ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಜ್‌ ಟ್ರಸ್‌ ಅವರ ರಾಜೀನಾಮೆ; ಬ್ರಿಟನ್‌ ಮುಂದಿನ ಪ್ರಧಾನಿ ಯಾರು?

Last Updated 20 ಅಕ್ಟೋಬರ್ 2022, 16:27 IST
ಅಕ್ಷರ ಗಾತ್ರ

ಲಂಡನ್‌: ಲಿಜ್‌ ಟ್ರಸ್‌ ಅವರ ರಾಜೀನಾಮೆಯ ಬೆನ್ನಲ್ಲೇ ಬ್ರಿಟನ್‌ನ ಮುಂದಿನ ಪ್ರಧಾನಿ ಯಾರಾಗಬಹುದು ಎನ್ನುವ ಪ್ರಶ್ನೆ ಮತ್ತು ಕುತೂಹಲ ಮೂಡಿದೆ.

ಲಿಜ್‌ ಟ್ರಸ್‌ ಅವರುಸರ್ಕಾರದ ವೆಚ್ಚಗಳನ್ನು ತಗ್ಗಿಸದ ನಿಬಂಧನೆ ಪಾಲಿಸುವ ಮತ್ತು ತೆರಿಗೆಕಡಿತಗೊಳಿಸುವ ಭರವಸೆಗಳನ್ನು ನೀಡಿ, ಟೋರಿ ನಾಯಕತ್ವದ ಚುನಾವಣೆಯಲ್ಲಿ ಎದುರಾಳಿ,ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರ ವಿರುದ್ಧಸುಲಭ ಗೆಲುವು ಸಾಧಿಸಿದ್ದರು. ಹೆಚ್ಚುವರಿ ಸಾಲ ತರುವ ಮೂಲಕ ತಮ್ಮ ಪ್ರಸ್ತಾವಗಳಿಗೆ ಹಣಕಾಸು ನೆರವು ನೀಡುವ ಟ್ರಸ್‌ ಅವರ ಯೋಜನೆಗಳು ಅಜಾಗರೂಕವಾಗಿವೆ. ಇವು ದಶಕಗಳಲ್ಲೇ ಅತ್ಯಂತ ಹೆಚ್ಚಿನ ಹಣದುಬ್ಬರಕ್ಕೆ ಮತ್ತು ಬ್ರಿಟನ್‌ ಮಾರುಕಟ್ಟೆ ಮೇಲಿನ ವಿಶ್ವಾಸವನ್ನೂ ಹದಗೆಡಿಸಲು ಕಾರಣವಾಗಬಹುದು ಎಂದು ರಿಷಿ ಸುನಕ್‌ ಎಚ್ಚರಿಸಿದ್ದರು. ಸುನಕ್‌ ಅವರ ಎಚ್ಚರಿಕೆಯ ಮಾತು ಈಗ ನಿಜವಾಗಿದೆ.

ಟ್ರಸ್‌ ಅವರಿಗೆ ಪರ್ಯಾಯ ನಾಯಕನಾಗಿ ಈಗ ಸುನಕ್‌ ಕಾಣಿಸುತ್ತಿದ್ದಾರೆ. ರಿಷಿ ಸುನಕ್‌ ಅವರಿಗೆ ಹೊಸ ಯೂಗೊವ್ ಸಮೀಕ್ಷೆಯಲ್ಲಿ ಮಂಗಳವಾರ ಉತ್ತಮ ರೇಟಿಂಗ್‌ ಸಿಕ್ಕಿದೆ. ಸ್ವಪಕ್ಷೀಯರಲ್ಲಿ ಅನೇಕರು ಬೋರಿಸ್ ಜಾನ್ಸನ್ ಅವರನ್ನು ಪದಚ್ಯುತಿಗೊಳಿಸುವಲ್ಲಿ ವಹಿಸಿದ ನಿರ್ಣಾಯ ಪಾತ್ರಕ್ಕಾಗಿ ಸುನಕ್‌ ಅವರನ್ನು ಕ್ಷಮಿಸಲು ಸಿದ್ಧರಿಲ್ಲ.

ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಪುನರಾಗಮನಕ್ಕೆ ಪ್ರಯತ್ನಿಸುವ ಬಲವಾದ ಸುಳಿವು ನೀಡಿದ್ದಾರೆ.ಇದು ತ್ವರಿತವಾಗಿ ಕಾರ್ಯಸಾಧ್ಯವಾಗಬಹುದೆಂದೂ ಕೆಲವರುಭಾವಿಸಿಯೂ ಇದ್ದಾರೆ.ಟ್ರಸ್‌ ಅವರ ಸ್ಥಾನ ತುಂಬಲು ಬೋರಿಸ್‌ ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವ ಸಾಧ್ಯತೆಗಳು ಇವೆ ಎಂದು ‘ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದಾಗ ಬ್ರಿಟನ್‌ ರಕ್ಷಣಾ ಸಚಿವರಾಗಿ ಬೆನ್‌ ವ್ಯಾಲೇಸ್‌ ಅವರು ಇತ್ತೀಚಿನ ಸಮೀಕ್ಷೆ ಪ್ರಕಾರ ಜನಪ್ರಿಯತೆಯಲ್ಲಿ 85.8 ರೇಟಿಂಗ್ಸ್‌ ಪಡೆದಿದ್ದಾರೆ. ಲಿಜ್‌ ಟ್ರಸ್‌ ಅವರು ಹೌಸ್‌ ಕಾಮನ್ಸ್‌ಗೆ ಗೈರಾದಾಗ ಅವರ ಪರವಾಗಿ ಉತ್ತರ ಕೊಡುತ್ತಿದ್ದ ಮೊರ್ಡಾಂಟ್‌ ಅವರ ಹೆಸರೂ ಈಗ ಮುಂಚೂಣಿಯಲ್ಲಿದೆ. ಸಂಭಾವ್ಯರ ಪಟ್ಟಿಯಲ್ಲಿರುವ ಮತ್ತಿಬ್ಬರು ಹಣಕಾಸು ಸಚಿವ ಜೆರೆಮಿ ಹಂಟ್ ಮತ್ತು ಮಾಜಿ ಸಚಿವ ಮೈಕೆಲ್ ಗೋವ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಅತೀ ಕಡಿಮೆ ಅವಧಿಯ ಪ್ರಧಾನಿ:ಬ್ರಿಟನ್‌ ಪ್ರಧಾನಿ ಹುದ್ದೆಗೆ ಲಿಜ್‌ ಟ್ರಸ್‌ ಅವರ ಆಯ್ಕೆ ಮಾಡಲು ಬ್ರಿಟನ್‌ ಜನತೆ ತೆಗೆದುಕೊಂಡಿರುವ ದಿನಗಳಿಗಿಂತಲೂ ಅತೀ ಕಡಿಮೆ ಅವಧಿಗೆ ಆಡಳಿತ ನಡೆಸಿ, ಹುದ್ದೆ ತೊರೆದ ದೇಶದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. ಆದರೆ, ಮುಂದಿನ ನಾಯಕನ ಆಯ್ಕೆ ಆಗುವವರೆಗೂ ಪ್ರಧಾನಿ ಸ್ಥಾನದಲ್ಲಿ ಟ್ರಸ್‌ ಮುಂದುವರಿಯಲಿದ್ದಾರೆ.

ಲಿಜ್‌ ಟ್ರಸ್‌ ಅವರು ಬೋರಿಸ್‌ ಜಾನ್ಸನ್‌ ಅವರ ಆಡಳಿತದಲ್ಲಿವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಬೋರಿಸ್‌ ಅವರು ಟೋರಿ ಸಂಸದರ ವಿಶ್ವಾಸ ಕಳೆದುಕೊಂಡು ಪ್ರಧಾನಿ ಹುದ್ದೆ ತೊರೆದಾಗ, ಹೊಸ ನಾಯಕತ್ವದ ಆಯ್ಕೆ ಸ್ಪರ್ಧೆಗೆ ಲಿಜ್ ಟ್ರಸ್‌ ಅವರುಕೊನೆ ಕ್ಷಣದಲ್ಲಿ ಧುಮುಕಿದರು. ನಿರ್ಣಾಯಕ ಘಟ್ಟದಲ್ಲಿ ತಮ್ಮ ಪ್ರತಿಸ್ಪರ್ಧಿ ರಿಷಿ ಸುನಕ್‌ ಅವರನ್ನು ಹಿಂದಿಕ್ಕಿ, ಬೋರಿಸ್‌ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಮಾರ್ಗರೇಟ್‌ ಥ್ಯಾಚರ್‌, ತೆರೇಸಾ ಮೇ ಅವರ ನಂತರ ದೇಶದ ಪ್ರಧಾನಿ ಪಟ್ಟಕ್ಕೇರಿದ ಮೂರನೇ ಮಹಿಳೆ ಎನ್ನುವ ಶ್ರೇಯ ಅವರದಾಗಿದೆ.

ಲಿಜ್‌ ಅವರ ಸಚಿವ ಸಂಪುಟ ಸಹದ್ಯೋಗಿ ಕ್ವಾಸಿ ಕ್ವಾರ್ಟೆಂಗ್‌ ಕೆಲ ದಿನಗಳ ಹಿಂದಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ವಲಸೆ ನೀತಿ ಸಂಬಂಧ ಟ್ರಸ್‌ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್‌ ಕೂಡ ಬುಧವಾರವಷ್ಟೇ ಗೃಹ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ನೂತನ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನವೇ ಜೆರೆಮಿ ಹಂಟ್‌ ಅವರು ಲಿಜ್‌ ಅವರು ನೀಡಿದ್ದ ಭರವಸೆಗೆ ತದ್ವಿರುದ್ಧವಾಗಿ ಸಾಲ ಮತ್ತು ತೆರಿಗೆ ಕಡಿತದ ನಿರ್ಧಾರ ಹಿಂಪಡೆದಿದ್ದರು. ಈ ಎಲ್ಲ ಬೆಳವಣಿಗೆಗಳೂ ಲಿಸ್‌ ಟ್ರಸ್‌ ರಾಜೀನಾಮೆಯನ್ನು ತ್ವರಿತಗೊಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT