ನವದೆಹಲಿ: ಪಾಕಿಸ್ತಾನದ ಸಂಸತ್ತಿನಲ್ಲಿ 174 ಸದಸ್ಯರು ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ ಮತ ಹಾಕುವ ಮೂಲಕ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ್ದಾರೆ. ಅದರ ಬೆನ್ನಲ್ಲೇ ನೂತನ ಪ್ರಧಾನಿಯ ಆಯ್ಕೆಯ ಕಸರತ್ತು ನಡೆಯುತ್ತಿದ್ದು, ಇಮ್ರಾನ್ 'ಆಮದು ಸರ್ಕಾರದ' ವಿರುದ್ಧ ರಸ್ತೆಗಿಳಿದು ಪ್ರತಿಭಟಿಸುವಂತೆ ಕರೆ ನೀಡಿದ್ದಾರೆ.
ಪದಚ್ಯುತರಾದ ನಂತರ ಮೊದಲ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಖಾನ್, '1947ರಲ್ಲಿ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಯಿತು; ಆದರೆ, ಸರ್ಕಾರ ಬದಲಿಸುವ ವಿದೇಶಿ ಶಕ್ತಿಗಳ ಪಿತೂರಿಯ ವಿರುದ್ಧದ ಸ್ವಾತಂತ್ರ್ಯ ಹೋರಾಟವು ಮತ್ತೆ ಶುರುವಾಗಿದೆ. ಸದಾ ದೇಶದ ಪ್ರಜೆಗಳೇ ತಮ್ಮ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಂಡಿದ್ದಾರೆ' ಎಂದು ಟ್ವೀಟಿಸಿದ್ದಾರೆ.
ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಅವರು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತರಾದ ಪಾಕಿಸ್ತಾನದ ಮೊದಲ ಪ್ರಧಾನಿ ಎನಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಅಧಿಕಾರದ ಪೂರ್ಣ ಅವಧಿ ಪೂರೈಸಿಲ್ಲ.
ಅವಿಶ್ವಾಸ ನಿರ್ಣಯವನ್ನು ತಡೆಯಲು ಇಮ್ರಾನ್ ಖಾನ್ ಹಲವು ಪ್ರಯತ್ನ ಮಾಡಿದ್ದರು. ಸಂಸತ್ತನ್ನು ವಿಸರ್ಜಿಸುವುದಕ್ಕೆ ಅಧ್ಯಕ್ಷರಿಂದ ಅನುಮೋದನೆಯನ್ನೂ ಪಡೆದುಕೊಂಡಿದ್ದರು. ಆದರೆ, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪಾಕ್ ಸಂಸತ್ ಅನ್ನು ಪುನರ್‌ಸ್ಥಾಪನೆ ಮಾಡಿದ್ದೂ ಅಲ್ಲದೇ, ಅವಿಶ್ವಾಸ ನಿರ್ಣಯ ಮಂಡನೆಗೆ ಸೂಚನೆಯನ್ನೂ ನೀಡಿತ್ತು. ಒಟ್ಟು 342 ಸದಸ್ಯ ಬಲದ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 174 ಸದಸ್ಯರು ಮತ ಚಲಾಯಿಸಿದರು.
'ನಯಾ ಪಾಕಿಸ್ತಾನ್' (ಹೊಸ ಪಾಕಿಸ್ತಾನ) ರೂಪಿಸುವ ಭರವಸೆ ನೀಡುವ ಮೂಲಕ 2018ರಲ್ಲಿ ಇಮ್ರಾನ್ ಖಾನ್ ಅಧಿಕಾರ ಹಿಡಿದರು. ಹಣಕಾಸು ನಿರ್ವಹಣೆಯಲ್ಲಿ ಎದುರಾದ ತೊಡಕುಗಳು, ವಿದೇಶಿ ವಿನಿಮಯ ಸಂಗ್ರಹದಲ್ಲಿ ಇಳಿಕೆ ಹಾಗೂ ಎರಡಂಕಿಯ ಹಣದುಬ್ಬರ ಪ್ರಮಾಣದಿಂದಾಗಿ ಸರ್ಕಾರವು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಯಿತು.
ಪಾಕಿಸ್ತಾನ್ ಮುಸ್ಲಿಂ ಲೀಗ್–ನವಾಜ್ ಪಕ್ಷದ ಅಧ್ಯಕ್ಷ, ನವಾಜ್ ಷರೀಫ್ ತಮ್ಮ ಶಾಹಬಾಝ್ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಷಾ ಮೆಹಮೂದ್ ಖುರೇಶಿ ಅವರನ್ನು ಹೆಸರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.