ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಶಿಲ್ಪ ಸಂಸ್ಕೃತಿ ಗ್ರಾಮ: ‘ಮರುಸೃಷ್ಟಿ’ಯ ಗ್ರಾಮದಲ್ಲಿ...

Last Updated 11 ಜೂನ್ 2022, 19:30 IST
ಅಕ್ಷರ ಗಾತ್ರ

ಇದು ಮಣಿಪಾಲದಲ್ಲಿರುವ ಹಸ್ತಶಿಲ್ಪ ಸಂಸ್ಕೃತಿ ಗ್ರಾಮ (ಹಸ್ತಶಿಲ್ಪ ಹೆರಿಟೇಜ್ ವಿಲೇಜ್). ಇಂತಹ ಗ್ರಾಮವನ್ನು ನೀವು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ. ಒಳಹೊಕ್ಕರೆ ಸಾಕು, ಕಾಲ ಸರ‍್ರನೆ ಶತಮಾನಗಳಷ್ಟು ಹಿಂದಕ್ಕೆ ಸರಿಯುತ್ತದೆ. ಚರಿತ್ರೆಯ ಪುಟಗಳು ಇದ್ದಕ್ಕಿದ್ದಂತೆ ಜನ್ಮತಾಳಿ ಕಣ್ಮುಂದೆ ನಿಲ್ಲುತ್ತವೆ. ಆಗಿನ ಕಾಲದ ಸಂಸ್ಕೃತಿಯೂ ನಮ್ಮ ಮುಂದೆಯೇ ಮೆರವಣಿಗೆ ಹೊರಡುತ್ತದೆ. ಮಗಳ ಭೇಟಿಗಾಗಿ ಉಡುಪಿಗೆ ಹೋಗಿದ್ದಾಗ ನಾನು ಈ ಗ್ರಾಮದಲ್ಲಿ ಒಮ್ಮೆ ಸುತ್ತು ಹೊಡೆದೆ, ಸ್ನೇಹಿತರೊಂದಿಗೆ.

ಉಡುಪಿ ಎಂದರೆ ಶ್ರೀ ಕೃಷ್ಣನ ಸಾನಿಧ್ಯದ ತಾಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಉಡುಪಿ ಜಿಲ್ಲೆಯ ಮಣಿಪಾಲ ಎಂದ ತಕ್ಷಣ ನೆನಪಾಗುವುದು ಬ್ಯಾಂಕಿಂಗ್ ಕ್ಷೇತ್ರದ ಉಗಮಕ್ಕೆ ಕಾರಣವಾದ ನೆಲ, ವೈದ್ಯಕೀಯ, ತಾಂತ್ರಿಕ ಹಾಗೂ ಉನ್ನತ ಶಿಕ್ಷಣಗಳ ಸಂಸ್ಥೆಗಳ ತಾಣ ಎಂದೇ. ಇಂತಹ ನಗರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ವಿಜಯನಾಥ್‌ ಶೆಣೈ ಅವರ ಕನಸಿನ ಕೂಸು ಹಸ್ತಶಿಲ್ಪ ಸಂಸ್ಕೃತಿ ಗ್ರಾಮ. ತಮ್ಮ ಬಿಡುವಿನ ಸಮಯದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ, ಪುರಾತನ ವಸ್ತುಗಳನ್ನು ಸಂಗ್ರಹಿಸುವುದು ಇವರ ಹವ್ಯಾಸವಾಗಿತ್ತು. ಇವರು ಸಂಗ್ರಹಿಸುತ್ತಿದ್ದ ವಸ್ತುಗಳು, ಅದನ್ನಿಟ್ಟುಕೊಂಡು ವಾಸಿಸುತ್ತಿದ್ದ ಬಾಡಿಗೆ ಮನೆಯ ವಾತಾವರಣವು ನೆರೆಹೊರೆಯವರಿಗೆ ಗುಜರಿಯಂಗಡಿಯಂತೆ ಕಂಡುಬಂದರೂ, ಮುಂದೆ ಅದೇ ನೆರೆಹೊರೆಯವರು ಆಶ್ಚರ್ಯಪಡುವಂತೆ ಸಂಸ್ಕೃತಿ ಗ್ರಾಮ ಸೃಷ್ಟಿಯಾಯಿತು. ಕಂಬವೊಂದರಿಂದ ಆರಂಭವಾದ ಈ ಪಯಣ ಇಂದಿಗೆ ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ತಾಣವಾಗಿ ರೂಪಾಂತರ ಹೊಂದುವವರಿಗೆ ಮುಂದುವರಿದಿದೆ.

ಈಗಿನ ಕಾಲದ ಮನೆಗಳಿಗೆ ಹಳೆಯ ಕಾಲದ ಮನೆಗಳ ಸ್ಪರ್ಶ ನೀಡುವುದು ಫ್ಯಾಶನ್‌. ಆದರಿಲ್ಲಿ, ಆರು ಎಕರೆ ಪ್ರದೇಶದಲ್ಲಿ ಮೂರ್ನಾಲ್ಕು ಶತಮಾನದ ಹಿಂದಿನ ಮನೆಗಳು, ಮಹಲ್‌ಗಳು, ಮಠಗಳನ್ನು ಮರುಸೃಷ್ಟಿಸಲಾಗಿದೆ. ಈ ಗ್ರಾಮದಲ್ಲಿ 17 ಮನೆಗಳನ್ನು (ಪಾರಂಪರಿಕ ಕಟ್ಟಡಗಳು) ಮರುಸೃಷ್ಟಿಸಲಾಗಿದ್ದು, ಜೊತೆಗೆ 11 ವಸ್ತು ಸಂಗ್ರಹಾಲಯಗಳನ್ನು ನಿರ್ಮಿಸಲಾಗಿದೆ.

ಈ ಮರುಸೃಷ್ಟಿ ಸರಳವೂ ಅಲ್ಲ, ಅಗ್ಗವೂ ಆಗಿರಲಿಲ್ಲ. ಮೂಲ ಸ್ಥಳದ ಅವಶೇಷಗಳಿಂದ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಮಣಿಪಾಲಕ್ಕೆ ಸಾಗಿಸಿ, ಮರುನಿರ್ಮಾಣ ಮಾಡುವಲ್ಲಿ ಹಾಕಿದ ಪರಿಶ್ರಮ ಹಾಗೂ ವೆಚ್ಚ ಬಹಳಷ್ಟಾಗಿದೆ. ಕೇರಳ, ಕರ್ನಾಟಕದ ಮಲೆನಾಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಐತಿಹಾಸಿಕ ಹಾಗೂ ಪುರಾತನ ಕಾಲದ ಮನೆಗಳನ್ನು ಮತ್ತು 13ನೇ ಶತಮಾನದ ಹರಿಹರ ಮಂದಿರ ಹಾಗೂ ಜಂಗಮ ಮಠವನ್ನು ಇಲ್ಲಿ ಮರುನಿರ್ಮಾಣ ಮಾಡಲಾಗಿದೆ. ಈ ಅಪರೂಪದ ಕಲಾಕೃತಿಗಳನ್ನು, ಆ ಗತವೈಭವವನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಎಲ್ಲಾ ನಿರ್ಮಾಣಗಳು ಅದೇ ಕಾಲದ ಸಂಸ್ಕೃತಿಯನ್ನು ನೆನಪಿಸುವಂತಿವೆ.

ಡೆಕ್ಕನ್‌ ನವಾಬ್‌ ಮಹಲ್‌
ಡೆಕ್ಕನ್‌ ನವಾಬ್‌ ಮಹಲ್‌

ಗ್ರಾಮ ಪ್ರವೇಶಿಸಿದೊಡನೆ ಕಾಣಸಿಗುವುದು ‘ಮಿಯಾರು ಮನೆ’. ಇದು ಸುಮಾರು 165 ವರ್ಷಗಳ ಹಳೆಯದಾದ ಕಟ್ಟಡ. ಈ ಮನೆಯು ದಕ್ಷಿಣ ಕನ್ನಡದ ಬ್ರಾಹ್ಮಣರ ಪುರಾತನ ಮನೆಯ ಮರುನಿರ್ಮಾಣವಾಗಿದೆ. ಈ ಕಟ್ಟಡ ಆಡಳಿತ ಕಚೇರಿ, ಟಿಕೆಟ್ ಕೌಂಟರ್ ಹಾಗೂ ಸಂಸ್ಕೃತಿ ಗ್ರಾಮಕ್ಕೆ ಪ್ರವೇಶ ದ್ವಾರವಾಗಿದೆ. ಈ ಮನೆಯ ದ್ವಾರದ ಮೇಲೆ ಗಜಲಕ್ಷ್ಮಿಯ ವಿಶಿಷ್ಟ ಕಲಾಕೃತಿಯನ್ನು ಕೆತ್ತಲಾಗಿದೆ. ಎರಡನೆಯದು ‘ಶೃಂಗೇರಿ ಮನೆ’. ಇದೂ ಸಹಿತ 160 ವರ್ಷದ ಹಳೆಯ ಮನೆಯ ಮರು ನಿರ್ಮಾಣ. ಈ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯ ಅಡುಗೆ ಮನೆ ಹಾಗೂ ಪೂಜಾ ಕೋಣೆಯಿದೆ.

ಜನರನ್ನು ಆಕರ್ಷಿಸುವ ಕಟ್ಟಡವೆಂದರೆ, ‘ಮುಧೋಳ ಪ್ಯಾಲೇಸ್-ದರ್ಬಾರ್ ಹಾಲ್’. ಇದು 205 ವರ್ಷಕ್ಕೂ ಹೆಚ್ಚು ಹಳೆಯದಾದ ಮರಾಠಾ ಮನೆತನದ ಬಾಗಲಕೋಟೆ ಜಿಲ್ಲೆಯ ಮುಧೋಳ ಘೋರ್ಪಡೆ ವಂಶಸ್ಥರ ಮಹಲು. ರಾಜ ವೈಭವ ನೆನಪಿಸುವಂತಹ ಕಲಾಕೃತಿಗಳು ಇಲ್ಲಿವೆ.

‘ಪೇಶ್ವೆ ವಾಡಾ’ ಮರಾಠಾ ಪೇಶ್ವೆಯವರ ಕಾಲದಲ್ಲಿನ ವಾಸ್ತುಶಿಲ್ಪ ಹಾಗೂ ಸಾಂಪ್ರದಾಯಿಕ ರಾಜಮನೆತನಗಳಾದ ಗುಜರಾತ್‌ ಹಾಗೂ ರಾಜಸ್ಥಾನ ಸಮ್ಮಿಳಿತ ಕಲಾಕೃತಿಗಳಿಂದ ನಿರ್ಮಾಣವಾಗಿದೆ. ಮುಂದೆ ಸಾಗಿದಂತೆ ‘ಪುರಾತನ ಕಾಲದ ವಸ್ತುಗಳ ಬಜಾರ್’ನ್ನು ಕಾಣುತ್ತೇವೆ. ಆ ಕಾಲದ ಗೃಹಪಯೋಗಿ ವಸ್ತುಗಳು, ಚೀನಿ ಭರಣಿಗಳು, ಅಡುಗೆಮನೆಗೆ ಬಳಸುವ ಲೋಹದ ವಸ್ತುಗಳು, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು, ಬೀಸುವ ಹಾಗೂ ರುಬ್ಬುವ ಕಲ್ಲುಗಳು, ಮಣ್ಣಿನ ಮಡಿಕೆಗಳು. ಹೀಗೆ ಅನೇಕ ವಸ್ತುಗಳ ಸಂಗ್ರಹಗಳನ್ನು ಕಾಣಬಹುದು.

ಗೋಲಿ ಸೋಡಾ ಅಂಗಡಿಯ ಮಾದರಿ
ಗೋಲಿ ಸೋಡಾ ಅಂಗಡಿಯ ಮಾದರಿ

ವಿಜಯನಗರದ ಕಾಲದ ಕುಕನೂರಿನ ‘ಕಮಲ್ ಮಹಲ್‌’ನಲ್ಲಿ (1341) ವಿಶಿಷ್ಟ ಕಲಾಕೃತಿಗಳಿವೆ. ಮೇಲ್ಭಾಗದಲ್ಲಿ ಕಿನ್ನಾಳ ಕಲೆಯ ವರ್ಣಚಿತ್ರ, ಪ್ರವೇಶದ ಎಡಬಲಗಳಲ್ಲಿ ಮೈಸೂರು ಪೇಂಟಿಂಗ್‌, ಕಮಾನಿನ ಮೇಲೆ ತಂಜಾವೂರಿನ ಪೇಂಟಿಂಗ್, ಬಟ್ಟೆಗಳ ಮೇಲೆ ಕಲಾಂಕರಿ ಕುಸುರಿಯ ಪೇಂಟಿಂಗ್ ಇರುವುದು ವಿಶೇಷ. ಆ ಕಾಲದ ವಿಶಿಷ್ಟ ಕಲಾಕೃತಿಯ ಕುರುಹು ಆಗಿ ಉಳಿದುಕೊಂಡಿವೆ. ‘ಡೆಕ್ಕನ್‌ ನವಾಬಿ ಮಹಲ್’ ಸುಮಾರು 110 ವರ್ಷಗಳ ಪುರಾತನವಾದ ಬರೀದ್ ಶಾಹೀ ಮನೆತನದ ಹುಮನಾಬಾದದ ನವಾಬನಿಗೆ ಸೇರಿದ ಮಹಲು. ನವಾಬ್‌ ಸಂಸ್ಕೃತಿಯನ್ನು ಬಿಂಬಿಸುವ ಕಟ್ಟಡ ಇದಾಗಿದೆ.

‘ಮಂಗಳೂರಿನ ಕ್ರಿಶ್ಚಿಯನ್ ಹೌಸ್’ ಸುಮಾರು 135 ವರ್ಷಗಳಷ್ಟು ಹಳೆಯ ಕಟ್ಟಡ. ಈ ಕಟ್ಟಡದಲ್ಲಿ ರೋಮನ್ ಕ್ಯಾಥೋಲಿಕ್‌ನ ವಾಸ್ತುಶಿಲ್ಪವನ್ನು ಕಾಣಬಹುದು. ಬ್ರಿಟಿಷ್ ಹಾಗೂ ಪೋರ್ಚುಗೀಸ್‌ ಸಂಸ್ಕೃತಿಯನ್ನು ಬಿಂಬಿಸುವ ಮನೆ ಇದಾಗಿದೆ. ‘ಛತ್ತೀಸ್‌ಗಡ’ದ ಬಸ್ತಾರ್ ಎಂಬ ಆದಿವಾಸಿಗಳಿಗೆ ಸೇರಿದ ಮುಖವಾಡಗಳ ಹಾಗೂ ದಕ್ಷಿಣಕನ್ನಡದ ಸಂಸ್ಕೃತಿಯಾದ ಭೂತಾರಾಧನೆಯಲ್ಲಿ ಬಳಸಿದ ಮರದ ಮೂರ್ತಿಗಳ ಸಂಗ್ರಹವೂ ಇಲ್ಲಿದೆ. ‘ವಿಷ್ಣು ಮಂದಿರ’(18ನೇ ಶತಮಾನದ್ದು) ಹಾಗೂ ‘ವೀರಶೈವ ಮಠ’(16ನೇ ಶತಮಾನ) ಮೂಲ ಮಠ ಹಾಗೂ ಎರಡು ಶಾಖಾ ಮಠಗಳ ಎಲ್ಲಾ ವಸ್ತುಗಳನ್ನು ಒಟ್ಟುಗೂಡಿಸಿ ಈ ಒಂದು ಕಟ್ಟಡ ನಿರ್ಮಿಸಲಾಗಿದೆ.

ಕುಂಜಾರು ಚೌಕಿ ಮನೆ
ಕುಂಜಾರು ಚೌಕಿ ಮನೆ

ಕೇರಳ ಸಂಸ್ಕೃತಿಯ ‘ಕುಂಜಾರು ಚೌಕಿ ಮನೆ’ (1816), ಉತ್ತರ ಕನ್ನಡದ ಭಟ್ಕಳದ ‘ನವಯಾತ್ ಮುಸ್ಲಿಮ್ ಮನೆ’(1805), ಕುಂದಾಪುರ ತಾಲ್ಲೂಕಿನ ‘ವಡೆರ್ ಹೋಬಳಿ ಮನೆ’(1705) ಇಲ್ಲಿವೆ. ಮುಂದೆ ಸಾಗಿದಂತೆ ಆಗಿನ ಕಾಲದ ಚರ್ಮದ ಕೆಲಸಗಾರರು, ಸ್ಟವ್‌ ರಿಪೇರಿ ಮಾಡುವ, ಬಂಗಾರದ ಕುಸುರಿ ಕೆಲಸ ಮಾಡುವ ಹೀಗೆ ಎಲ್ಲಾ ಕುಶಲಕರ್ಮಿಗಳಿಗೆ ಸೇರಿದ ಅಂಗಡಿಗಳ ಓಣಿ ಇದೆ. ಕೊನೆಯಲ್ಲಿ ಹರಿಹರ ಮಂದಿರವಿದೆ.

ಹವ್ಯಾಸವೊಂದು ಇಂದು ನೂರಾರು ಪ್ರವಾಸಿಗರನ್ನು ಸೆಳೆಯುವ ಪ್ರದೇಶವಾಗಿ ನಿರ್ಮಾಣವಾಗಿದೆ. ಈ ಸಾಹಸಕ್ಕೆ ನಾರ್ವೆ, ಫಿನ್ಲೆಂಡ್‌ ಹಾಗೂ ಡೆನ್ಮಾರ್ಕ್ ಸರ್ಕಾರ ಹಾಗೂ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಸಹಕಾರವೂ ಸಿಕ್ಕಿದೆ. 1996ರಿಂದ ಮರುನಿರ್ಮಾಣದ ಕೆಲಸ ಪ್ರಾರಂಭಿಸಿ 2015ರವರೆಗೆ ಕೆಲಸ ನಡೆದು ಈ ಗ್ರಾಮ ನಿರ್ಮಾಣವಾಗಿದೆ. ಸದ್ಯಕ್ಕೆ ಈ ಗ್ರಾಮದ ನಿರ್ವಹಣೆಯನ್ನು ಹಸ್ತಶಿಲ್ಪ ಟ್ರಸ್ಟ್‌ ಮಾಡುತ್ತಿದೆ. ಇಲ್ಲಿನ ವ್ಯವಸ್ಥಾಪಕ ರಮೇಶ ಮಲ್ಯ ಪ್ರವಾಸಿಗರ ಮೊದಲ ಗೈಡ್‌. ಗ್ರಾಮದ ಪ್ರವೇಶಕ್ಕಾಗಿ ವಯಸ್ಕರಿಗೆ ₹300, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ₹150 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ಮಣಿಪಾಲದ ಹಸ್ತಲಿಪಾ ಹೆರಿಟೇಜ್‌ ವಿಲೇಜ್‌ –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌
ಮಣಿಪಾಲದ ಹಸ್ತಲಿಪಾ ಹೆರಿಟೇಜ್‌ ವಿಲೇಜ್‌ –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT