ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ತಾರತಮ್ಯ: ಕನ್ನಡಮ್ಮನ ಖರ್ಚಿಗೆ ಕಾಸಿಲ್ಲ!

Last Updated 27 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕೊರೊನಾ ರೋಗಾಣುವು ಕರ್ನಾಟಕದಲ್ಲಿ ಮಾತ್ರ ವಿಚಿತ್ರವಾದ ರೂಪಾಂತರ ಪಡೆದು ಮಠಗಳನ್ನು, ಜಾತಿ ನಿಗಮಗಳನ್ನು ಯಾವ ಕಾರಣಕ್ಕೂ ಬಾಧಿಸದೇ ಕೇವಲ ಕನ್ನಡದ ಸಂಸ್ಥೆಗಳ ಮೇಲೆ ಆಕ್ರಮಣ ಮಾಡುತ್ತಿದೆ! ಆದರೆ, ಈ ಅನುದಾನ ತಾರತಮ್ಯದ ನಿಜವಾದ ಕಾರಣವೆಂದರೆ ಕರ್ನಾಟಕದ ಧಾರ್ಮಿಕ ಸಂಸ್ಥೆಗಳು ವೋಟ್ ಬ್ಯಾಂಕ್‍ಗಳಾದರೆ ಕನ್ನಡವು ಅಂತಹ ತಾಕತ್ತನ್ನು ಗಳಿಸಿಕೊಳ್ಳದಿರುವುದು...

***

ಕೆಲವು ಮಾತುಗಳನ್ನು ಸುತ್ತುಬಳಸದೆ ನೇರವಾಗಿ ದಾಖಲಿಸುವುದು ಸೂಕ್ತ ಎಂದುಕೊಂಡಿದ್ದೇನೆ.

ಅ) ಇಂದಿನ ಸರ್ಕಾರವು ಕನ್ನಡವನ್ನು ತನ್ನ ಆದ್ಯತೆಯೆಂದು ಪರಿಗಣಿಸಿಲ್ಲ. ಕನ್ನಡ ಭಾಷೆಯ ಬಗ್ಗೆ ಯಾವುದೇ ಪ್ರಾಮಾಣಿಕ ಬದ್ಧತೆಯನ್ನು ಅದು ಹೊಂದಿಲ್ಲ. ಕಾಟಾಚಾರಕ್ಕೆ ಒಂದಷ್ಟು ಅಂಕಿಸಂಖ್ಯೆಗಳನ್ನು ಬಿಡುಗಡೆಮಾಡಿ ಸ್ವತಃ ಸರ್ಕಾರದ ಕಣ್ಣಿನಲ್ಲಿಯೇ ಮುಖ್ಯವಲ್ಲದ ಮಂತ್ರಿಗಳಿಂದ ಆಗಾಗ ಹೇಳಿಕೆಗಳನ್ನು ಕೊಡಿಸುವುದನ್ನು ಬಿಟ್ಟರೆ ಅದು ಯಾವುದೇ ಕ್ರಿಯಾಶೀಲತೆಯನ್ನು ತೋರಿಸಿಲ್ಲ. ದೇವರಾಜ ಅರಸರು, ಗೋಪಾಲಗೌಡರು ಮುಂತಾದವರು ಕನ್ನಡದ ಬಗ್ಗೆ ಹೊಂದಿದ್ದ ಗಂಭೀರ ಕಾಳಜಿ, ಚಿಂತನೆ ಇವೆಲ್ಲಾ ಈಗ ಗತಕಾಲದ ನೆನಪುಗಳು ಮಾತ್ರ.

ಆ) ಕನ್ನಡ ಭಾಷೆ, ಸಾಹಿತ್ಯ, ಕರ್ನಾಟಕದ ಕಲೆಗಳು ತಮ್ಮ ಉಳಿವಿಗಾಗಿ ಸರ್ಕಾರವನ್ನೇ ಯಾಕೆ ಅವಲಂಬಿಸಬೇಕು? ಈ ಅವಲಂಬನೆಯಿಂದಾಗಿ ಸರ್ಕಾರವು ಸಂಸ್ಕೃತಿ ಕ್ಷೇತ್ರದಲ್ಲಿ ಅತಿಕ್ರಮ ಪ್ರವೇಶ ಮಾಡಲು ನ್ಯಾಯಸಮರ್ಥನೆ ದೊರೆಯುತ್ತದೆಯಲ್ಲವೇ? ಅಲ್ಲದೆ, ಸರ್ಕಾರದ ಅಕಾಡೆಮಿಗಳು, ಪ್ರಾಧಿಕಾರಗಳು, ಇಲಾಖೆಗಳು ಸಂಸ್ಕೃತಿಹೀನ ನೌಕರಶಾಹಿ, ಅಧಿಕಾರಶಾಹಿಯ ಸಂಸ್ಥೆಗಳಾಗಿದ್ದರಿಂದ ಇವುಗಳು ಭಾಷೆ, ಸಂಸ್ಕೃತಿಗಳ ಆರೋಗ್ಯಕ್ಕೆ ಮಾರಕವಲ್ಲವೇ ಎನ್ನುವ ಅನೇಕ ವಾದಗಳು, ಪ್ರಶ್ನೆಗಳು ನಮ್ಮೆದುರಿಗಿವೆ. ಇವುಗಳಲ್ಲಿ ಬಹುಪಾಲು ಗಂಭೀರವಾದ ಚಿಂತನೆಯನ್ನು ಬಯಸುತ್ತವೆ. ಆದರೆ ಚರಿತ್ರೆಯ ವಾಸ್ತವವೆಂದರೆ ಭಾಷೆ, ಸಂಸ್ಕೃತಿಗಳು, ಅರ್ಥವ್ಯವಸ್ಥೆ, ರಾಜಕೀಯ ಹಾಗೂ ಸಂಸ್ಥೆಗಳನ್ನು ಮೀರಿದ ಆದರ್ಶ, ಕಾಲ್ಪನಿಕ ತಾಣದಲ್ಲಿ ಇರುವುದಿಲ್ಲ. ಅಂಥ ತಾಣವೊಂದು ಇಲ್ಲವೂ ಇಲ್ಲ.

ಕರ್ನಾಟಕದ ಏಕೀಕರಣಕ್ಕೆ ದೊಡ್ಡ ಪ್ರೇರಣೆಯಾಗಿದ್ದು ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರವೇ. ನೆಹರೂ ಅವರ ವಿರೋಧದ ಮಧ್ಯೆಯೂ 1956ರಲ್ಲಿ ಅನೇಕ ರಾಜ್ಯಗಳಂತೆ ಇದೂ ಭಾಷಾವಾರು ರಾಜ್ಯವಾಗಿ ಸ್ಥಾಪನೆಯಾಯಿತು. ಕನ್ನಡ ನಾಡು 29 ತುಂಡುಗಳಲ್ಲಿ ಹಂಚಿಹೋಗಿದ್ದರಿಂದ ಹಾಗೂ ಅನೇಕ ಪ್ರಾಂತಗಳಲ್ಲಿ ಅದು ಆಡಳಿತಭಾಷೆ, ಮೇಲ್ವರ್ಗದ ಭಾಷೆ ಅಥವಾ ಸಾಮಾಜಿಕ ಘನತೆಯ ಭಾಷೆ ಆಗಿರಲಿಲ್ಲವಾದ್ದರಿಂದ ಸರ್ಕಾರವು ಕನ್ನಡ ಭಾಷೆಯನ್ನು ತನ್ನ ಆದ್ಯತೆಯನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಅಲ್ಲದೆ ತೀವ್ರವಾದ ಭಾಷಿಕ, ಉಪಭಾಷಿಕ, ಸಾಂಸ್ಕೃತಿಕ ವಿಭಿನ್ನತೆಗಳಿದ್ದ ರಾಜ್ಯವನ್ನು ಒಂದುಗೂಡಿಸಲು ಕನ್ನಡವೆನ್ನುವ ಸಂಕಥನವು ಅನಿವಾರ್ಯವಾಗಿತ್ತು. ಅಂದರೆ ಈ ವಿದ್ಯಮಾನದಲ್ಲಿ ಆದರ್ಶ ಹಾಗೂ ವಾಸ್ತವಿಕ ರಾಜಕೀಯಗಳೆರಡೂ ಬೆರೆತುಕೊಂಡಿದ್ದವು.

ಅಷ್ಟೇ ಮುಖ್ಯವೆಂದರೆ ಅಂದಿನ ಕರ್ನಾಟಕದ ನಾಗರಿಕ ಸಮುದಾಯದ ಸ್ವರೂಪ. ಇದು ಜಾತಿ, ಅಧಿಕಾರ, ಪ್ರಾಂತಗಳ ರಾಜಕೀಯದಿಂದ ಹೊರತಾಗಿರದಿದ್ದರೂ ಸರ್ಕಾರ ಮತ್ತು ಸಾಹಿತ್ಯ ಸಂಸ್ಕೃತಿಗಳ ಮುಂದಾಳುಗಳ ಸಂಬಂಧವು ಅಸಮಾನತೆ ಅಥವಾ ಅವಲಂಬನೆಯದಾಗಿರಲಿಲ್ಲ. ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆ ಇವರನ್ನು ರಾಜ್ಯದ ಯಾವ ಸರ್ಕಾರವೂ ತನ್ನ ಆಶ್ರಿತರನ್ನಾಗಿ ನೋಡುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ ತಾತ್ವಿಕವಾಗಿ, ನಡವಳಿಕೆಯ ಭಾಗವಾಗಿ ಸರ್ಕಾರಕ್ಕೆ ಕನ್ನಡವು ಆದ್ಯತೆಯಾಗಿತ್ತು.

ಇದಕ್ಕಿಂತ ಮುಖ್ಯವೆಂದರೆ ಕನ್ನಡದ ಪರವಾಗಿ ನಡೆದ ಅನೇಕ ಚಳವಳಿಗಳು ಜನಸಮುದಾಯದ ಚಳವಳಿಗಳಾಗಿ ಪರಿವರ್ತನೆಗೊಂಡು ಸತತವಾಗಿ ರಾಜಕೀಯ ಹಾಗೂ ಆಡಳಿತದ ಮೇಲೆ ತಮ್ಮ ಪ್ರಭಾವವನ್ನು ಬೀರಿದವು. ಬಹುಕಾಲದವರೆಗೆ ಕರ್ನಾಟಕದ ರಾಜಕೀಯವು ಈ ಚಳವಳಿಗಳನ್ನು ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯವಾದ pressure groups ಎಂದು ಒಂದು ಮಟ್ಟದಲ್ಲಿ ಒಪ್ಪಿಕೊಂಡು ಅವುಗಳ ಅಭಿಪ್ರಾಯವನ್ನು ತಮ್ಮ ನೀತಿಗಳಲ್ಲಿ ಅಳವಡಿಸಿಕೊಂಡವು. ಹೀಗಾಗಿ ಕಾಗೋಡು ಚಳವಳಿ, ಸಮಾಜವಾದಿ ಚಳವಳಿಗಳು ಅರಸು ಅವರ ಭೂಸುಧಾರಣಾ ನೀತಿಗಳನ್ನು ಪ್ರಭಾವಿಸಿದವು. ಕನ್ನಡ ಮಾಧ್ಯಮ, ಕನ್ನಡ ಕಲಿಕೆ, ಇಂಗ್ಲಿಷ್‍ನ ಯಾಜಮಾನ್ಯ ಇವೆಲ್ಲವೂ ಸರ್ಕಾರದ ಶಿಕ್ಷಣ ನೀತಿಯನ್ನು ಬದಲಿಸಿದವು. ಈಗಲೂ ರಾಜ್ಯಭಾಷೆ, ಮಾತೃಭಾಷೆ ಇವುಗಳ ಪರವಾದ ಹೋರಾಟವು ಸಂಸದೀಯ ರಾಜಕಾರಣದಿಂದ ಬಗೆಹರಿಯಬೇಕಾಗಿದೆ.

ಹಾಗೆಂದ ಮಾತ್ರಕ್ಕೆ ಹಿಂದಿನ ಸರ್ಕಾರಗಳು ಕನ್ನಡದ ಪರವಾಗಿ ನಿಷ್ಠೆಯಿಂದಲೇ ನಡೆದುಕೊಂಡವು ಎನ್ನುವ ಭೋಳೆ ಕಥಾನಕವನ್ನು ನಂಬುವುದೆಂದಲ್ಲ. ಗೋಕಾಕ್ ಚಳವಳಿಗೆ ಕಾರಣವಾದದ್ದು ಅಂದಿನ ಸರ್ಕಾರ ಮತ್ತು ಅಧಿಕಾರಿಗಳ ಸಂಸ್ಕೃತ ಪ್ರೇಮದಿಂದ ಮತ್ತು ಇಂದಿಗೂ ಸಮಗ್ರವಾದ ನ್ಯಾಯವೂ ಸಿಕ್ಕದೇ ಇದ್ದುದಕ್ಕೆ ನಮ್ಮ ಎಲ್ಲಾ ರಾಜಕೀಯ ಪ್ರತಿನಿಧಿಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಾಲೀಕರಾಗಿರುವುದರಿಂದ ಎನ್ನುವುದನ್ನು ಮರೆಯಬಾರದು. ‘ಅಂದ ಕಾಲತ್ತಿಲ್‌’ ಎನ್ನುವ ಭಾವುಕ ಧೋರಣೆಯನ್ನು ಆಚೆಗಿಟ್ಟು ನೋಡಿದರೂ ಇಂದು ಎಲ್ಲಾ ಪಕ್ಷಗಳಲ್ಲಿ ಇರುವ ಜನಪ್ರತಿನಿಧಿಗಳು, ಮಂತ್ರಿಗಳು ಸಾಂಸ್ಕೃತಿಕವಾಗಿ ಆಶಿಕ್ಷಿತರಾಗಿದ್ದಾರೆ. (ಬೆರಳೆಣಿಕೆಯಷ್ಟು ಅಪವಾದಗಳಿರಬಹುದು). ಆರೋಗ್ಯಕರ ರಾಜಕೀಯಕ್ಕೆ ಬೇಕಾದ Cultural Capital (ಸಾಂಸ್ಕೃತಿಕ ಸಂಪನ್ಮೂಲ) ಅವರಲ್ಲಿ ಇಲ್ಲ. ಹೀಗಾಗಿ ಅವರಲ್ಲಿರುವ ರಾಜಕೀಯದ ಪರಿಕಲ್ಪನೆಯು ಸ್ವಾರ್ಥ, ದುರಾಸೆ, ಅಧಿಕಾರ ಮತ್ತು ಇತ್ತೀಚೆಗೆ ಲೈಂಗಿಕ ಸ್ವೇಚ್ಛಾಚಾರವನ್ನು ಮೀರಿಹೋಗುವುದಿಲ್ಲ. ಅತ್ಯಂತ ಸಿನಿಕತನದಿಂದ ಮತಗಳಿಸುವುದಕ್ಕೆ ಬೇಕಾದ ಆದ್ಯತೆಗಳು ಮಾತ್ರ ಅವರಿಗೆ ರಾಜಕೀಯ ಆದ್ಯತೆಗಳಾಗಿವೆ. ಅವುಗಳೆಂದರೆ ಜಾತಿ, ಉಪಜಾತಿ, ದುಡ್ಡು, ಕೋಮುವಾದ, ಹುಸಿ ಧಾರ್ಮಿಕತೆ ಇವೇ ಮುಂತಾದವುಗಳು. ಈ ಪಟ್ಟಿಯಲ್ಲಿ ಕನ್ನಡವು ಸೇರುವುದು ಸಾಧ್ಯವೇ ಇಲ್ಲ.

ಕನ್ನಡದ ಸಂಘಟನೆಗಳ ಕಿರಿಕಿರಿ ತಪ್ಪಿಸಿಕೊಳ್ಳಲು ಕನ್ನಡ ಪರವಾಗಿ ಪತ್ರಿಕಾ ಹೇಳಿಕೆಗಳನ್ನು ಕೊಡುವುದು, ಗಡಿ ಸಮಸ್ಯೆಗಳು ಬಂದಾಗ ಪೌರಾಣಿಕ ಕಂಪನಿ ನಾಟಕಗಳ ಡೈಲಾಗ್ ಹೇಳುವುದನ್ನು ಆಯಾ ಕಾಲಕ್ಕೆ ಮಾಡಿದರೆ ಸಾಕು. ನಾನು ಹೇಳುತ್ತಿರುವುದು ಅತಿಶಯೋಕ್ತಿ ಎನಿಸಿದರೆ ಈ ಸಂಗತಿಗಳನ್ನು ಗಮನಿಸಿ: ಅನೇಕ ವರ್ಷಗಳಿಂದ ನಂಬಲರ್ಹವಾದ ಸಮೀಕ್ಷೆಗಳಲ್ಲಿ ಕರ್ನಾಟಕವು ಅತಿಭ್ರಷ್ಟ ರಾಜ್ಯವಾಗಿದೆ (ಪ್ರಥಮ ಅಥವಾ ದ್ವಿತೀಯ ರ‍್ಯಾಂಕ್). ಅತಿ ಹೆಚ್ಚು ರಾಷ್ಟ್ರದ್ರೋಹ ಕೇಸುಗಳನ್ನು ದಾಖಲಿಸಿದೆ (ಪ್ರಥಮ ರ‍್ಯಾಂಕ್). ಕನ್ನಡ ಮಾತೃಭಾಷೆಯ ಪರವಾಗಿ ಒಂದು ವಾಕ್ಯವನ್ನೂ ಇಂದಿನ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿಲ್ಲ (ಚಿನ್ನದ ಪದಕ). ದಲಿತ ಸಮುದಾಯಗಳ ಮೇಲೆ ಹೆಚ್ಚು ಸಾಮಾಜಿಕ ಅತ್ಯಾಚಾರಗಳು (ಮುಂಚೂಣಿಯಲ್ಲಿ). ಈ ಸಂತೆಯ ಮಧ್ಯ ಕನ್ನಡವು ಆದ್ಯತೆ ಆಗುವುದು ಹೇಗೆ?

ಇದರ ದ್ಯೋತಕವಾಗಿ ಬಜೆಟ್ ಮತ್ತು ಅದರ ಹೊರಗೆ ಕರ್ನಾಟಕ ಸರ್ಕಾರವು ಕೊಡುತ್ತಿರುವ ಅನುದಾನಗಳನ್ನು ಗಮನಿಸಿ. ಈ ಅನುದಾನಗಳ ಪ್ರಕಾರ ರಾಜ್ಯದ ಮಠಗಳು, ಜಾತಿವಾರು ನಿಗಮಗಳಿಗೆ ಆದ್ಯತೆಯಿಂದ ಅನುದಾನ ಸಿಕ್ಕಿರುವುದನ್ನು ನೋಡಿದರೆ ಅವುಗಳೇನು ಬೃಹತ್ ಕೈಗಾರಿಕೆಗಳೇನೋ ಎನ್ನುವಂತೆ ಭಾಸವಾಗುತ್ತದೆ. ಇದಕ್ಕೆ ಅನುಕೂಲವಾಗಲೆಂದು ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದ ಸರ್ಕಾರದ ಅಕಾಡೆಮಿ, ಪ್ರಾಧಿಕಾರ ಹಾಗೂ ಸಂಸ್ಥೆಗಳ ಅನುದಾನವನ್ನು ಕಡಿಮೆಮಾಡಲಾಗಿದೆ. ಕಾರಣವೆಂದರೆ ಕೊರೊನಾ! ಅಂದರೆ ಕೊರೊನಾ ರೋಗಾಣುವು ಕರ್ನಾಟಕದಲ್ಲಿ ಮಾತ್ರ ವಿಚಿತ್ರವಾದ ರೂಪಾಂತರ ಪಡೆದು (mutation) ಮಠಗಳನ್ನು, ಜಾತಿ ನಿಗಮಗಳನ್ನು ಯಾವ ಕಾರಣಕ್ಕೂ ಬಾಧಿಸದೇ ಕೇವಲ ಕನ್ನಡದ ಸಂಸ್ಥೆಗಳ ಮೇಲೆ ಆಕ್ರಮಣ ಮಾಡುತ್ತಿದೆ! ನಿಜವಾದ ಕಾರಣವೆಂದರೆ ಕರ್ನಾಟಕದ ಧಾರ್ಮಿಕ ಸಂಸ್ಥೆಗಳು ಏಕಕಾಲಕ್ಕೆ ಸ್ವಿಸ್ ಬ್ಯಾಂಕ್‍ಗಳು ಮತ್ತು ವೋಟ್ ಬ್ಯಾಂಕ್‍ಗಳು. ವಿಶೇಷವೆಂದರೆ ಈ ಮಠಗಳು ರೈತರ ಬಗ್ಗೆ, ಆ ರೈತರು ಮಾತನಾಡುವ ಏಕಮಾತ್ರ ಭಾಷೆಯಾದ ಕನ್ನಡದ ಬಗ್ಗೆ ಮಾತನಾಡಿ ತಮ್ಮ ಪಾವಿತ್ರ್ಯವನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದಲೇ ಯಾಕೆ ಈ ಸಂಸ್ಥೆಗಳು ರೈತರ ಪರವಾಗಿ ದನಿಯೆತ್ತುವುದಿಲ್ಲವೆಂದು ರೈತ ಮುಖಂಡರಾದ ಕೆ.ಟಿ. ಗಂಗಾಧರ್ ಅವರು ಎತ್ತಿದ ಪ್ರಶ್ನೆಗೆ ಇಂದಿಗೂ ಉತ್ತರವಿಲ್ಲ.

ಇತಿಹಾಸದಲ್ಲಿ ಧಾರ್ಮಿಕ ಸಂಸ್ಥೆಗಳೇ ಪ್ರಾಚೀನ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯ ಕೃತಿಗಳ ಪ್ರತಿಗಳನ್ನು ಕಾಪಿಟ್ಟುಕೊಂಡು ಬಂದವು. 19ನೇ ಶತಮಾನದ ಕೊನೆಯಿಂದ ಮತ್ತು ಇಪ್ಪತ್ತನೇ ಶತಮಾನದ ಅನೇಕ ದಶಕಗಳವರೆಗೆ ಕನ್ನಡದ ಬಡಮಕ್ಕಳಿಗೆ ಆಶ್ರಯ ಹಾಗೂ ಶಿಕ್ಷಣವನ್ನು ಕೊಟ್ಟು ಸಾಮಾಜಿಕ ಪರಿವರ್ತನೆಗಳಿಗೆ ಕಾರಣವಾದವು. ಸದ್ಯದ ಸ್ಥಿತಿಯಲ್ಲಿ ಅವು ಕೇವಲ ಜಾತಿ ರಾಜಕೀಯದ ಸಂಸ್ಥೆಗಳಾಗಿರುವುದರಿಂದ ಶಿಕ್ಷಣ, ಭಾಷೆ ಹಾಗೂ ಸಂಸ್ಕೃತಿಗಳು ಈ ಸಂಸ್ಥೆಗಳಿಗೆ ಆದ್ಯತೆಯಾಗಿಲ್ಲ. ಧರ್ಮ ಹಾಗೂ ರಾಜಕೀಯಗಳ ಅಪೂರ್ವವಾದ ಅನ್ಯೋನ್ಯ ಮೈತ್ರಿಗೆ ಇಂದು ಕರ್ನಾಟಕವು ಸಾಕ್ಷಿಯಾಗಿದೆ.

ರಾಜಕೀಯ ಹಾಗೂ ಧರ್ಮಗಳು ಕನ್ನಡವನ್ನು ಅಂಚಿಗೆ ಇಟ್ಟು ಅದರ ಬಗ್ಗೆ ಅಸಡ್ಡೆಯನ್ನು ತೋರಲು ಕಾರಣವೆಂದರೆ ನಾವು ಪ್ರಜೆಗಳು. ಪ್ರಾಮಾಣಿಕವಾಗಿ ಕೇಳಿಕೊಂಡರೆ ನಮಗೆ ಕನ್ನಡವು ಆದ್ಯತೆಯಾಗಿದೆಯೆ? ಅದು ಒಟ್ಟು ರಾಜಕೀಯದ ಪ್ರಬಲವಾದ ಭಾಗವಾಗಿದೆಯೆ? ಇಂದಿಗೂ ಮೇಲ್ವರ್ಗದ, ಪ್ರಬಲ ಜಾತಿಗಳ ಆಯ್ಕೆ ಕನ್ನಡವಾಗಿಲ್ಲ. ಈ ವರ್ಗಗಳು ಇಂಗ್ಲಿಷ್ ಅನ್ನುವ ಪ್ಯಾಕೇಜ್ ಮೂಲಕ ಜಾಗತೀಕರಣದ ಅವಕಾಶಗಳನ್ನು ನೂರು ಪ್ರತಿಶತ ಪಡೆದುಕೊಳ್ಳುವುದನ್ನು ಕಣ್ಣಾರೆ ನೋಡಿರುವ ಗ್ರಾಮೀಣ, ಸಣ್ಣ ನಗರಗಳ ಎಲ್ಲಾ ಶೂದ್ರ, ದಲಿತ ಜಾತಿಗಳು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಬಯಸುವುದು ಸಹಜವೇ ಆಗಿದೆ. ಎಲ್ಲರೂ ಮರೆಯುತ್ತಿರುವ ವಿಷಯವೆಂದರೆ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಖಾಸಗೀಕರಣವೆಂದರೆ ಜಾಗತಿಕ ಕಾರ್ಪೊರೇಟ್ ಕಂಪನಿಗಳ ಯಜಮಾನಿಕೆ. ಈ ಯಜಮಾನಿಕೆಯಲ್ಲಿ ಕನ್ನಡದ ಸ್ಥಾನವು ವಸಾಹತುಶಾಹಿಯಲ್ಲಿ ಆದಿವಾಸಿ ಭಾಷೆಗಳಿಗೆ ಇದ್ದ ಸ್ಥಾನವಾಗಿರುತ್ತದೆ.

ರೈತ ಹಾಗೂ ಕಾರ್ಮಿಕರ ಅಸ್ತಿತ್ವವನ್ನೇ ನಾಶಮಾಡಬಲ್ಲ ಕಾನೂನುಗಳನ್ನು ಕಾರ್ಪೊರೇಟ್ ಶಕ್ತಿಗಳ ಪರವಾಗಿ ಜಾರಿಗೆ ತರುವ ಸರ್ಕಾರಗಳು ಈ ಜನಸಮುದಾಯಗಳ ಬಗ್ಗೆ ಕಾಳಜಿ ವಹಿಸುವುದು ತಾರ್ಕಿಕವಾಗಿ ಅಸಾಧ್ಯ. ಕಾರ್ಪೊರೇಟ್‍ಗಳ ಭಾಷೆ ಇಂಗ್ಲಿಷ್ ಭಾಷೆಯೇ ಆಗಿರುತ್ತದೆ. ಅವುಗಳು ಉದಾತ್ತವಾಗಿ ಕನ್ನಡದ ಕೆಲಸಕ್ಕಾಗಿ ದೇಣಿಗೆ ಕೊಟ್ಟು ಕಾರ್ಪೋರೇಟ್‌ಗಳ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತವೆ ಅಷ್ಟೆ. ಭಾರತೀಯ ರಾಜಕೀಯದ ವಿಚಿತ್ರ ಲಕ್ಷಣವೆಂದರೆ ಈ ಕಾರ್ಪೊರೇಟ್ ರಾಜಕೀಯದ ಬೆಂಬಲಿಗರು ಹಿಂದಿಯನ್ನು ರಾಷ್ಟ್ರಭಾಷೆ ಮತ್ತು ಸಂಸ್ಕೃತವನ್ನು ವಿಶ್ವಭಾಷೆ ಮಾಡಲು ಹೊರಟವರು! ಬಲಪಂಥೀಯ ರಾಜಕೀಯವನ್ನು ಒಪ್ಪಿಕೊಂಡರೂ ಕನ್ನಡದ ಹೋರಾಟವನ್ನು ನಡೆಸುವ ಒಬ್ಬ ರಾಜಕೀಯ ಧುರೀಣನೂ ಈವರೆಗೆ ಬಂದಿಲ್ಲ. ಹೀಗಾಗಿ ಭದ್ರಾವತಿಯ ಸಮಾರಂಭದಲ್ಲಿ ಕನ್ನಡ ಲಿಪಿ ಯಾಕೆ ಕಾಣಲಿಲ್ಲವೆಂದು ಕೇಳುವ ಧೈರ್ಯ ಯಾರಿಗೂ ಇಲ್ಲ. ಬದಲಾಗಿ ಹಿಂದಿ ಪರವಾಗಿ, ಸಂಸ್ಕೃತದ ಪರವಾಗಿ ಮಾತನಾಡಿ ಕೇಂದ್ರದ ಗುಲಾಮಗಿರಿಯನ್ನು ಮಾಡುವವರೇ ಕರ್ನಾಟಕದ ರಾಜಕೀಯ ಪ್ರತಿನಿಧಿಗಳಾಗಿದ್ದಾರೆ.

ಕೇವಲ ಸರ್ಕಾರವು ಕನ್ನಡಕ್ಕಾಗಿರುವ ಸಂಸ್ಥೆಗಳಿಗೆ ಅನುದಾನ ಕಡಿಮೆ ಮಾಡಿದ್ದಕ್ಕಾಗಿ ಇಷ್ಟೆಲ್ಲ ಪ್ರವರ ಬೇಕೇ ಎಂದು ಯಾರಾದರೂ ಕೇಳಬಹುದು. ಅನುದಾನ ಕಡಿಮೆಯಾಗಿರುವುದು ಒಂದು ರೋಗದ ಹೊರ ಲಕ್ಷಣವಾಗಿದೆ ಹಾಗೂ ಹೀಗೆಂದು ಹೇಳಲು ಪ್ರಸ್ತುತ ಸಂದರ್ಭದ ಅನೇಕ ವಿದ್ಯಮಾನಗಳು ಸಾಕ್ಷಿಯಾಗಿವೆ. ಕನ್ನಡಪ್ರಜ್ಞೆಯ ಸಾಂಸ್ಥಿಕ ರೂಪವಾಗಲಿ ಎಂದು ಹಾರೈಸಿ ಕಟ್ಟಿದ ಕನ್ನಡ ವಿಶ್ವವಿದ್ಯಾಲಯದ ಅನುದಾನವನ್ನು ನಿಲ್ಲಿಸಿ ಅನೇಕ ತಿಂಗಳುಗಳವರೆಗೆ ಶಿಕ್ಷಕರಿಗೆ, ಸಿಬ್ಬಂದಿಗೆ ಸಂಬಳವನ್ನೂ ಕೊಡಲಿಲ್ಲ. ಕೇಳಿದರೆ ಹಣಕಾಸು ವಿಭಾಗ, ತಾಂತ್ರಿಕ ಅಡಚಣೆ ಇತ್ಯಾದಿ ಸಬೂಬುಗಳನ್ನು ಹೇಳಲಾಯಿತು. ಕನ್ನಡ ವಿಶ್ವವಿದ್ಯಾಲಯದ ಭವಿಷ್ಯವನ್ನು ಗುಮಾಸ್ತರ ಕೈಗೆ ಬಿಡುವ ಸರ್ಕಾರದಿಂದ ಕನ್ನಡ ಸಂಶೋಧನೆ ಏನನ್ನು ನಿರೀಕ್ಷಿಸಬಹುದು? ಕನ್ನಡವನ್ನು ಉಳಿಸಲು ಕನ್ನಡ ಜಗತ್ತಿನ ಆತ್ಮೀಯ ಪರಿಚಯವಿರುವ ವ್ಯಕ್ತಿಗಳು ಬೇಕು. ಗುಮಾಸ್ತರ ಗುಮಾಸ್ತರಲ್ಲ.

ಎರಡನೆಯದಾಗಿ ನಮ್ಮ ಸರ್ಕಾರಗಳಿಗೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರಾಮಾಣಿಕವಾದ ನಂಬಿಕೆ ಇದ್ದಲ್ಲಿ ನಾಡಭಾಷೆಗಳು, ಮಾತೃಭಾಷೆಗಳು ಸಹಜವಾಗಿ ಬೆಳೆಯುತ್ತವೆ. ಆದರೆ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿಗಳ ಸಿದ್ಧಾಂತವನ್ನು ಒಪ್ಪುವವರಲ್ಲಿ ಮನಸ್ಸಿನ ಆಳದಲ್ಲಿ ಕನ್ನಡದ ಬಗ್ಗೆ ಅವಜ್ಞೆ ಇದ್ದೇ ಇರುತ್ತದೆ. ಅವರಲ್ಲಿ ಬಹುಪಾಲು ಜನ ಕನ್ನಡವೆಂದರೆ ಸಂಸ್ಕೃತದ ಹದಗೆಟ್ಟ ರೂಪವೆನ್ನುವ ಮತ್ತು ಅದು ಎಂದೂ ವಿಶ್ವಭಾಷೆಯಾಗಲಾರದು ಎನ್ನುವ ನಂಬಿಕೆ ಪ್ರಬಲವಾಗಿದೆ. ನಾವು ಕನ್ನಡ ಪ್ರಜೆಗಳಿಗೆ ಕನ್ನಡವೇ ವಿಶ್ವ, ಕನ್ನಡವೇ ಬ್ರಹ್ಮಾಂಡ. ಅಲ್ಲದೆ ಕನ್ನಡದ ಜೊತೆ ನೂರಾರು, ಸಾವಿರಾರು ವರ್ಷ ಸಹಬಾಳ್ವೆ ನಡೆಸಿ ಕನ್ನಡ ಜಗತ್ತನ್ನು ಶ್ರೀಮಂತಗೊಳಿಸಿದ ತುಳು, ಬ್ಯಾರಿ, ಕೊಡವ, ಉರ್ದು ಇವೆಲ್ಲವೂ ನಮ್ಮ ಭಾಷೆಗಳೇ. ಕನ್ನಡವನ್ನು ಅಲಕ್ಷಿಸುವ ಪ್ರಭುತ್ವಗಳು ನಮ್ಮ ಈ ಸಹೋದರಿ ಭಾಷೆಗಳನ್ನು ಗಮನಿಸುವುದೇ ಇಲ್ಲ. ಆದ್ದರಿಂದ ಚುನಾಯಿತ ಸರ್ಕಾರವು ತಾನೇ ನಿರ್ದೇಶಿಸಿ ರೂಪಿಸುವ ಅರ್ಥವ್ಯವಸ್ಥೆಯಲ್ಲಿ ಈ ಭಾಷೆಗಳ ಬೆಳವಣಿಗೆಗಾಗಿ ಸಮರ್ಪಕವಾದ ಬೆಂಬಲವನ್ನು ನೀಡುವುದು ನೈತಿಕ ಕರ್ತವ್ಯವಾಗಿದೆ.

ಇನ್ನು ಕನ್ನಡದ ಅಭಿಮಾನದ ಪ್ರಶ್ನೆ. ಕನ್ನಡಿಗರು ನಿರಭಿಮಾನಿಗಳು ಎಂದು ಕನ್ನಡಿಗರು ಎಂದಿನಿಂದಲೂ ಹೇಳುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಸಾಬೀತು ಮಾಡುವುದು ಕಷ್ಟದ ಸಂಗತಿ. ಇಂಥ ಪಡಿಯಚ್ಚು ಕಲ್ಪನೆಗಳು ಸದಾಕಾಲ ಎಲ್ಲಾ ಸಂಸ್ಕೃತಿಗಳಲ್ಲಿ ಇರುತ್ತವೆ. ಅವುಗಳ ಬದಲಾಗಿ ಸಮಾಜ ರಾಜಕೀಯ ಹಾಗೂ ಚರಿತ್ರೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಭಾಷೆಯು ವಿಶ್ವದ ಎಲ್ಲಾ ಭಾಗಗಳಲ್ಲಿ ಒಂದು ರಾಜಕೀಯ ವಿದ್ಯಮಾನವೇ ಆಗಿದೆ. ಆಕ್ರಮಣಕಾರಿಯಾದ, ಹಿಂಸಾಪರವಾದ ಭಾಷಾಂಧ ಧೋರಣೆಗಳಿಂದ, ಬಹುಭಾಷಿಕತ್ವ, ಸಹಬಾಳ್ವೆ ಇವುಗಳವರೆಗಿನ ಸಂಕಥನಗಳು ಈ ರಾಜಕೀಯದ ಭಾಗಗಳಾಗಿವೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವ, ಕಲಿಕೆ ಮಾಧ್ಯಮವನ್ನಾಗಿಸುವ, ಉದ್ಯೋಗದ ಭಾಷೆಯನ್ನಾಗಿಸುವ ಕರ್ನಾಟಕದ ಎಲ್ಲಾ ಪ್ರಯತ್ನಗಳು ಆತ್ಮವಿಶ್ವಾಸವಿಲ್ಲದ, ಸಾಮುದಾಯಿಕ ಭಾಗಿತ್ವವಿಲ್ಲದ, ಸ್ವಂತದ ರಾಜಕೀಯ ಸಿದ್ಧಾಂತವೇ ಇಲ್ಲದ ಅರೆಮನಸ್ಸಿನ ಪ್ರಯತ್ನಗಳಾಗಿವೆ. ಇವುಗಳ ಆಧಾರದ ಮೇಲೆ ಕನ್ನಡಿಗರು ನಿರಭಿಮಾನಿಗಳು ಅಂತಲೂ ಹೇಳಬಹುದು. ಒಕ್ಕೂಟ ರಾಜಕೀಯ, ನಾಡಭಾಷೆಗಳು ಮತ್ತು ಎಲ್ಲಾ ಸಮುದಾಯಗಳು, ಆಧುನಿಕ ಸಮಾಜದ ಅವಶ್ಯಕತೆಗಳು ಇವುಗಳನ್ನು ಒಳಗೊಂಡ ರಾಜಕೀಯವನ್ನು ರಚಿಸುವುದರಲ್ಲಿ ಕರ್ನಾಟಕವು ಸೋತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT