ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಂಡ್ಯದಲ್ಲಿ ಜೈವಿಕ ಡೀಸೆಲ್‌ ಔಟ್‌ಲೆಟ್‌ ಆರಂಭ

ಜೆಸಿಬಿ, ಟ್ರ್ಯಾಕ್ಟರ್‌, ಟಿಲ್ಲರ್‌, ಜನರೇಟರ್‌ಗಳಲ್ಲಿ ಬಳಕೆ, ಸ್ಥಳದಲ್ಲೇ ಇಂಧಿನದ ಅರಿವು
Last Updated 17 ಸೆಪ್ಟೆಂಬರ್ 2020, 4:28 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿ ಮೊದಲ ಜೈವಿನ ಡೀಸೆಲ್‌ ಮಾರಾಟ ಕೇಂದ್ರ (ಔಟ್‌ಲೆಟ್‌) ಪಾಂಡವಪುರ– ನಾಗಮಂಗಲ ಹೆದ್ದಾರಿ ಬದಿಯ ಮಹದೇಶ್ವರಪುರ ಗ್ರಾಮದಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿದೆ.

ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿರುವ ‘ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ’ದಲ್ಲಿ ತರಬೇತಿ ಪಡೆದಿರುವ ಎ.ಎಸ್‌.ಯೋಗೀಶ್‌ ಔಟ್‌ಲೆಟ್‌ ತೆರದಿದ್ದಾರೆ. ಆರಂಭಿಕವಾಗಿ ಜೆಸಿಬಿ, ಟ್ರಾಕ್ಟರ್‌, ಟಿಲ್ಲರ್‌, ಜನರೇಟರ್‌ಗಳಿಗೆ ಜೈವಿಕ ಡೀಸೆಲ್‌ ಹಾಕಲಾಗುತ್ತಿದೆ. ಪೆಟ್ರೋಲ್‌ ಬಂಕ್‌ ಮಾದರಿಯಲ್ಲೇ ಪಂಪ್‌ ಮೂಲಕ ಇಂಧನ ತುಂಬಲಾಗುತ್ತಿದೆ. ಸ್ಥಳದಲ್ಲೇ ಪರಿಸರ ಸ್ನೇಹಿ ಇಂಧನ ಕುರಿತು ಅರಿವು ಮೂಡಿಸಲಾಗುತ್ತಿದೆ.

ಆರಂಭಿಕವಾಗಿ ಗುಜರಾತ್‌ನಿಂದ ಇಂಧನ ತರಿಸಿ ಮಾರಾಟ ಮಾಡಲಾಗುತ್ತಿದೆ. ಮುಂದೆ, ಜೈವಿಕ ಇಂಧನಕ್ಕೆ ಮೂಲವಾಗಿರುವ ಹೊಂಗೆ, ಬೇವಿನ ಬೀಜ, ಹಿಪ್ಪೆ, ಜಟ್ರೋಪಾ ಗಿಡಗಳನ್ನು ತಮ್ಮ ಜಮೀನಿನಲ್ಲೇ ಬೆಳೆದು ಇಂಧನ ತಯಾರಿಕಾ ಘಟಕ ಸ್ಥಾಪಿಸುವ ಯೋಚನೆ ಅವರಿಗಿದೆ.

‘ಟ್ರಾಕ್ಟರ್‌ನಲ್ಲಿ ಹೊಲ ಉಳುಮೆ ಮಾಡಲು ಪ್ರತಿ ಗಂಟೆಗೆ 2 ಲೀಟರ್‌ ಜೈವಿಕ ಇಂಧನ ಖರ್ಚಾಗುತ್ತಿದೆ. ಮಾಮೂಲಿ ಡೀಸೆಲ್‌ 3 ಲೀಟರ್‌ ಬೇಕು. ಜೈವಿಕ ಡೀಸೆಲ್‌ನಿಂದ ಒಂದು ಲೀಟರ್‌ ಉಳಿತಾಯವಾಗುತ್ತದೆ. ಜೊತೆ ಎಂಜಿನ್‌ ಶಬ್ದ ತಗ್ಗಿದ್ದು ಗಾಡಿ ಹೊಗೆ ಮುಕ್ತವಾಗಿದೆ’ ಅತ್ತಿಗನಹಳ್ಳಿ ಗ್ರಾಮದ ರೈತ ಕೃಷ್ಣ ಹೇಳಿದರು.

ಜೈವಿಕ ಇಂಧನ ಪ್ರತಿ ಲೀಟರ್‌ಗೆ ₹ 70 ದರ ನಿಗದಿ ಮಾಡಲಾಗಿದೆ. ಪೆಟ್ರೋಲಿಯಂ ಉತ್ಪನ್ನದ ಡೀಸೆಲ್‌ ದರ ₹ 77 ಇದೆ. ಜೈವಿಕ ಇಂಧನ ಬಳಕೆಯಿಂದ ಲೀಟರ್‌ಗೆ ₹ 8 ಉಳಿತಾಯವಾಗುತ್ತಿದೆ.

‘ನವ್ಯೋದ್ಯಮದ ಮಾದರಿಯಲ್ಲಿ ಔಟ್‌ಲೆಟ್‌ ಸ್ಥಾಪಿಸಲಾಗಿದೆ. ಮಂಡ್ಯದ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ತರಬೇತಿ ಪಡೆದ ನಂತರ ಇಂಧನದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದೆ. ಗುಜರಾತ್‌, ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದ ಬಂಕ್‌ ಸ್ಥಾಪಿಸಿರುವ ವಿಚಾರ ತಿಳಿಯಿತು. ಗುಜರಾತ್‌ನ ಡೀಲರ್‌ವೊಬ್ಬರನ್ನು ಸಂಪರ್ಕಿಸಿ ಇಂಧನ ತರಿಸಿ ಮಾರಾಟ ಮಾಡುತ್ತಿದ್ದೇನೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದೆ ನಾವೇ ತಯಾರಿಸಲು ನಿರ್ಧರಿಸಿದ್ದೇವೆ’ ಎಂದು ಯೋಗೀಶ್‌ ಹೇಳಿದರು.

2.20 ಲಕ್ಷ ಕಿ.ಮೀ ಓಡಿದ ಕಾರು: ‘ಜೈವಿಕ ಇಂಧನ ಪ್ರಾತ್ಯಕ್ಷಿಕ ಕೇಂದ್ರ’ ಮುಖ್ಯಸ್ಥ ಡಾ.ಎಲ್‌.ಪ್ರಸನ್ನಕುಮಾರ್‌ ಅವರ ಟಾಟಾ ಇಂಡಿಕಾ ಕಾರು ಕಳೆದ 5 ವರ್ಷಗಳಿಂದ ಜೈವಿಕ ಇಂಧನದಿಂದಲೇ ಓಡುತ್ತಿದ್ದು ಇಲ್ಲಿಯವರೆ 2.20 ಲಕ್ಷ ಕಿ.ಮೀ ಪೂರೈಸಿದೆ. ಆ ಮೂಲಕ ಪರಿಸರ ಸ್ನೇಹಿ ಇಕೊ– ಡ್ರೈವೊಥಾನ್‌ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ.

ಪ್ರಸನ್ನಕುಮಾರ್‌ 30 ವರ್ಷಗಳಿಂದ ಬಯೊ ಇಂಧನದ ಮೇಲೆ ಸಂಶೋಧನೆ ಕೈಗೊಂಡಿದ್ದಾರೆ. ಮಂಗಳೂರು ವಿ.ವಿಯಲ್ಲಿ ಭೂಗರ್ಭ ವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದು, ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್‌ ವಿಭಾಗದಲ್ಲಿ ಭೂಗರ್ಭ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಾಯದೊಂದಿಗೆ 2012ರಲ್ಲಿ ‘ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ’ ಸ್ಥಾಪಿಸಿ ಬಯೋ ಡೀಸೆಲ್‌ ಉತ್ಪಾದನೆ ಹಾಗೂ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜೈವಿಕ ಇಂಧನ ಉತ್ಪಾದನೆ ಕುರಿತು ಆಸಕ್ತಿ ಇರುವವರೆಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಯೋಗೀಶ್‌ ಮೊದಲ ಬಾರಿ ಮಾರಾಟ ಕೇಂದ್ರ ಆರಂಭಿಸಿದ್ದಾರೆ.

ಪ್ರಸನ್ನಕುಮಾರ್‌ ರಾಜ್ಯದ ವಿವಿಧೆಡೆ ಜೈವಿಕ ಇಂಧನ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸಿದ್ದಾರೆ. ಪ್ರತಿ ವರ್ಷ ವಿಶ್ವ ಜೈವಿಕ ಇಂಧನ ದಿನ (ಆ. 10) ಆಚರಿಸುತ್ತಾರೆ. ಜಿಲ್ಲೆಯ ಪ್ರಮುಖ ಉತ್ಸವ, ಜಾತ್ರೆ, ಸಂತೆಗಳಲ್ಲಿ ಜೈವಿಕ ಇಂಧನ ಕುರಿತು ಕಿರುಚಿತ್ರ ಪ್ರದರ್ಶಿಸುತ್ತಾರೆ.

‘ಸಂಶೋಧನಾ ಕೇಂದ್ರಗಳಲ್ಲಿ ಜೈವಿಕ ಇಂಧನ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಆದರೆ ಯೋಗೀಶ್‌, ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಜೈವಿಕ ಡೀಸೆಲ್‌ ಮಾರಾಟ ಔಟ್‌ಲೆಟ್‌ ಸ್ಥಾಪಿಸಿದ್ದಾರೆ’ ಎಂದು ಪ್ರಸನ್ನಕುಮಾರ್‌ ಹೇಳಿದರು.

‘2050ರವೇಳೆಗೆ ಇಡೀ ದೇಶ ಜೈವಿಕ ಇಂಧನದತ್ತ ಪರಿವರ್ತನೆಯಾಗಲಿದೆ ಎಂಬ ನಿರೀಕ್ಷೆ ಇದೆ. ಜೈವಿಕ ಡೀಸೆಲ್‌ ತಯಾರಿಸಿ, ಮಾರಾಟ ಮಾಡುವವರಿಗೆ ಪ್ರೋತ್ಸಾಹ ನೀಡಲಾಗುವುದು. ಯೋಗೀಶ್‌ ಸ್ಥಾಪಿಸಲಾಗಿರುವ ಔಟ್‌ಲೆಟ್‌ಗೆ ಶೀಘ್ರ ಭೇಟಿ ನೀಡಲಾಗುವುದು’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಆರ್‌.ಕೆ.ರುದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT