ಶುಕ್ರವಾರ, ಏಪ್ರಿಲ್ 23, 2021
30 °C

ಪುಟಿನ್‌ಗೆ ಪ್ರತಿಭಟನೆಯ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಷ್ಯಾದಲ್ಲೀಗ ಪ್ರತಿಭಟನೆಯ ಕಾವು ಜೋರಾಗಿದೆ. ಕಳೆದ ವಾರವಷ್ಟೇ ಶುರುವಾದ ಇದು ಕಾಳ್ಗಿಚ್ಚಿನಂತೆ ದೇಶವ್ಯಾಪಿಯಾಗಿ ಹಬ್ಬುತ್ತಿದೆ. ಜನವರಿ 23ರಂದು ರಾಜಧಾನಿ ಮಾಸ್ಕೊದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 40 ಸಾವಿರ ಜನರು ಭಾಗಿಯಾಗಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಸುಮಾರು 4 ಸಾವಿರ ಜನರನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ಮಾಡಿದ್ದರು. 

ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರ ಬಂಧನವನ್ನು ಖಂಡಿಸಿ ನಡೆಯುತ್ತಿರುವ ಈ ಪ್ರತಿಭಟನೆಯ ಕಿಚ್ಚು ದೊಡ್ಡ ದೊಡ್ಡ ನಗರಗಳೂ ಒಳಗೊಂಡಂತೆ ದೇಶದಾದ್ಯಂತ ಹತ್ತಿಕೊಂಡಿದೆ. ವರದಿಗಳ ಪ್ರಕಾರ, 2017ರ ಬಳಿಕ ರಷ್ಯಾದಲ್ಲಿ ಇಂತಹ ಬೃಹತ್ ಪ್ರತಿಭಟನೆ ಇದೇ ಮೊದಲು. 

ಜನಾಕ್ರೋಶ ಏಕೆ?

ಅಲೆಕ್ಸಿ ನವಾಲ್ನಿ ಅವರ ಬಂಧನವು ರಷ್ಯಾ ಜನರನ್ನು ಕೆರಳಿಸಿದೆ. ತಮ್ಮ ಮೇಲೆ ಬರ್ಬರ ಹತ್ಯೆ ಯತ್ನ ನಡೆದ ನಂತರ ಜನವರಿ 17ರಂದು ಮೊದಲ ಬಾರಿಗೆ ನವಾಲ್ನಿ ಅವರು ಜರ್ಮನಿಯಿಂದ ರಷ್ಯಾಗೆ ಬಂದಿಳಿದರು. ಶೆರೆಮಟಿಯೊ ವಿಮಾನ ನಿಲ್ದಾಣದಲ್ಲಿ ಅವರು ಕಾಲಿರಿಸುತ್ತಿದ್ದಂತೆಯೇ ಬಂಧನಕ್ಕೊಳಗಾದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ
2014ರ ಶಿಕ್ಷೆಯ ನಿಮಯಗಳನ್ನು ಮುರಿದಿರುವ ಕಾರಣ ಬಂಧಿಸಲಾಗುತ್ತಿದೆ ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟಿತು. ತಮ್ಮ ಬಂಧನ ವಿರೋಧಿಸಿ ನವಾಲ್ನಿ ಅವರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದರು. ಅವರ ಕರೆಗೆ ಜನ ಓಗೊಟ್ಟರು.

ದೇಶವ್ಯಾಪಿ ಕಿಚ್ಚು

ಕಳೆದ ವಾರಾಂತ್ಯದಲ್ಲಿ ರಷ್ಯಾದ ಪೂರ್ವ ಪ್ರದೇಶಗಳಲ್ಲಿ ಮೊದಲಿಗೆ ಪ್ರತಿಭಟನೆ ಆರಂಭವಾಯಿತು. ಪ್ರತಿಭಟನೆಯಿಂದ ದೂರ ಉಳಿಯುವಂತೆ ಸರ್ಕಾರ ಎಚ್ಚರಿಕೆ ನೀಡಿತ್ತು. ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಾಗಿದ್ದರೂ ಪ್ರತಿಭಟನೆ ಅಲೆಯಂತೆ ಹಬ್ಬಿದೆ.

ರಷ್ಯಾದ ಉತ್ತರ ಭಾಗದಲ್ಲಿರುವ ಸಖಾಲಿನ್ ದ್ವೀಪದಲ್ಲಿ ನೂರಾರು ಜನರು ಸರ್ಕಾರಿ ಕಟ್ಟಡದ ಮುಂದೆ ಜಮಾಯಿಸಿ, ‘ಪುಟಿನ್ ಒಬ್ಬ ಕಳ್ಳ’ ಎಂದು ಕರೆದರು. ಮೈನಸ್ 60 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಗರ ಯಾಕುಟ್ಸ್ಕ್‌ವರೆಗೂ ಪ್ರತಿಭಟನೆ ಹರಡಿತು. ಸೈಬೀರಿಯಾದಾದ್ಯಂತ ಸಾವಿರಾರು ಜನರು ರ‍್ಯಾಲಿಗಳಲ್ಲಿ ಭಾಗವಹಿಸಿದರು.

ಹೇಗಿದೆ ಈಗಿನ ಸ್ಥಿತಿ?

ಕಳೆದ ವಾರದಂತೆ ಈ ವಾರವೂ ಜನರು ಬೀದಿಗಿಳಿದಿದ್ದಾರೆ. ಮಾಸ್ಕೊದ ಬೀದಿಗಳಲ್ಲಿ 300 ಪ್ರತಿಭಟನಕಾರರು ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪ್ರತಿಭಟನಕಾರರನ್ನು ಬಸ್‌ಗಳಲ್ಲಿ ತುಂಬಿಸಿ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಗಮನಿಸಿದರೆ, ಸಾವಿರಾರು ಜನರು ಭಾಗವಹಿಸಿರುವುದು ಕಂಡುಬಂದಿದೆ.

ಸೈಬೀರಿಯಾದ ನಗರ ನೊವೊಸಿಬಿರ್ಕ್ಸ್‌ನಲ್ಲಿ ಕನಿಷ್ಠ 2,000 ಜನರು ‘ಸ್ವಾತಂತ್ರ್ಯ ಕೊಡಿ’ ಎಂದು ಮೆರವಣಿಗೆ ನಡೆಸಿದರು. ಯಾಕುಟ್ಸ್ಕ್‌, ಒಮಸ್ಕಾದಲ್ಲಿ ಒಂದು ಸಾವಿರ ಜನರು ಧರಣಿ ನಿರತರಾಗಿದ್ದರು. ಉರಲ್ ಪ್ರದೇಶದ ಯಾಕಟೆರಿಂಗ್‌ಬರ್ಗ್‌ನಲ್ಲಿ 7 ಸಾವಿರ ಜನ ರಸ್ತೆಗಿಳಿದಿದ್ದರು.

ಕಳೆದ ವಾರ ಅಲೆಕ್ಸಿ ಅವರ ಪತ್ನಿ, ಸಹೋದರ ಹಾಗೂ ಆಪ್ತರನ್ನು ಬಂಧಿಸಲಾಗಿತ್ತು. ಮಾನವ ಹಕ್ಕುಗಳ ಬಗ್ಗೆ ಕೆಲಸ ಮಾಡುವ ರಷ್ಯಾದ ವೆಬ್‌ಸೈಟ್‌ ಒಂದರ ಮುಖ್ಯ ಸಂಪಾದಕ ಸೆರ್ಗೆಯ್ ಸ್ಮಿರ್ನೋವ್ ಅವರನ್ನು ಈ ವಾರ ಬಂಧಿಸಲಾಗಿದೆ. ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಸೆರೆಗೆ ತಳ್ಳಲಾಗಿದೆ.

ಬಂಧಿತರನ್ನು ಇರಿಸಲು ಜೈಲಿನಲ್ಲಿ ಜಾಗ ಸಾಲುತ್ತಿಲ್ಲ. ಹೀಗಾಗಿ ಹೊಸ ಜಾಗ ಹುಡುಕಲು ಪೊಲೀಸರು ಹೆಣಗಾಡುತ್ತಿದ್ದಾರೆ ಎಂದು ವರದಿಯಾಗಿದೆ.

ನವಾಲ್ನಿ: ಭಿನ್ನ ದನಿ

ರಷ್ಯಾದ ಸರ್ವಾಧಿಕಾರಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಭಿನ್ನಮತವನ್ನು ಕಂಡರಾಗದು. ತಮ್ಮನ್ನು ವಿರೋಧಿಸುವವರನ್ನು ಹತ್ಯೆ ಮಾಡಿಯಾದರೂ ಸುಮ್ಮನಾಗಿಸುತ್ತಾರೆ ಎಂಬುದು ಪುಟಿನ್‌ ಬಗ್ಗೆ ವ್ಯಾಪಕವಾಗಿರುವ ಅಭಿಪ್ರಾಯ. ರಷ್ಯಾದ ಸೇನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವರದಿ ಬರೆದ ಪತ್ರಕರ್ತೆ ಅನ್ನಾ ಪೊಲಿಟ್ಕೊವಸ್ಕಾಯ ಅವರನ್ನು 2006ರಲ್ಲಿ ಕೊಲೆ ಮಾಡಲಾಗಿತ್ತು. ತಮ್ಮ ವಿರೋಧಿಗಳನ್ನು ಪುಟಿನ್‌ ಹೇಗೆ ಬಾಯಿ ಮುಚ್ಚಿಸುತ್ತಾರೆ ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.

ಈಗ, ಪುಟಿನ್‌ ಮುಂದೆ ಇರುವ ಅತಿ ದೊಡ್ಡ ಸವಾಲು ಅಲೆಕ್ಸಿ ನವಾಲ್ನಿ. ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ನವಾಲ್ನಿ ಅವರು 2000ನೇ ಇಸವಿಯ ಬಳಿಕ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸರ್ಕಾರದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾರಂಭಿಸಿದರು. ಅವರಿಗೆ ಲಕ್ಷಾಂತರ ಫಾಲೋವರ್‌ಗಳು ಇದ್ದಾರೆ. ಅವರ ಫಾಲೋವರ್‌ಗಳಲ್ಲಿ ಹೆಚ್ಚಿನವರು ಯುವಜನರು. 

44 ವರ್ಷದ ನವಾಲ್ನಿಯವರನ್ನು ವಿಷವುಣಿಸಿ ಕೊಲ್ಲುವ ಯತ್ನ ನಡೆದಿದೆ. ಆದರೆ, ಜರ್ಮನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಬದುಕಿಕೊಂಡಿದ್ದಾರೆ. ಈಗ, ಪೆರೋಲ್‌ ನಿಯಮ ಉಲ್ಲಂಘನೆಯ ಹೆಸರಿನಲ್ಲಿ ಅವರನ್ನು ಸೆರೆಮನೆಗೆ ತಳ್ಳಲಾಗಿದೆ. ಅವರಿಗೆ ಸೆರೆವಾಸ ಹೊಸದೇನೂ ಅಲ್ಲ. ಮಾಸ್ಕೊದಲ್ಲಿ ರ್‍ಯಾಲಿ ನಡೆಸಿದ ಆರೋಪದಲ್ಲಿ 2011ರಲ್ಲಿ ಮೊದಲ ಬಾರಿಗೆ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಆ ಬಳಿಕ ಹಲವು ಬಾರಿ ಬಂಧನವಾಗಿದೆ. ಆದರೆ, ಇದು ಅವರ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಹೋಗಿದೆ.

ಅವರ ಭೂತಕಾಲದ ಬಗ್ಗೆ 2012ರಲ್ಲಿ ಹಲವು ಸುತ್ತಿನ ತನಿಖೆ ನಡೆದಿತ್ತು. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರಿಗೆ ಐದು ವರ್ಷ ಶಿಕ್ಷೆ ಘೋಷಣೆ ಆಗಿತ್ತು. ಆದರೆ, ಬಳಿಕ ಈ ಶಿಕ್ಷೆಯನ್ನು ಅಮಾನತು ಮಾಡಲಾಯಿತು. ಒತ್ತಡ ಹೆಚ್ಚಿದಂತೆಲ್ಲ ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟದ ತೀವ್ರತೆಯೂ ಹೆಚ್ಚಾಗಿದೆ.

2018ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ 2016ರಲ್ಲಿಯೇ ನವಾಲ್ನಿ ಘೋಷಿಸಿದ್ದರು. ಆದರೆ, ಅವರ ಮೇಲೆ ಭ್ರಷ್ಟಾಚಾರದ ಹಲವು ಆರೋಪ ಹೊರಿಸಿ ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ರಷ್ಯಾದ ಶ್ರೀಮಂತ ಉದ್ಯಮಿಗಳು ಪುಟಿನ್‌ಗಾಗಿ ಅರಮನೆಯೊಂದನ್ನು ಕಟ್ಟಿಸಿ ಕೊಟ್ಟಿದ್ದಾರೆ ಎಂಬುದನ್ನು ತೋರಿಸುವ ವಿಡಿಯೊವನ್ನು ನವಾಲ್ನಿ ಅವರ ಭ್ರಷ್ಟಾಚಾರ ವಿರೋಧಿ ಪ್ರತಿಷ್ಠಾನವು (ಎಫ್‌ಬಿಕೆ) ಇತ್ತೀಚೆಗೆ ಬಿಡುಗಡೆ ಮಾಡಿದೆ.

ಜರ್ಮನಿಯಿಂದ ರಷ್ಯಾಕ್ಕೆ ಬಂದ ಮರುಕ್ಷಣವೇ ತಮ್ಮ ಬಂಧನವಾಗುತ್ತದೆ ಎಂಬುದು ನವಾಲ್ನಿ ಅವರಿಗೆ ಅರಿವಿತ್ತು. ಹಾಗಿದ್ದೂ ತಾಯ್ನಾಡಿಗೆ ಮರಳುವ ಮೂಲಕ ನವಾಲ್ನಿ ಬಹುದೊಡ್ಡ ಗೆಲುವು ಸಾಧಿಸಿದ್ದಾರೆ. ತಮ್ಮ ಬಂಧನದ ವಿರುದ್ಧ ಪ್ರತಿಭಟಿಸಿ ಎಂಬ ಅವರ ಕರೆಗೆ ದೇಶದ ಮೂಲೆಮೂಲೆಗಳಲ್ಲಿಯೂ ಸ್ಪಂದನೆ ಸಿಕ್ಕಿದೆ. 

ಪುಟಿನ್ ವಿರೋಧಿ ಅಲೆ ತೀವ್ರ

ಪುಟಿನ್‌ ಅಧಿಕಾರದ ಅವಧಿ ಈಗ ಒಂಬತ್ತನೇ ವರ್ಷದತ್ತ ಸಾಗುತ್ತಿದೆ. ಕೆಲವು ವರ್ಷಗಳಿಂದ ಪುಟಿನ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳುಬರುತ್ತಿದೆ. ಈಚೆಗೆ ಈ ಆರೋಪದ ತೀವ್ರತೆ ಹೆಚ್ಚಾಗಿದೆ. ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ದೇಶದ ಆರ್ಥಿಕತೆ ಬಹುತೇಕ ಸ್ಥಗಿತವಾಗಿತ್ತು. ಲಾಕ್‌ಡೌನ್ ತೆರವಾದ ನಂತರ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಪುಟಿನ್ ಅವರು ಕೋವಿಡ್ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂಬುದು ಪ್ರತಿಭಟನೆ ಭುಗಿಲೇಳಲು ಪ್ರಮುಖ ಕಾರಣ ಎನ್ನಲಾಗಿದೆ.

ದೀರ್ಘ ಅಧಿಕಾರದ ಅವಧಿಯಲ್ಲಿ ಪುಟಿನ್ ಅವರು ತೀವ್ರಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪ್ರತಿಭಟನೆ ನಿರತ ರಷ್ಯನ್ನರು ನಂಬಿದ್ದಾರೆ. ಹೀಗಾಗಿ ಪುಟಿನ್ ವಿರೋಧಿ ಅಲೆ ತೀವ್ರ ಸ್ವರೂಪ ಪಡೆದಿದೆ.

ಪ್ರತಿಭಟನೆ ವೇಳೆ ಪ್ರತಿಭಟನಕಾರರನ್ನು ಪುಟಿನ್ ಸರ್ಕಾರ ನಡೆಸಿಕೊಂಡ ರೀತಿಗೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪೊಲೀಸರ ದಾಳಿಯಲ್ಲಿ ಗಾಯಗೊಂಡ ಪ್ರತಿಭಟನಕಾರರು, ವಿಡಿಯೊ ಮಾಡಿ ತಮ್ಮ ಗಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೂ ಕೂಡ ಪುಟಿನ್ ವಿರೋಧಿ ಅಲೆಯನ್ನು ತೀವ್ರಗೊಳಿಸುತ್ತಿದೆ.

ಜಾಗತಿಕ ಖಂಡನೆ

ಪ್ರತಿಭಟನಕಾರರನ್ನು ರಷ್ಯಾ ಸರ್ಕಾರವು ನಡೆಸಿಕೊಳುತ್ತಿರುವ ರೀತಿಯನ್ನು ಹಲವು ದೇಶಗಳು ಖಂಡಿಸಿವೆ. ಪುಟಿನ್ ಸರ್ಕಾರವು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಹಲವು ದೇಶಗಳ ರಾಜತಾಂತ್ರಿಕರು ಕಟುವಾಗಿ ಟೀಕಿಸಿದ್ದಾರೆ.

ನವಾಲ್ನಿ ಅವರನ್ನು 30 ದಿನಗಳ ಬಂಧನಕ್ಕೆ ದೂಡಿರುವುದನ್ನು ಅಂತರರಾಷ್ಟ್ರೀಯ ಸಮುದಾಯವು ತೀವ್ರವಾಗಿ ಖಂಡಿಸಿದೆ. ನವಾಲ್ನಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಅಮೆರಿಕವು ಹೇಳಿದೆ. ಐರೋಪ್ಯ ಒಕ್ಕೂಟದ ಹಲವು ರಾಷ್ಟ್ರಗಳೂ ನವಾಲ್ನಿ ಅವರ ಬಂಧನವನ್ನು ಖಂಡಿಸಿವೆ. ನವಾಲ್ನಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿವೆ. ನವಾಲ್ನಿ ಬಿಡುಗಡೆಗೆ ವಿಶ್ವದ ಹಲವೆಡೆಯಿಂದ ತೀವ್ರ ಒತ್ತಾಯ ಕೇಳಿಬಂದಿವೆ.

ಮಾಸ್ಕೊದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದನ್ನು ಮತ್ತು ಅವರನ್ನು ವಶಕ್ಕೆ ಪಡೆದದ್ದನ್ನು ಮಾಸ್ಕೊದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ.

ಮಾಸ್ಕೊ ಸೇರಿದಂತೆ ರಷ್ಯಾದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಪತ್ರಕರ್ತರು ಸಹ ಇದನ್ನು ಖಂಡಿಸಿದ್ದಾರೆ. ಬಿಬಿಸಿ, ರಾಯಿಟರ್ಸ್, ಗಾರ್ಡಿಯನ್‌ ಪ್ರತಿನಿಧಿಗಳು ಮಾಸ್ಕೊದಲ್ಲಿ ನಡೆದ ಪೊಲೀಸರ ಹಲ್ಲೆಯ ವಿಡಿಯೊಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಲ್ಲೆಯನ್ನು ಖಂಡಿಸಿದ್ದಾರೆ. ಈ ವಿಡಿಯೊಗಳನ್ನು ವಿಶ್ವದಾದ್ಯಂತ 10 ಕೋಟಿಗೂ ಹೆಚ್ಚು ಬಾರಿ ರಿಟ್ವೀಟ್ ಮಾಡಿದ್ದಾರೆ. ಪೊಲೀಸರ ಹಲ್ಲೆಯನ್ನು ಖಂಡಿಸಿದ್ದಾರೆ.

ಆಧಾರ: ಪಿಟಿಐ, ನ್ಯೂಯಾರ್ಕ್‌ ಟೈಮ್ಸ್, ಬಿಬಿಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು