ಶುಕ್ರವಾರ, ಅಕ್ಟೋಬರ್ 23, 2020
22 °C

‘ಸಂಪಾದನೆ’ಗೆ ಗ್ರಂಥ ಮಾರ್ಗ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ಪುಸ್ತಕ ಸಂಸ್ಕೃತಿಯ ಬಿತ್ತನೆ, ಅಕ್ಷರದಾಸೋಹದಂತಹ ಆಪ್ತ ಪದಗಳೊಂದಿಗೆ ಕನ್ನಡ–ಕನ್ನಡತನ ಬೆಳೆಸುವ ಬಗೆಯನ್ನು ಕನ್ನಡದ ಮನಸ್ಸುಗಳು ಧ್ಯಾನಿಸುತ್ತಾ, ತಮ್ಮ ಪಾಡಿಗೆ ತಾವು ತೊಡಗಿಕೊಂಡಿವೆ. ಈ ಹೊತ್ತಿನೊಳಗೆ ‘ಪ್ರಕಾಶನ’ ಎಂಬ ವ್ಯಾವಹಾರಿಕ ಲೋಕದೊಳಗೆ ನುಸುಳಿರುವ ಕೆಲವು ಧನದಾಹಿಗಳು ಇದನ್ನು ಹಣ ಸಂಪಾದನೆಯ ಮಾರ್ಗ ಮಾಡಿಕೊಂಡಿದ್ದಾರೆ.

ನೆಟ್ಟಗೆ ವಾಕ್ಯ ಬರೆಯಲು ಬಾರದವರು ಲೇಖಕರಾಗಿದ್ದಾರೆ. ಅಧ್ಯಯನವೇ ಇಲ್ಲದವರು ಉದ್ದಾಮ ಪಂಡಿತರಾಗಿದ್ದಾರೆ. ಗ್ರಂಥಾಲಯ ಇಲಾಖೆಗೆ ಪೂರೈಕೆ ಮಾಡಲು ಪುಸ್ತಕ ಸಿದ್ಧಪಡಿಸಿ ‘ದೊಡ್ಡ’ ಪ್ರಕಾಶಕರಾಗಿ ಬಿಟ್ಟಿದ್ದಾರೆ. ಇಲಾಖೆಯೊಳಗೆ ಇರುವ ಕೆಲವು ದುರಾಸೆಯ ಅಧಿಕಾರಿಗಳು ಇವರೆಲ್ಲರಿಗೆ ಆಶ್ರಯದಾತರು. ಅದೆಷ್ಟೇ ಸತ್ವಶಾಲಿ ಲೇಖಕನ, ಅದೆಂತಹದೇ ಅದ್ಭುತ ಪುಸ್ತಕ ಹೊರತಂದರೂ ಗ್ರಂಥಾಲಯ ಅಥವಾ ಬೇರೆ ಇಲಾಖೆಗಳು ಖರೀದಿಸುವ ‘ಸಗಟು’ ಖರೀದಿಯ ಪಟ್ಟಿಯಲ್ಲಿ ಇರಬೇಕೆಂದರೆ ಖರೀದಿ ಮೊತ್ತದ ಶೇಕಡ 20ರಷ್ಟು ಮೊತ್ತವನ್ನು ಲಂಚದ ರೂಪದಲ್ಲಿ ನೀಡಲೇಬೇಕಾಗುತ್ತದೆ. ಬೆಂಗಳೂರಿನ ಐದು ವಲಯಗಳಲ್ಲಿ ಈ ಮೊತ್ತ ಶೇಕಡ 40ರವರೆಗೂ ಇದೆ.

ಕರ್ನಾಟಕದಲ್ಲಿ ಐದುನೂರು ಪ್ರಕಾಶಕರಿದ್ದು, ವರ್ಷಕ್ಕೆ ಸರಿಸುಮಾರು ಏಳು ಸಾವಿರದಿಂದ 7,500 ಪುಸ್ತಕಗಳು ಪ್ರಕಟವಾಗುತ್ತವೆ. ಅದರಲ್ಲಿ ಓದುಗರ ನೇರ ಖರೀದಿಯನ್ನೇ ನೆಚ್ಚಿಕೊಂಡು ಹೊರಬರುತ್ತಿರುವ ಪುಸ್ತಕಗಳ ಸಂಖ್ಯೆ ಅಂದಾಜು ಒಂದು ಸಾವಿರ. ಆದರೆ, ಗ್ರಂಥಾಲಯ, ಶಿಕ್ಷಣ ಇಲಾಖೆ, ಪುಸ್ತಕ ಪ್ರಾಧಿಕಾರ, ಕಾಲೇಜು, ಸಮಾಜ ಕಲ್ಯಾಣ ಇಲಾಖೆ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಸಗಟು (ಒಗಟು) ಖರೀದಿಗೆ ಆಯ್ಕೆಯಾಗುವುದು 4,500 ಶೀರ್ಷಿಕೆಗಳು ಎಂದು ವಿವರಿಸುತ್ತಾರೆ ಪ್ರಕಾಶಕರು.

ವ್ಯಾಪಾರ ಒಳಹೊರಗು: ಪುಸ್ತಕೋದ್ಯಮ ಮಾಡಿದವರು ತಮ್ಮ ವ್ಯವಹಾರಕ್ಕೆ ಅನೇಕ ಅಡ್ಡಹಾದಿಗಳನ್ನು ಕಂಡುಕೊಂಡರು. ಹಾಗಂತ ಉದ್ಯಮವಾಗುವುದು ತಪ್ಪಲ್ಲ. ಪ್ರಕಾಶಕರು ಹಾಕಿದ ಬಂಡವಾಳ ವಾಪಸ್ ಬರಬೇಕು, ಸಂಸ್ಥೆ ನಂಬಿಕೊಂಡವರು ಬದುಕುವಷ್ಟರ ಮಟ್ಟಿಗೆ ಲಾಭವೂ ಇರಬೇಕು. ಅದಕ್ಕೆ ಯಾರ ತಕರಾರೂ ಇರಲಿಕ್ಕಿಲ್ಲ. ಆದರೆ, ಇಲ್ಲಿ ಆಗಿರುವುದು ಅದಲ್ಲ.

ಅದರ ನಾನಾರೂಪಗಳನ್ನು ಪ್ರಕಾಶಕರೇ ತೆರೆದಿಡುತ್ತಾರೆ. ಗ್ರಂಥಾಲಯ ಇಲಾಖೆ ಒಂದು ಶೀರ್ಷಿಕೆಯ 300 ಪುಸ್ತಕಗಳನ್ನು ಖರೀದಿ ಮಾಡುತ್ತದೆ. ಆದರೆ, ಇದನ್ನು ಆಯ್ಕೆ ಮಾಡಲು  ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸುತ್ತದೆ. ಈ ಸಮಿತಿ ಆಯ್ಕೆ ಮಾಡುವ ಪುಸ್ತಕಗಳನ್ನೇ ಬಹುತೇಕವಾಗಿ ಸಗಟು ಖರೀದಿ (ಕನ್ನಡ ಪುಸ್ತಕ ಪ್ರಾಧಿಕಾರ ಬಿಟ್ಟು) ಮಾಡುವುದರಿಂದ ಇಲ್ಲಿ ನಡೆಯುವ ಲಾಬಿಯೇ ದೊಡ್ಡಮಟ್ಟದ್ದಾಗಿದೆ. 

ಆಯ್ಕೆ ಸಮಿತಿ ಮುಂದೆ ಪುಸ್ತಕ ಸಲ್ಲಿಸುವಾಗ 70 ಜಿಎಸ್ಎಂ ಗುಣಮಟ್ಟದ ಮುದ್ರಣ ಕಾಗದ ಬಳಸಿ ನಾಲ್ಕೈದು ಪುಸ್ತಕಗಳನ್ನಷ್ಟೇ ಮುದ್ರಿಸಿ ಕೊಡುತ್ತಾರೆ. ಈ ಗುಣಮಟ್ಟದ ಪುಸ್ತಕದ ಪ್ರತೀ ಹಾಳೆಗೆ ಗರಿಷ್ಠ 70 ಪೈಸೆವರೆಗೆ ಲೆಕ್ಕ ಹಾಕಿ ಮುಖಬೆಲೆ ನಿಗದಿ ಮಾಡಲು ಅವಕಾಶ ಇದೆ. ಈ ಮುದ್ರಣ ಕಾಗದದ ಒಂದು ರಿಮ್‌ಗೆ ₹1,450 ಬೆಲೆ ಇದೆ. ಆಯ್ಕೆ ಸಮಿತಿ ಸಭೆ ನಡೆದು ಪುಸ್ತಕ ಆಯ್ಕೆಯಾಗುವುದು ಸಾಮಾನ್ಯವಾಗಿ ಒಂದು ವರ್ಷ ತೆಗೆದುಕೊಳ್ಳುತ್ತದೆ. ಅಷ್ಟರವರೆಗೆ ಹೂಡಿಕೆ ಮಾಡಲು ಪ್ರಕಾಶಕರು ಹೋಗುವುದೇ ಇಲ್ಲ. ಆಯ್ಕೆ ಸಮಿತಿ ಒಪ್ಪಿಗೆ ಪಡೆದು, ಖರೀದಿಯ ಕಾರ್ಯಾದೇಶ ಸಿಕ್ಕಿದ ಬಳಿಕ ಮುದ್ರಣದ ಕೆಲಸಕ್ಕೆ ಕೈ ಹಾಕುವ ಪ್ರಕಾಶಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಯಾವ ಗುಣಮಟ್ಟದ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ ಎಂದು ಪರೀಕ್ಷಿಸುವ ಪದ್ಧತಿ ಇಲ್ಲದೇ ಇರುವುದರಿಂದ 70 ಜಿಎಸ್‌ಎಂ ಬದಲು, ₹650ರಲ್ಲಿ ಒಂದು ರಿಮ್ ಸಿಗುವ ಕಡಿಮೆ ಗುಣಮಟ್ಟದ ಕಾಗದವನ್ನು ಬಳಸಿ ಮುದ್ರಿಸಲಾಗುತ್ತದೆ. ಇಂತಹ ಪ್ರಕಾಶಕರ ಪೈಕಿ ಕೆಲವರು ಶೋಕೇಸ್‌ನಲ್ಲಿಟ್ಟು ಮಾರಾಟ ಮಾಡಲು ಕೆಲವು ‘ಮೌಲ್ಯ’ಯುತ ಪುಸ್ತಕಗಳನ್ನು ಮುದ್ರಿಸುತ್ತಾರೆ. ಗ್ರಂಥಾಲಯ ಅಥವಾ ಇಲಾಖೆಗಳ ಖರೀದಿಗೆ ಬೇರೆ ಶೀರ್ಷಿಕೆಗಳನ್ನು ಮುದ್ರಿಸಿ ಪೂರೈಸುತ್ತಾರೆ. 

ಗ್ರಂಥಾಲಯಕ್ಕಾಗಿಯೇ ಪುಸ್ತಕ ಮುದ್ರಿಸುವ ಪ್ರಕಾಶಕರು ಪುಸ್ತಕ ಪ್ರಾಧಿಕಾರಕ್ಕೆ ನೀಡುವುದಿಲ್ಲ. ಏಕೆಂದರೆ, ಅಲ್ಲಿ ನೈಜ ಪುಸ್ತಕ ಪತ್ತೆ ಹಚ್ಚಿ ಮೋಸ ಮಾಡುವವರನ್ನು ಕಪ್ಪುಪಟ್ಟಿಗೆ ಸೇರಿಸುವುದರಿಂದ ಅಲ್ಲಿ ಕೈ ಹಾಕಲು ಹೋಗುವುದೇ ಇಲ್ಲ. ಒಮ್ಮೆ ಈ ಉದ್ಯಮದ ರುಚಿಗೆ ಬಿದ್ದವರು ತಪ್ಪು ಮಾಡಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟರೂ ಮತ್ತೊಂದು ಪ್ರಕಾಶನದ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ ಹೊಸ ಪುಸ್ತಕ ತರುವುದು ಉಂಟು ಎಂದು ಈ ವ್ಯಾಪಾರ ಬಲ್ಲವರು ರಹಸ್ಯವನ್ನು ಬಿಚ್ಚಿಡುತ್ತಾರೆ. ಹೀಗೆ ಮಾಡಿ ಲಾಭ ಮಾಡಿಕೊಳ್ಳುವವರದ್ದು ಒಂದು ಗುಂಪು. 

ಇನ್ನೊಂದು ವಿಧ ಇದೆ: ಸಗಟು ಖರೀದಿಗಾಗಿ ಹಳೆಯ ಪುಸ್ತಕಗಳನ್ನೇ, ಹೊಸ ಪುಸ್ತಕದ ರೂಪದಲ್ಲಿ ಸಲ್ಲಿಸುವವರ ಗುಂ‍ಪಿದು. ರಕ್ಷಾಪುಟ, ಪ್ರಕಟಣೆಯ ವಿವರಗಳಿರುವ ಒಳಪುಟಗಳನ್ನು ಮಾತ್ರ ಬದಲಾವಣೆ ಮಾಡಿ ಪೂರೈಸುತ್ತಾರೆ. ‘ಕರ್ನಾಟಕದ ಮೇರು ಪರ್ವತಗಳು’ ಎಂಬ ಹೆಸರಿನಲ್ಲಿ ಒಂದು ಪುಸ್ತಕವನ್ನು ಆಯ್ಕೆ ಸಮಿತಿ ಮುಂದಿಟ್ಟು ಸರಬರಾಜು ಮಾಡಿದರೆ, ಮತ್ತೊಂದು ವರ್ಷ ‘ಕರ್ನಾಟಕದ ಮೇರು ಬೆಟ್ಟಗಳು’ ಎಂಬ ಶೀರ್ಷಿಕೆಯಡಿ ಅದೇ ಪುಸ್ತಕವನ್ನು ಆಯ್ಕೆ ಸಮಿತಿ ಮುಂದಿಡುವ ಪರಿಣತರು ಇದ್ದಾರೆ.  ಆಯ್ಕೆ ಸಮಿತಿಯು ಒಮ್ಮೆ ಪುಸ್ತಕವನ್ನು ತಿರಸ್ಕರಿಸಿದರೆ ಅದೇ ಕೊನೆಯಾಗದು. ₹ 3 ಸಾವಿರ ಕೊಟ್ಟರೆ ತಿರಸ್ಕೃತವಾದ ಕೃತಿ ಪುರಸ್ಕೃತವಾಗುವ ಸೌಲಭ್ಯವನ್ನೂ ಸಮಿತಿ ಕರುಣಿಸುತ್ತದೆ ಎನ್ನುತ್ತಾರೆ ಪ್ರಕಾಶಕರು.

ಇನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಮೊದಲು ಆಯಾ ಕಾಲೇಜುಗಳಿಗೆ ಪುಸ್ತಕ ಖರೀದಿಸುವ ಅಧಿಕಾರ ಇತ್ತು. ಇದನ್ನು ಇ–ಟೆಂಡರ್‌ ವ್ಯಾಪ್ತಿಯಡಿ ತರಲಾಗಿದೆ. ಕಾಲೇಜುಗಳಿಗೆ ಅಧಿಕಾರ ಇದ್ದಾಗ, ಪ್ರಿನ್ಸಿಪಾಲರು, ಆಯಾ ವಿಭಾಗದ ಮುಖ್ಯಸ್ಥರು ಪುಸ್ತಕದ ಅಂಗಡಿಗಳಿಗೆ ಬಂದು ಆಯ್ಕೆ ಮಾಡುತ್ತಿದ್ದರು. ಇದರಿಂದ ಬೆಂಗಳೂರು ಮಾತ್ರವಲ್ಲದೇ, ಮಂಗಳೂರು, ಮೈಸೂರು, ಶಿವಮೊಗ್ಗೆಯಂತಹ ಊರುಗಳಲ್ಲಿನ ಪುಸ್ತಕ ಮಾರಾಟಗಾರರಿಗೆ ಅವಕಾಶ ಸಿಗುತ್ತಿತ್ತು. ವಿಭಾಗದ ಮುಖ್ಯಸ್ಥರ  ಆಸಕ್ತಿಯನ್ನು ಆಧರಿಸಿ ಪುಸ್ತಕ ಖರೀದಿಸುವ ಅವಕಾಶವೂ ಇತ್ತು.

ಇ–ಟೆಂಡರ್ ಮುಖೇನ ಖರೀದಿಸುವುದರಿಂದಾಗಿ ಈ ಹಿಂದೆ ಇಷ್ಟು ಲಕ್ಷದ ಮೊತ್ತದ ಪುಸ್ತಕ ಪೂರೈಕೆ ಮಾಡಿದವರು, ಇ‌ಷ್ಟು ಕಾಲೇಜುಗಳಿಗೆ ಪೂರೈಕೆ ಮಾಡಿದವರು ಮಾತ್ರ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಷರತ್ತು ವಿಧಿಸಲಾಗುತ್ತಿದೆ. ರಾಜ್ಯದ ಒಂದೆರಡು ಉದ್ಯಮ ಸಂಸ್ಥೆಗಳಿಗೆ ಲಾಭ ಮಾಡಿಕೊಡುವುದರ ಜತೆಗೆ, ಆ ಪ್ರಕಾಶಕ/ಮಾರಾಟಗಾರರು ಪ್ರಕಟಿಸಿದ ಪುಸ್ತಕಗಳು ಮಾತ್ರ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲಾಗಿದೆ. ಕೆಲವು ಪ್ರಕಾಶನ ಸಂಸ್ಥೆಗಳ ವ್ಯವಸ್ಥಾಪಕರು ತಮ್ಮದೇ ಹೆಸರಿನಲ್ಲಿ ನೂರಾರು ಪುಸ್ತಕಗಳನ್ನು ಅಚ್ಚು ಹಾಕಿಸಿ ಪೂರೈಕೆ ಮಾಡಿದ ನಿದರ್ಶನಗಳು ಇವೆ ಎನ್ನುತ್ತಾರೆ ಪ್ರಕಾಶಕರೊಬ್ಬರು.

ಹೀಗೆ, ಪುಸ್ತಕೋದ್ಯಮ ಎಂಬುದು ಕೆಲವೇ ಹಿತಾಸಕ್ತಿಗಳ, ಬಹುತೇಕ ಸಾರಿ ಅಭಿರುಚಿ ಹೀನ ಪ್ರಕಾಶಕರ ಹಿಡಿತಕ್ಕೆ ಸಿಕ್ಕಿದೆ. ಹೀಗಾಗಿ, ಹೊಸ ತಲೆಮಾರಿನ ಲೇಖಕರನ್ನು ಪರಿಚಯಿಸಿ ಸಮುದಾಯದಲ್ಲಿ ಹೊಸ ಓದುಗರನ್ನು ಬೆಳೆಸುವ, ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಪುಸ್ತಕಗಳು ಗ್ರಂಥಾಲಯಗಳಿಗೆ ತಲುಪದಂತೆ ನೋಡಿಕೊಳ್ಳುವ ಜಾಲವೊಂದಿದ್ದು, ಅದನ್ನು ತುಂಡರಿಸಿದರೆ ಮಾತ್ರ ಪುಸ್ತಕ ಸಂಸ್ಕೃತಿ ಮತ್ತೆ ಜೀವ ಪಡೆಯಲು ಸಾಧ್ಯ. ಪುಸ್ತಕವನ್ನೇ ನಂಬಿದ ನೈಜ ಪ್ರಕಾಶಕರು ನಲುಗಿ ಹೋಗಿರುವ ಈ ಕಾಲದಲ್ಲಿ ಆ ನಿಟ್ಟಿನತ್ತ ಗ್ರಂಥಾಲಯ ಇಲಾಖೆ ಯೋಚಿಸಬೇಕಾದ ಕಾಲ ಇದಾಗಿದೆ.

ಎಷ್ಟೊಂದು ಖರೀದಿ...

ಓದುಗನನ್ನೇ ನೆಚ್ಚಿಕೊಂಡು ಪುಸ್ತಕ ಪ್ರಕಾಶನ ನಡೆಸುವುದು ಲಾಭದಾಯಕವಲ್ಲ. ಸರ್ಕಾರದ ನಾನಾ ಇಲಾಖೆಗಳ ಸಗಟು ಖರೀದಿಯೇ ಪ್ರಕಾಶನದ ಬೆನ್ನೆಲುಬು. ಗ್ರಂಥಾಲಯ ಇಲಾಖೆ (₹15 ಕೋಟಿ), ರಾಜಾರಾಮಮೋಹನರಾಯ್‌ ಪ್ರತಿಷ್ಠಾನ (₹10 ಕೋಟಿ), ಎಸ್‌ಸಿ‍ಪಿಟಿಎಸ್‌ಪಿ (₹5 ಕೋಟಿ), ಬೆಂಗಳೂರಿನ ಐದು ವಲಯಗಳಲ್ಲಿ (₹75 ಕೋಟಿ) ಪುಸ್ತಕಗಳನ್ನು ಖರೀದಿಸಲಾಗುತ್ತದೆ. ರಾಜ್ಯದಲ್ಲಿರುವ 557 ಗ್ರಂಥಾಲಯಗಳು, ಸಮಾಜ ಕಲ್ಯಾಣ ಇಲಾಖೆ, ಉನ್ನತ ಹಾಗೂ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆ, ಆಯಾ ಜಿಲ್ಲೆಯ ಗ್ರಂಥಾಲಯಗಳು ಪ್ರತ್ಯೇಕವಾಗಿ ಖರೀದಿ ಮಾಡುವುದು ಉಂಟು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು