ಸೋಮವಾರ, ಆಗಸ್ಟ್ 8, 2022
22 °C

ಜಗನ್ನಾಥನ ಗೃಹಬಂಧನ!

ಡಾ.ಕೆ.ಎಸ್.ಚೈತ್ರಾ Updated:

ಅಕ್ಷರ ಗಾತ್ರ : | |

prajavani

ಒರಿಯಾ ಜನರ ಪಾಲಿಗೆ ಜಗನ್ನಾಥ ಬರೀ ಪರಮಾತ್ಮನಲ್ಲ, ಪರಮಾಪ್ತ! ಅಲ್ಲಿನ ಸಂಸ್ಕೃತಿಯ ಜೊತೆಗೆ ಜನರ ದೈನಂದಿನ ಜೀವನದಲ್ಲೂ ಹಾಸುಹೊಕ್ಕಾಗಿರುವ ಜಗನ್ನಾಥ ಪ್ರತಿವರ್ಷ ಹದಿನೈದು ದಿನಗಳ ಕಾಲ, ಆರೋಗ್ಯದ ಸಲುವಾಗಿ ಗೃಹಬಂಧನದಲ್ಲಿರುತ್ತಾನೆ!

ಪುರಿಯ ಜಗನ್ನಾಥ ಒರಿಯಾ ಜನರ ಆರಾಧ್ಯ ದೈವ ಮಾತ್ರವಲ್ಲ, ಆತ್ಮ ಬಂಧು. ಅಲ್ಲಿ ಪತ್ನಿ ಲಕ್ಷ್ಮಿಯೊಡನೆ ಅಲ್ಲ; ಬದಲಿಗೆ ಅಣ್ಣ ಬಲರಾಮ, ತಂಗಿ ಸುಭದ್ರೆಯೊಡನೆ ಜಗನ್ನಾಥ ಪ್ರತಿಷ್ಠಾಪಿತನಾಗಿದ್ದಾನೆ. ಮರದಿಂದ ಮಾಡಿದ ಕಿವಿ- ಕಾಲಿಲ್ಲದ, ಕಣ್ಣಿನ ಜಾಗದಲ್ಲಿ ದೊಡ್ಡ ವರ್ತುಲ ಮತ್ತು ಮುರಿದ ಕೈಗಳ ಮೂರ್ತಿಗಳಿವು. ಆದರೆ, ಜನರಿಗೆ ತಮ್ಮ ಕರೆ ಕೇಳಿದೊಡನೆ ಕಾಲಿಲ್ಲದಿದ್ದರೂ ಓಡಿಬರುವ, ಕಿವಿಯಿಲ್ಲದಿದ್ದರೂ ಆಲಿಸುವ, ಮುರಿದ ಕೈಯಿಂದಲೇ ಅಭಯ ನೀಡುವ, ಸಖ- ಜಗನ್ನಾಥನೆಂದರೆ ಎಲ್ಲಿಲ್ಲದ ಭಕ್ತಿ- ಪ್ರೀತಿ.

ಪುರಿಯಲ್ಲಿ ನೀಡುವ ಛಪ್ಪನ್ ಭೋಗ್‍ದಲ್ಲಿ ಜಗನ್ನಾಥನಿಗೆ ರೈತಾಪಿ ಜನ ತಿನ್ನುವ ದಪ್ಪ ಅಕ್ಕಿ, ಬೇಳೆ, ತರಕಾರಿ ಅನ್ನವೇ ಪ್ರಮುಖ ಆಹಾರ. ಆತನ ಬಣ್ಣವೂ ಬಿಸಿಲಲ್ಲಿ ದುಡಿವ ಶ್ರಮಿಕರಂತೆ ಕಪ್ಪು. ಅಂದರೆ ಜಗನ್ನಾಥ ಬರೀ ಪರಮಾತ್ಮನಲ್ಲ, ಪರಮಾಪ್ತ! ಹೀಗೆ ಅಲ್ಲಿನ ಸಂಸ್ಕೃತಿಯ ಜೊತೆಗೆ ಜನರ ದೈನಂದಿನ ಜೀವನದಲ್ಲೂ ಹಾಸುಹೊಕ್ಕಾಗಿರುವ ಜಗನ್ನಾಥ ಪ್ರತಿವರ್ಷ ಹದಿನೈದು ದಿನಗಳ ಕಾಲ, ಆರೋಗ್ಯದ ಸಲುವಾಗಿ ಗೃಹಬಂಧನದಲ್ಲಿರುತ್ತಾನೆ! ಇದಕ್ಕೆ ‘ಅನಾಸಾರ ಸಮಯ’ ಎಂದು ಕರೆಯಲಾಗುತ್ತದೆ.

ಪ್ರತಿ ಜ್ಯೇಷ್ಠ ಪೂರ್ಣಿಮೆಯಂದು (ಜೂನ್ ತಿಂಗಳಿನಲ್ಲಿ) ಬೇಸಿಗೆಯ ಬಿಸಿಲಿನ ಝಳ ತಡೆಯಲಾರದೆ ಬಸವಳಿಯುವ ಮೂವರಿಗೆ ತಣ್ಣೀರಿನಿಂದ ಸ್ನಾನ ಸಲ್ಲುತ್ತದೆ. ಪುರಿಯ ದೇವಸ್ಥಾನದ ರತ್ನಸಿಂಹಾಸನದಿಂದ ಈ ಮೂವರನ್ನೂ ಬೆಳಿಗ್ಗೆಯೇ ಸ್ನಾನ ಬೀದಿಗೆ ಕರೆತರಲಾಗುತ್ತದೆ. ಸ್ನಾನಪೀಠದಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿರುವ ಬಾವಿಯಿಂದ ನೂರೆಂಟು ಕೊಡಗಳ ತಣ್ಣೀರಿಗೆ ಸುಗಂಧಯುಕ್ತ ಗಿಡಮೂಲಿಕೆ ಸೇರಿಸಿ ಸ್ನಾನ ಮಾಡಿಸಲಾಗುತ್ತದೆ. ಇದನ್ನು ‘ದೇವ ಸ್ನಾನ ಪೂರ್ಣಿಮಾ’ ಎಂದು ಕರೆಯಲಾಗುತ್ತದೆ. ಹಾಗೆಯೇ ಮಾವಿನ ಹಣ್ಣಿನ ಕಾಲವಾದ್ದರಿಂದ ಅತ್ಯುತ್ತಮ ಹಣ್ಣುಗಳ ‘ಆಮ್ ರಸ್’ ನೈವೇದ್ಯಕ್ಕೆ ಸಲ್ಲುತ್ತದೆ.


ಪುರಿಯ ಜನನ್ನಾಥನ ದೇಗುಲ

ಬೇಸಿಗೆಯಲ್ಲಿ ತಣ್ಣೀರು ಸ್ನಾನ, ಮಾವಿನ ಸೇವನೆ ಒಳ್ಳೆಯದು, ಆದರೆ, ಅತಿಯಾದರೆ? ಮಾನವರಾದ ನಮಗೆ ಬರುವಂತೆ ನಂತರ ಈ ಸ್ನಾನದಿಂದ ಮೂವರಿಗೂ ಅದೇ ರಾತ್ರಿ ತೀವ್ರವಾದ ಜ್ವರ, ನೆಗಡಿ ಬರುತ್ತದೆ ಎಂಬುದು ಜನರ ನಂಬಿಕೆ. ಹೀಗಾಗಿ ಜ್ವರ ಮತ್ತು ನೆಗಡಿ ಇರುವ ಮೂವರೂ, ಜನರಿಂದ ತಾವಾಗಿ ಹದಿನೈದು ದಿನಗಳ ಮಟ್ಟಿಗೆ ದೂರವಿರುತ್ತಾರೆ. ಅಂದರೆ ಈ ಸಮಯದಲ್ಲಿ ಜನರಿಗೆ ದೇವರ ದರ್ಶನವಿಲ್ಲ.

ಜನಜಂಗುಳಿಯಿರುವ ದೇಗುಲದಿಂದ ದೇವರನ್ನು ದೂರ ಕರೆದೊಯ್ದು ಅಜ್ಞಾತವಾದ ಅನಾಸಾರ ಗೃಹದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ. ಈ ಕೋಣೆಗೆ ನಿಗದಿತ ದೈತ ಪೂಜಾರಿಗಳಿಗೆ ಮಾತ್ರ ಪ್ರವೇಶ. ಅಲ್ಲದೇ, ದೇಗುಲದ ವೈದ್ಯ ಈ ರೋಗಿಗಳ ಶುಶ್ರೂಷೆ ಮಾಡುತ್ತಾನೆ.

ದೇವರಾದರೇನು? ಆಹಾರದ ವಿಷಯದಲ್ಲಿ ವೈದ್ಯರು ಬಹಳ ಕಟ್ಟುನಿಟ್ಟು. ಬೇಯಿಸಿದ, ಕರಿದ ಆಹಾರವನ್ನು (ಅನ್ನ, ಮಸಾಲೆ , ಸಿಹಿ, ಹುಳಿ) ದೇವರಿಗೆ ಈ ಸಮಯದಲ್ಲಿ ನೈವೇದ್ಯಕ್ಕೆ ಇಡುವುದಿಲ್ಲ. ಏನಿದ್ದರೂ ನೀರು, ಹಣ್ಣುಗಳು ಮತ್ತು ಕಾಳು ಮೆಣಸು, ಲವಂಗ, ಸೋಂಪಿನ ಕಷಾಯ. ಎಳ್ಳೆಣ್ಣೆಗೆ ಶ್ರೀಗಂಧ, ಕರ್ಪೂರ, ಕೇತಕಿ-ಮಲ್ಲಿಗೆ ಹೂವು ಮತ್ತು ಔಷಧೀಯ ನಾರು- ಬೇರು ಸೇರಿಸಿ ‘ಫುಲುರಿ ತೇಲ’ ಎಂದು ದೇವರಿಗೆ ಲೇಪಿಸಲಾಗುತ್ತದೆ. ಇದು ಮರದ ಮೂರ್ತಿಗಳನ್ನು ಕೀಟಗಳಿಂದ ರಕ್ಷಿಸುತ್ತದೆ. ಈ ಬಗೆಯ ಪಥ್ಯ- ಲೇಪನದ ನಂತರ ಕಡೆಯಲ್ಲಿ ದೇವರ ಸಂಪೂರ್ಣ ಚೇತರಿಕೆಗೆ ನೆರವಾಗಲು ಔಷಧೀಯ ‘ದಶಮುಲಮೋದಕ’ಗಳನ್ನು ರಾಜವೈದ್ಯರು ನೀಡುತ್ತಾರೆ.

ಅಂತೂ ಹದಿನೈದು ದಿನಗಳ ಅನಾಸಾರದ ನಂತರ ಆಷಾಢ ಅಮಾವಾಸ್ಯೆ ಕಳೆದು ಮೂವರೂ ಆರೋಗ್ಯವಂತರಾಗಿ ಮರಳಿ ಪುರಿಗೆ ಬರುತ್ತಾರೆ. ಆಗ ಭಕ್ತಾದಿಗಳಿಗೆ ‘ನವಜೌಬನ್’ ದರ್ಶನದ ಭಾಗ್ಯ! ಅಲ್ಲಿಯವರೆಗೆ ಪುರಿಯ ದೇವಸ್ಥಾನದಲ್ಲಿ ಪಟ್ಟಾ ಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ. ನೂರಾರು ವರ್ಷಗಳಿಂದ ನಡೆದು ಬಂದಿರುವ ಈ ಸಂಪ್ರದಾಯವನ್ನು ಚಾಚೂತಪ್ಪದೇ ಒರಿಯಾ ಜನರು ನಂಬುತ್ತಾರೆ; ಪಾಲಿಸುತ್ತಾರೆ.

ಒಡಿಶಾದಲ್ಲಿ ಶೇಕಡ 70ರಷ್ಟು ಜನರು ಗ್ರಾಮಗಳಲ್ಲಿ ಕೃಷಿ- ಕೂಲಿ ನಂಬಿಕೊಂಡು ಜೀವನ ನಡೆಸುವ ಮುಗ್ಧರು. ಅವರಿಗೆ ಕೋವಿಡ್ 19ರ ಲಾಕ್‌ಡೌನ್ ಸಮಯವನ್ನು ಪರಿಣಾಮಕಾರಿಯಾಗಿ ಪಾಲಿಸಲು ನೆಚ್ಚಿನ ದೈವ ಜಗನ್ನಾಥನ ಈ ಅನಾಸಾರ ಸಮಯದ ಉದಾಹರಣೆಯನ್ನು ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು