ಸೋಮವಾರ, ಮೇ 16, 2022
30 °C

ಅಣ್ವಸ್ತ್ರ ಅಭಿವೃದ್ಧಿಗಾಗಿ ಕ್ರಿಪ್ಟೋಕರೆನ್ಸಿ ಕದ್ದ ಉತ್ತರ ಕೊರಿಯಾ: ವಿಶ್ವಸಂಸ್ಥೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಸೋಲ್‌: ಅಣ್ವಸ್ತ್ರ ಪರೀಕ್ಷೆ ಮತ್ತು ಅತ್ಯಾಧುನಿಕ ಕ್ಷಿಪಣಿಗಳ ಅಭಿವೃದ್ಧಿಗೆ ಆರ್ಥಿಕ ಬೆಂಬಲ ನೀಡಲು ಸೈಬರ್‌ ದಾಳಿಯ ಮೂಲಕ 300 ಮಿಲಿಯನ್‌ ಡಾಲರ್‌ಗಿಂತಲೂ ಅಧಿಕ ಕ್ರಿಪ್ಟೋಕರೆನ್ಸಿಯನ್ನು ಉತ್ತರ ಕೊರಿಯಾ ಕದ್ದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ವಿಚಾರವಾಗಿ ವಿಶ್ವಸಂಸ್ಥೆಯು ಗುಪ್ತ ವರದಿಯೊಂದನ್ನು ತಯಾರಿಸಿದೆ ಎಂದು ಸುದ್ದಿಸಂಸ್ಥೆ ಎಎಫ್‌ಪಿ ತಿಳಿಸಿದೆ.

'2019 ರಿಂದ ನವೆಂಬರ್ 2020ರ ವರೆಗೆ ಒಟ್ಟು 316.4 ಮಿಲಿಯನ್‌ ಡಾಲರ್‌ನಷ್ಟು ವರ್ಚುವಲ್ ಆಸ್ತಿಯ ಕಳ್ಳತನ ನಡೆದಿದೆ' ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಬಹಿರಂಗಗೊಂಡಿದೆ.

ಹಣಕಾಸು ಸಂಸ್ಥೆಗಳು ಮತ್ತು ವಿನಿಮಯ ಕೇಂದ್ರಗಳ ವರ್ಚುವಲ್‌ ವ್ಯವಹಾರಗಳನ್ನು ಹ್ಯಾಕ್‌ ಮಾಡುವ ಮೂಲಕ ಕ್ರಿಪ್ಟೋಕರೆನ್ಸಿಯನ್ನು ಕದಿಯಲಾಗಿದೆ ಎಂದು ಆರೋಪಿಸಲಾಗಿದೆ.

ಕಳುವಾದ ಆಸ್ತಿಯ ಬಹುಪಾಲು ಹಣವು ಕಳೆದ ವರ್ಷದ ಕೊನೆಯಲ್ಲಿ ನಡೆದ ಎರಡು ಕಳ್ಳತನಗಳಿಂದ ಬಂದಿದೆ. ದಕ್ಷಿಣ ಕೊರಿಯಾದ ಸಂಶೋಧನಾ ಸಂಸ್ಥೆಗಳು ಮತ್ತು ಹಣಕಾಸು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ನುರಿತ ಹ್ಯಾಕರ್‌ಗಳನ್ನು ಉತ್ತರ ಕೊರಿಯಾ ಸರ್ಕಾರವು ನಿಯೋಜಿಸಿದೆ. ಆರ್ಥಿಕ ಲಾಭಕ್ಕಾಗಿ ತನ್ನ ಸೈಬರ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವೂ ಉತ್ತರ ಕೊರಿಯಾದ ಮೇಲಿದೆ.

ಕ್ರಿಪ್ಟೋಕರೆನ್ಸಿ ಎಂಬುದು ಡಿಜಿಟಲ್ ಹಣಕಾಸು ವ್ಯವಸ್ಥೆಯಾಗಿದ್ದು, ಭೌತಿಕ ಅಸ್ತಿತ್ವ ಇಲ್ಲದ ಕಾರಣ ಇದಕ್ಕೆ ಯಾವುದೇ ರಾಷ್ಟ್ರದ ಕಾನೂನಾತ್ಮಕ ಮನ್ನಣೆ ಇರುವುದಿಲ್ಲ. ಹೀಗಾಗಿ, ಇದನ್ನು ಡಿಜಿಟಲ್ ಸ್ವರೂಪದಲ್ಲೇ ಬಳಸಬೇಕು. ಹಾಗೆಂದು ಇದನ್ನು ಸುಖಾಸುಮ್ಮನೆ ಸೃಷ್ಟಿಸಲೂ ಸಾಧ್ಯವಿಲ್ಲ. ಮುಖ್ಯವಾಹಿನಿಯ ಹಣಕಾಸು ವ್ಯವಸ್ಥೆಗೆ ಪರ್ಯಾಯವಾಗಿ ಬಳಕೆಯಾಗುವ ಕ್ರಿಪ್ಟೋಕರೆನ್ಸಿ ವ್ಯವಸ್ಥೆಗೆ ಪ್ರವೇಶ ಪಡೆಯಲು, ಮುಖ್ಯವಾಹಿನಿ ವ್ಯವಸ್ಥೆಯ ಹಣವೇ ಬೇಕು.

ದೇಶದ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ಕಿಮ್‌ ಜಾಂಗ್‌ ಉನ್‌ ಘೋಷಿಸಿದ ಬೆನ್ನಲ್ಲೇ, ಉತ್ತರ ಕೊರಿಯಾ ಮಿಲಿಟರಿ ಎರಡು ವಾರಗಳ ಹಿಂದೆ ತನ್ನ ಶಕ್ತಿ ಪ್ರದರ್ಶಿಸಿತ್ತು.

ಜಲಾಂತರ್ಗಾಮಿಗಳಿಂದ ಚಿಮ್ಮಬಲ್ಲ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು, ಮಿಲಿಟರಿಯಲ್ಲಿ ಬಳಸುವ ಹಾರ್ಡ್‌ವೇರ್‌ ಅಭಿವೃದ್ಧಿಗೆ ಮುಂದಾಗುವುದಾಗಿ ಹೇಳಿರುವ ಉತ್ತರ ಕೊರಿಯಾ, ಇಲ್ಲಿ ನಡೆದ ಪರೇಡ್‌ನಲ್ಲಿ ತನ್ನ ಈ ಕಾರ್ಯಕ್ರಮಗಳನ್ನು ಅನಾವರಣಗೊಳಿಸಿತ್ತು

ಉತ್ತರ ಕೊರಿಯಾದಲ್ಲಿ ಪರಮಾಣು ಕಾರ್ಯಕ್ರಮಗಳ ಚಟುವಟಿಕೆ ಸ್ಥಗಿತಗೊಳಿಸಿರುವ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಈ ಹಿಂದೆ ತಿಳಿಸಿತ್ತು. ವಿಶ್ವಸಂಸ್ಥೆಯ ಪರಮಾಣು ನಿಗಾಸಂಸ್ಥೆಯಾಗಿ ಐಎಇಎ ಕಾರ್ಯನಿರ್ವಹಿಸುತ್ತಿದೆ.

‘ನಿಶ್ಯಸ್ತ್ರೀಕರಣಕ್ಕೆ ಒತ್ತು ನೀಡುವಂತೆ ಉತ್ತರ ಕೊರಿಯಾದ ಮೇಲೆ ಒತ್ತಡ ಹೇರಲಾಗಿತ್ತು. ಹೀಗಿದ್ದರೂ, ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಹಾಗೂ ಹೇಳಿಕೆಗಳು ಮುಂದುವರೆದಿರುವುದು ಕಳವಳಕಾರಿ ವಿಚಾರವಾಗಿದೆ’ ಎಂದು ಐಎಇಎ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು