ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪ್‌26, ಜಿ20 ಸಮಾವೇಶದಿಂದ ಹೊರಗುಳಿದ ಚೀನಾ; ದೊಡ್ಡ ತಪ್ಪು ಮಾಡಿದಿರಿ ಎಂದ ಬೈಡನ್

Last Updated 3 ನವೆಂಬರ್ 2021, 5:20 IST
ಅಕ್ಷರ ಗಾತ್ರ

ಗ್ಲಾಸ್ಗೋ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಗ್ಲಾಸ್ಗೋದ ಹವಾಮಾನ ವೈಪರೀತ್ಯ ತಡೆ ಸಮಾವೇಶ ಹಾಗೂ ಜಿ20 ಸಮಾವೇಶದಿಂದ ದೂರ ಉಳಿಯುವ ಮೂಲಕ 'ದೊಡ್ಡ ತಪ್ಪು' ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಮಂಗಳವಾರ ಸಿಒಪಿ26 ಸಮಾವೇಶದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬೈಡನ್‌, ನೇರವಾಗಿ ಹೇಳುವುದಾದರೆ, ಚೀನಾ ಹೊರಗುಳಿಯುವ ಮೂಲಕ ದೊಡ್ಡ ತಪ್ಪು ಮಾಡಿದೆ. ಇಡೀ ಜಗತ್ತು ಚೀನಾದತ್ತ ತಿರುಗಿದೆ ಹಾಗೂ ಕೇಳುತ್ತಿದೆ, 'ಎಂತಹ ಮೌಲ್ಯವನ್ನು ಅವರು ತಲುಪಿಸುತ್ತಿದ್ದಾರೆ' ಎಂದು ಹೇಳಿದರು.

ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಚೀನಾ ಮತ್ತು ರಷ್ಯಾ ಭಾಗಿಯಾಗದಿರುವುದನ್ನು ಬೈಡನ್‌ ಖಂಡಿಸಿದರು. 'ಇದೊಂದು ಅತ್ಯಂತ ಪ್ರಮುಖ ವಿಚಾರವಾಗಿದೆ ಹಾಗೂ ಅವರು ಇದರಿಂದ ದೂರ ಉಳಿದಿದ್ದಾರೆ. ಜಾಗತಿಕ ನಾಯಕತ್ವ ವಹಿಸಬೇಕಾದವರು ಪ್ರಮುಖ ವಿಷಯದಲ್ಲಿ ಹೀಗೆ ನಡೆದುಕೊಳ್ಳುವುದಾದರೂ ಹೇಗೆ?' ಎಂದು ಪ್ರಶ್ನಿಸಿದರು.

ಜಗತ್ತಿನಾದ್ಯಂತ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿರುವ ಇಂಗಾಲದ ಹೊರಸೂಸುವಿಕೆಯಲ್ಲಿ ದೊಡ್ಡ ಪಾಲು ಚೀನಾದ್ದಾಗಿದೆ. ಕೋವಿಡ್‌–19 ಸಾಂಕ್ರಾಮಿಕದ ಆರಂಭದಿಂದಲೂ ಕ್ಸಿ ಜಿನ್‌ಪಿಂಗ್‌ ಅವರು ಚೀನಾದಿಂದ ಹೊರಗೆ ಪ್ರಯಾಣ ನಡೆಸಿಲ್ಲ.

ರೋಮ್‌ನ ಜಿ20 ಸಮಾವೇಶದಲ್ಲಿ ಮೊದಲ ಭಾರಿಗೆ ಬೈಡನ್‌ ಮತ್ತು ಜಿನ್‌ಪಿಂಗ್‌ ಅವರ ಭೇಟಿ ನಡೆಯುವುದಾಗಿ ಅಮೆರಿಕದ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ, ವರ್ಷಾಂತ್ಯದೊಳಗೆ ವರ್ಚುವಲ್‌ ಆಗಿ ಉಭಯ ರಾಷ್ಟ್ರಗಳ ನಾಯಕರು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ಮಾನವ ಹಕ್ಕುಗಳ ಕುರಿತ ವಿವಾದಗಳು ಹಾಗೂ ತೈವಾನ್‌ನಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ವಿಚಾರಗಳಲ್ಲಿ ಹದಗೆಟ್ಟಿರುವ ಅಮೆರಿಕ–ಚೀನಾ ಸಂಬಂಧವು ಜಿನ್‌ಪಿಂಗ್‌ ಜೊತೆಗಿನ ಮಾತುಕತೆಯ ಮೂಲಕ ಪರಿಹಾರವಾಗುವ ವಿಶ್ವಾಸವನ್ನು ಬೈಡನ್‌ ವ್ಯಕ್ತಪಡಿಸಿದರು.

ಅಮೆರಿಕ–ಚೀನಾ ನಡುವಿನ ಸಂಬಂಧದ ಕುರಿತು ಪ್ರಸ್ತಾಪಿಸಿದ ಬೈಡನ್‌, 'ನಾನು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತಿದ್ದೇನೆ. ಇದು ಸ್ಪರ್ಧೆ; ಇದೊಂದು ಸಂಘರ್ಷ ಆಗಬೇಕಿಲ್ಲ. ಸಂಘರ್ಷಕ್ಕೆ ಕಾರಣವೂ ಇಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT