ಗುರುವಾರ , ಮಾರ್ಚ್ 30, 2023
24 °C

ಡೆಲ್ಟಾ ಭೀತಿ: ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡಲು ಮುಂದಾದ ಯೂರೋಪ್‌ ರಾಷ್ಟ್ರಗಳು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಿಸ್ಬನ್‌ (ಪೋರ್ಚುಗಲ್‌): ಕೊರೊನಾ ವೈರಸ್‌ನ ಡೆಲ್ಟಾ ತಳಿಯ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯುರೋಪ್‌ ರಾಷ್ಟ್ರಗಳು ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೇಗ ನೀಡಿವೆ.

‘ಇನ್ನೇನು ಯುರೋಪ್‌ನಲ್ಲಿ ಬೇಸಿಗೆ ದಿನಗಳು ಆರಂಭಗೊಳ್ಳಲಿವೆ. ಸಾಮಾಜಿಕ ಕೂಟಗಳು, ಸಭೆಗಳು ಹೆಚ್ಚಾಗಲಿವೆ. ಅಲ್ಲದೆ ಯುವಕರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್‌ ಧರಿಸುವಿಕೆಯಂತಹ ನಿಯಮಗಳನ್ನು ಕಡೆಗಣಿಸುತ್ತಿದ್ದಾರೆ. ಇದರಿಂದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗಲಿವೆ’ ಎಂದು ಕೆಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.

ಯುರೋಪ್‌ ರಾಷ್ಟ್ರಗಳು ಜನರಿಗೆ ಲಸಿಕೆಯನ್ನು ಪಡೆಯುವಂತೆ ಪ್ರೋತ್ಸಾಹಿಸಲು ಉಚಿತ ದಿನಸಿ, ಪ್ರಯಾಣ ಮತ್ತು ಮನೋರಂಜನಾ ಕೂಪನ್‌ಗಳು, ಬಹುಮಾನ ವಿತರಣೆಯಂತಹ ಕಾರ್ಯಕ್ರಮಗಳನ್ನು ಘೋಷಿಸಿವೆ.

‘ಲಸಿಕೆ ಪಡೆಯದ ಅಥವಾ ಲಸಿಕೆಯ ಒಂದೇ ಡೋಸ್‌ ಪಡೆದವರಿಗೆ ಡೆಲ್ಟಾ ತಳಿಯಿಂದ ಹೆಚ್ಚು ಅಪಾಯವಿದೆ. ಆಗಸ್ಟ್‌ ವೇಳೆಗೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಶೇಕಡ 90 ರಷ್ಟು ಡೆಲ್ಟಾ ತಳಿಯ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ. ಹಾಗಾಗಿ ಆದಷ್ಟು ಬೇಗ ಎಲ್ಲರೂ ಲಸಿಕೆಯನ್ನು ಪಡೆಯಬೇಕು’ ಎಂದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್(ಇಸಿಡಿಸಿ) ತಿಳಿಸಿದೆ.

‘ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೇಗ ನೀಡುವುದು ಈಗಿನ ತುರ್ತು’ ಎಂದೂ ಇ.ಸಿ.ಡಿ.ಸಿ ಪ್ರತಿಪಾದಿಸಿದೆ.

ಬ್ರಿಟನ್‌ನಲ್ಲಿ ಒಂದು ತಿಂಗಳೊಳಗೆ ಡೆಲ್ಟಾ ತಳಿಯ ‍ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ‘ಪೋರ್ಚುಗೀಸ್‌ನಲ್ಲೂ ಡೆಲ್ಟಾ ತಳಿಯು ತೀವ್ರವಾಗಿ ಹರಡುತ್ತಿದೆ. ಮೇ ತಿಂಗಳಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಪೈಕಿ ಶೇ 4ರಷ್ಟು ಡೆಲ್ಟಾ ತಳಿಯ ಪ್ರಕರಣಗಳಾಗಿದ್ದವು. ಆದರೆ ಜೂನ್‌ ವೇಳೆಗೆ ಈ ಪ್ರಮಾಣವು ಶೇ 56ಕ್ಕೆ ಏರಿಕೆಯಾಗಿದೆ. ಏಪ್ರಿಲ್‌ ಬಳಿಕ ಮೊದಲ ಬಾರಿಗೆ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ 500ರ ಗಡಿ ದಾಟಿದೆ’ ಎಂದು ಪೋರ್ಚುಗೀಸ್‌ ಅಧಿಕಾರಿಗಳು ತಿಳಿಸಿದರು.

ರಷ್ಯಾದಲ್ಲೂ ಸೋಂಕು ತೀವ್ರವಾಗಿ ವ್ಯಾ‍ಪಿಸುತ್ತಿದ್ದು, ಈ ವಾರದಲ್ಲಿ ಪ್ರತಿನಿತ್ಯ 20,000 ಹೊಸ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ 679 ಮಂದಿ ಮೃತಪಟ್ಟಿದ್ದಾರೆ. ಹಲವು ದೇಶಗಳಲ್ಲಿ ಯುವಕರಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದೆ.

ಇದನ್ನೂ ಓದಿ... ಫೈಜರ್, ಜಾನ್ಸನ್ ಲಸಿಕೆ ಡೆಲ್ಟಾ ವಿರುದ್ಧ ಪರಿಣಾಮಕಾರಿ: ದಕ್ಷಿಣ ಆಫ್ರಿಕಾ ತಜ್ಞರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು