ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ ಸಾನ್ ಸೂಕಿ ಬಿಡುಗಡೆಗೆ ಎನ್ಎಸ್‌ಡಿ ಆಗ್ರಹ

ಬಂಧನದ 24 ಗಂಟೆ ನಂತರವೂ ಅವರು ಎಲ್ಲಿದ್ದಾರೆ ಎಂಬುದು ಗೋಪ್ಯ
Last Updated 2 ಫೆಬ್ರುವರಿ 2021, 13:36 IST
ಅಕ್ಷರ ಗಾತ್ರ

ಮ್ಯಾನ್ಮಾರ್: ಚುನಾವಣೆ ವಿಜಯೋತ್ಸವವನ್ನು ಆಚರಿಸಲು ಅನುವಾಗುವಂತೆ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರ ನೇತೃತ್ವದ ನ್ಯಾಷನಲ್‌ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷ ಆಗ್ರಹಪಡಿಸಿದೆ.

ಮ್ಯಾನ್ಮಾರ್‌ನಲ್ಲಿನ ಸೇನಾ ಆಳ್ವಿಕೆಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾದ ಹಿಂದೆಯೇ ಪಕ್ಷದಿಂದ ಇಂಥ ಆಗ್ರಹ ಕೇಳಿಬಂದಿದೆ. ಎನ್‌ಎಲ್‌ಡಿಯ ಕಾರ್ಯಕಾರಿ ಸಮಿತಿಯು, ಸೂಕಿ ಸೇರಿದಂತೆ ಬಂಧಿಸಿರುವ ಎಲ್ಲ ಮುಖಂಡರನ್ನು ‘ಎಷ್ಟು ಸಾಧ್ಯವೋ ಅಷ್ಟು ಶೀಘ್ರ’ ಬಿಡುಗಡೆ ಮಾಡಬೇಕು ಎಂದು ಆಗ್ರಹಪಡಿಸಿದೆ.

ಈ ಮಧ್ಯೆ, ಅಧಿಕಾರವನ್ನು ಆಕ್ರಮಿಸಿದ ಸೇನೆಯ ಕ್ರಮದ ಬಗ್ಗೆ ಅಸಮಾಧಾನ ಹೊರ ಹಾಕಿರುವ ಅಮೆರಿಕ, ಮ್ಯಾನ್ಮಾರ್‌ಗೆ ನಿರ್ಬಂಧ ಹೇರುವ ಎಚ್ಚರಿಕೆ ನೀಡಿದೆ.

ಸೇನೆಯು ಸೋಮವಾರ ಕ್ಷಿಪ್ರ ದಾಳಿ ನಡೆಸಿದ್ದು, ಸೂಕಿ ಹಾಗೂ ಅವರ 12 ಸಹವರ್ತಿಗಳನ್ನು ಬಂಧಿಸಿತ್ತು. 24 ಗಂಟೆ ನಂತರವೂ ಸೂಕಿ ಎಲ್ಲಿದ್ದಾರೆ ಎಂಬುದು ಗೋಪ್ಯವಾಗಿದೆ. ಸೇನೆಯ ನಿರಂಕುಶತ್ವದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿ ಸೂಕಿ ನೀಡಿದ್ದ ಹೇಳಿಕೆಯೇ ಅವರಿಂದ ಬಂದ ಕೊನೆಯ ಹೇಳಿಕೆಯಾಗಿದೆ.

ಈ ಮಧ್ಯೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ವಿಷಯದ ಬಗ್ಗೆ ಚರ್ಚಿಸುವ ಸಂಭವವಿದೆ.

ನವೆಂಬರ್ 8ರ ಚುನಾವಣೆಯಲ್ಲಿ ಸೂಕಿ ಅವರ ನೇತೃತ್ವದ ನ್ಯಾಷನಲ್‌ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಭಾರಿ ಗೆಲುವಿನ ಹಿಂದೆಯೇ ಸೇನಾ ದಂಗೆ ಆರಂಭವಾಗಿತ್ತು. ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಫಲಿತಾಂಶ ಒಪ್ಪಲು ಸಾಧ್ಯವಿಲ್ಲ ಎಂದು ಸೇನೆ ಪ್ರತಿಪಾದಿಸಿತ್ತು. ಸೇನೆಯು ಅಧಿಕಾರವನ್ನು ತನ್ನ ಕಮಾಂಡರ್ ಜನರಲ್ ಮಿನ್ ಅನುಗ್ ಲೈಂಗ್ ಅವರಿಗೆ ವಹಿಸಿದ್ದು, ಒಂದು ವರ್ಷದ ಅವಧಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT