ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಸೇನಾ ಬತ್ತಳಿಕೆಗೆ ‘ಅಬ್ರಾಮ್ಸ್‌’ ಯುದ್ಧ ಟ್ಯಾಂಕ್‌

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಘೋಷಣೆ
Last Updated 26 ಜನವರಿ 2023, 13:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ಕೀವ್‌: ಉಕ್ರೇನ್‌ ಪೂರ್ವದಿಂದ ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಲು ಉಕ್ರೇನ್‌ ಸೇನೆಗೆ ಬಲ ತುಂಬುವ ಅತ್ಯಾಧುನಿಕ 31 ‘ಅಬ್ರಾಮ್ಸ್’ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಘೋಷಿಸಿದರು.

ಉಕ್ರೇನ್‌ಗೆ ಸೇನಾ ನೆರವು ನೀಡುವ ಸಂಬಂಧ ಬೈಡನ್ ಅವರು ಬುಧವಾರ ಜರ್ಮನಿಯ ಚಾನ್ಸಲರ್‌ ಓಲಾಫ್‌ ಸ್ಕೋಲ್ಜ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಜತೆಗೆ ಚರ್ಚೆ ನಡೆಸಿದ್ದರು. ನಂತರ ಅವರು ಈ ಘೋಷಣೆ ಮಾಡಿದ್ದಾರೆ.

ಉಕ್ರೇನ್‌ಗೆ ‘ಅಬ್ರಾಮ್ಸ್’ ಯುದ್ಧ ಟ್ಯಾಂಕ್‌ ನೀಡಲು ಅಮೆರಿಕ ಸಮ್ಮತಿಸಿದ್ದ ಬೆನ್ನಲ್ಲೇ ಜರ್ಮನಿ ಮತ್ತು ಅದರ ಮಿತ್ರ ರಾಷ್ಟ್ರಗಳು ತಮ್ಮಲ್ಲಿರುವ ಅತ್ಯಾಧುನಿಕ ಲೆಪರ್ಡ್‌–2 ಯುದ್ಧ ಟ್ಯಾಂಕ್‌ಗಳನ್ನು ಪೂರೈಸಲು ಒಪ್ಪಿ, ಅಧಿಕೃತ ಹೇಳಿಕೆ ಪ್ರಕಟಿಸಿದ್ದವು.

‘ಉಕ್ರೇನ್‌ಗೆ ತನ್ನ ನೆಲ ರಕ್ಷಿಸಿಕೊಳ್ಳಲು ಮತ್ತು ಕಾರ್ಯತಂತ್ರದ ಉದ್ದೇಶಗಳನ್ನು ಸಾಧಿಸಲು ಅಬ್ರಾಮ್ಸ್‌ ಟ್ಯಾಂಕ್‌ ನೆರವಾಗಲಿದ್ದು, ಇವುಗಳನ್ನು ನೀಡುವಂತೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಶಿಫಾರಸು ಮಾಡಿದ್ದರು. ಈ ಯುದ್ಧ ಟ್ಯಾಂಕ್‌ ವಿಶ್ವದಲ್ಲೇ ಅತ್ಯಂತ ಸಮರ್ಥವಾದುದು. ಒಂದು ಟ್ಯಾಂಕ್‌ ಉಕ್ರೇನ್‌ನ ಒಂದು ಬೆಟಾಲಿಯನ್‌ಗೆ ಸರಿ‌ಸಮ. ಇದರ ಕಾರ್ಯನಿರ್ವಹಣೆ ಅತ್ಯಂತ ಸವಾಲಿನದು. ಉಕ್ರೇನ್‌ ಸೈನಿಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ಜತೆಗೆ ಎಂಟು ಎ88 ಪೂರಕ ವಾಹನಗಳನ್ನೂ ಕಳುಹಿಸಲಾಗುವುದು’ ಎಂದು ಬೈಡನ್‌ ಹೇಳಿದ್ದಾರೆ.

ಸ್ವರಕ್ಷಣೆಗೆ ಸೀಮಿತಗೊಂಡಿದ್ದ ಕೀವ್‌ ಸೇನೆಗೆ ಇಂತಹ ಸುಧಾರಿತ ಯುದ್ಧ ಟ್ಯಾಂಕ್‌ಗಳು ಲಭಿಸಿದರೆ, 12ನೇ ತಿಂಗಳಿಗೆ ಕಾಲಿಟ್ಟಿರುವ ರಷ್ಯಾ ಪಡೆಗಳನ್ನು ಹೊರದಬ್ಬಲು ಭಾರಿ ಬಲಸಿಕ್ಕಂತಾಗಲಿದೆ ಎನ್ನುವುದು ಪಶ್ಚಿಮ ರಾಷ್ಟ್ರಗಳ ಸೇನಾ ತಜ್ಞರ ಲೆಕ್ಕಾಚಾರ.

ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಆಡಳಿತ ಕಚೇರಿ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌, ‘ಅಮೆರಿಕ ಮತ್ತು ಜರ್ಮನಿಯ ಅತ್ಯಾಧುನಿಕ ಯುದ್ಧ ಟ್ಯಾಂಕ್‌ಗಳನ್ನೂ ಭಸ್ಮಗೊಳಿಸುತ್ತೇವೆ. ಇದರಿಂದ ಯುರೋಪ್‌ನ ನಾಗರಿಕರ ಮೇಲೆ ತೆರಿಗೆ ಹೊರೆ ಹೆಚ್ಚುತ್ತದೆ’ ಎಂದು ಲೇವಡಿ ಮಾಡಿದ್ದರು.

ರಷ್ಯಾ ಕ್ಷಿಪಣಿ, ಡ್ರೋನ್‌ ದಾಳಿ ತೀವ್ರ

ರಷ್ಯಾ ಪಡೆಗಳು ಗುರುವಾರ ದೇಶದಾದ್ಯಂತ ಕ್ಷಿಪಣಿ ಮತ್ತು ಸ್ವಯಂ ಸ್ಫೋಟಿಸುವ ಡ್ರೋನ್‌ಗಳ ವ್ಯಾಪಕ ದಾಳಿ ನಡೆಸಿವೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ, ಜರ್ಮನಿ ಅತ್ಯಾಧುನಿಕ ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಪೂರೈಸುವುದನ್ನು ಘೋಷಿಸಿದ ಬೆನ್ನಲ್ಲೇ ರಷ್ಯಾ ಮತ್ತೆ ದಾಳಿ ತೀವ್ರಗೊಳಿಸಿದೆ.

ಈ ದಾಳಿಯಿಂದ ಆಗಿರುವ ಸಾವು– ನೋವು ಹಾಗೂ ಹಾನಿಯ ಬಗ್ಗೆ ತಕ್ಷಣದ ವರದಿಗಳು ಲಭಿಸಿಲ್ಲ. ನಗರಕ್ಕೆ ಅಪ್ಪಳಿಸಿದ 15 ಕ್ರೂಸ್‌ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಸೇನೆ ಹೊಡೆದುರುಳಿಸಿದೆ. ಕೀವ್‌ನ ನಿಪ್ರೊವ್‌ಸ್ಕಿ ಜಿಲ್ಲೆಯಲ್ಲಿ ಪ್ರಬಲ ಸ್ಫೋಟದ ಶಬ್ದ ಕೇಳಿಸಿದೆ. ದೇಶದಾದ್ಯಂತ ವಾಯು ದಾಳಿ ಎಚ್ಚರಿಕೆಯ ಸಂದೇಶಗಳು ಇಡೀ ದಿನ ಮೊಳಗಿದವು ಎಂದು ಕೀವ್‌ ನಗರಾಡಳಿತದ ಮುಖ್ಯಸ್ಥರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT