ಗುರುವಾರ , ಜೂನ್ 4, 2020
27 °C

ವಾಡಿಯಲ್ಲಿ ಅಂಬೇಡ್ಕರ್

ಅಪ್ಪಗೆರೆ ಸೋಮಶೇಖರ್ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದೊಟ್ಟಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರದು ಅವಿಸ್ಮರಣೀಯ ಸಂಬಂಧ. ಇಂದಿಗೂ ಆ ಅವಿನಾಭಾವ ಸಂಬಂಧದ ನೆನಪು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಮೊಟ್ಟಮೊದಲಿಗೆ ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳೆ ಗ್ರಾಮದ ದೇವರಾಯ ಇಂಗಳೆ.

ಅಂಬೇಡ್ಕರ್ ಅವರಿಗಿಂತ ಎರಡು ವರ್ಷ ಹಿರಿಯ ಹಾಗೂ ಅಂಬೇಡ್ಕರರ ಆತ್ಮೀಯರೂ ಆಗಿದ್ದ ಇಂಗಳೆಯವರು, ಬೆಳಗಾವಿಯಲ್ಲಿ ನಡೆದ 1925ರ ನವೆಂಬರ್ 11 ಮತ್ತು 12ರ ‘ಬಹಿಷ್ಕೃತ ಹಿತಕಾರಣಿ ಸಮ್ಮೇಳನ’ಕ್ಕೆ ಕರೆತಂದರು. ಬಳಿಕ 1929ರ ಮಾರ್ಚ್ 23ರ ಬೆಳಗಾವಿ ಜಿಲ್ಲಾ ಬಹಿಷ್ಕೃತ ಸಮಾಜದ ಪರಿಷತ್ತಿನ ಮೊದಲ ಅಧಿವೇಶನ ಹಾಗೂ 1924ರ ಡಿಸೆಂಬರ್ 24ರ ಸಮಾವೇಶಕ್ಕೆ ಅಂಬೇಡ್ಕರ್ ಅವರನ್ನು ಕರೆತಂದು ಆ ಭಾಗದ ಜನರಿಗೆ ಪರಿಚಯಿಸಿದರು. ಅಂಬೇಡ್ಕರ್ ಅವರು 1927ರಲ್ಲಿ ಬಂದಾಗ ಬೆಳಗಾವಿಯ ಹುಕ್ಕೇರಿ ಹಾಗೂ ಚಿಕ್ಕೋಡಿ ರಸ್ತೆಗೆ ಸಮೀಪವಿರುವ ‘ಕರೋಶಿ’ ಗ್ರಾಮದ ಮುಸ್ಲಿಂ ಕುಟುಂಬದ ‘ಜಿಗನ್ ಭೀ ಪಟೇಲ್’ರ ಮನೆಯಲ್ಲಿ ಉಳಿದುಕೊಂಡು ಜಮೀನ್ದಾರನೊಬ್ಬನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಭೂಮಿ ಕೊಡಿಸುತ್ತಾರೆ. ಧಾರವಾಡದಲ್ಲಿನ ಅಸ್ಪೃಶ್ಯ ಹುಡುಗನೊಬ್ಬನಿಗೆ ಜಾತಿಯ ಕಾರಣಕ್ಕಾಗಿ ಶಾಲೆಯ ಪ್ರವೇಶ ನಿರಾಕರಿಸಿದ ಘಟನೆಯ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದು ಬ್ರಿಟಿಷ್‌ ಸರ್ಕಾರದ ನೆರವು ಪಡೆದು ‘ಬಹಿಷ್ಕೃತ ಹಿತಕಾರಣಿ ಸಭಾ’ ಸಂಘಟನೆಯಿಂದ 1929ರಲ್ಲಿ ಶೋಷಿತ ಸಮುದಾಯದ ಮಕ್ಕಳಿಗಾಗಿ ವಸತಿಶಾಲೆ ಸ್ಥಾಪಿಸುತ್ತಾರೆ. ಇಂದಿಗೂ ಧಾರವಾಡದಲ್ಲಿ ಆ ಶಾಲೆ ‘ಬುದ್ಧರಕ್ಕಿತ ವಸತಿ ಶಾಲೆ’ ಎಂಬ ಹೆಸರಿನಲ್ಲಿ ಕ್ರಿಯಾಶೀಲವಾಗಿದೆ.

1937ರ ಮೇ 30ರಂದು ವಿಜಯಪುರ ಜಿಲ್ಲೆಯ ಬೀಳಗಿಯ ಸೋಮನಗೌಡ ಪಾಟೀಲನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ಆತನನ್ನು ನಿರ್ದೋಷಿಯನ್ನಾಗಿಸಿದ್ದು, ವಿಜಯಪುರದ ರಾಣಿಬಗೀಚದಲ್ಲಿ (ಇಂದಿನ ಅಂಬೇಡ್ಕರ್ ಕ್ರೀಡಾಂಗಣ) ಅಸ್ಕೃಶ್ಯರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದು, ಮರುದಿನ ಇಂಡಿ ತಾಲ್ಲೂಕಿನ ಬರಡೋಲ ಗ್ರಾಮದಲ್ಲಿ ಅಸ್ಪೃಶ್ಯರ ಸಭೆಯಲ್ಲಿ ಭಾಗವಹಿಸಿದ್ದು ಈಗ ಇತಿಹಾಸ. 1954ರ ಜುಲೈ 12ರಂದು ಕೋಲಾರದ ಕೆ.ಜಿ.ಎಫ್.ಗೆ ಭೇಟಿಕೊಟ್ಟು ಬುದ್ಧನ ಹೆಸರಿನ ಶಾಲೆ ಉದ್ಘಾಟಿಸಿದ್ದು ಮತ್ತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಕೋಲಾರದ ಟಿ. ಚೆನ್ನಯ್ಯ ಅವರನ್ನು ಭೇಟಿ ಮಾಡಿದ್ದು ಸ್ಮರಣಾರ್ಹ. ಮೈಸೂರು ಸಂಸ್ಥಾನದ ಅರಸ ಜಯಚಾಮರಾಜ ಒಡೆಯರ್ ಅವರು 1954ರ ನವೆಂಬರ್‌ನಲ್ಲಿ ಬೆಂಗಳೂರಿನ ರಾಜಮಹಲ್ (ಇಂದಿನ ಸದಾಶಿವನಗರ)ನಲ್ಲಿದ್ದ ತಮ್ಮ ಐದು ಎಕರೆ ಭೂಮಿಯನ್ನು ಅಂಬೇಡ್ಕರ್ ಅವರಿಗೆ ದಾನ ನೀಡಿದ್ದು ಮಹತ್ವದ ಘಟನೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣವು ಅಂಬೇಡ್ಕರ್ ಬಂದು ಹೋದ ನೆನಪಿನ ಸಂಕೇತವಾದರೆ; ವಾಡಿಗೆ ಸಮೀಪವಿರುವ ಕನಗನಹಳ್ಳಿಯ ಸನ್ನತಿಯು ಅಶೋಕನ ಕಾಲದ ಐತಿಹಾಸಿಕ ಬೌದ್ಧ ಕೇಂದ್ರವಾಗಿದೆ. ಅಂಬೇಡ್ಕರ್ ವಾಡಿ ಪಟ್ಟಣಕ್ಕೆ 1945ರ ಏಪ್ರಿಲ್ 28 ಹಾಗೂ 1952ರ ಏಪ್ರಿಲ್ 27ರಂದು ಭೇಟಿ ಕೊಟ್ಟ ಕ್ಷಣವನ್ನು ಚಿರಸ್ಥಾಯಿಗೊಳಿಸಲು ಇಲ್ಲಿನ ದಲಿತರು ಕಳೆದ 74 ವರ್ಷಗಳಿಂದ ಈ ಎರಡು ದಿನಗಳಂದೇ ಅಂಬೇಡ್ಕರ್ ಜಯಂತಿ ಆಚರಿಸಿಕೊಂಡು ಬರುತ್ತಿದ್ದು, ಈ ಏಪ್ರಿಲ್‍ಗೆ 75ನೇ ಜಯಂತಿಯಾಗಿದೆ.

1945ರ ಏಪ್ರಿಲ್ 28ರಂದು ಹೈದರಾಬಾದ್‍ನ ನಿಜಾಮನ ಆಹ್ವಾನದ ಮೇರೆಗೆ ವಾಡಿ ಮಾರ್ಗವಾಗಿ ಅಂಬೇಡ್ಕರ್ ಅವರು ಪಿ.ವಿ. ಮನೋಹರ ಮತ್ತು ಯಶವಂತರಾವ ಅಟೊಲೆ ಅವರೊಟ್ಟಿಗೆ ಮುಂಬೈ-ಚೆನ್ನೈ ಮೈಲ್ ಎಕ್ಸ್‌ಪ್ರೆಸ್ ರೈಲು ಮೂಲಕ ಹೈದರಾಬಾದ್‍ಗೆ ಹೋಗುತ್ತಿದ್ದ ವಿಷಯ, ವಾಡಿ ರೈಲು ನಿಲ್ದಾಣದಲ್ಲಿನ ಟೀ ವ್ಯಾಪಾರಿ ದಿಲ್‍ದಾರ ಹುಸೇನ್ ಅವರಿಗೆ ಗೊತ್ತಾಯಿತು. ಅವರು ಈ ವಿಷಯವನ್ನು ದಲಿತ ಮುಖಂಡರಾದ ಅಮೃತರಾವ ಕೋಮಟೆ ಹಾಗೂ ಗ್ಯಾನೋಬಾ ಗಾಯಕವಾಡರಿಗೆ ತಿಳಿಸುತ್ತಾರೆ. ತಮ್ಮನ್ನು ಭೇಟಿ ಮಾಡಿದ ಅಮೃತರಾವ ಕೋಮಟೆ, ಗ್ಯಾನೋಬಾ ಗಾಯಕವಾಡರಿಗೆ ಅಂಬೇಡ್ಕರ್ ಅವರು, ರೈಲು ನಿಲ್ದಾಣದ ಪಕ್ಕದಲ್ಲಿದ್ದ ವಿಶ್ರಾಂತಿ ಗೃಹಕ್ಕೆ ಬರಲು ಹೇಳುತ್ತಾರೆ.

ಅಲ್ಲಿಗೆ ಬಂದ ಸಮುದಾಯದವರೊಟ್ಟಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ ಅಂಬೇಡ್ಕರ್, ಮಕ್ಕಳ ಶಿಕ್ಷಣ, ಸಮುದಾಯದ ಸಂಘಟನೆ, ಹೋರಾಟದ ಮಹತ್ವ ಹಾಗೂ ಮೌಢ್ಯಗಳಿಂದ ದೂರ ಇರಬೇಕಾದ ವಿಚಾರಗಳನ್ನು ಕುರಿತು ಚರ್ಚಿಸುತ್ತಾರೆ. ಹೈದರಾಬಾದ್‍ನಲ್ಲಿ ನಡೆಯುವ ಶೋಷಿತರ ಅಧಿವೇಶನಕ್ಕೆ ಬರುವಂತೆ ಬಾಬಾಸಾಹೇಬರು ನೀಡಿದ ಆಹ್ವಾನದ ಮೇರೆಗೆ ಮುಖಂಡರಾದ ಗ್ಯಾನೋಬಾ ಗಾಯಕವಾಡ, ಅಮೃತರಾವ ಕೋಮಟೆ, ಶಿವರಾಮ ಮೋಘ, ಅಣ್ಣಾರಾವ ಹುಗ್ಗೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆ.

ಅಂಬೇಡ್ಕರ್ 1952ರ ಏಪ್ರಿಲ್ 27ರಂದು ಭಾಷಾವಾರು ಪ್ರಾಂತ್ಯ ವಿಂಗಡಣೆಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‍ಗೆ ಹೋಗುವ ಸಂದರ್ಭದಲ್ಲಿ; ಇದೇ ವಾಡಿ ರೈಲು ನಿಲ್ದಾಣದಲ್ಲಿ ದಲಿತ ಮುಖಂಡರಾದ ಅಮೃತರಾವ ಕೋಮಟೆ, ಗ್ಯಾನೋಬಾ ಉಮಾಜಿ ಗಾಯಕವಾಡ, ಬಸಪ್ಪ ಬಟ್ಟರ್ಕಿ, ಚನ್ನಬಸಪ್ಪ ಜೇವರಗಿ, ರೇವಣಪ್ಪ ಕಾಂಬಳೆ, ತುಳಸಿರಾಮ ಕೋಮಟೆ, ಮೌಲಪ್ಪ ಮೋಸಲಗಿ, ರುಕ್ಕಪ್ಪ ಚಂಡರಕಿ, ಮರೇಪ್ಪ ಹಲಕರ್ಟಿ ಮುಂತಾದವರು ಅವರನ್ನು ಭೇಟಿ ಮಾಡಿ ಅವರೊಟ್ಟಿಗೆ ಛಾಯಾಚಿತ್ರವನ್ನು ತೆಗೆಸಿಕೊಳ್ಳುತ್ತಾರೆ. ಅಂಬೇಡ್ಕರರಿಂದ ಪ್ರಭಾವಿತರಾದ ಅಮೃತರಾವ ಕೋಮಟೆ ಹಾಗೂ ಅಣ್ಣಾರಾವ ಹುಗ್ಗೆ ಅವರು 1956ರ ಅಕ್ಟೋಬರ್ 14ರಂದು ನಾಗಪುರದ ಬೌದ್ಧಧಮ್ಮ ದೀಕ್ಷಾ ಸಮಾರಂಭಕ್ಕೆ ಹೋಗಿ ತಾವು ದೀಕ್ಷೆ ಪಡೆದುಕೊಂಡು ಬರುತ್ತಾರೆ. ಅದರ ಬೆನ್ನಲ್ಲೇ ಹಿಂದೂ ದೇವರನ್ನು ಯಾರೂ ಪೂಜಿಸಬಾರದೆಂದು ತಮ್ಮ ಬಡಾವಣೆಯ ದೇವಾಲಯಗಳಿಗೆ ಬೀಗ ಹಾಕುತ್ತಾರೆ.

ಹೀಗೆ ಅಂಬೇಡ್ಕರ್ ಅವರು ಬಂದು ಹೋಗಿರುವ ಸ್ಥಳದಲ್ಲಿ ಸಾಕ್ಷಿಪ್ರಜ್ಞೆಯಾಗಿ ಅಂಬೇಡ್ಕರ್ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು