ್ತಿ ಕೋರಿದಾಗ ಹತ್ತಿರದವರಿಂದ ಹರಿದು ಬಂದ ಹಲವು ಅನಿಸಿಕೆಗಳು.
ನನ್ನ ಮಗಳು ಹುಟ್ಟಿದಾಗ ನಾನು ಕೆಲಸ ಬಿಡುವಂತಿರಲಿಲ್ಲ. ಆದರೆ, ಮುಂದೆ ನನ್ನ ಮಗಳಿಗಾಗಿ, ಅವಳ ಜೀವನ ಹಾಗೂ ತಾಯ್ತನವನ್ನು ಸರಳಗೊಳಿಸುವ ಸಲುವಾಗಿ ನಾನು ವೃತ್ತಿ ಬಿಡಬೇಕಾಯ್ತು ಮತ್ತು ಈ ಆಯ್ಕೆ ಸಂಪೂರ್ಣ ನನ್ನದೇ ಆಗಿತ್ತು.
ನನ್ನ ನಿರ್ಧಾರ ದೃಢವಾಗಿತ್ತು. ‘ಹಣ, ಉದ್ಯೋಗಕ್ಕಿಂತ ಜೀವನ ದೊಡ್ಡದಿದೆ’ ಎನ್ನುವುದು ನನ್ನ ನಂಬಿಕೆ. ನಾನು ಕೆಲಸಕ್ಕೆ ಹೋಗುವಾಗ ನನ್ನ ಅಮ್ಮನೊಡನೆ ಬೆಳೆದ ನನ್ನ ಮಗಳು, ಅವಳು ಕೆಲಸಕ್ಕೆ ಹೋದಾಗ ಅವಳ ಮಗುವನ್ನು ನಾನು ನೋಡಿಕೊಳ್ಳಬೇಕಾದುದು ನೈತಿಕ ಧರ್ಮವಾಗಿತ್ತು. ಹೀಗಾಗಿ ಐವತ್ತರೊಳಗೆ ನಿವೃತ್ತಿ ಪಡೆದೆ. ಒಂದಿನಿತೂ ಪಶ್ಚಾತ್ತಾಪವಿಲ್ಲ. ‘ಯಂಗ್ ಗ್ರ್ಯಾಂಡ್ ಮದರ್’ ಎಂದಾಗ ಸಂತೋಷವಾಗುತ್ತದೆ. ಉದ್ಯೋಗದಲ್ಲಿದ್ದಾಗ ನನ್ನ ಮಗಳನ್ನು ಸರಿಯಾಗಿ ಗಮನಿಸಲಿಲ್ಲ ಎಂಬ ಕೊರಗು ಈಗ ಮೊಮ್ಮೊಗನ ಪ್ರಗತಿ ಕಂಡಾಗ ಕರಗುತ್ತದೆ. ಮಗಳು ಕೆಲಸದಲ್ಲಿ ವ್ಯಸ್ತವಾಗಿರುವಾಗ ಮನೆಯ ನಿರ್ವಹಣೆ ನನ್ನದೇ. ಅಲ್ಲೊಂದು ಸಾರ್ಥಕ್ಯ ಭಾವ! ದಶಕಗಳ ಹಿಂದೆ ಏಕಕಾಲಕ್ಕೆ ನನ್ನ ತಾಯಿಯವರು, ಅಮ್ಮ ಮತ್ತು ಅಜ್ಜಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದರು. ಈಗ ಆ ಸರದಿ ನನ್ನದು. ಜೀವನದ ಸಂತೋಷ ಹೊರಗೆ ಹೋಗಿ ದುಡಿದರೆ ಮಾತ್ರ ಸಿಗುತ್ತದೆ ಎಂದಲ್ಲ, ನಮಗಾಗಿ, ನಮ್ಮವರಿಗಾಗಿ ಅವರ ಆರೈಕೆಗಾಗಿ ಮಿಡಿಯುವಾಗ ಸಿಗುವ ಸಾರ್ಥಕ್ಯ ಸಣ್ಣದೇನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT