ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುವಿಧಾ‘ ವಿಧ ವಿಧ ಮಾಸ್ಕ್‌

Last Updated 7 ಮೇ 2020, 3:51 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ‘ಮಾಸ್ಕ್‌‘ ಧರಿಸುವುದು ಕಡ್ಡಾಯವೆಂದು ಸರ್ಕಾರ ಆದೇಶಿಸಿದೆ. ಆದರೆ, ಇದನ್ನು ಉಲ್ಲಂಘಿಸುವವರಿಗೇನೂ ಕಡಿಮೆ ಇಲ್ಲ.

ಇಂಥ ವ್ಯಕ್ತಿಗಳಿಗೆ ಆರೋಗ್ಯ ಕಾಳಜಿ ನೆನಪಿಸುವ ಜತೆಗೆ ಮಾಸ್ಕ್‌ ಧರಿಸಲು ಉತ್ತೇಜಿಸುವುದಕ್ಕಾಗಿ ಫ್ಯಾಷನ್‌ ಟೆಕ್ನಾಲಜಿ ಕಾಲೇಜಿನ ಉಪನ್ಯಾಸಕಿ ಸುವಿಧಾ ರಾಜು, ಮಾಸ್ಕ್‌ಗಳ ಮೇಲೆ ಮನಮುಟ್ಟುವಂತಹ ಚಿತ್ರಗಳನ್ನು ಕಸೂತಿ ಮಾಡುತ್ತಿದ್ದಾರೆ. ‘ಹ್ಯಾಪಿ ಫ್ಯಾಮಿಲಿ’ ಪರಿಕಲ್ಪನೆಯಲ್ಲಿ ಚಿತ್ರಗಳನ್ನು ಬರೆದಿದ್ದು, ಈ ಮಾಸ್ಕ್‌ಗಳನ್ನು ತಮ್ಮ ಸಂಬಂಧಿಕರಿಗೆ, ಪರಿಚಯಸ್ಥರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

ಅಂದ ಹಾಗೆ ಸುವಿಧಾ ಬೆಂಗಳೂರಿನ ಯಲಹಂಕದವರು. ಸದ್ಯ ಕೇರಳದ ಕಣ್ಣೂರಿನನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ನಿಫ್ಟ್‌) ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ‘ಫೈನ್‌ ಆರ್ಟ್ಸ್‌’ ಮೂಲಕ ಸಾಮಾಜಿಕ ಸಂದೇಶ ಸಾರುವುದು ಈ ಕಸೂತಿ ಮಾಸ್ಕ್‌ ತಯಾರಿಸುವ ಹಿಂದಿನ ಉದ್ದೇಶ. ಕಲೆ ಎನ್ನುವುದು ಸಾಮಾಜಿಕ ಜಾಗೃತಿಗೂ ಬಳಕೆಯಾದರೆ ಸಾರ್ಥಕ’ ಎನ್ನುತ್ತಾರೆ ಅವರು.

‘ಹ್ಯಾಪಿ ಫ್ಯಾಮಿಲಿ’ ಥೀಮ್ ಹಿಂದಿನ ಉದ್ದೇಶದ ಬಗ್ಗೆ ಕೇಳಿದರೆ, ‘ಲಾಕ್‌ಡೌನ್ ಅವಧಿಯಲ್ಲಿ ಮಾಸ್ಕ್ ಮೇಲಿರುವ ಸಂತೋಷದಿಂದ ಇರುವ ಕುಟುಂಬದ ಚಿತ್ರವನ್ನು ನೋಡಿ, ನಮ್ಮ ಕುಟುಂಬಕ್ಕಾಗಿ ನಾವು ಜವಾಬ್ದಾರಿಯಿಂದ ವರ್ತಿಸಬೇಕು. ಆರೋಗ್ಯದ ಕಾಳಜಿ ಮಾಡಬೇಕು ಅಂತ ಅನ್ನಿಸಬೇಕು. ಆಗ ಅವರು ಈ ಮಾಸ್ಕ್ ಧರಿಸಲು ಮುಂದಾಗುತ್ತಾರೆ’ ಎಂದು ವಿವರಿಸಿದರು ಸುವಿಧಾ.

ಈ ಯೋಚನೆ ಹೊಳೆದು, ಕೆಲಸ ಆರಂಭಿಸಿದಾಗ ಮಾಸ್ಕ್‌ ಅನ್ನು ಹೊರಗಿನಿಂದ ಖರೀದಿಸಿ, ಅದರ ಮೇಲೆ ಕಸೂತಿ ಮಾಡುತ್ತಿದ್ದರು. ಬೇಡಿಕೆ ಹೆಚ್ಚಾದ ನಂತರ, ಇವರೇ ಮಾಸ್ಕ್‌ ತಯಾರಿಸಿ, ಅದರ ಮೇಲೆ ಕಸೂತಿ ಮಾಡುತ್ತಿದ್ದಾರೆ. ಮಾಸ್ಕ್‌ಗಳಗೆ ಎಂತಹ ಬಟ್ಟೆಯನ್ನು ಬಳಸಬೇಕು. ಫಿಲ್ಟರ್‌ ಬಟ್ಟೆ ಹೇಗಿರಬೇಕು ಎಂಬ ಬಗ್ಗೆ ತಿಳಿದುಕೊಂಡು ದೂಳು, ವೈರಾಣು ಸೋಂಕು ತಡೆಯುವಂತಹ ಮಾಸ್ಕ್ ‌ಅನ್ನು ತಯಾರಿಸುತ್ತಿದ್ದಾರೆ. ಈ ಮಾಸ್ಕ್‌ಗಳನ್ನು ಮರುಬಳಕೆ ಮಾಡಬಹುದು. ಇವುಗಳ ತಯಾರಿಕೆಯಲ್ಲಿ ಇವರೊಂದಿಗೆ ಕುಟುಂಬದವರು ಹಾಗೂ ಗೆಳತಿಯರು ಜತೆಯಾಗಿದ್ದಾರೆ.

’ನಾವು ಒಳ್ಳೆಯದನ್ನು ಮಾಡಿದರೆ, ನಮಗೂ ಒಳ್ಳೆಯದೇ ಆಗುತ್ತದೆ‘ ಎನ್ನುವ ಸುವಿಧಾಗೆ,ಈ ಮಾಸ್ಕ್‌ಗಳನ್ನು ಮಾರಾಟ ಮಾಡುವುದರಲ್ಲಿ ಆಸಕ್ತಿ ಇಲ್ಲ. ಅದಕ್ಕಾಗಿಯೇ ಗೆಳೆಯರಿಗೆ, ಪರಿಚಯದವರಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಹಾಗೇ ತಮ್ಮ ವಿದ್ಯಾರ್ಥಿಗಳಿಗೂ ಮಾಸ್ಕ್‌ ಮಾಡುವುದನ್ನು ಕಲಿಸಿ, ಜನರಿಗೆ ಹಂಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT