ಮಂಗಳವಾರ, ಮಾರ್ಚ್ 28, 2023
33 °C
ಉಕ್ರೇನ್‌ ಸೇನಾ ನೆಲೆ, ಮೂಲಸೌಕರ್ಯ ಧ್ವಂಸ; ಆರು ನಾಗರಿಕರು ಸಾವು

ಕೀವ್‌ ಮೇಲೆ ರಷ್ಯಾ ಆತ್ಮಾಹುತಿ ಡ್ರೋನ್‌ ದಾಳಿ; ನ್ಯಾಟೊ ಅಣ್ವಸ್ತ್ರ ತಾಲೀಮು

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌/ಮಾಸ್ಕೊ/ಬ್ರಸೆಲ್ಸ್‌: ಉಕ್ರೇನ್‌ನ ಭದ್ರಕೋಟೆ ಕೀವ್‌, ಸುಮಿ ಹಾಗೂ ನಿಪ್ರೊಪೆಟ್ರೊವ್‌ಸ್ಕ್‌ ಪ್ರಾಂತ್ಯಗಳ ಮೇಲೆ ಸೋಮವಾರ ರಷ್ಯಾ ಪಡೆಗಳು ಇರಾನಿ ನಿರ್ಮಿತ ಆತ್ಮಾಹುತಿ ಡ್ರೋನ್‌ಗಳ ದಾಳಿ ನಡೆಸಿದ್ದು, ಪ್ರಮುಖ ಮೂಲಸೌಕರ್ಯಗಳು ಧ್ವಂಸಗೊಂಡಿವೆ. ಕೀವ್‌ ಮತ್ತು ಸುಮಿಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದಾರೆ.

ಹತ್ತಾರು ಡ್ರೋನ್‌ಗಳನ್ನು ಉಕ್ರೇನ್‌ ತನ್ನ ವಾಯು ರಕ್ಷಣಾ ವ್ಯವಸ್ಥೆಯಿಂದ ಮಾರ್ಗಮಧ್ಯೆ ಹೊಡೆದುರುಳಿಸಿದ ದೃಶ್ಯಾವಳಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿವೆ. ಉಕ್ರೇನ್‌ ಸೈನಿಕರು ಮತ್ತು ಪೊಲೀಸರು ರಷ್ಯಾದ ಡ್ರೋನ್‌ಗಳನ್ನು ಶಸ್ತ್ರಾಸ್ತ್ರಗಳಿಂದ ಹೊಡೆದುರುಳಿಸಿದರು.

ಆದರೆ, ಭಾರಿ ಸ್ಪೋಟಕಗಳನ್ನು ಇರಿಸಿದ್ದ ಹಲವು ಡ್ರೋನ್‌ಗಳು ಉಕ್ರೇನ್‌ನ ಪ್ರಮುಖ ಸೇನಾ ಕಮಾಂಡ್‌, ಸೇನಾ ನಿಯಂತ್ರಣ ಸೌಲಭ್ಯಗಳು, ಇಂಧನ ವ್ಯವಸ್ಥೆ ಹಾಗೂ ಅಪಾರ ಮದ್ದುಗುಂಡುಗಳ ಸಂಗ್ರಹಾಗಾರಗಳನ್ನು ನಾಶ ಮಾಡಿವೆ. ಜನವಸತಿ ಕಟ್ಟಡಗಳು ಛಿದ್ರಗೊಂಡಿವೆ.

‘ಸಶಸ್ತ್ರ ಪಡೆಗಳು ಡ್ರೋನ್‌ಗಳು, ಹೆಚ್ಚು ನಿಖರ ಮತ್ತು ಧೀರ್ಘ ವ್ಯಾಪ್ತಿಯ ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್‌ ನೆಲದಲ್ಲಿ ಗುರುತಿಸಿದ್ದ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿವೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಕೀವ್‌ನ ಐದು ಕಡೆಗಳಲ್ಲಿ ಡ್ರೋನ್‌ ದಾಳಿಯಾಗಿದೆ. ನೂರಾರು ಪಟ್ಟಣಗಳು ಮತ್ತು ಹಳ್ಳಿಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ ಎಂದು ಉಕ್ರೇನ್‌ ಪ್ರಧಾನಿ ಡೆನಿಸ್ ಷ್ಮಿಗಲ್ ಹೇಳಿದ್ದಾರೆ.

ಇದೇ ತಿಂಗಳು ನಡೆಯಲಿರುವ ಜಿ20 ಶೃಂಗಸಭೆಯಿಂದ ರಷ್ಯಾವನ್ನು ಹೊರಹಾಕಬೇಕು ಎಂದು ಉಕ್ರೇನ್‌ ಅಧ್ಯಕ್ಷೀಯ ಹಿರಿಯ ಸಹಾಯಕ ಮಿಖಾಯಿಲೊ ಪೊಡೊಲಿಯಾಕ್‌ ಒತ್ತಾಯಿಸಿದ್ದಾರೆ.

ನ್ಯಾಟೊ ಅಣ್ವಸ್ತ್ರ ತಾಲೀಮು: ‌ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಅಣ್ವಸ್ತ್ರ ಸಂಘರ್ಷದ ಬೆದರಿಕೆ ಹಾಕುತ್ತಿರುವ ಬೆನ್ನಲ್ಲೇ, ನ್ಯಾಟೊ ತನ್ನ ಪೂರ್ವ ಯೋಜಿತ ವಾಡಿಕೆಯ ಅಣ್ವಸ್ತ್ರ ತಾಲೀಮನ್ನು ಸೋಮವಾರ ಪಶ್ಚಿಮ ಯುರೋಪ್‌ನಲ್ಲಿ ಆರಂಭಿಸಿತು.

ನ್ಯಾಟೊ 30 ರಾಷ್ಟ್ರಗಳ ಸೇನೆಗಳು ಈ ತಾಲೀಮಿನಲ್ಲಿ ಭಾಗವಹಿಸಿದ್ದು, ಇದೇ ತಿಂಗಳ 30ರವರೆಗೆ ಅಣ್ವಸ್ತ್ರ ತಾಲೀಮು ನಡೆಯಲಿದೆ.

‘ನಮ್ಮ ಸೇನಾ ಮೈತ್ರಿಕೂಟದ ನಡೆ ಉದ್ವಿಗ್ನತೆ ತಡೆಯುವ ಅತ್ಯುತ್ತಮ ಮಾರ್ಗ. ವಿಶ್ವಸಮುದಾಯದ ಎಚ್ಚರಿಕೆಯ ನಡುವೆಯೂ ರಷ್ಯಾದ ಅಣ್ವಸ್ತ್ರ ಬೆದರಿಕೆಯ ದಾಟಿ ಬದಲಾಗಿಲ್ಲ’ ಎಂದು ನ್ಯಾಟೊ ಮುಖ್ಯಸ್ಥ ಜೆಮ್ಸ್‌ ಸ್ಟೋಲ್ಟೆನ್‌ಬರ್ಗ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು