ಬುಧವಾರ, ಸೆಪ್ಟೆಂಬರ್ 29, 2021
20 °C

ಹಿಂದೂ ಮಹಾಸಾಗರ: ಭದ್ರತಾ ವಿಷಯದಲ್ಲಿ ಭಾರತದ್ದು ಮಹತ್ವದ ಪಾತ್ರ -ತರಂಜಿತ್‌ ಸಿಂಗ್‌

ಪಿಟಿಐ, ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತವು ಹಿಂದೂ ಮಹಾಸಾಗರ ಪ್ರದೇಶದ ಭದ್ರತಾ ವಿಷಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಅದರ ಜತೆಗೆ ಈ ಭಾಗದಲ್ಲಿನ ದೇಶಗಳ ಆರ್ಥಿಕ ಅಭಿವೃದ್ಧಿ ಹಾಗೂ ತನ್ನ ಸ್ನೇಹಿತರು ಮತ್ತು ಪಾಲುದಾರರ ಕಡಲ ಭದ್ರತೆ ಸುಧಾರಿಸಲು ನೆರವಾಗುತ್ತಿದೆ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ತಿಳಿಸಿದ್ದಾರೆ.

ಮುಂದಿನ ವಾರ ಕ್ವಾಡ್‌ ಶೃಂಗಸಭೆ ಜರುಗಲಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.‌

ಇದೇ 24ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ವಾಷಿಂಗ್ಟನ್‌ಲ್ಲಿ ಕ್ವಾಡ್‌ ಶೃಂಗಸಭೆ ಆಯೋಜಿಸಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌, ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಭಾಗವಹಿಸಲಿದ್ದಾರೆ.

ಇಂಡೊ–ಪೆಸಿಫಿಕ್‌ನಲ್ಲಿ ಮುಕ್ತ ಸಂಚಾರವನ್ನು ಉತ್ತೇಜಿಸುವುದು, ಹವಾಮಾನ ಬಿಕ್ಕಟ್ಟು ಹಾಗೂ ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡಲು ಪರಸ್ಪರ ಸಹಕಾರ ಮುಂದುವರಿಸುವ ಕುರಿತ ವಿಚಾರಗಳನ್ನು ನಾಲ್ವರು ನಾಯಕರು ಚರ್ಚಿಸುವರು.

‘ರಾಷ್ಟ್ರವಾಗಿ ಇಂದು ನಾವು ತುಂಬ ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅವುಗಳನ್ನು ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಹಾಗಾಗಿ ಪರಸ್ಪರ ಅವಲಂಬನೆಯ ಅಗತ್ಯವಿದೆ. ಇದು ದೌರ್ಬಲ್ಯದ ಸಂಕೇತವಲ್ಲ. ಬದಲಿಗೆ ಶಕ್ತಿಯ ಮೂಲ’ ಎಂದು ಸಂಧು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದೂ ಮಹಾಸಾಗರವು ನೆರೆಹೊರೆಯ ರಾಷ್ಟ್ರಗಳೊಂದಿಗಿನ ವಿಸ್ತೃತ ಸೇತುವೆಯಾಗಿದೆ ಎಂದರು.

‘ನಮ್ಮನ್ನು ಬೇರ್ಪಡಿಸಿರುವ ಸಮುದ್ರಗಳೇ ನಮ್ಮನ್ನು ಸಂಪರ್ಕಿಸುವಂತೆ ಮಾಡಿವೆ. ಹಿಂದೂ ಮಹಾಸಾಗರ ಪ್ರದೇಶದ ಭದ್ರತಾ ವಿಚಾರದಲ್ಲಿ ಭಾರತ ಪ್ರಮುಖ ಪಾತ್ರ ನಿಭಾಯಿಸುತ್ತಿದೆ. ನೆರೆ ದೇಶಗಳಲ್ಲಿ ಅವಘಡ, ವಿಪತ್ತುಗಳು ಸಂಭವಿಸಿದಾಗ ಭಾರತವು ತುರ್ತಾಗಿ ಸ್ಪಂದಿಸಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು