ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೊನೆಗೂ ಹಂಪಿಗೆ ಬಂದ ಡೀಸೆಲ್‌ ರೈಲು

Last Updated 9 ಮಾರ್ಚ್ 2021, 16:51 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಬಹು ನಿರೀಕ್ಷೆಯ ನಂತರ ಕೊನೆಗೂ ವಿಶ್ವಪ್ರಸಿದ್ಧ ಹಂಪಿಗೆ ರೈಲು ಮಾದರಿಯ ವಾಹನಗಳು ಬಂದಿಳಿದಿವೆ.

ತಲಾ ಒಂದು ಡೀಸೆಲ್‌ ಚಾಲಿತ, ಎಲೆಕ್ಟ್ರಿಕ್‌ ಹಾಗೂ ಬ್ಯಾಟರಿಚಾಲಿತ ವಾಹನಗಳು ಬಂದಿವೆ. ಈ ಮೂರು ವಾಹನಗಳು ರೈಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರಿನ ಪ್ರಿವಿಲೆನ್ಸ್‌–1 ಕಂಪೆನಿ ಇವುಗಳನ್ನು ಸಿದ್ಧಪಡಿಸಿದೆ. ‘ಹಂಪಿ ಆನ್‌ ವೀಲ್ಸ್‌’ ಎಂದು ಹೆಸರಿಡಲಾಗಿದೆ. ಈ ವಾಹನಗಳು ಹಂಪಿ ಪರಿಸರದಲ್ಲಿ ಮಂಗಳವಾರ ಪ್ರಾಯೋಗಿಕವಾಗಿ ಓಡಾಟ ಆರಂಭಿಸಿವೆ.

ಎಂಜಿನ್‌ ಒಳಗೊಂಡಂತೆ ಒಟ್ಟು ಎರಡು ಬೋಗಿಗಳನ್ನು ಒಳಗೊಂಡ ರೈಲಿನಲ್ಲಿ ಒಂದೇ ಸಲ ಒಟ್ಟು 30 ಜನ ಪ್ರಯಾಣಿಸಬಹುದು. ವಾಹನಗಳ ಪ್ರಾಯೋಗಿಕ ಓಡಾಟ ಪೂರ್ಣಗೊಂಡ ನಂತರ ವಾಣಿಜ್ಯ ಸಂಚಾರ ಶುರುವಾಗಲಿದೆ. ಈ ವಾಹನಗಳು ಪ್ರವಾಸಿಗರಿಗೆ ವಿರೂಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ ಮಂಟಪ, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಆನೆಸಾಲು ಮಂಟಪ, ನೆಲಸ್ತರ ಶಿವ ದೇವಾಲಯ, ಉಗ್ರ ನರಸಿಂಹ, ಸಾಸಿವೆಕಾಳು, ಕಡಲೆಕಾಳು ಗಣಪ ಸ್ಮಾರಕ ಸೇರಿದಂತೆ ಇತರೆ ಪ್ರಮುಖ ಸ್ಮಾರಕಗಳ ದರ್ಶನ ಮಾಡಿಸಲಿವೆ.

ಹಂಪಿಗೆಬಂದಿರುವ ರೈಲಿನ ಮಾದರಿ ವಾಹನ
ಹಂಪಿಗೆಬಂದಿರುವ ರೈಲಿನ ಮಾದರಿ ವಾಹನ

ಕಮಲಾಪುರದ ಪುರಾತತ್ವ ಇಲಾಖೆಯ ಆಯುಕ್ತರ ಕಚೇರಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಸೇರಿದ ವಸ್ತು ಸಂಗ್ರಹಾಲಯ ಅಥವಾ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮಯೂರ ಭುವನೇಶ್ವರಿ ಹೋಟೆಲ್‌ನಿಂದ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

‘ವಾಹನಗಳ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡ ನಂತರ ಈ ವಾಹನಗಳು ಸಂಚಾರ ಆರಂಭಿಸಲಿವೆ. ಬಳಿಕ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. ಒಬ್ಬರಿಗೆ ತಲಾ ₹300 ಪ್ರಯಾಣ ದರ ನಿಗದಿಪಡಿಸಲು ಚಿಂತನೆ ನಡೆದಿದೆ. ಇಷ್ಟರಲ್ಲೇ ಶುಲ್ಕ ಅಂತಿಮಗೊಳಿಸಲಾಗುವುದು’ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಿವಿಲೆನ್ಸ್‌–1 ಕಂಪೆನಿಯೊಂದಿಗೆ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿದೆ. ವಾಹನಗಳ ನಿರ್ವಹಣೆ, ಸಿಬ್ಬಂದಿ ನೇಮಕಾತಿಯ ಜವಾಬ್ದಾರಿ ಕಂಪೆನಿ ಮೇಲಿದೆ. ಒಟ್ಟು ಲಾಭಾಂಶದಲ್ಲಿ ಶೇ 30ರಷ್ಟು ಕಂಪೆನಿ ಪ್ರಾಧಿಕಾರಕ್ಕೆ ನೀಡಬೇಕಿದೆ. ಹಂಪಿ ರಿಸರದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಮಾದರಿಯ ವಾಹನಗಳು ಓಡಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರುವ ಹಂತದಲ್ಲಿದೆ’ ಎಂದು ಹೇಳಿದ್ದಾರೆ.

ಪ್ರಾಧಿಕಾರವು ಈ ಹಿಂದೆ ಚೆನ್ನೈ ಹಾಗೂ ಬೆಂಗಳೂರಿನ ಕಂಪೆನಿಯೊಂದಿಗೆ ಈ ಯೋಜನೆ ಕುರಿತು ಮಾತುಕತೆ ನಡೆಸಿತ್ತು. ಆದರೆ, ಅಂತಿಮವಾಗಿ ಬೆಂಗಳೂರಿನ ಕಂಪೆನಿಯ ವಾಹನಗಳು ಅಂತಿಮಗೊಂಡಿವೆ.

ಎಲೆಕ್ಟ್ರಿಕ್‌ ವಾಹನ
ಎಲೆಕ್ಟ್ರಿಕ್‌ ವಾಹನ

‘ಪ್ರಾಧಿಕಾರ ತಡವಾಗಿಯಾದರೂ ಹಂಪಿ ಪರಿಸರದಲ್ಲಿ ಪ್ರವಾಸಿಗರ ಓಡಾಟಕ್ಕಾಗಿ ವಾಹನಗಳ ವ್ಯವಸ್ಥೆಗೆ ಮುಂದಾಗಿರುವುದು ಖುಷಿ ತಂದಿದೆ. ಈ ವಾಹನಗಳು ನೇರ ಸ್ಮಾರಕಗಳ ಸಮೀಪ ಪ್ರವಾಸಿಗರನ್ನು ಇಳಿಸಲಿವೆ. ಪ್ರವಾಸಿಗರು ಬಿಸಿಲಿನಲ್ಲಿ ಬಸವಳಿಯುವುದು ತಪ್ಪಲಿದೆ’ ಎಂದು ಸ್ಥಳೀಯ ನಿವಾಸಿ ರಮೇಶ ಪ್ರತಿಕ್ರಿಯಿಸಿದ್ದಾರೆ.

ನನೆಗುದಿಗೆ ಡಬಲ್‌ ಡೆಕ್ಕರ್‌ ಬಸ್‌
ಹಂಪಿಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಿಸುವ ಯೋಜನೆ ಮತ್ತೆ ನನೆಗುದಿಗೆ ಬಿದ್ದಿದೆ.ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಹೋದ ಅಕ್ಟೋಬರ್‌ನಲ್ಲಿ ಮೂರು ಡಬಲ್‌ ಡೆಕ್ಕರ್‌ ಬಸ್‌ ಆರಂಭಿಸಲು ಯೋಜನೆ ರೂಪಿಸಿತ್ತು. ಅದಕ್ಕೂ ಮುಂಚೆಯೇ ರೈಲು ಮಾದರಿಯ ವಾಹನಗಳು ಬಂದಿಳಿದಿರುವುದರಿಂದ ಈ ಯೋಜನೆ ಆರಂಭಗೊಳ್ಳುವುದರ ಬಗ್ಗೆ ಅನುಮಾನಗಳು ಮೂಡಿವೆ.

***
ವಾಹನಗಳ ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸಂಚಾರಕ್ಕಾಗಿ ಅಧಿಕೃತ ದಿನಾಂಕ ಘೋಷಿಸಲಾಗುವುದು.
–ಸಿದ್ದರಾಮೇಶ್ವರ, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT