ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಗುರುತಿಸಿದ ರೋಗ ಮತ್ತು ಚಿಕಿತ್ಸೆ

Last Updated 23 ಮೇ 2020, 19:30 IST
ಅಕ್ಷರ ಗಾತ್ರ

ಅಂಬೇಡ್ಕರ್ ಚಿಂತನೆಯಲ್ಲಿ ರೋಗ, ರೋಗಗ್ರಸ್ತ, ಚಿಕಿತ್ಸೆ ಮುಂತಾದ ವೈದ್ಯಕೀಯ ಪರಿಭಾಷೆಗಳು ಪ್ರಸ್ತಾಪವಾಗುತ್ತವೆ. ದೈಹಿಕ, ಮಾನಸಿಕ ಸ್ಥಿತಿಯಲ್ಲಿನ ಅಸಹಜತೆಯನ್ನು ಗುರುತಿಸುವ ಸಂಸ್ಕೃತದ ‘ರೋಗ’ ಪದ ಕನ್ನಡದಲ್ಲಿ ರುಗ್ಣಶಯ್ಯೆ. ಅಂಬೇಡ್ಕರ್ ವೈದ್ಯಕೀಯ ಪರಿಭಾಷೆಯಲ್ಲಿ ಡಾಕ್ಟರ್ ಅಲ್ಲ; ಡಾಕ್ಟರ್ ಆಫ್ ಫಿಲಾಸಫಿಯ ಪದವಿ ಪಡೆದವರು ಅವರು. ಆದರೆ ‘ಡಾಕ್ಟರ್’ ಪದಕ್ಕೆ ಪದವಿಯ ಸಂಕೇತ ಮೀರಿದ ‘ಚಿಕಿತ್ಸಕ’ ಎಂಬ ಅರ್ಥವಂತಿಕೆಯನ್ನು ಅಂಬೇಡ್ಕರ್ ದೊರಕಿಸಿಕೊಟ್ಟರು. ಅದೆಂದರೆ ರೋಗಗ್ರಸ್ಥ ಭಾರತಕ್ಕೆ ಸಾಮಾಜಿಕ ಡಾಕ್ಟರ್ ಆದರು.

‘ರೋಗ’ ಎನ್ನುವ ಪದವನ್ನು ಅಂಬೇಡ್ಕರ್ ಎರಡು ನೆಲೆಗಳಲ್ಲಿ ಬಳಸುತ್ತಾರೆ. ಒಂದು: ದೇಶ ಮತ್ತು ಸಮಾಜಕ್ಕೆ ಅಂಟಿದ ರೋಗಗಳನ್ನು ಗುರುತಿಸಿ, ದೇಶ ಮತ್ತು ಸಮಾಜದ ಆರೋಗ್ಯಕ್ಕೆ ಔಷಧಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಮತ್ತೊಂದು: ವ್ಯಕ್ತಿಗಳ ದೇಹ ಮತ್ತು ಮನಸ್ಸಿನ ಆರೋಗ್ಯ ವ್ಯತ್ಯಯಕ್ಕೆ ಕಾರಣವಾದ ರೋಗಾಣುಗಳನ್ನು ನಿಯಂತ್ರಿಸಲು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಸರ್ಕಾರದ ಕರ್ತವ್ಯಗಳನ್ನು ನಿರ್ದೇಶಿಸಿದರು. ಒಂದೆಡೆ ರೋಗದ ಗುಣಲಕ್ಷಣಗಳನ್ನು ಸಾಮಾಜಿಕ ಸಂಗತಿಗಳಿಗೆ ರೂಪಕವಾಗಿ ಬಳಸಿದರೆ, ಮತ್ತೊಂದೆಡೆ ರೋಗದ ನಿಯಂತ್ರಣದ ಬಗ್ಗೆ ಅಂತಃಕರಣದ ಕಾಳಜಿ ತೋರಿದರು.

ಇಂದಿನ ಕೊರೊನಾ ಪೀಡಿತರು ಇತರರಿಗೆ ರೋಗ ಹರಡದಂತೆ ಕ್ವಾರಂಟೈನ್ ಮಾಡಲಾಗುತ್ತಿದೆ. ಅಂಬೇಡ್ಕರ್ ಕ್ವಾರಂಟೈನ್ ಬಗ್ಗೆಯೂ ಚರ್ಚಿಸಿದ್ದಾರೆ. ‘ಹಿಂದೂ ಧರ್ಮ ಒಂದು ಮಹಾರೋಗ. ಈ ರೋಗ ಹಿಂದೂಗಳಿಗೆ ತಗುಲಿದೆ ವಿನಾ ನಮಗಲ್ಲ. ಆ ರೋಗದ ಸೋಂಕು ನಮ್ಮನ್ನು ಬಾಧಿಸುತ್ತಿದೆ. ರೋಗದ ಸೋಂಕು ತಗುಲಿದ ವ್ಯಕ್ತಿಯನ್ನು ಯಾವ ರೀತಿ ಪ್ರತ್ಯೇಕವಾಗಿ (ಕ್ವಾರಂಟೈನಲ್ಲಿ) ಇರಿಸಬೇಕೋ ಅದೇ ರೀತಿ ಹಿಂದೂಗಳಿಂದ ನಾವು ದೂರ ಆಗಬೇಕಿದೆ. ರೋಗ ತಗುಲಿರುವುದು ಹಿಂದೂಗಳಿಗೆ ವಿನಾ ನಮಗಲ್ಲ. ನಾವು ಅಸ್ಪೃಶ್ಯರು ಯಾವ ಪಾಪವನ್ನೂ ಮಾಡಿಲ್ಲ. ಪಾಪ ಮಾಡಿದ್ದು ಈ ಸ್ಪೃಶ್ಯರು. ಅದರ ಫಲ ಮಾತ್ರ ನಾವು ಅನುಭವಿಸಬೇಕಾಗಿರುವುದರಿಂದ ನಾವೇ ಅವರಿಂದ ದೂರ ಆಗಬೇಕಿದೆ’ (ಸಂಪುಟ:19,ಪುಟ:390) ಎನ್ನುತ್ತಾರೆ.

‘ಹಿಂದೂ ಧರ್ಮದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಉಳಿದಿರುವ ಏಕೈಕ ಉಪಾಯ ಧರ್ಮಾಂತರ. ಬೌದ್ಧ ಧರ್ಮ ಒಂದು ಚಿಕಿತ್ಸಕ ಧರ್ಮ. ಮನುಷ್ಯನ ರೋಗ ರುಜಿನಗಳಿಗೆ ನೀಡಿದಂತಹ ಔಷಧವಾಗಿದೆ. ಬುದ್ಧನು ಪ್ರಥಮವಾಗಿ ಮಾನವ ಜಾತಿಯ ರೋಗವನ್ನು ವಾಸಿ ಮಾಡಿದನು. ಜಗತ್ತಿನಲ್ಲಿ ದುಃಖ ಮತ್ತು ದಾರಿದ್ರ್ಯ ಮಹಾಭಯಂಕರ ರೋಗಗಳಾಗಿವೆ ಎಂದನು. ಹಾಗಾಗಿ ಹಿಂದೂ ಧರ್ಮದ ಜಾತೀಯತೆಯ ಅಸ್ಪೃಶ್ಯತೆಯ ಸಾಂಕ್ರಾಮಿಕ ರೋಗಕ್ಕೆ ಬೌದ್ಧ ಧರ್ಮವೆ ಮದ್ದು’ ಎಂದಿದ್ದಾರೆ ಅಂಬೇಡ್ಕರ್‌.

ಅಂಬೇಡ್ಕರರು ಹೀಗೆ ಇಡೀ ದೇಶದ ರೋಗವನ್ನು ಗುರುತಿಸಿ, ಅದಕ್ಕೆ ಚಿಕಿತ್ಸೆಯನ್ನು ಸೂಚಿಸುತ್ತಲೇ, ಅವರೊಬ್ಬ ಸಂವಿಧಾನ ರಚನಕಾರರಾಗಿ ಜನಸಾಮಾನ್ಯರ ಶಾರೀರಿಕ ಆರೋಗ್ಯದ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸುತ್ತಿದ್ದರು. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿಯೇ ‘ಪ್ರಜೆಗಳ ಜೀವನ ಮಟ್ಟವನ್ನು ಹೆಚ್ಚಿಸಿ ಸಾರ್ವಜನಿಕ ಆರೋಗ್ಯವನ್ನು ವೃದ್ಧಿಸುವುದು ಆಳುವವರ ಕರ್ತವ್ಯ’ ಎನ್ನುವುದನ್ನು ಸೇರಿಸುತ್ತಾರೆ. ಅಂತೆಯೇ ಮನುಷ್ಯ, ಪ್ರಾಣಿ, ಸಸ್ಯರಾಶಿಗಳಿಗೆ ಅಂಟಿಕೊಳ್ಳುವ ಸಾಂಕ್ರಾಮಿಕ ರೋಗಗಳನ್ನು ರಾಜ್ಯದಿಂದ ರಾಜ್ಯಕ್ಕೆ ಹಬ್ಬದಂತೆ ಮಾಡುವ ಜವಾಬ್ದಾರಿಗಳನ್ನು ಕೇಂದ್ರ ಮತ್ತು ರಾಜ್ಯದ ಸಮವರ್ತಿ ಪಟ್ಟಿಯಲ್ಲಿ ಸೇರಿಸುತ್ತಾರೆ. ಆರೋಗ್ಯ ವಿಮೆಯ ಬಗೆಗೂ, ಕಾರ್ಮಿಕರ, ಮಹಿಳೆ ಮತ್ತು ಮಕ್ಕಳ ಆರೋಗ್ಯದ ಬಗೆಗೂ, ಮಲೇರಿಯಾ, ಕುಷ್ಠರೋಗದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗೆಗೂ ಕಲಾಪಗಳಲ್ಲಿ ಸರ್ಕಾರಕ್ಕೆ ವೈಜ್ಞಾನಿಕ ಮಾರ್ಗದರ್ಶನ ಮಾಡುತ್ತಾರೆ.

ಅಂಬೇಡ್ಕರರು ಜನಸಾಮಾನ್ಯರ ಆರೋಗ್ಯದ ಸಣ್ಣಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಜನಸಾಮಾನ್ಯರು ಸೀಮೆಎಣ್ಣೆ ದೀಪ ಹಚ್ಚುತ್ತಾರೆ. ಅದರ ಹೊಗೆ ಆರೋಗ್ಯಕ್ಕೆ ಹಾನಿಕರ. ಸಾಧ್ಯವಾದಷ್ಟರಮಟ್ಟಿಗೆ ವಿದ್ಯುತ್ತಿನ ಬೆಲೆ ತಗ್ಗಿಸಿದರೆ, ಜನರು ಸೀಮೆಎಣ್ಣೆ ಬಳಕೆಯನ್ನು ಕಡಿಮೆ ಮಾಡಿ, ಅದರ ಹೊಗೆಯಿಂದ ಹರಡಬಹುದಾದ ರೋಗದಿಂದಲೂ ಮುಕ್ತರಾಗುತ್ತಾರೆ ಎಂದು ಕಲಾಪದಲ್ಲಿ ಚರ್ಚಿಸಿತ್ತಾರೆ.

ಇವತ್ತು ನಮ್ಮಲ್ಲಿ ಕೆಲವರು ಕೊರೊನಾ ವೈರಾಣುವನ್ನು ಮತೀಯವಾಗಿ ನೋಡುವ ಮನಃಸ್ಥಿತಿ ಪ್ರಕಟಿಸುತ್ತಿದ್ದಾರೆ. ಇಲ್ಲಿ ಅಂಬೇಡ್ಕರರು ಉಲ್ಲೇಖಿಸಿದ ಮುಂಬೈನ ಒಂದು ಘಟನೆ ನೆನಪಾಗುತ್ತದೆ. ಒಂದು ಹಳ್ಳಿಯಲ್ಲಿ ಭಂಗಿಯೊಬ್ಬ ಮಾರಕ ರೋಗವೊಂದನ್ನು ತಂದಿದ್ದಾನೆಂದು ಭಾವಿಸಿದ ಹಿಂದುಗಳು, ರೋಗ ಊರಿಗೆ ಹರಡದಿರಲೆಂದು ತಲೆಮೇಲೆ ಉರಿವ ಬೆಂಕಿಯ ಮಡಕೆಯ ಹೊರಿಸಿ ಊರು ಸುತ್ತಿಸುತ್ತಾರೆ. ತಲೆಗೆ ಸುತ್ತಿದ ಮುಂಡಾಸಿಗೆ ಬೆಂಕಿ ಹೊತ್ತಿ ಅವನ ತಲೆಬುರುಡೆ ಬೇಯುತ್ತದೆ. ಊರನ್ನು ಸ್ವಚ್ಚ ಮಾಡುವ ಭಂಗಿಗಳು ಮನಸ್ಸು ಮಾಡಿದರೆ ಊರಿಗೆ ರೋಗ ಹರಡಿ ಊರನ್ನೇ ನಾಶಮಾಡಬಹುದು ಎಂಬುದು ಹಿಂದುಗಳಿಗೆ ತಿಳಿದಿಲ್ಲ ಎಂದು ಅಂಬೇಡ್ಕರ್‌ ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ಕೊನೆಕೊನೆಗೆ ಅಂಬೇಡ್ಕರರು ವಿಪರೀತ ಅನಾರೋಗ್ಯವಿದ್ದಾಗಲೂ ಸಮುದಾಯದ ಜಾಗೃತಿಗಾಗಿ ಸುತ್ತಾಡುತ್ತಲೇ, ‘ನನ್ನ ಆರೋಗ್ಯವು ಸುಧಾರಿಸುತ್ತಲೇ ಸಾಗುವಳಿ ಮಾಡದೆ ಹಾಳುಬಿದ್ದಿರುವ ಭೂಮಿಯನ್ನು ಅಸ್ಪೃಶ್ಯರು ತಮ್ಮ ವಶಕ್ಕೆ ತೆಗೆದುಕೊಳ್ಳುವ ಚಳವಳಿಯನ್ನು ಮುನ್ನಡೆಸುವವನಿದ್ದೇನೆ’ ಎಂದೂ ತನ್ನವರಲ್ಲಿ ಹೋರಾಟದ ಕಿಚ್ಚನ್ನು ಹೊತ್ತಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT