ಸೋಮವಾರ, ಅಕ್ಟೋಬರ್ 26, 2020
26 °C

ಕೋವಿಡ್‌ನ ನಿರ್ಣಾಯಕ ಹಂತದಲ್ಲಿದೆ ಬ್ರಿಟನ್‌: ವೈದ್ಯಾಧಿಕಾರಿಗಳ ಅಭಿಪ್ರಾಯ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ‘ಕಠಿಣ ಸವಾಲಿನ ಚಳಿಗಾಲವನ್ನು ಎದುರಿಸಬೇಕಾದ ಸ್ಥಿತಿಯಲ್ಲಿರುವ ಬ್ರಿಟನ್‌, ಕೋವಿಡ್‌–19 ಸಾಂಕ್ರಾಮಿಕ ರೋಗದ ವಿಚಾರದಲ್ಲಿ ಅತ್ಯಂತ ನಿರ್ಣಾಯಕ ಹಂತದಲ್ಲಿದೆ,’ ಎಂದು ಸರ್ಕಾರದ ಉನ್ನತ ವೈದ್ಯಕೀಯ ಸಲಹೆಗಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ ಸೋಂಕು ಮತ್ತೆ ತಲೆ ಎತ್ತಿದೆ. ಇದು ಎರಡನೇ ಹಂತದ ಅಲೆ ಎಂದು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಹೀಗಾಗಿ ದೇಶದ ದೊಡ್ಡ ಪ್ರದೇಶಗಳು ಸಾಮಾಜಿಕ ಸ್ವಾತಂತ್ರ್ಯದ ನಿರ್ಬಂಧಗಳಿಗೆ ಒಳಪಟ್ಟಿವೆ. ಈ ಮಧ್ಯೆ ವೈದ್ಯಕೀಯ ಅಧಿಕಾರಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ಬ್ರಿಟನ್‌ನಲ್ಲಿ ಕೋವಿಡ್‌ ತಪ್ಪಾದ ದಿಕ್ಕಿನಲ್ಲಿ ಸಾಗುತ್ತಿದೆ. ನಾವು ಸಾಂಕ್ರಾಮಿಕ ರೋಗದ ನಿರ್ಣಾಯಕ ಹಂತದಲ್ಲಿದ್ದೇವೆ’ ಎಂದು ಅಭಿಪ್ರಾಯಪಟ್ಟಿರುವ ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಕ್ರಿಸ್ ವಿಟ್ಟಿ ಸೋಮವಾರ ಇದನ್ನೇ ಸಾರ್ವಜನಿಕರಿಗೆ ಹೇಳಲಿದ್ದಾರೆ. ಇದಕ್ಕಾಗಿ ಸಮಯವನ್ನೂ ನಿಗದಿ ಮಾಡಲಾಗಿದೆ. 

‘ವೈರಸ್ ಹರಡುವುದನ್ನು ಚಳಿಗಾಲಕ್ಕೂ ಮೊದಲು ಹೇಗೆ ನಿರ್ಬಂಧಿಸುವುದು ಎಂಬುದನ್ನು ನಿರ್ಧರಿಸಲು ನಾವು ದತ್ತಾಂಶಗಳ ಅಧ್ಯಯನ ನಡೆಸುತ್ತಿದ್ದೇವೆ,’ ಎಂದು ಅವರು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಈ ವರ್ಷದ ಮಾರ್ಚ್‌ನಿಂದ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿತು. ಅಲ್ಲಿ ಈ ವರೆಗೆ 40,000 ಕ್ಕೂ ಹೆಚ್ಚು ಜನರು ಈ ಕಾಯಿಲೆಗೆ ಪ್ರಾಣ ತೆತ್ತಿದ್ದಾರೆ.

ಆದರೆ, ಕಠಿಣ ಲಾಕ್‌ಡೌನ್‌ ನಿಯಮಗಳಿಂದಾಗಿ ಕೊರೊನಾ ವೈರಸ್‌ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಯಾವಾಗ ಲಾಕ್‌ಡೌನ್‌ ತೆರವು ಮಾಡಲಾಯಿತೋ ಅಂದಿನಿಂದ ಅಲ್ಲಿ ಪ್ರಕರಣಗಳು ಹೆಚ್ಚಾಗತೊಡಗಿವೆ. ಸರ್ಕಾರ ಟೀಕೆಗೆ ಗುರಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು