ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧೆ ಹೇಳಿಕೊಟ್ಟ ಕಲೆ ಸಾಂಝಿ!

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಯಮುನಾ ತೀರದ ಸುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಸಾಂಝಿ ಕಲೆ ಈಗ ದೇಶ ಸಂಚಾರ ಹೊರಟಿದೆ. ಕೃಷ್ಣ–ರಾಧೆಯರ ಕಾಲದಷ್ಟು ಹಿಂದಿನ ಸುದೀರ್ಘ ಚರಿತ್ರೆ ನಮ್ಮ ಕಲೆಗಿದೆ ಎನ್ನುತ್ತಾರೆ ಸಾಂಝಿ ಕಲಾವಿದರು. ದಸ್ತಕರ್‌ ಸಂಸ್ಥೆಯ ವತಿಯಿಂದ ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮೇಳಕ್ಕೆ ಬಂದಿದ್ದ ಕಲಾವಿದ ಆಶುತೋಷ್‌ ವರ್ಮಾ ತೆರೆದಿಟ್ಟ ಸಾಂಝಿ ಜಗತ್ತು ಎಷ್ಟೊಂದು ಅದ್ಭುತ!

**
ಯಮುನಾ ತೀರ ಎಂದರೆ ಸಾಕು, ಮನದಂಗಳದಲ್ಲಿ ಥಟ್ಟನೆ ಮೆರವಣಿಗೆ ಹೊರಡುವುದು ಕೃಷ್ಣ–ರಾಧೆಯರ ಪ್ರೇಮ ಸಲ್ಲಾಪದ ಕಥಾನಕಗಳಲ್ಲವೇ? ಈ ಅಮರ ಪ್ರೇಮಿಗಳ ನೆಲೆಗಳೆನಿಸಿದ ಮಥುರಾ ಹಾಗೂ ವೃಂದಾವನ ಪಟ್ಟಣಗಳನ್ನೊಳಗೊಂಡ ಪ್ರದೇಶವೇ ಬ್ರಿಜ್‌ಭೂಮಿ (ಅಥವಾ ವ್ರಜಭೂಮಿ). ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದ ಈ ಭೂಮಿಯಲ್ಲಿ ಅರಳಿ ನಿಂತ ಅನನ್ಯವಾದ ಒಂದು ಕಲೆ ಸಾಂಝಿ. ಹಲವು ಸಂಸ್ಕೃತಿಗಳ ತೊಟ್ಟಿಲು ಎನಿಸಿರುವ ಯಮುನೆ ಈ ಕಲೆಗೂ ಹದವಾಗಿ ನೀರೆರೆದು ಪೋಷಿಸಿದ್ದಾಳೆ.

ಕೃಷ್ಣ–ರಾಧೆಯರ ಪ್ರೇಮ ಸಲ್ಲಾಪಕ್ಕೂ ಸಾಂಝಿ ಕಲೆಗೂ ನೇರ ಸಂಬಂಧವಿದೆ ಎನ್ನುವುದು ಕಲಾವಿದ ಆಶುತೋಷ್‌ ವರ್ಮಾ ಅವರ ಗಟ್ಟಿ ನಂಬಿಕೆ. ಮಥುರಾದ ವರ್ಮಾ ಕುಟುಂಬದಲ್ಲಿ ನಾಲ್ಕನೇ ತಲೆಮಾರಿನ ಕಲಾವಿದರಂತೆ ಅವರು. ‘ಸಾಂಝ್‌ ಎಂದರೆ ಸಂಧ್ಯಾಕಾಲ; ಗೋಧೂಳಿ ಸಮಯ. ಗೋವುಗಳನ್ನು ಕೃಷ್ಣ ಮನೆಗೆ ವಾಪಸ್‌ ಕರೆತರುವ ಹೊತ್ತಿನಲ್ಲಿ ರಾಧೆಯು, ಗೋಪಿಕೆಯರೊಡನೆ ಹೂವು, ಎಲೆಗಳ ರಂಗೋಲಿ ಬಿಡಿಸುವ ಮೂಲಕ ಅಂಗಳವನ್ನು ಅಲಂಕರಿಸುತ್ತಿದ್ದಳು. ಆ ಕಲೆಯೇ ಕಾಲದ ಕುಲುಮೆಯಲ್ಲಿ ಹಾದು ಈಗ ಸಾಂಝಿ ರೂಪದಲ್ಲಿ ಬೆಳೆದು ನಿಂತಿದೆ ನೋಡಿ’ ಎಂದು ಹೇಳುವಾಗ, ತಮ್ಮ ಕಲೆಗೆ ದ್ವಾಪರ ಯುಗದಷ್ಟು ಹಿಂದಿನ ಇತಿಹಾಸವಿದೆ ಎನ್ನುವ ಹೆಮ್ಮೆ ಅವರಿಗೆ.

ದಶಕಗಳ ಹಿಂದಿನವರೆಗೆ ಮಥುರಾ–ವೃಂದಾವನ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದ ಸಾಂಝಿ ಕಲೆ ಈಗ ದೇಶದಾದ್ಯಂತ ದಿಗ್ವಿಜಯ ಹೊರಟಿದೆ. ಸಾಂಝಿ ಕಲಾವಿದರು ಎಲ್ಲೆಡೆ ತೆರಳಿ, ಈ ಕಲೆಯನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಹಾಗೆ ಬೆಂಗಳೂರಿಗೆ ಬಂದಿದ್ದ ಆಶುತೋಷ್‌ ಮಾತಿಗೆ ಸಿಕ್ಕಿದ್ದಲ್ಲದೆ, ಸಾಂಝಿ ಕಲೆಯ ಕುರಿತು ಹಲವು ರಸವತ್ತಾದ ವಿವರಗಳನ್ನು ಕೊಡುತ್ತಾ ಹೋದರು.

ಕೃಷ್ಣ–ರಾಧೆಯರು, ನವಿಲುಗಳು, ಗೋವುಗಳು, ಮಂಗಗಳು, ಕದಂಬ ಮರಗಳು, ಹೂವುಗಳು –ಇವು ಸಾಂಝಿ ಕಲೆಯ ಹೆಗ್ಗುರುತುಗಳು. ಗೋಡೆಯನ್ನು, ಮನೆಯ ಅಂಗಳವನ್ನು ಸಿಂಗರಿಸುವುದೇ ಈ ಕಲೆಯ ಮೂಲ ಉದ್ದೇಶ. ಹಿಂದೆ ರಾಧೆ ಮಾಡಿದ್ದು ಕೂಡ ಅದನ್ನೇ ತಾನೆ? ಸಾಂಝಿ ಕಲೆಯಲ್ಲಿ ಎರಡು ವಿಧ. ಒಂದು ಜನಪದ ಸಂಪ್ರದಾಯವಾದರೆ, ಮತ್ತೊಂದು ದೇವಾಲಯ ಸಂಪ್ರದಾಯ. ದಶಕಗಳ ಹಿಂದೆ, ಮದುವೆಯಾಗದ ಯುವತಿಯರೇ ಜನಪದ ಸಂಪ್ರದಾಯದ ಕಲಾವಿದೆಯರು. ‘ಒಳ್ಳೆಯ ಗಂಡ ಸಿಗಬೇಕು ಹಾಗೂ ಅಷ್ಟಪುತ್ರ ಸೌಭಾಗ್ಯವತಿ ಆಗಬೇಕು’ ಎಂಬ ಹಾರೈಕೆಯಿಂದ ಯುವತಿಯರು ಇಂತಹ ಚಿತ್ತಾರಗಳನ್ನು ಬಿಡಿಸುತ್ತಿದ್ದರಂತೆ!

ಅದೇ ದೇವಾಲಯ ಸಂಪ್ರದಾಯದಲ್ಲಿ ಸಾಂಝಿ ಅರಳುವುದು ಪಿತೃಪಕ್ಷ ಕಾಲದಲ್ಲಿ. ಅದೂ ವೃಂದಾವನದ ದೇವಾಲಯಗಳಲ್ಲಿಯೇ ಹೆಚ್ಚಾಗಿ ಸಾಂಝಿ ಸೊಬಗನ್ನು ಕಣ್ತುಂಬಿಕೊಳ್ಳಬಹುದಂತೆ. ಮಣ್ಣು ಮತ್ತು ಸಗಣಿಯಿಂದ ಮಾಡಿದ ‘ವೇದಿ’ಯ (ವೇದಿಕೆ?) ಮೇಲೆ ಕೃಷ್ಣ–ರಾಧೆಯರ ಲೀಲಾಪ್ರಸಂಗಗಳು ಜೀವ ತಾಳುವುದು ಇಲ್ಲಿನ ವಿಶೇಷ. ಕಲಾವಿದರ ನೆರವಿನಿಂದ ಪುರೋಹಿತರು ಕೊರೆಯಚ್ಚುಗಳ (stencils) ಮೂಲಕ ‘ವೇದಿ’ಗಳ ಮೇಲೆ ಲೀಲಾ ಪ್ರಸಂಗಗಳ ದೃಶ್ಯಾವಳಿಗಳನ್ನು ಒಡಮೂಡಿಸುವುದು ಪರಂಪರಾಗತ ರೂಢಿ. ಈಗ ದೇಶದಾದ್ಯಂತ ದಿಗ್ವಿಜಯ ಹೊರಟಿದ್ದು ಮಾತ್ರ ಜನಪದ ಸಂಪ್ರದಾಯದ ಕಲೆಯೇ. ಕೊರೆಯಚ್ಚುಗಳ ಅಸ್ತ್ರವನ್ನೇ ಅದು ಹಿಡಿದು ಹೊರಟಿದೆ.

ಕತ್ತರಿ ಆಡಿಸುತ್ತಾ ಹೋದಂತೆ ಅಂದದ ಅಂಬಾರಿ ಹೀಗೆ ಮೂಡುತ್ತದೆ ನೋಡಿ
ಕತ್ತರಿ ಆಡಿಸುತ್ತಾ ಹೋದಂತೆ ಅಂದದ ಅಂಬಾರಿ ಹೀಗೆ ಮೂಡುತ್ತದೆ ನೋಡಿ

ಅಂಗಳದಲ್ಲಿ ಚಿತ್ತಾರದ ರಂಗೋಲಿ ಮೂಡಿಸಲು ಮಾರುಕಟ್ಟೆಗಳಲ್ಲಿ ರಂಗೋಲಿಯ ವಿನ್ಯಾಸಕ್ಕೆ ತಕ್ಕ ಕತ್ತರಿಸಿದ ಕಾಗದಗಳು ಸಿಗುತ್ತವಲ್ಲ? ಸಾಂಝಿ ಕೊರೆಯಚ್ಚುಗಳೂ ಹಾಗೇ. ದೊಡ್ಡ ಗೋಡೆಯಷ್ಟು ಉದ್ದ–ಅಗಲದ ಕಾಗದದಲ್ಲಿ ಲೀಲಾ ಪ್ರಸಂಗಗಳ ದೃಶ್ಯಗಳನ್ನು ಕೊರೆಯಲಾಗುತ್ತದೆ. ಕೊರೆಯಚ್ಚುಗಳ ಸಹಾಯದಿಂದ ಗೋಡೆಗಳ ಮೇಲೆ ಅದೇ ದೃಶ್ಯಗಳನ್ನು ಬಣ್ಣದಿಂದ ಮೂಡಿಸಬಹುದು. ಅಥವಾ ಅವುಗಳನ್ನೇ ತೂಗುಹಾಕಿ, ಬಣ್ಣದ ಬೆಳಕು ಹರಿಸಿ, ಚಿತ್ತಾರ ಒಡಮೂಡಿಸಬಹುದು. ಇಲ್ಲದಿದ್ದರೆ ಕೊರೆಯಚ್ಚುಗಳ ಹಿಂದೆ ಬಣ್ಣದ ಕಾಗದ/ಬಟ್ಟೆ ಅಂಟಿಸಿಯೂ ತೂಗು ಹಾಕಬಹುದು.

ನೋಡಲು ತುಂಬಾ ಸರಳವಾಗಿದ್ದರೂ ಕೊರೆಯಚ್ಚುಗಳನ್ನು ಸಿದ್ಧಪಡಿಸುವುದು ಅಷ್ಟು ಸುಲಭವಲ್ಲ. ಮೊದಲು ವಿನ್ಯಾಸದ ಅಳತೆಗೆ ತಕ್ಕಂತೆ ಕಾಗದವನ್ನು ಜೋಡಿಸಿಕೊಳ್ಳಬೇಕು. ಗಾತ್ರ ದೊಡ್ಡದಾಗಿದ್ದರೆ ಒಂದಕ್ಕೊಂದು ಕಾಗದವನ್ನು ಅಂಟಿಸಿಕೊಳ್ಳಬೇಕು. 8X12 ಅಡಿಗಳಷ್ಟು ದೊಡ್ಡ ಆಕಾರದ ಕಾಗದದಲ್ಲೂ ಕಲಾಕೃತಿಗಳನ್ನು ಅರಳಿಸುವುದುಂಟು. ಬೇಕಾದ ವಿನ್ಯಾಸಕ್ಕೆ ತಕ್ಕಂತೆ ಕಾಗದದ ಮೇಲೆ ರೇಖಾಚಿತ್ರವನ್ನು ಹಾಕಿಕೊಳ್ಳಬೇಕು. ಕೊನೆಗೆ ಆ ವಿನ್ಯಾಸಕ್ಕೆ ಅನುಗುಣವಾಗಿ ವಿಶೇಷ ಕತ್ತರಿಗಳಿಂದ ಕತ್ತರಿಸುತ್ತಾ (ದೃಶ್ಯಗಳನ್ನು ಕೊರೆಯುತ್ತಾ!) ಹೋಗಬೇಕು. ಕಾಗದದಲ್ಲಿ ಮೂಡಿದ ವಿನ್ಯಾಸ ಕಿತ್ತು ಬರದಂತೆ ಮಧ್ಯೆ ಮಧ್ಯೆ ‘ಸೇತುವೆ’ಗಳನ್ನು ಉಳಿಸುತ್ತಲೂ ಹೋಗಬೇಕು... ಹೀಗೆ ತಮ್ಮ ಕಲೆಯ ಕಥೆ ಹೇಳುತ್ತಾ ಆಶುತೋಷ್‌, ಕಾಗದವನ್ನು ಆಚೀಚೆ ಹೊರಳಿಸುತ್ತಾ, ಅದನ್ನು ಕತ್ತರಿಸುತ್ತಾ ಹೊರಟಿದ್ದ ರೀತಿ ಸೋಜಿಗವನ್ನು ಉಂಟು ಮಾಡುತ್ತಿತ್ತು.

ಕಾಗದದಲ್ಲಿ ಚಿತ್ರಗಳನ್ನು ಕೊರೆಯುವ ಕೆಲಸಕ್ಕೆ ಅಪಾರವಾದ ಅಭ್ಯಾಸ ಬೇಕು. ಧ್ಯಾನಸ್ಥ ಸ್ಥಿತಿಯಂತಹ ಏಕಾಗ್ರತೆ ಬೇಕು. ಅಷ್ಟೇ ಪ್ರಮಾಣದ ತಾಳ್ಮೆಯೂ ಇರಬೇಕು. ಸಾಂಝಿ ಕಲೆಯ ‘ಲೈವ್‌’ ಪ್ರದರ್ಶನ ನೀಡುತ್ತಿದ್ದ ಆಶುತೋಷ್‌ ಅವರ ಶ್ರಮವನ್ನು ನೋಡಿದಾಗ ಅವರ ವಿವರಣೆಯಲ್ಲಿ ಒಂದಿನಿತೂ ಉತ್ಪ್ರೇಕ್ಷೆ ಇಲ್ಲ ಎನ್ನುವಭಾವ ಗಟ್ಟಿಯಾಗುತ್ತಿತ್ತು. ದಿನಗಟ್ಟಲೆ ಕಣ್ಣಲ್ಲಿ ಕಣ್ಣಿಟ್ಟು ಅಂದದ ಕಲೆ ಅರಳಿಸಿದರೂ ನಿರೀಕ್ಷಿತ ಆದಾಯ ಸಿಗದೆ ಎಷ್ಟೋ ಕಲಾವಿದರು ಬೇರೆ ವೃತ್ತಿ ಅರಸಿ ಹೋಗಿದ್ದಾರೆ ಎಂದ ಆಶುತೋಷ್‌ ಅವರು, ಮುಂದೆ ಬೇರೇನೂ ಹೇಳುವ ಗೋಜಿಗೆ ಹೋಗಲಿಲ್ಲ.

ಮಥುರಾದಿಂದ ಈ ಕಲಾವಿದ ಹೊತ್ತು ತಂದಿದ್ದ ಕಲಾಕೃತಿಗಳು ಮಾತ್ರ ಸುಮ್ಮನೆ ಕೂತಿರಲಿಲ್ಲ. ಪೌರಾಣಿಕ ಕಥೆಗಳನ್ನೂ ಕಲಾವಿದರ ಶ್ರಮವನ್ನೂ ಬ್ರಿಜ್‌ಭೂಮಿಯ ಕಲಾ ಸಿರಿವಂತಿಕೆಯ ಮಹತ್ವವನ್ನೂ ಅವು ಒಟ್ಟೊಟ್ಟಿಗೆ ಉಲಿಯುತ್ತಿದ್ದವು.

ಸಂಪರ್ಕ: 9557558067

**

ಕೃಷ್ಣ–ರಾಧೆಯರ ಸಂಗಮ ಸ್ಥಳವಾದ ಕದಂಬ ಮರದ ಅಡಿಯಲ್ಲಿ...
ಕೃಷ್ಣ–ರಾಧೆಯರ ಸಂಗಮ ಸ್ಥಳವಾದ ಕದಂಬ ಮರದ ಅಡಿಯಲ್ಲಿ...

ದಸ್ತಕಾರ್‌–ಕುಶಲಕರ್ಮಿಗಳ ಶಕ್ತಿ
ಗ್ರಾಮಭಾರತದ ಕರಕುಶಲ ಕರ್ಮಿಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು 38 ವರ್ಷಗಳ ಹಿಂದೆ ಜನ್ಮತಾಳಿದ ಸಂಸ್ಥೆಯೇ ದಸ್ತಕಾರ್‌. ದೇಶದ ಗ್ರಾಮೀಣ ಭಾಗದ ಕಲಾವಿದರಿಗೆ, ಅದರಲ್ಲೂ ಮಹಿಳಾ ಕುಶಲಕರ್ಮಿಗಳಿಗೆ ಉತ್ತೇಜನ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಲಾಭದ ಉದ್ದೇಶವಿಲ್ಲದ ಈ ಸಂಸ್ಥೆ ದೇಶದ ವಿವಿಧ ಭಾಗಗಳಲ್ಲಿ ಕರಕುಶಲ ಮೇಳಗಳನ್ನು ನಡೆಸಿ ಕಲಾವಿದರಿಗೂ ಗ್ರಾಹಕರಿಗೂ ಸಂಪರ್ಕ ಸೇತುವಾಗುವ ಕೆಲಸ ಮಾಡುತ್ತಿದೆ. ವರ್ಷಪೂರ್ತಿ ಒಂದಿಲ್ಲೊಂದು ನಗರದಲ್ಲಿ ದಸ್ತಕಾರ್‌ ವತಿಯಿಂದ ನಡೆಯುವ ಮೇಳಗಳಿಂದ ಕರಕುಶಲ ಕರ್ಮಿಗಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತಿದೆ.

ಸಂಪರ್ಕ: 99108 02970

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT