ಮಂಗಳವಾರ, ಜನವರಿ 26, 2021
16 °C

Covid-19 World Updates: ಇಸ್ರೇಲ್‌ನಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಟೆಲ್ ಅವೀವ್: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಗುರುವಾರ ರಾತ್ರಿ ಮತ್ತಷ್ಟು  ನಿರ್ಬಂಧಗಳನ್ನು ವಿಧಿಸಲಾಗಿದ್ದು, ಇದು ದೇಶದಾದ್ಯಂತ ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಮತ್ತಷ್ಟು ಬಿಗಿಗೊಳಿಸಿದೆ.

ಈ ಕ್ರಮವನ್ನು ಸಂಸತ್ತು ಅನುಮೋದಿಸಿದ ಬಳಿಕ ಗುರುವಾರ ಮಧ್ಯರಾತ್ರಿಯಿಂದ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನವರಿ 21 ರಂದು ಈ ಕಠಿಣ ಕ್ರಮಗಳನ್ನು ತೆಗೆದುಹಾಕಲಾಗುವುದು ಎಂದು ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯದ ಜಂಟಿ ಹೇಳಿಕೆ ತಿಳಿಸಿದೆ.

ಇನ್ನೊಂದೆಡೆ ಕ್ಯಾಪಿಟಲ್ ಮೇಲಿನ ದಾಳಿಯ ದಿನದಂದೇ ಅಮೆರಿಕದಲ್ಲೂ ಒಂದೇ ದಿನದಲ್ಲಿ ದಾಖಲೆಯ 3,900 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಹೊಸ ನಿರ್ಬಂಧಗಳ ಅಡಿಯಲ್ಲಿ ಶಾಲೆಗಳು ಮತ್ತು ಹಲವು ಉದ್ಯಮಗಳನ್ನು ಮುಚ್ಚಲಾಗುವುದು. ಇಂತಹ ಪ್ರದೇಶಗಳಲ್ಲಿ ಐದಕ್ಕೂ ಹೆಚ್ಚು ಜನರ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಹೊಸ ನಿರ್ಬಂಧಗಳು ಜಾರಿಗೆ ಬರುವ ಮೊದಲು ವಿಮಾನದ ಟಿಕೆಟ್ ಖರೀದಿಸಿದ ಜನರನ್ನು ಹೊರತುಪಡಿಸಿ ಇಸ್ರೇಲ್‌ನಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗುತ್ತದೆ.

ಡಿಸೆಂಬರ್ 27, 2020ರಂದು ಇಸ್ರೇಲ್‌ನಲ್ಲಿ ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಸುಮಾರು ಒಂಬತ್ತು ದಶಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಒಟ್ಟು 4,71,048 ಪ್ರಕರಣಗಳು ಮತ್ತು 3,552 ಸಾವುಗಳು ವರದಿಯಾಗಿವೆ.

ಮೊರೊಕೊದಲ್ಲಿ 1,597 ಹೊಸ ಪ್ರಕರಣ

ಮೊರಾಕ್ಕೋದಲ್ಲಿ ಕಳೆದ 24 ಗಂಟೆಗಳಲ್ಲಿ 27 ಜನರು ಸಾವಿಗೀಡಾಗಿದ್ದು, 1,597 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಸೋಂಕಿತರು 4,48,678 ಕ್ಕೆ ತಲುಪಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಸೋಂಕಿನಿಂದಾಗಿ ಈವರೆಗೂ 7,645 ಜನರು ಮೃತಪಟ್ಟಿದ್ದಾರೆ. 4,20,569 ಜನರು ಈವರೆಗೆ ಗುಣಮುಖರಾಗಿದ್ದಾರೆ ಮತ್ತು 1,100 ಜನರ ಪರಿಸ್ಥಿತಿ ಗಂಭೀರವಾಗಿದೆ.

ಚಿಲಿ: 3,685 ಹೊಸ ಪ್ರಕರಣ ವರದಿ

ಕಳೆದ 24 ಗಂಟೆಗಳ ಅವಧಿಯಲ್ಲಿ ಚಿಲಿ ದೇಶದಾದ್ಯಂತ ಹೊಸದಾಗಿ 3,685 ಪ್ರಕರಣಗಳು ವರದಿಯಾಗಿದ್ದು, 97 ಜನರು ಸಾವಿಗೀಡಾಗಿರುವುದಾಗಿ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ದಕ್ಷಿಣ ಅಮೆರಿಕದ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,29,176ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 16,913ಕ್ಕೆ ತಲುಪಿದೆ. ಈವರೆಗೆ 5,93,235 ಜನರು ಗುಣಮುಖರಾಗಿದ್ದಾರೆ. 18,679 ಸಕ್ರಿಯ ಪ್ರಕರಣಗಳಿವೆ.

ಬ್ರೆಜಿಲ್‌ನಲ್ಲಿ 2 ಲಕ್ಷ ಜನ ಸಾವು

ಬ್ರೆಜಿಲ್‌ನಲ್ಲಿ ಸುಮಾರು 80 ಲಕ್ಷ ಜನರು ಕೊರೊನಾ ವೈರಸ್ ಸೋಂಕು ಪೀಡಿತರಾಗಿದ್ದು, ಮೃತರ ಸಂಖ್ಯೆ 2 ಲಕ್ಷಕ್ಕೂ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 1,524 ಜನರು ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 2,00,498ಕ್ಕೆ ತಲುಪಿದೆ. ಅದೇ ವೇಳೆ ಬ್ರೆಜಿಲ್‌ನಲ್ಲಿ 87,843 ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಮತ್ತು ಒಟ್ಟು ಸೋಂಕಿತರ ಸಂಖ್ಯೆ 79,61,673ಕ್ಕೆ ತಲುಪಿದೆ.

ಜಗತ್ತಿನಾದ್ಯಂತ ಒಟ್ಟು 8.85 ಕೋಟಿ ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 19.06 ಲಕ್ಷ ಜನರು ಮೃತಪಟ್ಟಿದ್ದಾರೆ. ಈ ಪೈಕಿ 6.36 ಕೋಟಿ ಜನರು ಗುಣಮುಖರಾಗಿದ್ದರೆ, 2.29 ಕೋಟಿ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 1,08,330 ಜನರ ಪರಿಸ್ಥಿತಿ ಗಂಭೀರವಾಗಿದೆ.

ಅಮೆರಿಕದಲ್ಲಿ 2.21 ಕೋಟಿಗೂ ಅಧಿಕ ಜನರಿಗೆ ಸೋಂಕು ತಗುಲಿದ್ದರೆ, ಭಾರತದಲ್ಲಿ 1,04,14,044, ರಷ್ಯಾದಲ್ಲಿ 33,32,142 ಮತ್ತು ಇಂಗ್ಲೆಂಡ್‌ನಲ್ಲಿ 28,89,419 ಜನರಿಗೆ ಸೋಂಕು ತಗುಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು