ಬುಧವಾರ, ಮಾರ್ಚ್ 22, 2023
31 °C

"ಮಾಯಾ ಮಾದಕ" ಯಕ್ಷಗಾನ: ಮದ್ಯ, ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  'ಮಾಧ್ಯಮಗಳಲ್ಲಿ ಕಾಣುವ ಮದ್ಯ ಮಾದಕ ವಸ್ತುಗಳ ಕುರಿತು ವೈಭವೀಕರಣವನ್ನು ನಂಬಬಾರದು' ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎಸ್. ಶಂಕರಪ್ಪ ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಮಂಗಳಗಂಗೋತ್ರಿ(ಮಾಮ್), ಆಶ್ರಯದಲ್ಲಿ ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕರ್ನಾಟಕ ಮಹಿಳಾ ಯಕ್ಷಗಾನ ತಂಡದವರು  ಪ್ರಸ್ತುತಪಡಿಸಿದ ಮಾಯಾ ಮಾದಕ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

'ಯುವಜನರು ತಮ್ಮ ಆರೋಗ್ಯ ಹಾಗೂ ಬದುಕನ್ನು ನಾಶಗೊಳಿಸುವ ಮದ್ಯ, ಮಾದಕ ವಸ್ತುಗಳಿಂದ ಆರಂಭದಿಂದಲೇ ದೂರವಿರಬೇಕು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಸಂಯಮ ಮುಖ್ಯ. ಮಹಿಳೆಯರೂ ಇಂಥ ವ್ಯಸನಕ್ಕೆ ಒಳಗಾಗಿರುವುದು ಕಳವಳಕಾರಿ.  ಮದ್ಯಪಾನ ವಿದ್ಯಾರ್ಥಿ ಜೀವನದಲ್ಲಿ ಇಂಥ ಎಚ್ಚರ ಇರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಒಳ್ಳೆಯ ವಿಷಯಗಳನ್ನಷ್ಟೇ ಸ್ವೀಕರಿಸಿ' ಎಂದರು.

ಪ್ರಾಂಶುಪಾಲರಾದ ಪ್ರೊ. ಪ್ರತಿಭಾ ಪಾರ್ಶ್ವನಾಥ ಮಾತನಾಡಿ, 'ವಿದ್ಯಾರ್ಥಿಗಳಿಗೆ ಸತ್ಯವನ್ನು ನೇರವಾಗಿ ಹೇಳಿದರೆ ಒಪ್ಪಿಕೊಳ್ಳುವುದಿಲ್ಲ. ಆದರೆ ಅದನ್ನು ಮನರಂಜನೆಯೊಂದಿಗೆ  ಹೇಳಿದರೆ ಮನಮುಟ್ಟುತ್ತದೆ. ಈ ನಿಟ್ಟಿನಲ್ಲಿ ಯಕ್ಷಗಾನ ಪ್ರಯೋಗ ಪರಿಣಾಮಕಾರಿ' ಎಂದರು.
ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಅಧ್ಯಕ್ಷತೆ ವಹಿಸಿದ್ದರು. 

ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕ ಪ್ರೊ. ಎಂ.ನಾಗರಾಜ್ ಸ್ವಾಗತಿಸಿದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶರತ್ ಹೆಗ್ಡೆ ವಂದಿಸಿದರು.


ಮಾಯಾ ಮಾದಕ ಯಕ್ಷಗಾನ ಪ್ರದರ್ಶನ

ಮಾಯಾ‌‌‌ ಮಾದಕ

ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಅವರು ರಚಿಸಿ ನಿರ್ದೇಶಿಸಿದ  'ಮಾಯಾ ಮಾದಕ" ಯಕ್ಷಗಾನ‌, ಮದ್ಯ‌ ಮತ್ತು ಮಾದಕ‌ ವ್ಯಸನ ಮುಕ್ತರಾಗುವಂತೆ ಮಾಡುವ ಜನ ಜಾಗೃತಿ ಸಂಬಂಧ ಮೊದಲ‌ ಬಾರಿಗೆ ಪ್ರದರ್ಶಿತವಾಗಿದೆ. 

ವಿದ್ಯಾವಂತ ಕೃಷಿಕ ಕಾಳೇಗೌಡ ತನ್ನ ಶ್ರಮದಿಂದಲೇ ಸಿರಿವಂತನಾದರೂ, "ಚನ್ನಿಗ ರಾಯ" ಎಂಬ ಮಾದಕ ಜಾಲದ ಪ್ರಮುಖನೊಬ್ಬನ ಜಾಲದ‌ ಉರುಳಿಗೆ ಸಿಲುಕಿ ಪರದಾಟ ಪಡುತ್ತಾನೆ. ಜನರಿಂದಲೇ ಆಯ್ಕೆಯಾದ ಭರತ ಚಕ್ರವರ್ತಿ ತನ್ನ ಮಂತ್ರಿಗಳಿಂದ ಈ‌‌‌‌ ವಿಷಯ ತಿಳಿದುಕೊಂಡು ಸಮಸ್ಯೆ ‌ಪರಿಹರಿಸುವ ಕಥಾ ಪ್ರಸಂಗ ಇದಾಗಿದೆ. ಈ ನಡುವೆ ಕೃಷಿಕ ಕಾಳೇಗೌಡನ ಬೆಂಬಲಕ್ಕೆ ನಿಲ್ಲುವ ಆತನ ಪತ್ನಿ ಸುಶೀಲೆ ಮಹಿಳಾ ಸ್ವಶಕ್ತಿ ಗುಂಪಿನ ಮೂಲಕ ಜನಾಂದೋಲನಕ್ಕೆ ಪಣ ತೊಡುವ, ಭರತ ಚಕ್ರವರ್ತಿಯ ಆಡಳಿತಕ್ಕೆ ಇಂಬಾಗುವ ರೀತಿಯನ್ನು ಈ ಯಕ್ಷಗಾನದಲ್ಲಿ‌ ತೆರೆದಿಡಲಾಗಿದೆ.

ಯಕ್ಷಗಾನದ ಕೊನೆಗೆ ಯಕ್ಷಗಾನ ಕಲಾವಿದರು, ಕಾಲೇಜು ವಿದ್ಯಾರ್ಥಿಗಳು ಮದ್ಯ-ಮಾದಕ ಪದಾರ್ಥಗಳ ವಿರುದ್ಧ ಜನಜಾಗೃತಿ ತರುವ ಸಂಬಂಧ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಪಾಲ್ಗೊ‌ಂಡರು.

ಮಾಯಾ ಮಾದಕ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ‌ನಾವುಡ, ಮೃದಂಗ- ಉಮೇಶ್ ರಾಜ್,  ಚೆಂಡೆ- ಸುಬ್ರಹ್ಮಣ್ಯ ಸಾಸ್ತಾನ ಬಾಗವಹಿಸಿದ್ದರು. ಮುಮ್ಮೇಳದಲ್ಲಿ ಗೌರಿ‌‌ ಕೆ., ಅನ್ನಪೂರ್ಣ ಕಟೀಲ್, ಆಶಾ ರಾಘವೇಂದ್ರ, ಸುಮಾ‌ ಅನಿಲ್ ಕುಮಾರ್, ಸರಯೂ‌ ವಿಠಲ್, ಧೃತಿ ಅಮ್ಮೆಂಬಳ, ಕ್ಷಮಾ‌ ಪೈ ಅರ್ಥಪೂರ್ಣ ಅಭಿನಯ ಪ್ರದರ್ಶಿಸಿದರು.


ಮಾಯಾ ಮಾದಕ ಯಕ್ಷಗಾನ ಪ್ರದರ್ಶನ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು