ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರಿಣಾಮ: ಭಾರತದಲ್ಲಿ ಮಕ್ಕಳು, ತಾಯಂದಿರ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆ

2020ರಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ: ವಿಶ್ವಸಂಸ್ಥೆಯಿಂದ ವರದಿ ಬಿಡುಗಡೆ
Last Updated 18 ಮಾರ್ಚ್ 2021, 6:39 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೋವಿಡ್‌–19 ಪಿಡುಗಿನಿಂದಾಗಿ ಭಾರತದಲ್ಲಿ ಕಳೆದ ವರ್ಷ ಆರೋಗ್ಯ ಸೇವೆಯಲ್ಲಿ ಸಾಕಷ್ಟು ವ್ಯತ್ಯಯ ಕಂಡುಬಂತು. ಈ ಕಾರಣಕ್ಕಾಗಿ 2020ರಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳು ಹಾಗೂ ತಾಯಂದಿರ ಮರಣ ಪ್ರಮಾಣದಲ್ಲಿ ಹೆಚ್ಚಳ ಕಂಡುಬರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾದ ಯುನಿಸೆಫ್‌ ಹಾಗೂ ಯುಎನ್‌ಎಫ್‌ಪಿಎ ಬಿಡುಗಡೆ ಮಾಡಿರುವ ‘ದಕ್ಷಿಣ ಏಷ್ಯಾದಲ್ಲಿ ಕೋವಿಡ್‌–19ರ ನೇರ ಹಾಗೂ ಪರೋಕ್ಷ ಪರಿಣಾಮ ಹಾಗೂ ಪ್ರತಿಕ್ರಿಯೆ’ ಎಂಬ ವರದಿಯಲ್ಲಿ ಈ ವಿಷಯವನ್ನು ವಿವರಿಸಲಾಗಿದೆ.

ಈ ವರ್ಷದ ಫೆಬ್ರುವರಿ ಅಂತ್ಯದ ವರೆಗಿನ ಅವಧಿಯಲ್ಲಿ ದಕ್ಷಿಣ ಏಷ್ಯಾದಲ್ಲಿ 1.2 ಕೋಟಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಗರಿಷ್ಠ 1.9 ಕೋಟಿ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ ಎಂದು ಯುನಿಸೆಫ್‌ ಹೇಳಿದೆ.

2021ರ ಸೆಪ್ಟೆಂಬರ್‌ ವೇಳೆಗೆ ಕೋವಿಡ್‌–19 ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಭಾರತ 10 ಶತಕೋಟಿ ಡಾಲರ್‌ ವೆಚ್ಚ ಮಾಡಲಿದೆ ಎಂದು ಅಂದಾಜಿಸಲಾಗಿದ್ದು, ಇದು ದಕ್ಷಿಣ ಏಷ್ಯಾದಲ್ಲಿಯೇ ಗರಿಷ್ಠ ವೆಚ್ಚವಾಗಿರಲಿದೆ ಎಂದು ವರದಿ ಹೇಳಿದೆ.

ದಕ್ಷಿಣ ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾಕ್ಕೆ ಸಂಬಂಧಿಸಿದ ಅಂಕಿ–ಅಂಶಗಳ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಮಕ್ಕಳ ಹಾಗೂ ತಾಯಂದಿರ ಆರೋಗ್ಯ, ಆರ್ಥಿಕತೆ, ಉದ್ಯೋಗ ವಲಯ ಹಾಗೂ ಶಿಕ್ಷಣದ ಮೇಲೆ ಕೋವಿಡ್‌ ಪಿಡುಗಿನ ಪರಿಣಾಮವನ್ನು ವಿಶ್ಲೇಷಿಸಲಾಗಿದೆ.

ಲಾಕ್‌ಡೌನ್‌, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಮಾಸ್ಕ್‌ ಧರಿಸುವಂತಹ ಕ್ರಮಗಳಿಂದ ಭಾರತದಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT