ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

G20 Summit | ಪ್ರತೀ ವರ್ಷ 3,000 ಭಾರತೀಯರಿಗೆ ಬ್ರಿಟನ್ ವೀಸಾ: ಸುನಕ್‌

ಯುವ ವೃತ್ತಿಪರರ ವೀಸಾಗೆ ಅಸ್ತು
Last Updated 16 ನವೆಂಬರ್ 2022, 21:25 IST
ಅಕ್ಷರ ಗಾತ್ರ

ಬಾಲಿ, ಇಂಡೊನೇಷ್ಯಾ: 18–30 ವರ್ಷ ವಯೋಮಾನದ ಭಾರತೀಯ ಪದವೀಧರ ಯುವಜನತೆ ಎರಡು ವರ್ಷದ ಅವಧಿಗೆ ಬ್ರಿಟನ್‌ನಲ್ಲಿ ವಾಸಿಸಲು ಹಾಗೂ ಕೆಲಸ ಮಾಡಲು ಅವಕಾಶ ನೀಡುವ ವೀಸಾ ಯೋಜನೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬುಧವಾರ ಹಸಿರು ನಿಶಾನೆ ತೋರಿಸಿದ್ದಾರೆ.

ಭಾರತೀಯ ವೃತ್ತಿಪರರಿಗೆ ಪ್ರತಿ ವರ್ಷ 3,000 ವೀಸಾಗಳನ್ನು ಬ್ರಿಟನ್ ನೀಡಲಿದೆ. ಇದೇ ರೀತಿ, ಬ್ರಿಟಿಷ್ ನಾಗರಿಕರೂ ಭಾರತದಲ್ಲಿ ವಾಸಿಸಲು ಹಾಗೂ ಕೆಲಸ ಮಾಡಲು ಈ ಯೋಜನೆ ಅವಕಾಶ ಕಲ್ಪಿಸುತ್ತದೆ. ಕಳೆದ ವರ್ಷ ಸಹಿ ಹಾಕಲಾಗಿದ್ದ ಎಂಎಂಪಿ ಒಪ್ಪಂದದ ಭಾಗವಾಗಿ ‘ಬ್ರಿಟನ್–ಭಾರತ ಯುವ ವೃತ್ತಿಪರರ ಯೋಜನೆ’ 2023ರಿಂದ ಜಾರಿಗೆ ಬರಲಿದೆ.

ಈ ಯೋಜನೆಯನ್ನು ಭಾರತ–ಬ್ರಿಟನ್ ನಡುವಿನ ಮೈತ್ರಿಯಲ್ಲಿ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಇಂತಹ ಯೋಜನೆಗೆ ಮೊದಲಿಗೆ ಭಾರತವನ್ನು ಆಯ್ಕೆ ಮಾಡಲು ಅದ್ಯತೆ ನೀಡಲಾಗಿದೆ ಎಂದು ಬ್ರಿಟನ್ ಪ್ರಧಾನಿ ಕಚೇರಿ ತಿಳಿಸಿದೆ.

ಜಾಗತಿಕ ನಾಯಕರ ಜೊತೆ ಮೋದಿ ಚರ್ಚೆ:ಜಿ–20 ಶೃಂಗಸಭೆಯ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ, ಇಟಲಿ ಸರ್ಕಾರಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದರು. ರಕ್ಷಣೆ, ಪರಮಾಣು ಇಂಧನ, ಆಹಾರ ಭದ್ರತೆ ವಿಚಾರಗಳ ಕುರಿತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆ ಫಲಪ್ರದ ಚರ್ಚೆ ನಡೆಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಕ್ಷಣೆ ಹಾಗೂ ಆರ್ಥಿಕ ಸಹಕಾರ ವೃದ್ಧಿ ಬಗ್ಗೆ ಜರ್ಮನಿ ಛಾನ್ಸಲರ್ ಒಲಾಫ್ ಸ್ಕೂಲ್ಜ್‌ ಜೊತೆ ಮೋದಿ ಮಾತುಕತೆ ನಡೆಸಿದರು. ವ್ಯಾಪಾರ, ರಕ್ಷಣೆ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರದ ಬಗ್ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಜತೆ ಚರ್ಚಿಸಿದರು. ಆಸ್ಟ್ರೇಲಿಯಾ ಪ್ರಧಾನಿ ಆಂಟೊನಿ ಅಲ್ಬೆನೀಸ್ ಹಾಗೂ ಮೋದಿ ನಡುವಿನ ಮಾತುಕತೆಯಲ್ಲಿಶಿಕ್ಷಣ ಹಾಗೂ ನಾವೀನ್ಯ ವಲಯಗಳು ಆದ್ಯತೆ ಪಡೆದಿದ್ದವು.

ಧಾನ್ಯ ಒಪ್ಪಂದ ಮುಂದುವರಿಕೆಗೆ ರಷ್ಯಾ ಒಲವು
ಮಾಸ್ಕೊ ವರದಿ: ಯುದ್ಧದ ಬಳಿಕ ಉಕ್ರೇನ್‌ನಿಂದ ಸ್ಥಗಿತಗೊಂಡಿದ್ದ ಆಹಾರ ಧಾನ್ಯಗಳು ಹಾಗೂ ರಸಗೊಬ್ಬರ ಪೂರೈಕೆಗೆ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡಿರುವ ಧಾನ್ಯ ಪೂರೈಕೆ ಒಪ್ಪಂದದ ಪರವಾಗಿ ಇರುವುದಾಗಿ ರಷ್ಯಾ ಹೇಳಿದೆ. ಆದರೆ ಉಕ್ರೇನ್‌ನಿಂದ ರಫ್ತಾಗುವ ಆಹಾರ ಧಾನ್ಯಗಳು ತೀರಾ ಅಗತ್ಯ ಇರುವ ದೇಶಗಳಿಗೆ ಮಾತ್ರ ಪೂರೈಕೆಯಾಗಬೇಕು ಎಂದು ಹೇಳಿದೆ. ಉಕ್ರೇನ್‌ನಲ್ಲಿ ರಷ್ಯಾ ಸೇನೆಯಿಂದ ಯಾವುದೇ ಅಡ್ಡಿಯಿಲ್ಲದೇ, ಕಪ್ಪುಸಮುದ್ರದ ಮಾರ್ಗವಾಗಿ ಧಾನ್ಯ ಸಾಗಾಟಕ್ಕೆ ಅವಕಾಶ ನೀಡುವುದಾಗಿ ರಷ್ಯಾ ಹಣಕಾಸು ಸಚಿವ ಆ್ಯಂಟನ್ ಸಿಲುನೊವ್ ಹೇಳಿದ್ದಾರೆ.

ಜಾಗತಿಕ ನಾಯಕರ ಸಮಾಗಮ
*ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜತೆಗಿನ ಮಾತುಕತೆಯು ಉಭಯ ದೇಶಗಳ ಸ್ಥಿರ ಹಾಗೂ ರಚನಾತ್ಮಕ ಸಹಕಾರಕ್ಕೆ ನೆರವಾಗಲಿದೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ವಿಶ್ವಾಸ ವ್ಯಕ್ತಪಡಿಸಿದರು. ತೈವಾನ್ ವಿಚಾರ ಚರ್ಚೆಗೆ ಬಂದಿತೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ

* ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅಮೆರಿಕ ಅಧ್ಯಕ್ಷ ಬೈಡನ್ ನಡುವೆ ನಡೆದ ಮಾತುಕತೆಯಲ್ಲಿ ಉಕ್ರೇನ್ ಯುದ್ಧ, ಚೀನಾ ಹಾಗೂ ಉತ್ತರ ಐರ್ಲೆಂಡ್ ವಿಚಾರಗಳು ಚರ್ಚೆಗೆ ಬಂದವು

* ಕಾರ್ಯಕ್ರಮ ನಿಗದಿಪಡಿಸುವಲ್ಲಿ ಸಮಸ್ಯೆ ಉಂಟಾಗಿದ್ದರಿಂದ, ರಿಷಿ ಸುನಕ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಸಭೆ ರದ್ದಾಯಿತು

ಗುಜರಾತ್‌, ಹಿಮಾಚಲದ ಕಲಾಕೃತಿ ಉಡುಗೊರೆ ನೀಡಿದ ಮೋದಿ
ಗುಜರಾತ್ ಹಾಗೂ ಹಿಮಾಚಲ ಪ್ರದೇಶಕ್ಕೆ ಸಂಬಂಧಿಸಿದ ಕಲಾಕೃತಿಗಳು ಹಾಗೂ ಸಾಂಪ್ರದಾಯಿಕ ವಸ್ತುಗಳನ್ನು ಪ್ರಧಾನಿ ಮೋದಿ ಅವರು ಜಿ–20 ನಾಯಕರಿಗೆ ಉಡುಗೊರೆಯಾಗಿ ನೀಡಿದರು. ಶೃಂಗಾರರಸ ಬಿಂಬಿಸುವ ಕಾಂಗ್ರಾ ವರ್ಣಚಿತ್ರವನ್ನುಬೈಡನ್ ಅವರಿಗೆ ನೀಡಿದರು. ದೇವಸ್ಥಾನಗಳಲ್ಲಿ ದೇವತೆಗಳ ವಿಗ್ರಹದ ಹಿಂದೆ ತೂಗುಹಾಕುವ ಗುಜರಾತ್‌ನ ವಿಶೇಷ ವಸ್ತ್ರವನ್ನು (ಮಾತಾ ನೀ ಪಛೇಡೀ) ಸುನಕ್ ಅವರಿಗೆ ನೀಡಿದರು. ಆಸ್ಟ್ರೇಲಿಯಾ ಪ್ರಧಾನಿ, ಜರ್ಮನಿಯ ಛಾನ್ಸಲರ್‌ಗೂ ಉಡುಗೊರೆಗಳನ್ನು ನೀಡಿದರು.

ಕಾಂಗ್ರೆಸ್ ಕಿಡಿ: ‘ದೇಶದ ವಿಚಾರಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಬಾರದು ಎಂಬ ಸಂಪ್ರದಾಯವನ್ನು ಪ್ರಧಾನಿ 2014ರಲ್ಲೇ ಮುರಿದಿದ್ದು, ಇದನ್ನು ಮುಂದುವರಿಸಿದ್ದಾರೆ. ಇಂಡೊನೇಷ್ಯಾದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಆಡಿದ ಮಾತುಗಳು ಇದಕ್ಕೆ ತಾಜಾ ಉದಾಹರಣೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಇಂಡೊನೇಷ್ಯಾದ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವಾಗ, ‘2014ಕ್ಕೂ ಮೊದಲ ಭಾರತಕ್ಕೂ ಹಾಗೂ ನಂತರದ ಭಾರತದ ನಡುವೆ ದೊಡ್ಡ ವ್ಯತ್ಯಾಸವಿದೆ’ ಎಂದು ಪ್ರಧಾನಿ ಹೇಳಿದ್ದರು. ಮೋದಿ ಅವರ ಈ ಮಾತನ್ನು ಕಾಂಗ್ರೆಸ್ ಖಂಡಿಸಿದೆ.

*

ಫ್ರಾನ್ಸ್ ನಾಗರಿಕನ್ನರು ಬಂಧಿಸುವ ಮೂಲಕ ಇರಾನ್ ಅತಿರೇಕದಿಂದ ವರ್ತಿಸುತ್ತಿದೆ. ಇಂತಹ ನಡವಳಿಕೆಯಿಂದ ಇರಾನ್ ಪ್ರಾದೇಶಿಕ ಬೆದರಿಕೆಯಾಗಿ ಮಾರ್ಪಟ್ಟಿದೆ.
–ಇಮ್ಯಾನುಯೆಲ್ ಮ್ಯಾಕ್ರನ್,ಫ್ರಾನ್ಸ್ ಅಧ್ಯಕ್ಷ

*

ಬೈಡನ್ ಹಾಗೂ ಜಿನ್‌ಪಿಂಗ್ ಭೇಟಿಯು ಅತ್ಯಂತ ರಚನಾತ್ಮಕವಾಗಿದ್ದು, ಉಭಯ ದೇಶಗಳ ವ್ಯಾಪಾರ ಬಿಕ್ಕಟ್ಟು ನಿವಾರಣೆಯ ಸೂಚನೆಯಾಗಿದೆ.
–ಕ್ರಿಸ್ಟಾಲಿನಾ ಜಾರ್ಜಿಯೇವಾ, ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT