ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್: ಆತ್ಮಹತ್ಯಾ ದಾಳಿಗೆ 72 ಬಲಿ

ವಿಮಾನ ನಿಲ್ದಾಣದ ಬಳಿ ಎರಡು ದಾಳಿ
Last Updated 26 ಆಗಸ್ಟ್ 2021, 20:37 IST
ಅಕ್ಷರ ಗಾತ್ರ

ಕಾಬೂಲ್: ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಗುರುವಾರ ಎರಡು ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದಿದ್ದು, 72 ಜನರು ಮೃತಪಟ್ಟಿದ್ದಾರೆ.

ದಾಳಿಯಲ್ಲಿ 52ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಹೇಳಿದೆ. ದಾಳಿಯನ್ನು ಅಮೆರಿಕ, ಜರ್ಮನಿ ಮತ್ತು ರಷ್ಯಾ ಸೇನೆಗಳು ದೃಢಪಡಿಸಿವೆ.

ವಿಮಾನ ನಿಲ್ದಾಣದ ಬಳಿ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

‘ನಮ್ಮ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು, ಬೇರೆ ದೇಶದ ನಾಗರಿಕರನ್ನು ರಕ್ಷಿಸುತ್ತಿದ್ದಾರೆ. ಈ ದಾಳಿಯಲ್ಲಿ ತಾಲಿಬಾನ್‌ನ ಹಲವು ಸೈನಿಕರು ಸತ್ತಿದ್ದಾರೆ’ ಎಂದೂ ಹೇಳಿದೆ.

ತಾಲಿಬಾನ್‌ ಈ ಬಾಂಬ್‌ ದಾಳಿಯನ್ನು ಖಂಡಿಸಿದೆ. ಅಮೆರಿಕ ಮಿಲಿಟರಿ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.

‘ದಾಳಿ ನಡೆದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಸೇರಿದ್ದರು. ಅಫ್ಘಾನಿಸ್ತಾನದಿಂದ ತೆರಳಲು ಇವರೆಲ್ಲರೂ ವಿಮಾನಗಳಿಗೆ ಕಾಯುತ್ತಿದ್ದರು. ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಆತ್ಮಹತ್ಯಾ ದಾಳಿಗಳು ನಡೆದಿವೆ. ಮೊದಲ ಸ್ಫೋಟ ಸಂಭವಿಸಿದ ಬಳಿಕ ಜನರು ಭಯಭೀತರಾದರು. ಆಗ ಜನರನ್ನು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಗೇಟ್‌ ಬಳಿ ಮೊದಲ ಸ್ಫೋಟ ಸಂಭವಿಸಿತು. ಎರಡನೇ ಸ್ಫೋಟ ಬರೋನ್‌ ಹೋಟೆಲ್‌ ಬಳಿ ಸಂಭವಿಸಿತು. ಈ ಹೋಟೆಲ್‌ ಬಳಿ ಅಫ್ಗನ್‌, ಬ್ರಿಟನ್‌ ಮತ್ತು ಅಮೆರಿಕದ ನಾಗರಿಕರು ಸೇರಿದಂತೆ ಹಲವರು ಜಮಾಯಿಸಿದ್ದರು.

ತೆರವು ಕಾರ್ಯಾಚರಣೆ ಮುಂದುವರಿಯಲಿದೆ: ಕಾಬೂಲ್‌ನಲ್ಲಿ ಬಾಂಬ್‌ ದಾಳಿ ನಡೆದಿದ್ದರೂ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಿಳಿಸಿದ್ದಾರೆ.

ಭಾರತ ಖಂಡನೆ:

ನವದೆಹಲಿ (ಪಿಟಿಐ): ಕಾಬೂಲ್‌ ವಿಮಾನ ನಿಲ್ದಾಣದ ಬಳಿ ನಡೆಸಿದ ಬಾಂಬ್‌ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

‘ಭಯೋತ್ಪಾದನೆ ವಿರುದ್ಧ ಜಗತ್ತು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವವರ ವಿರುದ್ಧವೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಮೆರಿಕದ 12 ಯೋಧರ ಸಾವು:

ಬಾಂಬ್‌ ದಾಳಿಯಲ್ಲಿ ಅಮೆರಿಕದ 12 ಯೋಧರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ‘ದಾಳಿಯಲ್ಲಿ ಅಮೆರಿಕದ ಹಲವು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸಂಖ್ಯೆ ಖಚಿತವಾಗಿ ತಿಳಿದು ಬಂದಿಲ್ಲ’ ಎಂದು ತಿಳಿಸಿದ್ದಾರೆ.

‘ಕಾಬೂಲ್‌ನಲ್ಲಿ ಮತ್ತೆ ಇದೇ ರೀತಿಯ ದಾಳಿಗಳು ನಡೆಯುವ ಸಾಧ್ಯತೆ ಇದೆ. ಈ ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೈವಾಡವಿದೆ. ಇಸ್ಲಾಮಿಕ್‌ ಸ್ಟೇಟ್‌ ವಿರುದ್ಧ ಪ್ರತೀಕಾರ ಕೈಗೊಳ್ಳಲಾಗುವುದು’ ಎಂದು ಪೆಂಟಗಾನ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT