ಮಂಗಳವಾರ, ಜೂನ್ 28, 2022
26 °C

ಉಕ್ರೇನ್‌ ಪೂರ್ವದಲ್ಲಿ ದಾಳಿ ಹೆಚ್ಚಿಸಿದ ರಷ್ಯಾ

ಎಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಕೀವ್‌/ಮಾಸ್ಕೊ: ಉಕ್ರೇನ್‌ನ ಪೂರ್ವ ಕೈಗಾರಿಕಾ ಪ್ರದೇಶದ ಹೃದಯಭಾಗದಲ್ಲಿ ರಷ್ಯಾ ಪಡೆಗಳು ಸೋಮವಾರ ಶೆಲ್ ದಾಳಿ ತೀವ್ರಗೊಳಿಸಿವೆ.

ಡಾನ್‌ಬಾಸ್‌ ಪ್ರದೇಶವು ಈಗ ತೀವ್ರ ಸಂಘರ್ಷ ಪೀಡಿತ ಪ್ರದೇಶವಾಗಿದೆ. ಇಲ್ಲಿ ನಡೆಯುತ್ತಿರುವ ಕದನ ನಾಗರಿಕರು ತಮ್ಮ ಮನೆಗಳನ್ನು ತೊರೆಯುವಂತೆ ಮಾಡಿದೆ.

ಉಕ್ರೇನಿನ ಪರ್ವತ ದಾಳಿ ಬ್ರಿಗೇಡ್‌ನ ಭಾರಿ ಸೇನಾ ಉಪಕರಣಗಳನ್ನು ಸೋಮವಾರ ಕಪ್ಪು ಸಮುದ್ರದಲ್ಲಿನ ಜಲಾಂತರ್ಗಾಮಿ ನೌಕೆಯಿಂದ ಸಿಡಿಸಿದ ನಾಲ್ಕು ಕಲಿಬ್ ಕ್ಷಿಪಣಿಗಳು ನಾಶಪಡಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಏತನ್ಮಧ್ಯೆ, ಆಕ್ರಮಣದ ಆರಂಭದ ದಿನಗಳಲ್ಲಿ ಎಸಗಿರುವ ಯುದ್ಧಾಪರಾಧಗಳ ವಿಚಾರಣೆಯಲ್ಲಿ ಉಕ್ರೇನ್‌ ನ್ಯಾಯಾಲಯವು ರಷ್ಯಾದ ಸೇನಾಧಿಕಾರಿ 21 ವರ್ಷದ ಶಿಶಿಮರಿನ್‌ ಅವರಿಗೆ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಹಿರಿಯ ನಾಗರಿಕನ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಅಪರಾಧವನ್ನು ಶಿಶಿಮರಿನ್‌ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆ ಉದ್ದೇಶಿಸಿ ಸೋಮವಾರ ವರ್ಚುವಲ್‌ ಮೂಲಕ ಮಾತನಾಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಕಳೆದ ಮಂಗಳವಾರ ಡೆಸ್ನಾ ಗ್ರಾಮದ ಮೇಲೆ ರಷ್ಯಾ ನಡೆಸಿರುವ ವೈಮಾನಿಕ ದಾಳಿಯಲ್ಲಿ 87 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಉಕ್ರೇನ್‌ನಲ್ಲಿ ನಡೆಸುತ್ತಿರುವ ‘ಆಕ್ರಮಣಕಾರಿ ಯುದ್ಧ’ದ ವಿರುದ್ಧ ತನಿಖೆ ನಡೆಸುತ್ತಿರುವ ವಿದೇಶಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಟುವಾದ ಪತ್ರ ಕಳುಹಿಸುವ ಮೊದಲು ಜಿನೀವಾದಲ್ಲಿನ ವಿಶ್ವಸಂಸ್ಥೆಯ ಕಚೇರಿಯ ರಷ್ಯಾದ ಹಿರಿಯ ರಾಜತಾಂತ್ರಿಕ ಬೋರಿಸ್ ಬೊಂಡರೆವ್ (41) ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮಾತುಕತೆಗೆ ಉತ್ಸುಕ: ಉಕ್ರೇನ್‌ನಲ್ಲಿನ ಘರ್ಷಣೆ ಕೊನೆಗೊಳಿಸಲು ಇಟಲಿಯ ಶಾಂತಿ ಪ್ರಸ್ತಾವನೆಯ ಅನುಷ್ಠಾನಕ್ಕೆ ತಾನು ಎದುರು ನೋಡುತ್ತಿರುವುದಾಗಿ ರಷ್ಯಾ ಸೋಮವಾರ ಹೇಳಿದೆ.

ರಷ್ಯಾ ನಿಯೋಗದ ಪ್ರಮುಖ ಪ್ರತಿನಿಧಿ ವ್ಲಾಡಿಮಿರ್ ಮೆಡಿನ್‌ಸ್ಕಿ, ‘ಮಾತುಕತೆ ಪುನರಾರಂಭಿಸಲು ರಷ್ಯಾ ಸಿದ್ಧವಿದೆ. ಆದರೆ, ಆ ಜವಾಬ್ದಾರಿಯು ಉಕ್ರೇನ್ ಮೇಲಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು