ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ದೇಶ ಗೆದ್ದು ವಿಶ್ವವನ್ನೇ ಗೆದ್ದ ಜೆಸಿಂಡ

Last Updated 22 ಅಕ್ಟೋಬರ್ 2020, 12:31 IST
ಅಕ್ಷರ ಗಾತ್ರ

‘ಧ್ರುವೀಕರಣಗೊಂಡ ಜಗತ್ತಿನಲ್ಲಿ ನಾವು ಈಗ ಜೀವಿಸುತ್ತಿದ್ದೇವೆ. ಇಲ್ಲಿ ವಾಸಿಸುತ್ತಿರುವ ಮಂದಿ, ಬೇರೊಬ್ಬರ ವಿಚಾರಧಾರೆಯನ್ನು, ಅಭಿಪ್ರಾಯವನ್ನು ಗೌರವಿಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಆದರೆ, ನ್ಯೂಜಿಲೆಂಡ್‌ ಜನರು ಈ ನಡವಳಿಕೆಗೆ ಅಪವಾದ ಎಂಬುದನ್ನುಈ ಚುನಾವಣೆಯ ಫಲಿತಾಂಶವು ತೋರಿಸಿಕೊಟ್ಟಿದೆ. ನಾವು ಇನ್ನೊಬ್ಬರ ಮಾತಿಗೆ ಕಿವಿಯಾಗುತ್ತೇವೆ, ಚರ್ಚಿಸುತ್ತೇವೆ, ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ ಎನ್ನುವುದನ್ನೂ ತೋರಿಸಿಕೊಟ್ಟಿದೆ.’

‘ಚುನಾವಣೆಗಳು ಜನರನ್ನು ಒಗ್ಗೂಡಿಸುತ್ತವೆ ಹೊರತು ಜನರ ಮಧ್ಯೆ ಭೇದ ತಂದೊಡ್ಡುವುದಿಲ್ಲ.’

– ಇವು ಎರಡನೇ ಬಾರಿಗೆ ನ್ಯೂಜಿಲೆಂಡ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ 40 ವರ್ಷದ ಜೆಸಿಂಡ ಆರ್ಡರ್ನ್ ಅವರು, ಚುನವಾಣಾ ಫಲಿತಾಂಶ ಹೊರಬಿದ್ದ ಮೇಲೆ ಆಡಿದ ಗೆಲುವಿನ ಮಾತುಗಳು.

ಅಕ್ಟೋಬರ್‌ 17 ಶನಿವಾರದಂದು, ನ್ಯೂಜಿಲೆಂಡ್‌ನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತ್ತು. ಜೆಸಿಂಡ ಅವರ ನೇತೃತ್ವದ ಎಡ–ಮಧ್ಯಮ ಸಿದ್ಧಾಂತದ ಲೇಬರ್‌ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಗ್ರೀನ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಜೆಸಿಂಡ ಅವರು ಸರ್ಕಾರ ರಚಿಸಿದ್ದರು. ಈಗ ಲೇಬರ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ನ್ಯೂಜಿಲೆಂಡ್‌ನಲ್ಲಿ ಅನುಪಾತದ ಮತದಾನ (proportional voting system) ಪದ್ಧತಿ ಇದೆ. ಇದನ್ನು 1996ರಲ್ಲಿ ಈ ದೇಶದಲ್ಲಿ ಜಾರಿಗೆ ತರಲಾಗಿದೆ. ಅಲ್ಲಿಂದ ಈಚೆಗೆ ಸ್ಪಷ್ಟ ಬಹುಮತದ ಸರ್ಕಾರ ರಚನೆ ಆಗಿರಲಿಲ್ಲ.

ಲೇಬರ್‌ ಪಕ್ಷವು ಒಟ್ಟು 120 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿದೆ. ಸುಮಾರು ಶೇ 49.2ರಷ್ಟು ಮತ ಲೇಬರ್‌ ಪಕ್ಷದ ಪರವಾಗಿ ಬಿದ್ದಿದೆ.

ಸರ್ಕಾರ ಇನ್ನೇನು ರೂಪುಗೊಳ್ಳಬೇಕಿದೆ. ಅದರ ತಯಾರಿಯೂ ಸಾಗಿದೆ. ‘ಲೇಬರ್‌ ಪಕ್ಷ 120 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಸಂಖ್ಯೆಯ ಶೇ 50ಕ್ಕೂ ಹೆಚ್ಚು ಮಂದಿ ಮಹಿಳೆಯರು. 120 ಸ್ಥಾನಗಳಲ್ಲಿ ಶೇ 10ರಷ್ಟು ಸದಸ್ಯರು, ಲೆಸ್ಬಿಯನ್‌, ಗೇ ಮತ್ತು ತೃತೀಯಲಿಂಗಿಗಳಿದ್ದಾರೆ. ಜತೆಗೆ ಈ ಸಚಿವ ಸಂಪುಟವು ಜಗತ್ತಿನಲ್ಲೇ ಮಾದರಿ ಸಚಿವ ಸಂಪುಟವಾಗಲಿದೆ’ ಎಂದು ನ್ಯೂಜಿಲೆಂಡ್‌ನ ಮ್ಯಾಸ್ಸಿ ವಿಶ್ವವಿದ್ಯಾಲಯದ ಪ್ರೊ. ಪಾಲ್‌ ಸ್ಪೂನ್ಲೀ ಅಭಿಪ್ರಾಯಪಡುತ್ತಾರೆ.

ಇಡೀ ಜಗತ್ತು ನ್ಯೂಜಿಲೆಂಡ್‌ನ ಈ ಚುನಾವಣಾ ಫಲಿತಾಂಶವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಮತ್ತು ಈ ಫಲಿತಾಂಶವು ಹಲವು ಪಾಠಗಳನ್ನು ಜಗತ್ತಿಗೆ ಕಲಿಸಿಕೊಡಬಹುದು ಎಂಬ ನಿರೀಕ್ಷೆಗಳ ಕುರಿತು ರಾಜಕೀಯ ತಜ್ಞರು ಮಾತನಾಡತೊಡಗಿದ್ದಾರೆ. ಹಾಗಾದರೆ, ಈ ಚುನವಾಣೆಯು ಯಾಕೆ ಇಷ್ಟೊಂದು ಪ್ರಾಮುಖ್ಯ ಪಡೆದುಕೊಂಡಿತು ಎನ್ನುವ ಪ್ರಶ್ನೆ ಏಳುವುದು ಸಹಜ.

ಜೆಸಿಂಡಾ ಅವರೇ ತಮ್ಮ ಚುನಾವಣೆಯಲ್ಲಿ ಹೇಳಿಕೊಂಡಂತೆ, ಇದು ಕೋವಿಡ್‌ ನಿರ್ವಹಣೆಯ ಕುರಿತಾದ ಚುನಾವಣೆ. ಅವರ ನೇತೃತ್ವದ ಸರ್ಕಾರ ಸೋಂಕು ತಡೆಗೆ ಕೈಕೊಂಡ ಕ್ರಮಗಳ ಜತೆಗೆ, ಆ ಕ್ರಮಗಳು ಫಲ ನೀಡಿದ್ದು ಈ ಚುನಾವಣೆಯಲ್ಲಿ ಚರ್ಚೆಗೊಂಡ ಮುಖ್ಯ ಅಂಶ. ಕೋವಿಡ್‌ನ ಸಮರ್ಥ ನಿರ್ವಹಣೆಗಾಗಿಯೇ ಅಲ್ಲಿನ ಜನ ಜೆಸಿಂಡ ಅವರನ್ನು ಇಷ್ಟೊಂದು ಭಾರಿ ಮೊತ್ತದಲ್ಲಿ ಮತ ಹಾಕಿ ಗೆಲ್ಲಿಸಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ

ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯಲು ಜಗತ್ತಿನಲ್ಲೇ ಕಠಿಣ ಲಾಕ್‌ಡೌನ್‌ ಅನ್ನು ನ್ಯೂಜಿಲೆಂಡ್‌ನಲ್ಲಿ ಹೇರಲಾಯಿತು. ಪ್ರವಾಸೋದ್ಯಮ ನೆಲಕಚ್ಚಿತು. ಆರ್ಥಿಕತೆಗೆ ಕೂಡ ತೀವ್ರತರವಾದ ಪೆಟ್ಟು ಬಿದ್ದಿದೆ. ಆದರೂ, ಜನ ಜೆಸಿಂಡ ಅವರನ್ನು ಆರಿಸಿದ್ದಾರೆ. ಕಾಲಕಾಲಕ್ಕೆ ಪತ್ರಿಕಾಗೋಷ್ಠಿಗಳ ಮೂಲಕ ಜನರಿಗೆ ಸರಿಯಾದ ಮಾಹಿತಿ ನೀಡಲಾಗುತ್ತಿತ್ತು. ಖುದ್ದು ಪ್ರಧಾನಿ ಜೆಸಿಂಡ ಅವರೇ ಪತ್ರಿಕಾಗೋಷ್ಠಿ ನಡೆಸಿ, ಜತೆಯಲ್ಲಿ ತಜ್ಞರನ್ನೂ ಇರಿಸಿಕೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಪ್ರಧಾನಿ ಆದ ಬಳಿಕ ಜೆಸಿಂಡ ಅವರು ಮೂರು ಕಠಿಣ ಸವಾಲುಗಳನ್ನು ಎದುರಿಸಿದರು. ಒಂದು, ಕೋವಿಡ್‌; ಮತ್ತೊಂದು, 2019ರ ಮಾರ್ಚ್‌ನಲ್ಲಿಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿ. ಈ ದಾಳಿಯಲ್ಲಿ 51 ಜನರು ಮೃತಪಟ್ಟಿದ್ದರು. ಇಡೀ ಜಗತ್ತು ಭಯಗೊಂಡಿತ್ತು. ಬಂದೂಕು ಹಿಡಿದು ಬಂದ ಮನುಷ್ಯ, ಮನುಷ್ಯತ್ವ ಮರೆತು ಗುಂಡಿನ ದಾಳಿ ನಡೆಸಿ ಕೆಲ ಕ್ಷಣಗಳಲ್ಲಿ ಇಷ್ಟೊಂದು ಅಮೂಲ್ಯ ಜೀವಗಳನ್ನು ಬಲಿಪಡೆದಿದ್ದ.

ಈ ದಾಳಿಯನ್ನು ಜೆಸಿಂಡ ಅವರು ನಿರ್ವಹಿಸಿದ ಬಗೆ ಅವರನ್ನು ಜಗತ್ತಿನ ಹೊಸ ಯುಗದ ನಾಯಕಿಯನ್ನಾಗಿ ಮಾಡಿತು. ‘ದಾಳಿಯನ್ನು ಆಕೆ ಅಹಿಂಸೆಯಿಂದ, ಸಹಾನುಭೂತಿಯಿಂದ ಮತ್ತು ಮತ್ತೊಬ್ಬರನ್ನು ಗೌರವಿಸುವ ಮೂಲಕ ನಿಭಾಯಿಸಿದ್ದಾಳೆ. ಹಿಂಸೆಯನ್ನು ಈ ರೀತಿಯಲ್ಲಿಯೂ ನಿಭಾಯಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾಳೆ’ ಎಂದು ದಲೈಲಾಮ ಅಭಿಪ್ರಾಯಪಟ್ಟಿದ್ದರು. ಮೂರನೆಯದಾಗಿ ವೈಟ್‌ ಐಲೆಂಡ್‌ನ ಜ್ವಾಲಾಮುಖಿಯಲ್ಲಿ 21 ಮಂದಿ ಮೃತಪಟ್ಟಿದ್ದರು. ಇದರ ನಿರ್ವಹಣೆಗೂ ಜೆಸಿಂಡ ಅವರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಜೆಸಿಂಡ ಅವರ ವ್ಯಕ್ತಿತ್ವವೂ ಈ ಗೆಲುವಿಗೆ ಮುಖ್ಯ ಪಾತ್ರವಹಿಸಿದೆ. ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಆಕೆಯ ಕಾರ್ಯವಿಧಾನವನ್ನು, ‘socially liberal, economically inclusive and politically democratic’ ( ಸಾಮಾಜಿಕವಾಗಿ ಉದಾರವಾದಿ, ಆರ್ಥಿಕವಾಗಿಎಲ್ಲರನ್ನೂ ಒಳಗೊಂಡ ಚಿಂತನೆ ಮತ್ತು ರಾಜಕೀಯವಾಗಿ ಪ್ರಜಾಪ್ರಭುತ್ವವಾದಿ) ಎಂದು ಬಣ್ಣಿಸಿದೆ.

ಅವರ ರಾಜಕೀಯವನ್ನು politics of kindness (ದಯಾಮಯ ರಾಜಕೀಯ) ಮತ್ತು ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಎಂದೂ ರಾಜಕೀಯ ತಜ್ಞರು ಬಣ್ಣಿಸಿದ್ದಾರೆ. ಈ ಬರಹದ ಮೊದಲಿಗೆ ದಾಖಲಿಸಿರುವ ಅವರ ಭಾಷಣವೇ ಬಹುಷಃ ಅವರ ಪರಿಚಯವನ್ನು ಮಾಡಿಕೊಡುತ್ತದೆ.

ಬಹುಷಃ ಈ ಎಲ್ಲ ಅಂಶಗಳ ಕುರಿತು ಚಿಂತನೆಗೆ ಹಚ್ಚುವಂತೆ ನ್ಯೂಜಿಲೆಂಡ್‌ ಚುನಾವಣಾ ಫಲಿತಾಂಶ ಬಂದಿದೆ. ಇವೆಲ್ಲವೂ ಒಂದು ನಿರ್ದಿಷ್ಟ ದೇಶದ ರಾಜಕೀಯ ಅಥವಾ ದೇಶಕ್ಕೆ ಮಾತ್ರ ಸೀಮಿತವಾಗುವ ಅಂಶ ಎಂದು ಕಂಡರೂ, ಅವೆಲ್ಲವಲ್ಲೂ ನಾವೂ ಕಲಿಯಬೇಕಾದ ಪಾಠ ಅಡಗಿದೆ ಎನ್ನಿಸುತ್ತದೆ. ಮುಖ್ಯವಾಗಿ ಜೆಸಿಂಡ ಅವರು ತಮ್ಮ ದೇಶಕ್ಕೆ ಎದುರಾದ ಸಂಕಟಗಳಲ್ಲಿ ಆಕೆ ತೆಗೆದುಕೊಂಡ ಸಮಯೋಚಿತ ಕ್ರಮಗಳಲ್ಲಿ ಬಹುಶಃ ವಿಶ್ವ ಕಲಿಯುವುದಿದೆ.

ವಿಶ್ವಗುರು ಆಗುವ ದಾರಿಯಲ್ಲಿ ಈ ಅಂಶಗಳೇ ಮುಖ್ಯ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT