ಶುಕ್ರವಾರ, ಅಕ್ಟೋಬರ್ 23, 2020
21 °C

ಪ್ರಕಾಶಕರು ಏನಂತಾರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪುಸ್ತಕ ಆಯ್ಕೆ ಸಮಿತಿಯ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ಸೂಕ್ತ ನಿಯಮವನ್ನು ರೂಪಿಸಿದೆ. ಆದರೆ, ಅಲ್ಲಿನ ಬಹುತೇಕ ನಿಯಮಗಳು ಅನುಷ್ಠಾನವಾಗುತ್ತಿಲ್ಲ. ಸಮಿತಿಯು ಪ್ರಾಮಾಣಿಕವಾಗಿ ಪುಸ್ತಕಗಳನ್ನು ಆಯ್ಕೆ ಮಾಡಿದಲ್ಲಿ ಮಾತ್ರ ಎಲ್ಲ ಪ್ರಕಾಶಕರ ಪುಸ್ತಕಗಳಿಗೂ ಸಮಾನ ಆದ್ಯತೆ ಸಿಗುತ್ತದೆ.

***

‘ಪುಸ್ತಕ ಸಂಸ್ಕೃತಿಯೇ ವಿನಾ ಸರಕಲ್ಲ’

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪುಸ್ತಕ ಆಯ್ಕೆ ಸಮಿತಿಯ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ಸೂಕ್ತ ನಿಯಮವನ್ನು ರೂಪಿಸಿದೆ. ಆದರೆ, ಅಲ್ಲಿನ ಬಹುತೇಕ ನಿಯಮಗಳು ಅನುಷ್ಠಾನವಾಗುತ್ತಿಲ್ಲ. ಸಮಿತಿಯು ಪ್ರಾಮಾಣಿಕವಾಗಿ ಪುಸ್ತಕಗಳನ್ನು ಆಯ್ಕೆ ಮಾಡಿದಲ್ಲಿ ಮಾತ್ರ ಎಲ್ಲ ಪ್ರಕಾಶಕರ ಪುಸ್ತಕಗಳಿಗೂ ಸಮಾನ ಆದ್ಯತೆ ಸಿಗುತ್ತದೆ. ಸಮಿತಿಯಲ್ಲಿ 20 ಜನರಿಗೆ ಅವಕಾಶವಿದ್ದು, ಸಾಹಿತ್ಯದ ವಿವಿಧ ವಿಭಾಗಗಳ ತಜ್ಞರನ್ನು ನೇಮಕ ಮಾಡಬೇಕು. ಆಗ ಉತ್ತಮ ಪುಸ್ತಕಗಳ ಆಯ್ಕೆ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆಯು ಇ–ಟೆಂಡರ್ ಮೂಲಕ ಪುಸ್ತಕ ಖರೀದಿಸುತ್ತಿರುವುದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಪುಸ್ತಕವನ್ನು ಸಂಸ್ಕೃತಿಯ ರೀತಿ ನೋಡಬೇಕು. ಆದರೆ, ಸಮಾಜ ಕಲ್ಯಾಣ ಇಲಾಖೆಯು ಸರಕಿನ ರೀತಿ ನೋಡುತ್ತಿದೆ. ಎಲ್ಲ ಇಲಾಖೆಯೂ ತಜ್ಞರ ಸಮಿತಿಯು ಆಯ್ಕೆ ಮಾಡಿದ ಪುಸ್ತಕಗಳನ್ನೇ ಖರೀದಿಸುವ ವ್ಯವಸ್ಥೆ ರೂಪಿಸಬೇಕು. 

–ಪ್ರಕಾಶ್ ಕಂಬತ್ತಳ್ಳಿ, ಅಂಕಿತ ಪ್ರಕಾಶನ

***

‘ಖರೀದಿಗೆ ಎಲ್ಲಿವೆ ನಿಯಮಗಳು?’

ಪುಸ್ತಕಗಳ ಖರೀದಿ ಹಾಗೂ ಆಯ್ಕೆಗೆ ಸಂಬಂಧಿಸಿದಂತೆ ಪುಸ್ತಕ ನೀತಿಯ ಅಗತ್ಯವಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಎರಡು ವರ್ಷಕ್ಕಿಂತ ಹಳೆಯದಾದ ಪುಸ್ತಕಗಳನ್ನು ಖರೀದಿ ಮಾಡಬಾರದು ಎಂಬುದೂ ಸೇರಿದಂತೆ ವಿವಿಧ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಯಡಿ ಪುಸ್ತಕ ಖರೀದಿಗೆ ಸೂಕ್ತ ನಿಯಮಾವಳಿಯಿಲ್ಲ. ಇ–ಟೆಂಡರ್ ಪ್ರಕ್ರಿಯೆಯಿಂದ ಬಹುತೇಕರಿಗೆ ಅನ್ಯಾಯವಾಗುತ್ತಿದೆ. ಆಯ್ಕೆ ಸಮಿತಿ ಇಲ್ಲದಿದ್ದಲ್ಲಿ ಕೆಲ ಪ್ರಕಾಶನ ಸಂಸ್ಥೆಗಳ ಪುಸ್ತಕಗಳ ಖರೀದಿಗೆ ಮಾತ್ರ ಅವಕಾಶ ನೀಡಿದಂತಾಗುತ್ತದೆ. ಅದೇ ರೀತಿ, ಹಳೆ ಪುಸ್ತಕಗಳನ್ನು ಖರೀದಿಸುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಯಾವುದೇ ಇಲಾಖೆಯಡಿ ಪುಸ್ತಕ ಖರೀದಿಸುವಾಗಲೂ ವಿಷಯ ತಜ್ಞರ ಸಮಿತಿ ರಚಿಸಬೇಕು. 

–ನ. ರವಿಕುಮಾರ್, ಅಭಿನವ ಪ್ರಕಾಶನ

***

‘ಜಿಲ್ಲಾ ಮಟ್ಟದಲ್ಲಿಯೇ ಖರೀದಿಸಲಿ’

ಒಂದು ವರ್ಷಕ್ಕೆ ಸುಮಾರು 8 ಸಾವಿರ ಹೊಸ ಶೀರ್ಷಿಕೆಗಳು ಪ್ರಕಟವಾಗುತ್ತವೆ. ಇವುಗಳಲ್ಲಿ ಬಹುತೇಕವು ಗ್ರಂಥಾಲಯಕ್ಕಾಗಿಯೇ ಮುದ್ರಣವಾಗುತ್ತವೆ. ಇಲ್ಲಿ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ನಡೆದಿಲ್ಲ. ಆಯ್ಕೆ ಸಮಿತಿಯಲ್ಲಿ ಸಹ ಪಾರದರ್ಶಕತೆ ಮರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಿತಿಯ ಸದಸ್ಯರಾಗಲು ಕೂಡ ಕೆಲವರು ಲಾಬಿ ನಡೆಸುತ್ತಿದ್ದಾರೆ. ಮೂರರಿಂದ ನಾಲ್ಕು ಸಭೆಗಳಲ್ಲಿಯೇ ಪುಸ್ತಕಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದು ಉತ್ತಮ ಪುಸ್ತಕಗಳ ಆಯ್ಕೆಗೆ ತೊಡಕಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ಇ–ಟೆಂಡರ್ ಪ್ರಕ್ರಿಯೆ ಯಾವಾಗ ನಡೆಯುತ್ತದೆ ಎಂಬ ಮಾಹಿತಿಯೇ ಇರುವುದಿಲ್ಲ. ಜಿಲ್ಲಾ ಮಟ್ಟದಲ್ಲಿಯೇ ಆಯ್ಕೆ ಸಮಿತಿ ರಚಿಸಿ, ಪುಸ್ತಕ ಖರೀದಿಸಬೇಕು. 

–ಬಸವರಾಜ ಸೂಳಿಭಾವಿ, ಲಡಾಯಿ ಪ್ರಕಾಶನ

***

‘ವಿಷಯ ತಜ್ಞರ ಸಮಿತಿ ಅಗತ್ಯ’

ಸಮಾಜ ಕಲ್ಯಾಣ ಇಲಾಖೆಯು ಯಾವಾಗ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಸುತ್ತದೆ ಎನ್ನುವುದೇ ಬಹುತೇಕ ಪ್ರಕಾಶನ ಸಂಸ್ಥೆಗಳಿಗೆ ತಿಳಿಯುತ್ತಿಲ್ಲ. ಅದೇ ರೀತಿ, ಅಲ್ಲಿ ಯಾವ ರೀತಿ ಪುಸ್ತಕವನ್ನು ಯಾರು ಆಯ್ಕೆ ಮಾಡುತ್ತಾರೆ ಎನ್ನುವುದರ ಬಗ್ಗೆಯೂ ನಮಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಕೆಲ ಪ್ರಕಾಶನ ಸಂಸ್ಥೆಗಳು ಮಾತ್ರ ಇ–ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿವೆ. ಆದ್ದರಿಂದ ಅಲ್ಲಿ ಪುಸ್ತಕ ಖರೀದಿ ವ್ಯವಸ್ಥೆಯನ್ನು ಮಾರ್ಪಾಡು ಮಾಡಿ, ತಜ್ಞರ ಸಮಿತಿಯನ್ನು ರಚಿಸಬೇಕು. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಗಟು ಖರೀದಿ ಯೋಜನೆಯಡಿ ಖರೀದಿಸುವ 300 ಪುಸ್ತಕಗಳನ್ನು ಮಾತ್ರ ನಾವು ಪೂರೈಕೆ ಮಾಡುತ್ತಿದ್ದೇವೆ. ಆಯ್ಕೆ ಸಮಿತಿಯು ಅಂತಿಮಗೊಳಿಸಿದ ಪುಸ್ತಕಗಳು ಗ್ರಂಥಾಲಯಗಳ ಮೂಲಕ ಎಷ್ಟು ಜನರನ್ನು ತಲುಪುತ್ತಿವೆ ಎನ್ನುವುದರ ಬಗ್ಗೆ ಕೂಡ ಮೌಲ್ಯಮಾಪನ ಮಾಡಬೇಕಾಗಿದೆ. 

–ಸಮೀರ್ ಜೋಶಿ, ಮನೋಹರ ಗ್ರಂಥಮಾಲೆ

ನಿರ್ವಹಣೆ: ವರುಣ್‌ ಹೆಗಡೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.