ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಮೇಲೆ 40 ಡ್ರೋನ್‌ ದಾಳಿ: ಮೂಲಸೌಕರ್ಯ ಹಾನಿ

Last Updated 2 ಜನವರಿ 2023, 13:44 IST
ಅಕ್ಷರ ಗಾತ್ರ

ಕೀವ್‌: ಹೊಸ ವರ್ಷಾರಂಭದಲ್ಲೂ ಉಕ್ರೇನ್‌ ಮೇಲೆ ದಾಳಿ ತೀವ್ರಗೊಳಿಸಿರುವ ರಷ್ಯಾ ಪಡೆಗಳು ಭಾನುವಾರ ತಡರಾತ್ರಿ ಪ್ರಮುಖ ನಗರಗಳ ಮೇಲೆ ಇರಾನಿ ನಿರ್ಮಿತ ಸ್ವಯಂ ಸ್ಫೋಟದ 40 ಶಾಹಿದ್‌ ಡ್ರೋನ್‌ಗಳನ್ನು ಉಡಾಯಿಸಿದೆ.

ರಷ್ಯಾ ಪಡೆಗಳು ಸೋಮವಾರ ನಡೆಸಿದ ಡ್ರೋನ್, ಕ್ಷಿಪಣಿ ಮತ್ತು ಶೆಲ್‌ ದಾಳಿಗಳಿಂದ ಉಕ್ರೇನ್‌ನಾದ್ಯಂತ ಹಲವು ಪ್ರದೇಶಗಳಲ್ಲಿ ಭಾರಿ ಹಾನಿ ಉಂಟಾಗಿದೆ.

ಪ್ರಮುಖ ಇಂಧನ, ವಿದ್ಯುತ್, ಕುಡಿಯುವ ನೀರಿನ ಮೂಲಸೌಕರ್ಯ ನಾಶಕ್ಕೆ ಮತ್ತು ಉಕ್ರೇನಿಯರ ಪ್ರತಿರೋಧ ಶಕ್ತಿ ಕುಂದಿಸಲು ರಷ್ಯಾ ಹಲವು ಬಾರಿ ಸ್ಫೋಟಿಸುವ ಡ್ರೋನ್‌ಗಳ ದಾಳಿ ನಡೆಸಿದೆ ಎಂದು ಉಕ್ರೇನ್‌ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಕೀವ್‌ ನಗರ ಗುರಿಯಾಗಿಸಿ ತೂರಿಬಂದ 40 ಕ್ಷಿಪಣಿಗಳನ್ನು ವಾಯು ರಕ್ಷಣಾ ಪಡೆಗಳು ನಾಶಪಡಿಸಿವೆ. ಮೂರು ಡ್ರೋನ್‌ಗಳು ಕೀವ್‌ ನಗರದ ಹೊರ ವಲಯ ಮತ್ತು ನೆರೆಯ ಪ್ರಾಂತ್ಯಗಳ ಮೇಲೆ ಬಿದ್ದಿವೆ. ದಾಳಿಯ ಪರಿಣಾಮ ನಗರ ಜಿಲ್ಲೆಯಲ್ಲಿ ಇಂಧನ ಮೂಲಸೌಕರ್ಯ ಹಾನಿಗೊಳಗಾದವು ಎಂದು ಮೇಯರ್ ವಿಟಾಲಿ ಕ್ಲಿಟ್‌ಸ್ಕೊ ಹೇಳಿದ್ದಾರೆ.

39 ಶಾಹಿದ್‌ ಡ್ರೋನ್‌ಗಳು, ರಷ್ಯಾ ನಿರ್ಮಿತ ಎರಡು ಓರ್ಲಾನ್ ಡ್ರೋನ್‌ಗಳು ಹಾಗೂ ಎಕ್ಸ್ -59 ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆಯ ಕಮಾಂಡ್ ಹೇಳಿದೆ. ರಷ್ಯಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ ಎದುರಿಸಲು ಉಕ್ರೇನ್, ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ದೇಶಗಳು ಪೂರೈಸಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ. ಜತೆಗೆ ರಷ್ಯಾ ಹಿಡಿತದಲ್ಲಿರುವ ತನ್ನ ಪ್ರದೇಶಗಳ ಮೇಲೆ ಫಿರಂಗಿ ದಾಳಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT