ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಕ್ಯಾಪಿಟಲ್‌ ಹಿಂಸಾಚಾರ: ಕ್ಯಾಬಿನೆಟ್‌ ಸದಸ್ಯರಿಬ್ಬರಿಂದ ರಾಜೀನಾಮೆ

Last Updated 8 ಜನವರಿ 2021, 6:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡಿವೊಸ್ ಮತ್ತು ಸಾರಿಗೆ ಕಾರ್ಯದರ್ಶಿ ಎಲೈನ್ ಚಾವೊ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಸಂಸತ್‌ ಭವನದ (ಕ್ಯಾಪಿಟಲ್‌) ಮೇಲೆ ಬುಧವಾರ ನಡೆಸಿದ ದಾಳಿಯಿಂದ ಬೇಸರಗೊಂಡ ಅಮೆರಿಕದ ಕ್ಯಾಬಿಟನ್‌ನ ಈ ಇಬ್ಬರು ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಸಂಸತ್‌ ಭವನದ ಮೇಲಿನ ದಾಳಿಯು ನನ್ನ ನಿರ್ಧಾರಕ್ಕೆ ಬಹು ದೊಡ್ಡ ತಿರುವು ನೀಡಿದೆ’ ಎಂದು ಬೆಟ್ಸಿ ಡಿವೊಸ್ ಅವರು ಹೇಳಿದ್ದಾರೆ.

‘ನಾವು ನಿಮ್ಮ ಆಡಳಿತದ ಸಾಧನೆಯನ್ನು ಪ್ರಜೆಗಳೊಂದಿಗೆ ಸೇರಿ ಸಂಭ್ರಮಿಸಬೇಕಾಗಿತ್ತು. ಆದರೆ ಇದೀಗ ನಿಮ್ಮ ಬೆಂಬಲಿಗರು ಸಂಸತ್ ಭವನದ ಮೇಲೆ ದಾಳಿ ನಡೆಸುವ ಮೂಲಕ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಡಿವೊಸ್ ಅವರು ಡೊನಾಲ್ಡ್‌ ಟ್ರಂಪ್‌ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

‘ಈ ರೀತಿಯ ನಡವಳಿಕೆಯು ನಮ್ಮ ದೇಶಕ್ಕೆ ಕೆಟ್ಟ ಹೆಸರನ್ನು ತಂದಿದೆ. ನಿಮ್ಮ ವಾಕ್‌ ‌ಚಾತುರ್ಯವು ಪರಿಸ್ಥಿತಿ ಮೇಲೆ ಇನ್ನಷ್ಟು ಪರಿಣಾಮ ಬೀರಿದೆ’ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ ಎಲೈನ್ ಚಾವೊ ಅವರು ‘ಈ ಘಟನೆಯಿಂದ ತಮಗೆ ದೊಡ್ಡ ಅಘಾತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ದೇಶದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿನಲ್ಲಿಯೇ ಅವರ ಬೆಂಬಲಿಗರು ಸಂಸತ್‌ ಭವನಕ್ಕೆ ಲಗ್ಗೆ ಹಾಕಿ ದಾಂದಲೆ ನಡೆಸಿದರು. ಇದು ಅಮೆರಿಕದ ಇತಿಹಾಸದಲ್ಲೇ ಕರಾಳ ದಿನವಾಗಿದೆ. ಈ ಘಟನೆಯೂ ಇತರರಂತೆ ನನಗೂ ಬೇಸರವನ್ನುಂಟು ಮಾಡಿದೆ’ ಎಂದು ಚಾವೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT