ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಪ್ರಧಾನಿ ವಿರುದ್ಧ ಅವಿಶ್ವಾಸ; ಪಟ್ಟ ಉಳಿಸಿಕೊಳ್ಳುವರೇ ಇಮ್ರಾನ್‌?

Last Updated 3 ಏಪ್ರಿಲ್ 2022, 3:19 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಇಮ್ರಾನ್‌ ಖಾನ್‌ ಪಾಕಿಸ್ತಾನದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ಇಂದು ಸ್ಪಷ್ಟತೆ ಸಿಗಲಿದೆ. ಪಾಕಿಸ್ತಾನ ಸಂಸತ್ತಿನಲ್ಲಿ ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಲಾಗುತ್ತಿದೆ.

ಅಧಿಕಾರದಿಂದ ಇಳಿಸಲು ವಿದೇಶಿ ಶಕ್ತಿಗಳ ಪಿತೂರಿ, ರಾಜಕೀಯ ಪಕ್ಷಗಳ ವಿರುದ್ಧ ಆರೋಪಗಳು ಹಾಗೂ ಗುಪ್ತಚರ, ಸೇನಾ ಮುಖ್ಯಸ್ಥರೊಂದಿಗೆ ರಹಸ್ಯ ಮಾತುಕತೆಗಳ ಬಳಿಕ ಇಮ್ರಾನ್‌ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದರು. ಆದರೆ, ಈಗಾಗಲೇ ಮೈತ್ರಿ ಪಕ್ಷಗಳು ದೂರ ಸರಿಯುವ ಮೂಲಕ ಸರ್ಕಾರವು ಸಂಸತ್ತಿನಲ್ಲಿ ಬಹುಮತ ಕಳೆದು ಕೊಂಡಿದೆ.

ಇಂದಿನ ಕಲಾಪದಲ್ಲಿ ಇಮ್ರಾನ್‌ ಖಾನ್‌ ಭಾಗಿಯಾಗಲಿದ್ದು, ಅವಿಶ್ವಾಸ ಗೊತ್ತುವಳಿಯ ಪರವಾಗಿ ಮತ ಚಲಾಯಿಸುವವರ ಸಂಖ್ಯೆಯ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ಇದುವರೆಗೂ ಪಾಕಿಸ್ತಾನದ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿಲ್ಲ. ಇಮ್ರಾನ್‌ ನಾಲ್ಕು ವರ್ಷ ಆಡಳಿತ ನಡೆಸಿದ್ದಾರೆ.

ಪಾಕಿಸ್ತಾನ ಸಂಸತ್ತಿನ ಒಟ್ಟು ಸದಸ್ಯರ ಬಲ 342. ಇಮ್ರಾನ್‌ ಖಾನ್‌ ಸರ್ಕಾರವನ್ನು ಪತನಗೊಳಿಸಲು ವಿರೋಧ ಪಕ್ಷದ ಅವಿಶ್ವಾಸ ನಿರ್ಣಯದ ಪರವಾಗಿ 172 ಮತಗಳು ಅವಶ್ಯವಾಗುತ್ತವೆ. ವಿರೋಧ ಪಕ್ಷವು 175 ಸದಸ್ಯರ ಬಲ ಇರುವುದಾಗಿ ಹೇಳಿಕೊಂಡಿದೆ. ಇಮ್ರಾನ್‌ ತಮ್ಮ ಬಳಿ 'ಒಂದಕ್ಕಿಂತ ಹೆಚ್ಚು ಯೋಜನೆಗಳಿವೆ' ಎಂದಿದ್ದಾರೆ.

ಇಮ್ರಾನ್‌ ಖಾನ್ ಅವರು ವಿಶ್ವಾಸ ಸಾಬೀತು ಮಾಡದೇ ಇದ್ದರೆ, ಅವರ ಸರ್ಕಾರ ಪತನವಾಗಲಿದೆ. ಆದರೆ ಇದ್ಯಾವುದಕ್ಕೂ ಇಮ್ರಾನ್‌ ಅವಕಾಶ ನೀಡುವುದಿಲ್ಲ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಜತೆಗೆ ಪಾಕಿಸ್ತಾನ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವಂತೆ ಶಿಫಾರಸು ಮಾಡಿ, ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ಆಯ್ಕೆಯನ್ನೂ ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಆದರೆ, ಬಹುಮತ ಸಾಬೀತು ಮಾಡುವ ಮುನ್ನವೇ ಇಮ್ರಾನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ವಿಶ್ವಾಸಮತ ನಿರ್ಣಯವನ್ನು ಸಂಸತ್ತಿನಲ್ಲಿ ಎದುರಿಸುತ್ತೇನೆ ಎಂದು ಇಮ್ರಾನ್‌ ಹೇಳಿದ್ದಾರೆ. ಇವುಗಳಲ್ಲಿ ಏನು ಸಂಭವಿಸಿದರೂ, ಹೊಸ ರೀತಿಯಲ್ಲಿ ಅಧಿಕಾರ ಕಳೆದುಕೊಂಡ ಪ್ರಧಾನಿಯ ಸಾಲಿಗೆ ಇಮ್ರಾನ್ ಖಾನ್‌ ಸೇರಲಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್–ಫೆಬ್ರುವರಿ ಅವಧಿಯಲ್ಲಿ ಪಾಕಿಸ್ತಾನದ ಹಣದುಬ್ಬರವು ದಾಖಲೆಯ ಶೇ 12.2ಕ್ಕೆ ಏರಿಕೆಯಾಯಿತು. ಹಣದುಬ್ಬರ ವಿಪರೀತ ಏರಿದ್ದರಿಂದ ದೇಶದಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆಯಾಯಿತು.

ಆರ್ಥಿಕ ಬಿಕ್ಕಟ್ಟನ್ನು ನಿಯಂತ್ರಿಸಲು ವಿಫಲವಾಗಿದ್ದೇ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಮುಖ ಕಾರಣ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT