ಮಂಗಳವಾರ, ಮಾರ್ಚ್ 28, 2023
32 °C

ರಿಷಿ ಪ್ರಧಾನಿಯಾಗುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಕೂಗು!

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ತಯಾರಿ ನಡೆಸಿರುವ ನಡುವೆಯೇ ಸಾರ್ವತ್ರಿಕ ಚುನಾವಣೆಯ ಕೂಗು ಬ್ರಿಟನ್‌ನಲ್ಲಿ ಪ್ರಬಲವಾಗುತ್ತಿದೆ. ಅಲ್ಲಿನ, ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರು ವರ್ಷಾಂತ್ಯಕ್ಕೆ ಮೊದಲೇ ಚುನಾವಣೆಗಳು ನಡೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

2022ರ ಒಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿ ಎಂದು ಬಯಸುತ್ತಿರುವುದಾಗಿ ಶೇಕಡ 62ರಷ್ಟು ಜನ ಹೇಳಿದ್ದಾರೆ ಎಂದು ಚುನಾವಣಾ ಸಮೀಕ್ಷಾ ಸಂಸ್ಥೆ ‘ಇಪ್ಸೋಸ್’ ಹೇಳಿದೆ.

ಆಗಸ್ಟ್ ಆರಂಭದಲ್ಲಿ, ಶೇ 51ರಷ್ಟು ಜನರು ಈ ವರ್ಷ ಸಾರ್ವತ್ರಿಕ ಚುನಾವಣೆಗೆ ಹೋಗಲು ಬಯಸಿದ್ದರು ಎಂದು ‘ಇಪ್ಸೋಸ್’ ಹೇಳಿದೆ. ಅಕ್ಟೋಬರ್‌ 20 –21ರ ನಡುವೆ, 1,000 ಜನರನ್ನು ಸಂಪರ್ಕಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ ಎಂದು ‘ಇಪ್ಸೋಸ್‌’ ತಿಳಿಸಿದೆ.

ಪ್ರಧಾನಿ ಹುದ್ದೆಗೆ ನಿಯೋಜನೆಗೊಂಡಿರುವ ಸುನಕ್‌ ಅವರು ರಾಜ ಮೂರನೇ ಚಾರ್ಲ್ಸ್ ಅವರನ್ನು ಭೇಟಿಯಾಗುವ ನಿರೀಕ್ಷೆಗಳಿದ್ದು, ಇಂದು (ಅ.25) ಬಕಿಂಗ್‌ಹ್ಯಾಮ್‌ ಅರಮನೆಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸೋಮವಾರ ಆಯ್ಕೆಯಾಗಿರುವ ರಿಷಿ ಅವರು, ಅವಧಿಪೂರ್ವ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದರು.

‘ನಿಸ್ಸಂಶಯವಾಗಿ, ಅವಧಿಪೂರ್ವವಾಗಿ ಯಾವುದೇ ಚುನಾವಣೆಗಳು ನಡೆಯವು’ ಎಂದು ಅವರು ಹೇಳಿರುವುದಾಗಿ ಸುನಕ್ ಬೆಂಬಲಿಗ ಸಂಸದ ಸೈಮನ್ ಹೋರೆ ಸುದ್ದಿಗಾರರಿಗೆ ತಿಳಿಸಿದರು.

ನಿಯಮಗಳ ಪ್ರಕಾರ ಜನವರಿ 2025ರಲ್ಲಿ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಗಳು ನಡೆಯಬೇಕು. ಅದಕ್ಕೂ ಮೊದಲೇ ಚುನಾವಣೆಗೆ ಹೋಗುವ ನಿರ್ಧಾರ ಕೈಗೊಳ್ಳುವ ಅಧಿಕಾರ ಪ್ರಧಾನ ಮಂತ್ರಿಗೆ ಮಾತ್ರ ಇರಲಿದೆ.

ಅಕ್ಟೋಬರ್ 20 ರಂದು ಲಿಜ್ ಟ್ರಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದಾಗಿನಿಂದ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಸುದ್ದಿ ಮಾಧ್ಯಮ ‘ಈವ್ನಿಂಗ್ ಸ್ಟ್ಯಾಂಡರ್ಡ್’ ವರದಿ ಮಾಡಿದೆ.

ಪ್ರಧಾನಿ ಹುದ್ದೆಗೇರುತ್ತಿರುವ ಬಿಳಿಯನಲ್ಲದ ಮೊದಲ ವ್ಯಕ್ತಿ 

ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್‌  ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಸ್ಪರ್ಧೆಯಿಂದ ಸೋಮವಾರ ಹಿಂದಕ್ಕೆ ಸರಿದಾಗಲೇ ಪಕ್ಷದ ನಾಯಕತ್ವವು ರಿಷಿ ಅವರ ಕೈಸೇರುತ್ತದೆ ಎಂಬುದು ಬಹುತೇಕ ಖಚಿತವಾಗಿತ್ತು. ಆಗ ಪೆನಿ ಮಾರ್ಡಂಟ್‌ ಮಾತ್ರ ಸ್ಪರ್ಧೆಯಲ್ಲಿದ್ದರು. ನಾಮಪತ್ರಕ್ಕೆ ಅಗತ್ಯವಾಗಿದ್ದ ನೂರು ಸಂಸದರ ಬೆಂಬಲ ಪಡೆಯುವಲ್ಲಿ ಅವರು ವಿಫಲರಾದರು. ಹಾಗಾಗಿ, ಅವರು ಹಿಂದಕ್ಕೆ ಸರಿದರು. ಬಳಿಕ, ರಿಷಿ ಅವರ ಗೆಲುವನ್ನು ಘೋಷಿಸಲಾಯಿತು.

ಬ್ರಿಟನ್‌ ಆರ್ಥಿಕವಾಗಿ ಅತ್ಯಂತ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ರಿಷಿ ಅವರಿಗೆ ‍ಪ್ರಧಾನಿ ಹುದ್ದೆ ಸಿಕ್ಕಿದೆ. ಆರ್ಥಿಕ ಪ್ರಗತಿ ಅತ್ಯಂತ ನಿಧಾನಗೊಂಡಿದೆ, ಹಣದುಬ್ಬರ ಏರುತ್ತಲೇ ಇದೆ. ಕೊರತೆ ಬಜೆಟ್‌ನಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವಿಶ್ವಾಸಾರ್ಹತೆ ಕುಗ್ಗಿದೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವಿಶ್ವಾಸಾರ್ಹತೆಯನ್ನು ಮರಳಿ ಸ್ಥಾಪಿಸುವುದು ರಿಷಿ ಅವರ ಮೊದಲ ಹೊಣೆಗಾರಿಕೆ. ನಿರ್ಗಮಿತ ಪ್ರಧಾನಿ ಟ್ರಸ್‌ ಅವರ ಆರ್ಥಿಕ ನೀತಿಯು ಬ್ರಿಟನ್‌ನ ಬಾಂಡ್‌ ಮಾರುಕಟ್ಟೆಯು ನೆಲಕಚ್ಚುವಂತೆ ಮಾಡಿತ್ತು. ತೆರಿಗೆ ಕಡಿತ ಮಾಡುವ ಟ್ರಸ್ ಅವರ ನಿರ್ಧಾರವು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಿತ್ತು. 

ತೆರಿಗೆ ಕಡಿತ ಮಾಡದೆ ರಿಷಿ ಅವರಿಗೂ ಬೇರೆ ದಾರಿ ಇಲ್ಲ. ಹಾಗೆಯೇ ಸರ್ಕಾರದ ವೆಚ್ಚವನ್ನೂ ಕಡಿತ ಮಾಡಬೇಕಿದೆ. ಇವೆಲ್ಲವೂ ಜನಪ್ರಿಯವಲ್ಲದ ನಿರ್ಧಾರಗಳು. ಹೀಗಾಗಿ, ಊಹಿಸಲಾಗದ ರಾಜಕೀಯ ಪರಿಣಾಮಗಳು ಉಂಟಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. 

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು