ಶನಿವಾರ, ಸೆಪ್ಟೆಂಬರ್ 18, 2021
31 °C
ಹಲವು ಜಿಲ್ಲೆಗಳು ವಶಕ್ಕೆ?

ಪಂಜ್‌ಶಿರ್‌ ವಶಕ್ಕಾಗಿ ತಾಲಿಬಾನ್‌– ಪ್ರತಿರೋಧ ಪಡೆಯ ಸಂಘರ್ಷ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ತಾಲಿಬಾನ್‌ ಪಡೆಯು ಪಂಜ್‌ಶಿರ್‌ ಪ್ರಾಂತ್ಯವನ್ನು ಪ್ರವೇಶಿಸಿದ್ದು, ಅಫ್ಗಾನಿಸ್ತಾನದ ನ್ಯಾಷನಲ್‌ ರೆಸಿಸ್ಟೆನ್ಸ್ ಫ್ರಂಟ್‌ ‍ಪಡೆಯೊಂದಿಗೆ (ಎನ್‌ಆರ್‌ಎಫ್‌ಎ) ಕದನ ಮುಂದುವರಿದಿದೆ ಎಂದು ವಕ್ತಾರ ಬಿಲಾಲ್‌ ಕರೀಮಿ ಹೇಳಿದ್ದಾರೆ.

ಪ್ರಾಂತ್ಯದ ರಾಜಧಾನಿಯಾದ ಬುಝರಕ್‌ಗೆ ಹೊಂದಿಕೊಂಡಂತೆ ಇರುವ,  ಜಿಲ್ಲಾ ಕೇಂದ್ರವಾದ ರುಖಾ ಹಾಗೂ ಪೊಲೀಸ್‌ ಕೇಂದ್ರ ಕಚೇರಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಗಣನೀಯ ಸಂಖ್ಯೆಯ ಜನರು, ವಾಹನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಕಳೆದುಕೊಳ್ಳುವುದರೊಂದಿಗೆ ಪ್ರತಿರೋಧ ಪಡೆಯು ಸಾಕಷ್ಟು ನುಗ್ಗಾಗಿದೆ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

ಆದರೆ, ತಾಲಿಬಾನ್‌ನ ಟ್ವಿಟರ್‌ ಖಾತೆಗಳಲ್ಲಿ ಪ್ರಕಟಿಸಿಸುವ ಮಾಹಿತಿಯನ್ನು ದೃಢಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. 

‘ಇಂಥ ಸಂದೇಶಗಳನ್ನು ಹರಿಬಿಡುವ ಮೂಲಕ, ಜನರನ್ನು ವಿಚಲಿತಗೊಳಿಸುವಂಥ ಪ್ರಚಾರ ತಂತ್ರದಲ್ಲಿ ತಾಲಿಬಾನ್‌ ತೊಡಗಿದೆ’ ಎಂದು  ಎನ್‌ಆರ್‌ಎಫ್‌ಎ ವಕ್ತಾರ ಫಾಹಿಂ ದಾಸ್ತಿ ಹೇಳಿದ್ದು, ತಮ್ಮ ಪಡೆಯು ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಸಜ್ಜಾಗಿದೆ ಎಂದಿದ್ದಾರೆ. ‌

ಪಂಜ್‌ಶಿರ್‌ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದಾಗಿ ಕೆಲವು ದಿನಗಳ ಹಿಂದೆಯೇ ತಾಲಿಬಾನ್‌ ಹೇಳಿತ್ತು. ಆದರೆ, ಇದುವರೆಗೂ ಅಲ್ಲಿ ಸಂಘರ್ಷ ಮುಂದುವರಿದಿದ್ದು ಎರಡೂ ಕಡೆಗಳಲ್ಲಿ ಸಾಕಷ್ಟು ಹಾನಿಯಾಗಿದೆ ಎನ್ನಲಾಗಿದೆ.

ಎನ್‌ಆರ್‌ಎಫ್‌ಎ ಮುಖಂಡ ಅಹಮ್ಮದ್‌ ಮಸೂದ್‌, ತಾಲಿಬಾನ್‌ ವಿರುದ್ಧದ ಹೋರಾಟಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದು, ಅಂತರರಾಷ್ಟ್ರೀಯ ಬೆಂಬಲಕ್ಕೆ ಮನವಿ ಮಾಡಿದ್ದಾರೆ.

‘ಯಾವತ್ತೂ ಸೋಲುವುದಿಲ್ಲ’ ಎಂದು ಪ್ರತಿರೋಧ ಪಡೆಯ ವಕ್ತಾರ ಮೈಸಂ ನಾಜರಿ ಹೇಳಿದ್ದಾರೆ. ಪ್ರತಿರೋಧ ಪಡೆಯ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಾಲಿಹ್‌, ಆತಂಕದ ಪರಿಸ್ಥಿತಿ ಬಗ್ಗೆ ಎಚ್ಚರಿಸಿದ್ದಾರೆ. ತಾಲಿಬಾನ್‌ ಆಕ್ರಮಣದಿಂದಾಗಿ ಸಾವಿರಾರು ಜನರು ಸ್ಥಳಾಂತರಗೊಳ್ಳುವುದರ ಮೂಲಕ ಅಪಾರ ಪ್ರಮಾಣದ ಸಂಕಷ್ಟಗಳು ಎದುರಾಗಿವೆ ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ.

‘ತಾಲಿಬಾನ್‌ ಪಡೆಯು ಪಂಜ್‌ಶಿರ್‌ನ ಅನಾಬಾ ಗ್ರಾಮವನ್ನು ತಲುಪಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಈ ಗ್ರಾಮದಿಂದ ಪರಾರಿಯಾಗಿದ್ದಾರೆ’ ಎಂದು ಇಟಲಿಯ ‘ಎಮರ್ಜೆನ್ಸಿ’ ಚಿಕಿತ್ಸಾ ಸಂಸ್ಥೆ ಶನಿವಾರ ಹೇಳಿತ್ತು. ಈ ಸಂಸ್ಥೆಯು, ಯುದ್ಧದಲ್ಲಿ ಗಾಯಗೊಂಡವರಿಗೆ ಈ ಗ್ರಾಮದಲ್ಲಿ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದು, ಈಗಲೂ ಮುಂದುವರಿಸಿದೆ.

‘ಇತ್ತೀಚೆಗೆ ನಾವು ಕೆಲವೇ ಜನ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇದುವರೆಗೂ ನಮ್ಮ ಚಿಕಿತ್ಸಾ ಕೇಂದ್ರದ ಕೆಲಸಗಳಿಗೆ ಯಾರೂ ಧಕ್ಕೆ ಮಾಡಿಲ್ಲ’ ಎಂದೂ ಹೇಳಿದೆ.

ಆದರೆ, ಅನಾಬಾ ಗ್ರಾಮವಲ್ಲದೇ ಕಣಿವೆಯ ಹಲವು ಪ್ರದೇಶಗಳನ್ನೂ ತಾಲಿಬಾನ್‌ ವಶಪಡಿಸಿಕೊಂಡಿದೆ ಎನ್ನಲಾಗುತ್ತಿದ್ದು, ಅದಿನ್ನೂ ದೃಢಪಡಬೇಕಿದೆ ಎಂದು ಅಮೆರಿಕದ ಲಾಂಗ್‌ ವಾರ್‌ ಜರ್ನಲ್‌ ನ ವ್ಯವಸ್ಥಾಪಕ ಸಂಪಾದಕ ಬಿಲ್‌ ರೇಗಿಯೊ ಹೇಳಿದ್ದಾರೆ.

ತಾಲಿಬಾನ್‌ ಪರವಾದ ಸಾಮಾಜಿಕ ಮಾಧ್ಯಮದ ವೇದಿಕೆಯು ಪಂಜ್‌ಶಿರ್‌ ಕಣಿವೆಯನ್ನು ವಶಪಡಿಸಿಕೊಂಡಿದ್ದಾಗಿ ಪೋಸ್ಟ್‌ ಹಾಕಿದೆ. ಆದರೆ, ತನಿಖಾ ವೆಬ್‌ಸೈಟ್‌ ಬಿಲ್ಲಿಂಗ್‌ಕ್ಯಾಟ್‌ನ ನಿಕ್ ವಾಟರ್ಸ್‌ ಇದನ್ನು ಅಲ್ಲಗಳೆದಿದ್ದಾರೆ. ಪೋಸ್ಟ್‌ ಮಾಡಿರುವ ಚಿತ್ರಗಳು, ಪಂಜ್‌ಶಿರ್‌ ಅನ್ನು ವಶಪಡಿಸಿಕೊಂಡಿರುವುದನ್ನು ದೃಢೀಕರಿಸುವ ಚಿತ್ರಗಳಲ್ಲ ಎಂದಿದ್ದಾರೆ.

‘ಕಾದು ನೋಡುವುದೊಂದೇ ದಾರಿ’
ನವದೆಹಲಿ: ಅಫ್ಗಾನಿಸ್ತಾನದ ಸ್ಥಿತಿಯು ಅಸ್ಥಿರವಾಗಿದ್ದು, ಇಂಥ ಸಂದರ್ಭದಲ್ಲಿ ಕಾದು ನೋಡುವುದನ್ನು ಬಿಟ್ಟರೆ ಭಾರತಕ್ಕೆ ಬೇರೆ ಆಯ್ಕೆ ಇಲ್ಲ ಎಂದು ಭಾರತದ ಮಾಜಿ ರಾಜತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆ ದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಭಾರತವು ಅನಾಲೋಚಿತ ಪ್ರತಿಕ್ರಿಯೆ ನೀಡದೇ, ಕಾದು ನೋಡಬೇಕು ಎಂದು ನಿವೃತ್ತ, ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ (ಪೂರ್ವ) ಅನಿಲ್‌ ವಾಧ್ವಾ ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸುವುದಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ಕಾಲೇಜು ಯುವತಿಯರಿಗೆ ನಿಖಾಬ್‌ ಕಡ್ಡಾಯ: ತಾಲಿಬಾನ್ ಆದೇಶ
ಅಫ್ಗಾನಿಸ್ತಾನದ ಖಾಸಗಿ ವಿಶ್ವವಿದ್ಯಾಲಯಗಳ ತರಗತಿಗಳಿಗೆ ಹಾಜರಾಗುವ ಯುವತಿಯರು/ಮಹಿಳೆಯರು, ಮುಖವನ್ನು ಮುಚ್ಚುವಂಥ ವಸ್ತ್ರವನ್ನು (ನಿಖಾಬ್‌) ಕಡ್ಡಾಯವಾಗಿ ಧರಿಸಬೇಕು ಎಂದು ತಾಲಿಬಾನ್‌ ಆದೇಶಿಸಿದೆ.

ಇದರೊಂದಿಗೆ, ಯುವಕ–ಯುವತಿಯರಿಗೆ ಪ್ರತ್ಯೇಕವಾಗಿ ಅಥವಾ ಅವರಿಬ್ಬರ ಮಧ್ಯದಲ್ಲಿ ಪರದೆಯನ್ನು ಅಳವಡಿಸಿ ತರಗತಿಗಳನ್ನು ನಡೆಸುವಂತೆ ಸೂಚಿಸಿದೆ.

ತಾಲಿಬಾನ್‌ನ ಶಿಕ್ಷಣ ವಿಭಾಗದ ಅಧಿಕಾರಿಗಳು ಈ ಬಗ್ಗೆ ಸುದೀರ್ಘವಾದ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಮಹಿಳೆಯರೇ ಪಾಠ ಮಾಡಬೇಕು. ಅದು ಸಾಧ್ಯವಾಗದೇ ಹೋದಲ್ಲಿ ಉತ್ತಮ ಚಾರಿತ್ರ್ಯದ ‘ವಯಸ್ಸಾದ ಪುರುಷರು’ ಪಾಠ ಮಾಡಬಹುದು ಎಂದು ಹೇಳಿದೆ. 2001ರಲ್ಲಿ ತಾಲಿಬಾನ್‌ ಆಡಳಿತ ಕೊನೆಗೊಳ್ಳುತ್ತಲೇ ದೇಶದಲ್ಲಿ ಸ್ಥಾಪನೆಯಾಗಿರುವ ಎಲ್ಲ ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಈ ಆದೇಶ ಅನ್ವಯವಾಗಲಿದೆ.

ಇವನ್ನೂ ಓದಿ
ತಾಲಿಬಾನ್‌ ಒಳಜಗಳ: ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌–ಹಖ್ಖಾನಿ ಗುಂಪಿನ ಸಂಘರ್ಷ

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು