ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕುತೂಹಲ ಮೂಡಿಸಿರುವ ಅರಬ್‌ ಜಗತ್ತಿನ ಬೆಳವಣಿಗೆ

ಇಸ್ರೇಲ್‌ ಜತೆ ಯುಎಇ, ಬಹರೇನ್‌ ಶಾಂತಿ ಒಪ್ಪಂದ
Last Updated 13 ಸೆಪ್ಟೆಂಬರ್ 2020, 4:57 IST
ಅಕ್ಷರ ಗಾತ್ರ

ಇಸ್ರೇಲ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮಧ್ಯೆ ಕಳೆದ ತಿಂಗಳು ನಡೆದ ಶಾಂತಿ ಒಪ್ಪಂದದ ಬಳಿಕ ಅರಬ್‌ ಜಗತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಹರೇನ್‌ ಕೂಡಾ ಯುಎಇ ಹಾದಿಯಲ್ಲೇ ಹೆಜ್ಜೆಯಿಟ್ಟಿದ್ದು, ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಸೌದಿ ಅರೇಬಿಯಾ ತನ್ನ ವಾಯು ಪ್ರದೇಶದಲ್ಲಿ ಇಸ್ರೇಲ್‌ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದೆ. ‘ಯುಎಇ ಮತ್ತು ಬಹರೇನ್‌ನಂತೆ ಇನ್ನೂ ಕೆಲವು ಅರಬ್‌ ರಾಷ್ಟ್ರಗಳು ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಳ್ಳಲಿವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಇಸ್ರೇಲ್‌ ಮತ್ತು ಯುಎಇ ನಡುವಿನ ಒಪ್ಪಂದ ಸೆ.15 ರಂದು ಅಧಿಕೃತವಾಗಿ ಚಾಲನೆಗೆ ಬರಲಿದೆ. ಟ್ರಂಪ್‌ ಉಪಸ್ಥಿತಿಯಲ್ಲಿ ವಾಷಿಂಗ್ಟನ್‌ನಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ. ಪ್ರಧಾನಿ ಬೆಂಜಮಿನ್‌ ನೇತನ್ಯಾಹು ನೇತೃತ್ವದಲ್ಲಿ ಇಸ್ರೇಲ್‌ನ ನಿಯೋಗ ಮತ್ತು ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ನೇತೃತ್ವದ ಯುಎಇ ನಿಯೋಗವು ಅಮೆರಿಕಕ್ಕೆ ತೆರಳಲಿದೆ. ಬಹರೇನ್‌ –ಇಸ್ರೇಲ್‌ ಒಪ್ಪಂದ ಕೂಡಾ ಇದೇ ವೇಳೆ ನಡೆಯಲಿದೆ ಎನ್ನಲಾಗಿದೆ.

ಈ ಐತಿಹಾಸಿಕ ಒಪ್ಪಂದದೊಂದಿಗೆ ಯುಎಇ ಮತ್ತು ಬಹರೇನ್‌ ರಾಷ್ಟ್ರಗಳು ಇಸ್ರೇಲ್‌ಅನ್ನು ಒಂದು ದೇಶ ಎಂಬುದಾಗಿ ಒಪ್ಪಿಕೊಳ್ಳಲಿದೆ. ಮಾತ್ರವಲ್ಲ, ಆ ದೇಶದ ಜತೆಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಹೊಂದಲಿದೆ. ಈಜಿಪ್ಟ್‌ ಮತ್ತು ಜೋರ್ಡಾನ್‌ ಹೊರತುಪಡಿಸಿ ಇತರ ಯಾವುದೇ ಅರಬ್ ರಾಷ್ಟ್ರಗಳು ಇಸ್ರೇಲ್‌ ಜತೆ ರಾಜತಾಂತ್ರಿಕ ಸಂಬಂಧ ಹೊಂದಿರಲಿಲ್ಲ.

‘ಇನ್ನಷ್ಟು ರಾಷ್ಟ್ರಗಳು ಒಪ್ಪಂದ ಮಾಡಿಕೊಳ್ಳಲಿವೆ’ ಎಂದು ಟ್ರಂಪ್‌ ಹೇಳಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮುಂದಿನ ರಾಷ್ಟ್ರ ಯಾವುದು ಎಂಬ ವಿಶ್ಲೇಷಣೆ ಶುರುವಾಗಿದೆ.

ಪ್ಯಾಲೆಸ್ಟೀನ್‌ ಜತೆಗಿನ ಸಂಘರ್ಷವನ್ನು ನಿಲ್ಲಿಸದೆ ಇಸ್ರೇಲ್‌ನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಿಲ್ಲ ಎಂಬ ನಿಲುವನ್ನು ಬಹುತೇಕ ಅರಬ್‌ ರಾಷ್ಟ್ರಗಳು ಹೊಂದಿವೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈಗ ನಡೆದಿರುವ ಒಪ್ಪಂದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ರಾಷ್ಟ್ರಗಳು ಬೆಂಬಲಿಸಿದರೆ, ಇನ್ನು ಕೆಲವು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿವೆ.

ಅರಬ್‌ ಜಗತ್ತಿನ ಶಕ್ತಿ ಕೇಂದ್ರ ಎನಿಸಿರುವ ಸೌದಿ ಅರೇಬಿಯಾ ಈ ಒಪ್ಪಂದವನ್ನು ಖಂಡಿಸಿಲ್ಲ. ಆದರೆ ಇಸ್ರೇಲ್‌– ಪ್ಯಾಲೆಸ್ಟೀನ್‌ ನಡುವಿನ ಸಂಘರ್ಷ ನ್ಯಾಯಯುತವಾಗಿ ಕೊನೆಗೊಳ್ಳದೆ ಇಸ್ರೇಲ್‌ ಜತೆ ಒಪ್ಪಂದ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಇನ್ನೊಂದು ಅರಬ್‌ ರಾಷ್ಟ್ರ ಒಮನ್‌ ಒಪ್ಪಂದವನ್ನು ಸ್ವಾಗತಿಸಿದೆಯಾದರೂ, ‘ಸ್ವತಂತ್ರ ಪ್ಯಾಲೆಸ್ಟೀನ್‌’ ರಾಷ್ಟ್ರ ನಿರ್ಮಾಣವಾಗಬೇಕು ಎಂಬ ತನ್ನ ನಿಲುವಿಗೆ ಬದ್ಧವಾಗಿರುವುದಾಗಿಯೂ ಹೇಳಿದೆ. ಕತಾರ್‌ ಮತ್ತು ಕುವೈತ್‌ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇಸ್ರೇಲ್‌ನ ಬದ್ಧ ವೈರಿ ಇರಾನ್‌ ನಿರೀಕ್ಷೆಯಂತೆಯೇ ಈ ಒಪ್ಪಂದವನ್ನು ಕಠಿಣ ಮಾತುಗಳಿಂದ ಖಂಡಿಸಿದೆ. ‘ಪ್ಯಾಲೆಸ್ಟೀನ್‌ನಲ್ಲಿ ಇಸ್ರೇಲ್‌ ನಡೆಸುತ್ತಿರುವ ಅಪರಾಧಗಳಲ್ಲಿ ಬಹರೇನ್‌ ಕೈಜೋಡಿಸಿದೆ’ ಎಂದು ಕುಹಕವಾಡಿದೆ. ಈ ಎರಡು ಅರಬ್‌ ರಾಷ್ಟ್ರಗಳು ಪ್ಯಾಲೆಸ್ಟೀನ್‌ ಜನರ ಬೆನ್ನಿಗೆ ಚೂರಿ ಹಾಕಿವೆ ಎಂದು ಹೇಳಿದೆ.

ಒಪ್ಪಂದ ಮಾಡಿಕೊಂಡಿರುವ ಬಹರೇನ್‌ ಸರ್ಕಾರವನ್ನು ಅಲ್ಲಿನ ಜನರೇ ಕಿತ್ತೊಗೆಯಲಿದ್ದಾರೆ ಎಂದು ಇರಾನ್‌ ಹೇಳಿದೆ. ಟರ್ಕಿ ಕೂಡಾ ಒಪ್ಪಂದವನ್ನು ಖಂಡಿಸಿದೆ. ಪ್ಯಾಲೆಸ್ಟೀನ್‌ನಲ್ಲೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಸೌದಿ ಅರೇಬಿಯಾದ ಎಚ್ಚರಿಕೆ ನಡೆ

ಅಂತರರಾಷ್ಟ್ರೀಯ ಸಮುದಾಯವು ಪ್ಯಾಲೆಸ್ಟೀನ್‌ಅನ್ನು ಒಂದು ದೇಶವಾಗಿ ಒಪ್ಪಿಕೊಂಡರೆ ಮಾತ್ರ ಇಸ್ರೇಲ್‌ಅನ್ನು ದೇಶ ಎಂದು ಒಪ್ಪಿಕೊಳ್ಳುವುದಾಗಿ ಸೌದಿ ಅರೇಬಿಯಾ ಅಮೆರಿಕಕ್ಕೆ ತಿಳಿಸಿದೆ. ಸೌದಿ ದೊರೆ ಸಲ್ಮಾನ್‌ ಬಿನ್‌ ಅಬ್ದುಲ್‌ ಅಜೀಜ್‌ ಅವರು ಈ ಬಗ್ಗೆ ಟ್ರಂಪ್‌ಗೆ ಸ್ಪಷ್ಟವಾಗಿ ಹೇಳಿದ್ದಾರೆ.

ಸೌದಿ ನೇತೃತ್ವದಲ್ಲಿ 2002 ರಲ್ಲಿ ಮುಂದಿಟ್ಟಿದ್ದ ‘ಅರಬ್‌ ಶಾಂತಿ ಉಪಕ್ರಮ’ ಪ್ರಕಾರ ಇಸ್ರೇಲ್‌– ಪ್ಯಾಲೆಸ್ಟೀನ್‌ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯ ಎಂದು ಸಲ್ಮಾನ್‌ ತಿಳಿಸಿದ್ದಾರೆ.

ತನ್ನ ವಾಯು ಪ್ರದೇಶದಲ್ಲಿ ಇಸ್ರೇಲಿನ ವಿಮಾನಗಳ ಹಾರಾಟಕ್ಕೆ ಸೌದಿ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಟ್ರಂಪ್‌ ಅವರು ಸೌದಿ ದೊರೆಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಈ ವೇಳೆ ಸೌದಿಯು ಪ್ಯಾಲೆಸ್ಟೀನ್‌ ವಿಷಯದಲ್ಲಿ ತನ್ನ ನಿಲುವನ್ನು ಅಮೆರಿಕದ ಅಧ್ಯಕ್ಷರಿಗೆ ಸ್ಪಷ್ಟಪಡಿಸಿದೆ.

ಏನಿದು 2002ರ ಅರಬ್‌ ಶಾಂತಿ ಉಪಕ್ರಮ?

ಇಸ್ರೇಲ್‌–ಪ್ಯಾಲೆಸ್ಟೀನ್‌ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸೌದಿ ಅರಬೇಬಿಯಾವು 2002 ರಲ್ಲಿ ‘ಅರಬ್‌ ಶಾಂತಿ ಉಪಕ್ರಮ’ ಮುಂದಿಟ್ಟಿತ್ತು. 2002ರಲ್ಲಿ ಬೈರೂತ್‌ನಲ್ಲಿ ನಡೆದಿದ್ದ ಅರಬ್‌ ಲೀಗ್‌ ಶೃಂಗಸಭೆಯಲ್ಲಿ ಇದಕ್ಕೆ ಅನುಮೋದನೆ ಲಭಿಸಿತ್ತು.

ವೆಸ್ಟ್‌ಬ್ಯಾಂಕ್‌, ಗಾಜಾ, ಗೋಲನ್‌ ಹೈಟ್ಸ್‌ ಮತ್ತು ಲೆಬನಾನ್‌ನಲ್ಲಿ ವಶಪಡಿಸಿಕೊಂಡಿರುವ ಪ್ರದೇಶಗಳನ್ನು ಇಸ್ರೇಲ್‌ ಮರಳಿಸುವುದು, ಪ್ಯಾಲೆಸ್ಟೀನ್‌ ನಿರಾಶ್ರಿತರ ಸಮಸ್ಯೆಗೆ ನ್ಯಾಯಯುತ ಪರಿಹಾರ ಕಂಡುಕೊಳ್ಳುವುದು, ಪೂರ್ವ ಜೆರುಸಲೆಂ ಅನ್ನು ರಾಜಧಾನಿಯನ್ನಾಗಿಸಿ ಸ್ವತಂತ್ರ ಪ್ಯಾಲೆಸ್ಟೀನ್‌ ದೇಶ ಅಸ್ತಿತ್ವಕ್ಕೆ ಬರಬೇಕು ಎಂಬ ಅಂಶಗಳು ಈ ಒಪ್ಪಂದದಲ್ಲಿದೆ.

ಒಪ್ಪಂದಕ್ಕೆ ಸಹಿ ಹಾಕಿದರೆ 1967ರ ಅರಬ್‌–ಇಸ್ರೇಲ್‌ ಯುದ್ಧದ ವೇಳೆ ವಶಪಡಿಸಿಕೊಂಡ ಭೂಮಿಯನ್ನು ಬಿಟ್ಟುಕೊಡಬೇಕು ಎಂಬ ಕಾರಣ ಅಂದು ಅಧಿಕಾರದಲ್ಲಿದ್ದ ಏರಿಯಲ್‌ ಶರೋನ್‌ ನೇತೃತ್ವದ ಇಸ್ರೆಲ್ ಸರ್ಕಾರ ಈ ಒಪ್ಪಂದವನ್ನು ತಿರಸ್ಕರಿಸಿತ್ತು. ಬಳಿಕ ಬಂದ ಸರ್ಕಾರಗಳೂ ಇದನ್ನು ಒಪ್ಪಿಕೊಳ್ಳಲಿಲ್ಲ.

26 ವರ್ಷಗಳ ಬಳಿಕ ಒಪ್ಪಂದ

1967ರ ಯುದ್ಧದ ವೇಳೆ ವಶಪಡಿಸಿಕೊಂಡಿರುವ ಪ್ಯಾಲೆಸ್ಟೀನ್‌ ಭೂಪ್ರದೇಶವನ್ನು ಮರಳಿಸಿದರೆ ಮಾತ್ರ ಇಸ್ರೇಲ್‌ಅನ್ನು ಒಂದು ದೇಶವಾಗಿ ಒಪ್ಪಿಕೊಳ್ಳುವುದಾಗಿ ಹೆಚ್ಚಿನ ಅರಬ್‌ ರಾಷ್ಟ್ರಗಳು ಹೇಳುತ್ತಾ ಬಂದಿದ್ದವು. ಆ ದೇಶದ ಜತೆಗೆ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದವು.

ಈಜಿಪ್ಟ್‌ 1971 ರಲ್ಲಿ ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿದ್ದರೆ, ಜೋರ್ಡಾನ್‌ 1994 ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಆ ಬಳಿಕ 26 ವರ್ಷಗಳಲ್ಲಿ ಯಾವುದೇ ಅರಬ್‌ ರಾಷ್ಟ್ರ ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿರಲಿಲ್ಲ. ಇದೀಗ ಒಂದು ತಿಂಗಳ ಅವಧಿಯಲ್ಲಿ ಎರಡು ದೇಶಗಳು ಒಪ್ಪಂದ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT