ಶನಿವಾರ, ಸೆಪ್ಟೆಂಬರ್ 26, 2020
22 °C

ಅಮೆರಿಕ | ಪತಿಯ ದಾಳಿಯಿಂದ ವಿರೂಪಗೊಂಡಿದ್ದ ಮಹಿಳೆಗೆ ಯಶಸ್ವಿಯಾಗಿ ಹೊಸ ಮುಖ ಕಸಿ

ಎಪಿ Updated:

ಅಕ್ಷರ ಗಾತ್ರ : | |

ಬಾಸ್ಟನ್‌: ಪತಿಯ ದಾಳಿಯಿಂದ ವಿರೂಪಗೊಂಡಿದ್ದ ಮಹಿಳೆಗೆ ಹೊಸ ಮುಖವನ್ನು ಕಸಿ ಮಾಡುವಲ್ಲಿ ಅಮೆರಿಕದ ಬಾಸ್ಟನ್‌ನ ‘ಬ್ರಿಗ್‌ಹ್ಯಾಮ್‌ ಆ್ಯಂಡ್‌ ವುಮೆನ್ಸ್‌’ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಕಾರ್ಮೆನ್ ಬ್ಲಾಂಡಿನ್‌ ಟಾರ್ಲ್ಟನ್‌ ಅವರು ಎರಡನೇ ಬಾರಿ ಮುಖ ಕಸಿಗೆ ಒಳಗಾಗಿ ಇದರಲ್ಲಿ ಯಶಸ್ವಿಯಾದ ಅಮೆರಿಕದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ವರ್ಷದ ಹಿಂದೆ ಅವರು ಮೊದಲ ಬಾರಿಗೆ ಮುಖ ಕಸಿ ಮಾಡಿಸಿಕೊಂಡಿದ್ದರು. ಆಗ ಶಸ್ತ್ರಚಿಕಿತ್ಸೆಯು ವಿಫಲವಾಗಿತ್ತು.

‘ನನಗೆ ಅತೀವ ಸಂತಸವಾಗಿದೆ. ಈಗ ಮುಖದ ಭಾಗದಲ್ಲಿದ್ದ ನೋವೆಲ್ಲಾ ಮಾಯವಾಗಿದೆ. ಇನ್ನು ಮುಂದೆ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ. ಹಿಂದಿನ ಒಂದು ವರ್ಷದಿಂದ ಈ ಕ್ಷಣವನ್ನು ಎದುರು ನೋಡುತ್ತಿದ್ದೆ’ ಎಂದು ಮ್ಯಾಂಚೆಸ್ಟರ್‌ನ ನಿವಾಸಿಯಾಗಿರುವ ಕಾರ್ಮೆನ್ ತಿಳಿಸಿದ್ದಾರೆ.

ಕಾರ್ಮೆನ್‌ ಅವರಿಗೆ ದಾನಿಯೊಬ್ಬರ ಮುಖವನ್ನು ಕಸಿ ಮಾಡಲಾಗಿದೆ. 

‘ಮೊದಲ ಮುಖ ಕಸಿಯು ವಿಫಲವಾಗಿದ್ದರಿಂದ ಎರಡನೇ ಬಾರಿ ಕಸಿ ಮಾಡಲು ನಾನು ಹಿಂದೇಟು ಹಾಕಿದ್ದೆ. ಆದರೆ ಕಾರ್ಮೆನ್‌ ಹಾಗೂ ನನ್ನ ತಂಡದವರು ಮನವೊಲಿಸಿದರು. ಎರಡನೇ ಸಲ ಕಸಿ ಮಾಡಲು ಮೊದಲ ಶಸ್ತ್ರಚಿಕಿತ್ಸೆಗಿಂತಲೂ ಹೆಚ್ಚಿನ ಸಮಯ ತಗುಲಿತು’ ಎಂದು ವೈದ್ಯ ಬೊಹಡಾನ್‌ ಪೊಮಹಾಚ್‌‌ ಹೇಳಿದ್ದಾರೆ.

45 ಮಂದಿ ವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ತಂಡವು ಜುಲೈ ತಿಂಗಳಲ್ಲಿ ಒಟ್ಟು 20 ಗಂಟೆಗಳ ಕಾಲ ಮುಖ ಕಸಿ ನಡೆಸಿದೆ.

ಪರ ಪುರುಷನನ್ನು ನೋಡುತ್ತಿದ್ದಾಳೆ ಎಂಬ ಕಾರಣದಿಂದ ಪತಿ ಹರ್ಬರ್ಟ್‌ ರೋಜರ್ಸ್‌ ಅವರು ಬೇಸ್‌ಬಾಲ್‌ ಬ್ಯಾಟ್‌ನಿಂದ ಕಾರ್ಮೆಲ್‌ ಅವರ ಮುಖಕ್ಕೆ ಬಲವಾಗಿ ಹೊಡೆದಿದ್ದರು. ಬಳಿಕ ರಾಸಾಯನಿಕ ದ್ರಾವಣದಲ್ಲಿ ಅವರ ದೇಹವನ್ನು ಅದ್ದಿದ್ದರು. 2007ರಲ್ಲಿ ನಡೆದ ಈ ಘಟನೆಯಲ್ಲಿ ಕಾರ್ಮೆಲ್‌ ಅವರ ದೇಹದ ಶೇಕಡ 80ರಷ್ಟು ಭಾಗ ಸುಟ್ಟು ಹೋಗಿತ್ತು. ಅವರು ಕಣ್ಣುಗಳ ದೃಷ್ಟಿಯನ್ನೂ ಕಳೆದುಕೊಂಡಿದ್ದರು. 2009ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರೋಜರ್ಸ್‌ಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 2017ರಲ್ಲಿ ಅವರು ಜೈಲಿನಲ್ಲೇ ಮೃತಪಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು