ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಸ್ವಾತಂತ್ರ್ಯ ಘೋಷಿಸಿದ ತಾಲಿಬಾನ್

ಅಮೆರಿಕ ಸೇನೆ ಹಿಮ್ಮೆಟ್ಟಿಸಿದ ದಿನವನ್ನಾಗಿ ಆಚರಣೆ l ಸಂಭ್ರಮಕ್ಕೆ ಜನರ ಪ್ರತಿರೋಧ
Last Updated 19 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಕಾಬೂಲ್ :ಆಗಸ್ಟ್ 19ರ ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನವನ್ನು, ಅಮೆರಿಕವನ್ನು ಹಿಮ್ಮೆಟ್ಟಿಸಿದ ದಿನವನ್ನಾಗಿ ತಾಲಿಬಾನ್ ಘೋಷಿಸಿದೆ. ‘1919ರ ಆಗಸ್ಟ್ 19ರಂದು ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದೆವು. ಈಗ ಅಮೆರಿಕನ್ನರನ್ನು ಹಿಮ್ಮೆಟ್ಟಿಸಿ, ಅಫ್ಗಾನಿಸ್ತಾನವನ್ನು ಮತ್ತೆ ಸ್ವತಂತ್ರಗೊಳಿಸಿದ್ದೇವೆ’ ಎಂದು ತಾಲಿಬಾನ್ ಘೋಷಿಸಿದೆ.

ಆದರೆ, ತಾಲಿಬಾನ್‌ ಹೊರಡಿಸಿದ ಈ ಘೋಷಣೆಯಷ್ಟು ದೇಶ ಪ್ರಶಸ್ತವಾಗಿಲ್ಲ. ತಾಲಿಬಾನ್ ವಿರುದ್ಧ ನಾಗರಿಕರು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆ ಪ್ರತಿಭಟನೆಗಳನ್ನು ತಾಲಿಬಾನ್ ಹತ್ತಿಕ್ಕಿದೆ. ಜತೆಗೆ ಈವರೆಗೆ ತಾಲಿಬಾನ್‌ಗೆ ವಶವಾಗದ ಉತ್ತರದ ಪ್ರಾಂತ್ಯವು, ತಾಲಿಬಾನ್ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ.

ಅಫ್ಗಾನಿಸ್ತಾನದಿಂದಅಮೆರಿಕವನ್ನು ಸಂಪೂರ್ಣವಾಗಿ ಕಿತ್ತೊಗೆದಿದ್ದೇವೆ ಎಂದು ತಾಲಿಬಾನಿಗಳು ಗುರುವಾರ ಘೋಷಿಸಿದ್ದಾರೆ. ಎಲ್ಲಾ ಸರ್ಕಾರಿ ಕಚೇರಿ ಮತ್ತು ಪ್ರಮುಖ ಸ್ಥಳಗಳಲ್ಲಿ ತಾಲಿಬಾನಿ ಧ್ವಜವನ್ನು ಹಾರಿಸಿದ್ದಾರೆ. ಆದರೆ ಕಾಬೂಲ್‌ನ ಹಲವೆಡೆ ಜನಸಾಮಾನ್ಯರು ತಾಲಿಬಾನ್‌ನ ಈ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ತಾಲಿಬಾನಿ ಧ್ವಜವನ್ನು ಇಳಿಸಿ, ಅಫ್ಗಾನಿಸ್ತಾನದತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ಪ್ರತಿಭಟನೆಯ ವಿರುದ್ಧ ತಾಲಿಬಾನ್‌ ಶಸ್ತ್ರ ಬಳಸಿದೆ. ಈ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್‌ನ ಹಲವೆಡೆ ಪ್ರತಿಭಟನೆಯನ್ನು ತಡೆಯುವ ಉದ್ದೇಶದಿಂದ ತಾಲಿಬಾನ್ ಕರ್ಫ್ಯೂ ವಿಧಿಸಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ. ಅಫ್ಗಾನಿಸ್ತಾನದ ಪ್ರಮುಖ ವಿರೋಧ ಪಕ್ಷಗಳು ಈಗ, ಉತ್ತರದ ಪ್ರಾಂತ್ಯಗಳ ರಾಜಕೀಯ ಒಕ್ಕೂಟವನ್ನು ಸೇರಿವೆ. ತಾಲಿಬಾನ್ ವಿರುದ್ಧ ಹೋರಾಡಲು ಅಮೆರಿಕ ಸೇನೆಗೆ ನೆರವು ನೀಡಿದ್ದ ಮುಜಾಹಿದೀನ್ ಸಂಘಟನೆಯ ನೇತೃತ್ವದಲ್ಲಿ ಈಗ ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹೋರಾಟಕ್ಕೆ ಶಸ್ತ್ರಾಸ್ತ್ರಗಳ ನೆರವು ನೀಡಿ ಎಂದು ನೆರೆ ದೇಶಗಳನ್ನು ಮುಜಾಹಿದೀನ್ ಕೇಳಿಕೊಂಡಿದೆ.

ನಗದು, ಆಹಾರ ಕೊರತೆ ತೀವ್ರ

ದೇಶದಲ್ಲಿ ಈಗ ನಗದು ಕೊರತೆ ತೀವ್ರವಾಗುತ್ತಿದೆ. ಕಾಬೂಲ್‌ನಲ್ಲಿರುವ ಬಹುತೇಕ ಎಟಿಎಂ ಘಟಕಗಳಲ್ಲಿ ನಗದು ಖಾಲಿಯಾಗಿದೆ. ಅಫ್ಗಾನಿಸ್ತಾನದ ಕೇಂದ್ರೀಯ ಬ್ಯಾಂಕ್‌ನ ಖಜಾನೆ ಅಮೆರಿಕದಲ್ಲಿ ಇದ್ದು, ಅಮೆರಿಕವು ಆ ಖಜಾನೆಯಿಂದ ಈಗ ಹಣ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ. ನಗದು ಕೊರತೆ ತೀವ್ರವಾಗಿರುವ ಕಾರಣ ಅಗತ್ಯ ವಸ್ತುಗಳ ಬೆಲೆಯೂ ತೀವ್ರಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಅಫ್ಗಾನಿಸ್ತಾನದ ವಿವಿಧ ಪ್ರದೇಶಗಳು ತಾಲಿಬಾನ್‌ ವಶವಾಗುತ್ತಿದ್ದಂತೆಯೇ ನೂರಾರು ಮಂದಿ ಅಲ್ಲಿಂದ ತಪ್ಪಿಸಿಕೊಂಡು ಬಂದು ರಾಜಧಾನಿ
ಕಾಬೂಲ್ ತಲುಪಿದ್ದರು. ಅವರು ಈಗ ತಾಲಿಬಾನಿಗಳ ವಶವಾಗಿದ್ದಾರೆ. ಬಸ್‌ ನಿಲ್ದಾಣ, ರಸ್ತೆ, ಉದ್ಯಾನಗಳಲ್ಲಿ ಆಶ್ರಯ ಪಡೆದಿರುವ ಈ ಜನರು ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದ್ದಾರೆ. ಆಹಾರ ಪದಾರ್ಥಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಅಫ್ಗಾನಿಸ್ತಾನದ ವಾರ್ಷಿಕ ಬಜೆಟ್‌ನ ಶೇ 80ರಷ್ಟು ವಿದೇಶಿ ನೆರವನ್ನು ಅವಲಂಬಿಸಿತ್ತು. ಈಗ ತಾಲಿಬಾನ್‌ಗೆ ಅಷ್ಟು ಪ್ರಮಾಣದ ನೆರವು ದೊರೆಯುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು. ಹೀಗಾಗಿ ಆದಾಯಕ್ಕಾಗಿ ಬೇರೆ ಮೂಲಗಳನ್ನು ತಾಲಿಬಾನ್ ಹುಡುಕುತ್ತಿದೆ. ಪಾಕಿಸ್ತಾನದಿಂದ ಬರುವ ಸರಕು ಸಾಗಣೆ ಟ್ರಕ್‌ಗಳಿಗೆ ಆಮದು ಸುಂಕ ವಿಧಿಸಲಾಗುತ್ತಿದೆ. ಬುಧವಾರದಿಂದ ಪ್ರತಿ ಟ್ರಕ್‌ಗೆ 2,800 ಅಮೆರಿಕನ್ ಡಾಲರ್‌ನಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ. ಈ ಮೂಲಕ ನಗದು ಸಂಗ್ರಹಕ್ಕೆ ತಾಲಿಬಾನ್ ಮುಂದಾಗಿದೆ.

ಜತೆಗೆ ದೇಶದಲ್ಲಿನ ಖನಿಜ ಸಂಪನ್ಮೂಲವನ್ನು ಬಳಸಿಕೊಳ್ಳಲು ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಸರ್ಕಾರದ ಕಾರ್ಯಾಂಗವು ಇದಕ್ಕೆ ಸಹಕಾರ ನೀಡುತ್ತಿಲ್ಲ. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೆಲಸಕ್ಕೆ ಗೈರುಹಾಜರಾಗಿರುವ ಕಾರಣ, ಕಾರ್ಯಾಂಗ ಸಂಪೂರ್ಣವಾಗಿ ಸ್ಥಗಿತವಾಗಿದೆ.ದೇಶದಲ್ಲಿ ಬಂಡವಾಳ ಹೂಡಲು ಚೀನಾ ಹಿಂದೇಟು ಹಾಕುತ್ತಿದೆ. ರಷ್ಯಾ ಮತ್ತು ಇರಾನ್ ಸಹ ತಾಲಿಬಾನ್‌ಗೆ, ಬಂಡವಾಳ ಹೂಡಿಕೆಯಲ್ಲಿ ಯಾವುದೇ ಭರವಸೆ ನೀಡಿಲ್ಲ.

ಈ ಎಲ್ಲಾ ಬಿಕ್ಕಟ್ಟುಗಳನ್ನು ಅಂದಾಜಿಸದೆ, ಸರ್ಕಾರವನ್ನು ಪತನಗೊಳಿಸಿದ ತಾಲಿಬಾನ್‌ ಜನಜೀವನವನ್ನು ಸರಿದಾರಿಗೆ ತರಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅದರ ಪರಿಣಾಮವನ್ನು ನಾಗರಿಕರು ಎದುರಿಸಬೇಕಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT