ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾಗೆ ಸಹಕಾರ ನೀಡಿದರೆ ತೀಕ್ಷ್ಣ ಪರಿಣಾಮ: ಚೀನಾಗೆ ಅಮೆರಿಕ ಎಚ್ಚರಿಕೆ

Last Updated 13 ಮಾರ್ಚ್ 2022, 16:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನಿರ್ಬಂಧಗಳಿಂದ ರಷ್ಯಾ ನುಣಿಚಿಕೊಳ್ಳಲು ಸಹಕಾರ ನೀಡಿದರೆ ತೀಕ್ಷ್ಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾಗೆ ಅಮೆರಿಕ ಎಚ್ಚರಿಕೆ ನೀಡಿದೆ. ಅಮೆರಿಕದ ಉನ್ನತ ಮಟ್ಟದ ನಿಯೋಗವು ಚೀನಾದ ಉನ್ನತ ಅಧಿಕಾರಿಗಳನ್ನು ಸೋಮವಾರ ರೋಮ್‌ನಲ್ಲಿ ಭೇಟಿಯಾಗಲಿದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿರುವ ಅಮೆರಿಕವು ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ನಿರ್ಬಂಧಗಳಿಂದಾಗಿ ರಷ್ಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಚೀನಾದ ಸಹಕಾರ ಕೋರಿದೆ. ನಿರ್ಬಂಧಗಳನ್ನು ದಾಟಲು ಯಾವುದೇ ರೀತಿಯ ನೆರವು ನೀಡದಂತೆ ಚೀನಾಗೆ ಅಮೆರಿಕ ತಾಕೀತು ಮಾಡಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲಿವಾನ್‌ ಮತ್ತು ಚೀನಾದ ಕಮ್ಯುನಿಸ್ಟ್‌ ಪಾರ್ಟಿಯ ಮುಖ್ಯ ಅಧಿಕಾರಿ ಯಾಂಗ್‌ ಜೀಚಿ ಚರ್ಚೆ ನಡೆಸಲಿದ್ದಾರೆ. 'ಉಕ್ರೇನ್‌ ವಿರುದ್ಧ ರಷ್ಯಾದ ಯುದ್ಧದಿಂದಾಗಿ ಸ್ಥಳೀಯವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಭದ್ರತೆಯ ಮೇಲಿನ ಪರಿಣಾಮ, ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆಯ ಕುರಿತು ಚರ್ಚಿಸಲಾಗುತ್ತದೆ' ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಎಮಿಲಿ ಹಾರ್ನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವನ್ನು ಚೀನಾ ನೇರವಾಗಿ ಖಂಡಿಸಲು ನಿರಾಕರಿಸಿದೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಸಂಘರ್ಷ ಹೆಚ್ಚಲು ನ್ಯಾಟೊ ಪಡೆಗಳು ಪೂರ್ವದ ಕಡೆಗೆ ವಿಸ್ತರಿಸುತ್ತಿರುವುದು ಕಾರಣವೆಂದು ಚೀನಾ ಆರೋಪಿಸಿದೆ.

ರಷ್ಯಾಗೆ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಚೀನಾ ಆರ್ಥಿಕವಾಗಿ ಅಥವಾ ವಸ್ತುಗಳ ಪೂರೈಕೆ ಮೂಲಕ ಸಹಕಾರ ನೀಡುವುದೇ ಎಂಬುದರ ಬಗ್ಗೆ ಶ್ವೇತ ಭವನವು ನಿಗಾವಹಿಸಿದೆ ಎಂದು ಜೇಕ್‌ ಸುಲಿವಾನ್‌ ಹೇಳಿದ್ದಾರೆ.

ರಷ್ಯಾದೊಂದಿಗಿನ ಸ್ನೇಹವು ಬಂಡೆಯಷ್ಟು ಗಟ್ಟಿಯಾಗಿದೆ ಎಂದು ಚೀನಾ ಈ ಹಿಂದೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT