ಇದೇ ಮೊದಲು: ಮಗಳ ಜೊತೆ ಕಾಣಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್
ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಇದೇ ಮೊದಲ ಬಾರಿಗೆ ತಮ್ಮ ಮಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಪರಮಾಣು ಶಸ್ತ್ರಸಜ್ಜಿತ ದೇಶದ ಅತಿದೊಡ್ಡ ಖಂಡಾಂತರ ಕ್ಷಿಪಣಿ ಉಡಾವಣೆಯ ಪರಿಶೀಲನೆ ನಡೆಸುವ ಸಂದರ್ಭ ಮಗಳ ಕೈಹಿಡಿದು ನಡೆದಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಉತ್ತರ ಕೊರಿಯಾವು ಶುಕ್ರವಾರ ಹ್ವಾಸಾಂಗ್–17 ಎಂಬ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿತು ಎಂದು ಅಲ್ಲಿನ ಕೆಸಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಸಂದರ್ಭ ಕಂಡುಬಂದ ದೊಡ್ಡ ಅಚ್ಚರಿ ಎಂದರೆ, ಕಿಮ್ ಜೊತೆ ಮಗಳು ಸಹ ಇದ್ದದ್ದು, ಈವರೆಗೆ ತಮಗೆ ಒಬ್ಬಳು ಮಗಳಿರುವ ಮಾಹಿತಿಯನ್ನು ಕಿಮ್ ಹೊರಜಗತ್ತಿಗೆ ತಿಳಿಸಿರಲಿಲ್ಲ.
ಕಿಮ್ ಮಗಳ ಹೆಸರನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿಲ್ಲ. ಚಿತ್ರದಲ್ಲಿ ಯುವತಿಯು ತಂದೆ ಕಿಮ್ ಜಾಂಗ್ ಕೈಹಿಡಿದು ಕ್ಷಿಪಣಿಯತ್ತ ನೋಡುತ್ತಿರುವುದನ್ನು ಕಾಣಬಹುದಾಗಿದೆ.
'ನಾವು ಕಿಮ್ ಜಾಂಗ್ ಉನ್ ಅವರ ಮಗಳನ್ನು ನೋಡಿದ ಮೊದಲ ಸಾರ್ವಜನಿಕ ಸಂದರ್ಭ ಇದಾಗಿದೆ’ಎಂದು ಅಮೆರಿಕದ ಸ್ಟಿಮ್ಸನ್ ಸೆಂಟರ್‌ನ ಉತ್ತರ ಕೊರಿಯಾ ನಾಯಕತ್ವ ತಜ್ಞ ಮೈಕೆಲ್ ಮ್ಯಾಡೆನ್ ಹೇಳಿದ್ದಾರೆ.
‘ಕಿಮ್ ಮಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಕಿಮ್‌ಗೆ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗ ಸೇರಿ ಮೂವರು ಮಕ್ಕಳಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಆ ಮಕ್ಕಳಲ್ಲಿ ಒಬ್ಬರು ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ರಜಾದಿನದ ಆಚರಣೆಗಳ ಸಂದರ್ಭ ವಿಡಿಯೊ ತುಣುಕಿನಲ್ಲಿ ಕಾಣಿಸಿಕೊಂಡಿದ್ದರುಎಂದು ನಂಬಲಾಗಿದೆ.
2013ರಲ್ಲಿ ಅಮೆರಿಕದ ನಿವೃತ್ತ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್ ಕಿಮ್‌ಗೆ ಜು ಏ ಎಂಬ ಮಗಳು ಇದ್ದಾಳೆ ಎಂದು ಹೇಳಿದ್ದರು. ಆ ವರ್ಷ ಉತ್ತರ ಕೊರಿಯಾ ಪ್ರವಾಸದ ನಂತರ, ದಿ ಗಾರ್ಡಿಯನ್ ಪತ್ರಿಕೆ ಜೊತೆ ಮಾತನಾಡಿದ್ದ ರಾಡ್‌ಮನ್, ಕಿಮ್ ಮತ್ತು ಅವರ ಕುಟುಂಬದವರ ಜೊತೆ ಸಮಯ ಕಳೆದಿರುವೆ. ಅವರ ಮಗುವನ್ನು ನೋಡಿದ್ದೆ ಎಂದು ಹೇಳಿದ್ದರು.
ಕಿಮ್ ಮಗಳು ಜು ಎ ಈಗ ಹದಿಹರೆತದಲ್ಲಿದ್ದು, ವಿದ್ಯಾಭ್ಯಾಸ, ತರಬೇತಿಗಳನ್ನು ಮುಗಿಸಿ ನಾಯಕತ್ವದತ್ತ ಮುಖ ಮಾಡಿರಬಹುದು ಎಂದು ಮ್ಯಾಡೆನ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.