ಸೋಮವಾರ, ಏಪ್ರಿಲ್ 12, 2021
33 °C

ಸೈನಿಕರ ‘ಗೃಹ’ಬಲ

ಚೂಡಿ ಶಿವರಾಂ Updated:

ಅಕ್ಷರ ಗಾತ್ರ : | |

ಇಡೀ ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳು ಪ್ರಜಾವಾಣಿ ಜಾಲತಾಣದಲ್ಲಿ ಸರಣಿಯಾಗಿ ಪ್ರಕಟವಾಗಲಿವೆ. ಸೈನಿಕರಿಗೆ ಕುಟುಂಬದವರಿಂದ ದೊರೆಯುವ ಬೆಂಬಲವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ​ ಮೊದಲ ಲೇಖನ ಇಲ್ಲಿದೆ...

***

ಆ ಘಟನೆ ನಡೆದು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಸಂದಿದೆ. ಹೀಗಿದ್ದರೂ, ರೈಲು ಪ್ರಯಾಣವೊಂದರಲ್ಲಿ ವ್ಯಕ್ತಿಯೊಬ್ಬ ಯಾರೊಂದಿಗೂ ಮಾತನಾಡದೆ ತನ್ನಷ್ಟಕ್ಕೆ ಚೆಸ್ ಆಡುವುದರಲ್ಲಿ ಮಗ್ನನಾಗಿದ್ದ ದೃಶ್ಯ ನನ್ನ ನೆನಪಿನಲ್ಲಿ ಹಸಿರಾಗಿದೆ.

ಮಾರನೆಯ ದಿನ ಬೆಳಿಗ್ಗೆ ನನ್ನ ಪತಿ ಆ ವ್ಯಕ್ತಿಯ ಮೌನ ಮುರಿಯಲು ಮುಂದಾದರು. ಅವರ ಜೊತೆ ಚೆಸ್ ಆಡಲು ಉತ್ಸುಕತೆ ತೋರಿದರು. ಆ ವ್ಯಕ್ತಿಯ ಜೊತೆ ಮಾತುಕತೆ ಆರಂಭವಾಯಿತು. ಟ್ರಿಮ್‌ ಆಗಿ ಕಾಣಿಸುತ್ತಿದ್ದ ಆ ವ್ಯಕ್ತಿ ತಾನು ಸುದೀರ್ಘ ಅವಧಿಗೆ ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿ ಇದ್ದುದಾಗಿಯೂ, ಅಲ್ಲಿಂದ ಮನೆಗೆ ಮರಳುತ್ತಿದ್ದುದಾಗಿಯೂ ತಿಳಿಸಿದರು. ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್. ಅಷ್ಟೇ ಅಲ್ಲ, ಅದು ಬಹುಶಃ ಅತ್ಯಂತ ಅಪಾಯಕಾರಿ ಪ್ರದೇಶವೂ ಆಗಿರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಅವರ ಮೊದಲ ಮಗು (ಮಗಳು) ಹತ್ತು ತಿಂಗಳ ಹಸುಗೂಸು. ಮಗಳನ್ನು ಅವರು ಇನ್ನೂ ಭೇಟಿಯಾಗಿರಲಿಲ್ಲ.

ಅದನ್ನು ತಿಳಿದ ತಕ್ಷಣ ನನ್ನ ಮನಸ್ಸು ಅವರ ಪತ್ನಿಯ ಬಗ್ಗೆ ಆಲೋಚಿಸಲು ಆರಂಭಿಸಿತು. ಗರ್ಭಿಣಿಯಾಗಿ ಆಕೆ ಒಬ್ಬಳೇ ಹೇಗೆ ಕಾಲ ಕಳೆದಿದ್ದಿರಬಹುದು, ಮಗುವಿಗೆ ಜನ್ಮ ನೀಡುವಾಗ ಪತಿ ಹತ್ತಿರದಲ್ಲಿ ಇಲ್ಲದಿರುವುದು ಆಕೆಗೆ ಎಷ್ಟು ನೋವು ಆಗಿರಬಹುದು ಎಂದು ಮರುಗಿತು. ವೈವಾಹಿಕ ಸಂಬಂಧದಲ್ಲಿ ಮಗುವಿಗೆ ಜನ್ಮ ನೀಡುವುದು ಒಂದು ಮೈಲುಗಲ್ಲು. ಆ ಸಂದರ್ಭದಲ್ಲಿ ಪತಿ ಸನಿಹದಲ್ಲಿ ಇಲ್ಲದಿರುವ ಸ್ಥಿತಿಯನ್ನು ವಿವರಿಸಲಾಗದು.

ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವವರ ಕುಟುಂಬದ ಸದಸ್ಯರ ತ್ಯಾಗವನ್ನು ‘ಇಷ್ಟು, ಅಷ್ಟು’ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅವರ ತ್ಯಾಗ ಮಾತ್ರ ಬಹುಪಾಲು ಸಂದರ್ಭಗಳಲ್ಲಿ ಗಮನಕ್ಕೆ ಬಂದಿರುವುದಿಲ್ಲ. ಯೋಧರ ಪತ್ನಿಯರು ತಮ್ಮ ಜೀವನವನ್ನು ಒಂಟಿಯಾಗಿ ನಡೆಸಬೇಕಾಗುತ್ತದೆ; ಬಸಿರು, ಹೆರಿಗೆ, ಮಕ್ಕಳ ಜೀವನದ ಪ್ರಮುಖ ಹಂತಗಳು, ಮಕ್ಕಳು ಆಡುವ ಮೊದಲ ಮಾತು, ಅವರಿಡುವ ಮೊದಲ ಹೆಜ್ಜೆ, ಅವರು ಶಾಲೆಯಲ್ಲಿ ಕಳೆಯುವ ಮೊದಲ ದಿನ, ಅವರ ಜನ್ಮದಿನ ಇವೆಲ್ಲವನ್ನೂ ಆ ಹೆಣ್ಣುಮಕ್ಕಳು ಒಂಟಿಯಾಗಿ ಅನುಭವಿಸಬೇಕಾಗುತ್ತದೆ.

ಜನಸಾಮಾನ್ಯರು ಜೀವನದ ಸಣ್ಣಪುಟ್ಟ ಸಂಗತಿಗಳ ಬಗ್ಗೆ ದೂರು ಹೇಳುವುದನ್ನು ಕಂಡಾಗ ನನಗೆ ಆಶ್ಚರ್ಯ ಆಗುತ್ತದೆ. ಜನಸಾಮಾನ್ಯರ ಸುಖ, ಸುರಕ್ಷೆ ಮತ್ತು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡುವವರ ಪರಿಸ್ಥಿತಿ ಬಗ್ಗೆ ಅವರು ಅದೆಷ್ಟು ಮಾಹಿತಿ ಕೊರತೆ ಎದುರಿಸುತ್ತಿದ್ದಾರೆ ಅನಿಸುತ್ತದೆ.

ಸಶಸ್ತ್ರ ಪಡೆ ಸೇರಿದವರ ಜೀವನ ಅಂದರೆ ಚೆಂದದ ಪಾರ್ಟಿಗಳು, ಮದ್ಯ, ಬಂಗಲೆಗಳು, ಉಚಿತವಾಗಿ ಸಿಕ್ಕುವ ಕೊಡುಗೆಗಳು, ಮಿಲಿಟರಿ ಕ್ಯಾಂಟೀನ್‌ನ ಸೌಲಭ್ಯ ಎಂದಷ್ಟೇ ಭಾವಿಸಿದವರೂ ಇದ್ದಾರೆ.

ಆದರೆ, ಹೂವಿನ ಹಾಸಿಗೆಯ ಹೊರತು ಮತ್ತೆಲ್ಲವೂ ಅಲ್ಲಿದೆ. ಸಶಸ್ತ್ರ ಪಡೆ ಸೇರಿದವರು ದೇಶಕ್ಕಾಗಿ ಪ್ರತಿಜ್ಞೆ ಸ್ವೀಕರಿಸುತ್ತಾರೆ. ಕರ್ತವ್ಯದ ವೇಳೆ ಎಲ್ಲ ಆದೇಶಗಳನ್ನೂ ಪಾಲಿಸಲಾಗುವುದು, ಆ ಆದೇಶದಿಂದ ಜೀವಕ್ಕೆ ಕುತ್ತು ಬರುವುದಾದರೂ ಸರಿಯೇ ಎಂಬುದು ಆ ಪ್ರತಿಜ್ಞೆ. ಸೇನೆ ಸೇರುವವ ಪಾಲಿಗೆ ದೇಶವೇ ಪ್ರಮುಖ. ಅಗತ್ಯ ಬಂದಾದ ದೇಶಕ್ಕಾಗಿ ಕಣ್ಣು ಕೂಡ ಮಿಟುಕಿಸದೆ ಅವರು ಪ್ರಾಣ ತ್ಯಾಗಕ್ಕೆ ಸಿದ್ಧರಿರುತ್ತಾರೆ.

ನಮ್ಮ ಮದುವೆಗೆ ಒಂದು ವಾರ ಮೊದಲು, ‘ಮದುವೆಯನ್ನು ಮುಂದೂಡುವುದಕ್ಕೆ ಸಿದ್ಧವಾಗಿರು’ ಎಂದು ನನ್ನ ಪತಿ (ಆಗಲಿದ್ದವರು) ಹೇಳಿದ್ದರು. ರಜೆ ಪಡೆದು ಬಂದಿದ್ದ ಅವರನ್ನು ಯಾವ ಕ್ಷಣದಲ್ಲಿ ಬೇಕಿದ್ದರೂ ಕರ್ತವ್ಯಕ್ಕೆ ಪುನಃ ಕರೆಸಿಕೊಳ್ಳಬಹುದು ಎನ್ನುವ ಸ್ಥಿತಿ ಇತ್ತು. ಮದುವೆ ಆದ ಮೊದಲ ಹತ್ತು ವರ್ಷಗಳ ಅವಧಿಯಲ್ಲಿ ನಾವು ಒಬ್ಬರನ್ನೊಬ್ಬರು ಸರಿಯಾಗಿ ನೋಡಿದ್ದು ಬಹಳ ಕಡಿಮೆ. ನನ್ನ ಪತಿ ತಿಂಗಳುಗಟ್ಟಲೆ ಸಮುದ್ರದಲ್ಲೇ ಇರಬೇಕಾಗುತ್ತಿತ್ತು. ಅವರು ಅಲ್ಲಿ ಎಷ್ಟು ದಿನ, ತಿಂಗಳು, ವರ್ಷ ಕಳೆಯುತ್ತಿದ್ದರು ಎಂಬ ಲೆಕ್ಕವನ್ನೇ ಮರೆತುಬಿಟ್ಟಿದ್ದೆ. ಅವರ ಜೊತೆ ನನಗೆ ಸಂಪರ್ಕ ಕೂಡ ಇರುತ್ತಿರಲಿಲ್ಲ. ಅವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಭಾವವೇ ಮಾನಸಿಕ ಶಕ್ತಿ ತಂದುಕೊಡುತ್ತಿತ್ತು.

ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವವರ ಕುಟುಂಬದ ಸದಸ್ಯರ ಧೈರ್ಯ ಕೂಡ ಭಾರಿ ಮಟ್ಟದಲ್ಲೇ ಇರುತ್ತದೆ. ಮಕ್ಕಳ ಪಾಲಿಗೆ ಎಲ್ಲವೂ ಆಗಿ ಜವಾಬ್ದಾರಿ ನಿಭಾಯಿಸುವುದು ಅಂಥವರ ಪತ್ನಿಯರಿಗೆ ಅನಿವಾರ್ಯ. ಅಭದ್ರತೆಯ ಜೊತೆ ಜೀವನ ಸಾಗಿಸುವುದು ಅವರಿಗೆ ಮಾಮೂಲಿ ಕೆಲಸ. ಗಡಿ ಪ್ರದೇಶಗಳಲ್ಲಿ ನಿಯೋಜನೆ ಆದವರ ಅಥವಾ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗಿಯಾದವರ ಪತ್ನಿಯರ ಪಾಲಿಗೆ ‘ಅಕಾಲದಲ್ಲಿ ಬರುವ ದೂರವಾಣಿ ಕರೆ’ ಅಥವಾ ಕೆಟ್ಟ ಸುದ್ದಿಯ ಭಯ ಯಾವತ್ತೂ ಇರುತ್ತದೆ. ಹೀಗಿದ್ದರೂ ಆ ಮಹಿಳೆಯರು ಭಯ ಹರಡುವ ಕೆಲಸ ಮಾಡುವುದಿಲ್ಲ.

ಯೋಧರ ಮಕ್ಕಳಲ್ಲಿ ಇರುವ ಹೆಮ್ಮೆಯ ಭಾವ ಆಶ್ಚರ್ಯ ತರಿಸುವಂಥದ್ದು. ಈ ಹೆಮ್ಮೆಯ ಭಾವವನ್ನು ನಾನು ಭೂಸೇನೆ, ನೌಕಾಪಡೆ, ವಾಯುಪಡೆಗಳಲ್ಲಿ ಇರುವವರ ಮಕ್ಕಳಲ್ಲಿ ದೇಶದುದ್ದಕ್ಕೂ ಗಮನಿಸಿದ್ದೇನೆ. ಅವರಿಗೆ ತಮ್ಮ ತಂದೆಗಿಂತ ದೊಡ್ಡ ಹೀರೊ ಇನ್ನೊಬ್ಬ ಇಲ್ಲ. ಆದರೆ, ಕರ್ತವ್ಯದ ಸಮಯದಲ್ಲಿ ಆ ಹೀರೊ ಎದುರಿಸುವ ಅಪಾಯಗಳ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ತಮ್ಮ ಪಾಲಿನ ಹೀರೊ ತ್ರಿವರ್ಣ ಧ್ವಜ ಹೊದ್ದು ವಾಪಸ್ ಬರಬಹುದು ಎಂಬುದು ಅವರಿಗೆ ಗೊತ್ತಿರುವುದಿಲ್ಲ.

‘ನೀವೂ ಯುದ್ಧದಲ್ಲಿ ಪಾಲ್ಗೊಂಡಿದ್ದೀರಾ’ ಎಂದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನನ್ನ ಮಕ್ಕಳು ಅವರ ತಂದೆಯ ಬಳಿ ಮುಗ್ಧವಾಗಿ ಕೇಳುತ್ತಿದ್ದುದು ನನಗೆ ನೆನಪಿದೆ. ‘ಇಲ್ಲ, ನಾನು ನೌಕಾಪಡೆಗೆ ಸೇರಿದವ. ಈ ಹೊತ್ತಿನಲ್ಲಿ ಭೂಸೇನೆ ಯುದ್ಧ ನಡೆಸುತ್ತಿದೆ. ನಾನು ಯುದ್ಧಕ್ಕೆ ಹೋಗಬೇಕಾಗಿಲ್ಲ’ ಎಂದು ಅವರು ಹೇಳುತ್ತಿರಲಿಲ್ಲ. ‘ನನ್ನ ಕರ್ತವ್ಯದ ಅವಧಿ ಪೂರ್ಣಗೊಂಡಿದೆ. ಹಾಗಾಗಿ ನಾನು ಯುದ್ಧಭೂಮಿಗೆ ಹೋಗಬೇಕಿಲ್ಲ’ ಎಂದೂ ಅವರು ಹೇಳುತ್ತಿರಲಿಲ್ಲ. ಅವರು ಹೇಳುತ್ತಿದ್ದುದು, ‘ನನಗೆ ಕರೆ ಬಂದರೆ ಯುದ್ಧದಲ್ಲಿ ಪಾಲ್ಗೊಳ್ಳುವೆ’ ಎಂದು. ದೇಶದ ಅಗತ್ಯಗಳಿಗೆ ಲಭ್ಯವಾಗಿರಬೇಕು ಎಂಬುದು ಅವರ ಮೊದಲ ಆದ್ಯತೆ. ಉಳಿದಿದ್ದೆಲ್ಲವೂ ನಂತರದ್ದು. ತಮ್ಮ ಪ್ರಶ್ನೆ ಎಷ್ಟು ಗಂಭೀರವಾದದ್ದು ಎಂಬುದು ಮಕ್ಕಳಿಗೆ ಗೊತ್ತಿರಲಿಲ್ಲ.

ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವವರ ಕುಟುಂಬದವರು ತಮ್ಮ ಸಾಮಾಜಿಕ ಹಾಗೂ ಕೌಟುಂಬಿಕ ಬದುಕಿನಲ್ಲಿ ಕೂಡ ಹಲವಷ್ಟನ್ನು ತ್ಯಾಗ ಮಾಡುತ್ತಾರೆ. ಕುಟುಂಬದ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಅವರಿಗೆ ಪಾಲ್ಗೊಳ್ಳಲು ಆಗುವುದಿಲ್ಲ. ‘ನಾವು ದೂರದ ಯಾವುದೋ ಊರಿನಲ್ಲಿ ಇರುತ್ತೇವಾದ ಕಾರಣ, ಕುಟುಂಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ನಮ್ಮ ಮಕ್ಕಳಿಗೆ ಸಂಬಂಧಿಕರು ಯಾರು ಎಂಬುದು ಗೊತ್ತಿರುವುದಿಲ್ಲ. ಅವರ ಜೊತೆ ನಂಟು ಬೆಳೆಸಿಕೊಳ್ಳಲೂ ಮಕ್ಕಳಿಗೆ ಆಗುವುದಿಲ್ಲ. ಕುಟುಂಬದ ಧಾರ್ಮಿಕ ಆಚರಣೆಗಳು ಸರಿಯಾಗಿ ಗೊತ್ತಿಲ್ಲ ಎಂದು ನಮ್ಮ ಮಕ್ಕಳನ್ನು ಹಾಸ್ಯ ಮಾಡುವುದೂ ಇದೆ’ ಎನ್ನುತ್ತಾರೆ ನಿವೃತ್ತ ಕರ್ನಲ್ ನರಸಿಂಹ ಅವರ ಪತ್ನಿ ವೀಣಾ.

ಸಶಸ್ತ್ರ ಪಡೆಗಳ ನಡುವೆ ಮಕ್ಕಳು ಜಾತಿ, ಧರ್ಮ ಅಥವಾ ಸಾಮಾಜಿಕ ಆಚರಣೆಗಳ ವಿಚಾರದಲ್ಲಿ ತಾರತಮ್ಯ ಇಲ್ಲದೆ ಬೆಳೆದಿರುತ್ತಾರೆ. ಒಗ್ಗಟ್ಟಿನ ಭಾವ, ಕರ್ತವ್ಯ ಪ್ರಜ್ಞೆ, ಘನತೆಯ ನಡವಳಿಕೆ ಅವರಲ್ಲಿ ಚಿಕ್ಕ ವಯಸ್ಸಿನಿಂದಲೇ ಬೆಳೆದುಬಂದಿರುತ್ತದೆ. ಇದಕ್ಕೆ ಅಪವಾದಗಳು ಇವೆ ಎಂಬುದು ನಿಜ.

‘ಇಂಡಿಯನ್ ನ್ಯಾಷನಲ್ ಆರ್ಮಿ’ ಬಗ್ಗೆ ನಾನು ಸಿದ್ಧಪಡಿಸಿದ ಸಾಕ್ಷ್ಯಚಿತ್ರ ವೀಕ್ಷಿಸಿದ ನಂತರ ಮಹಿಳೆಯೊಬ್ಬರು ಇತ್ತೀಚೆಗೆ ತನ್ನ ಮಗನ ಬಗ್ಗೆ ಏನೇನೂ ಹೇಳಿಕೊಂಡರು. ತನ್ನ ಮಗ ಮಹಾನ್ ದೇಶಭಕ್ತ ಎಂದೂ, ಅವನಿಗೆ ಸೇನೆಯ ಬಗ್ಗೆ ಅಪಾರ ಪ್ರೀತಿ ಎಂದೂ ಹೇಳಿದರು. ‘ನಿಮ್ಮ ಮಗನಿಗೆ ಸೇನೆಯನ್ನು ಸೇರುವಂತೆ ಹೇಳಿ’ ಎಂದೆ. ‘ನನಗೆ ಇರುವುದು ಒಬ್ಬನೇ ಮಗ, ಹೇಗೆ ಸೇನೆಗೆ ಸೇರಿಸುವುದು’ ಎಂದರು ಆ ಮಹಿಳೆ.

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರು ಮೇಘನಾ ಮತ್ತು ವಿಂಗ್ ಕಮಾಂಡರ್ ಗಿರೀಶ್ ಅವರಿಗೆ ಒಬ್ಬನೇ ಮಗನಾಗಿದ್ದ. ಸೇನೆಯಲ್ಲಿ ಸೇವೆ ಸಲ್ಲಿಸುವುದರ ಹಿಂದಿರುವ ಅಪಾಯಗಳನ್ನೆಲ್ಲ ಅರಿತೂ ಅವರ ತಮ್ಮ ಮಗನಿಗೆ ಸೇನೆಗೆ ಸೇರಲು ಅವಕಾಶ ಮಾಡಿಕೊಟ್ಟರು. ಅಕ್ಷಯ್ ಅವರ ಕುಟುಂಬದ ಹದಿನೇಳು ಸದಸ್ಯರು ಸಶಸ್ತ್ರ ಪಡೆಗಳಲ್ಲಿ ಇದ್ದಾರೆ. ಅವರು ಹುತಾತ್ಮರಾದ ನಂತರ, ‘ಈ ಹುಡುಗ ನಮ್ಮಿಂದ ಆಗದಿದ್ದುದನ್ನು ಸಾಧಿಸಿದ್ದಾನೆ, ಹುತಾತ್ಮನಾಗಿದ್ದಾನೆ’ ಎಂದು ಅವರ ಅಜ್ಜ ಲೆಫ್ಟಿನೆಂಟ್ ಕರ್ನಲ್ ಮೂರ್ತಿ ಹೇಳಿದ್ದರು. ನಿಜ, ದೇಶಕ್ಕಾಗಿ ಸಾಯಲು, ದೇಶದ ಗಡಿಯನ್ನು ಮತ್ತು ದೇಶದ ಜನರನ್ನು ರಕ್ಷಿಸಲು ಪ್ರಾಣ ಕೊಡಲು ಸಿದ್ಧರಿರುವ ಜನ ಇದ್ದಾರೆ.
ರಕ್ಷಣಾ ಪಡೆಗಳಲ್ಲಿ ಇರುವವರ ಪಾಲಿಗೆ ಅವರ ಕುಟುಂಬದವರೇ ಬೆನ್ನೆಲುಬು ಇದ್ದಂತೆ. ಆ ಕುಟುಂಬಗಳ ಸದಸ್ಯರು ಮಾನ, ಸಮ್ಮಾನಕ್ಕಾಗಿ ಹಪಹಪಿಸುವುದಿಲ್ಲ. ಕರುಣೆ, ಅನುಕಂಪವನ್ನಂತೂ ಕೇಳುವುದೇ ಇಲ್ಲ.

ಅಮೆರಿಕದಲ್ಲಿ ಓದುತ್ತಿರುವ ನನ್ನ ಮಗ ಅಲ್ಲಿನ ಯಾರೋ ಒಬ್ಬರಲ್ಲಿ ‘ನನ್ನ ಭಾರತೀಯ ನೌಕಾಪಡೆಯ ಸೇವೆಯಲ್ಲಿ ಇದ್ದರು’ ಎಂದು ಒಮ್ಮೆ ಹೇಳಿದ. ಅದಕ್ಕೆ ಅವರು ತಕ್ಷಣ, ‘ಅವರಿಗೆ ನಮ್ಮ ಕಡೆಯಿಂದ ಥ್ಯಾಂಕ್ಸ್ ಹೇಳಿ’ ಎಂದರು. ‘ಅವರು ಇದ್ದುದು ಭಾರತೀಯ ನೌಕಾಪಡೆಯಲ್ಲಿ, ಅಮೆರಿಕದ ನೌಕಾಪಡೆಯಲ್ಲಿ ಅಲ್ಲ’ ಎಂದು ನನ್ನ ಮಗ ಉತ್ತರಿಸಿದಾಗ, ಅವರು ‘ಅದೇನೇ ಇರಲಿ. ನಿಮ್ಮ ತಂದೆ ದೇಶದ ಸೇವೆ ಮಾಡಿದ್ದಾರೆ. ಅವರಿಗೆ ಗೌರವ ಸಲ್ಲಬೇಕು’ ಎಂದರು.

‘ಊಟಕ್ಕೆ ಏನೂ ಇಲ್ಲದವರು ಸೇನೆಗೆ ಸೇರುತ್ತಾರೆ’ ಎಂದು ನಾಯಕರೊಬ್ಬರು ಹೇಳಿದ ಮಾತಿನ ಜೊತೆ, ‘ಅವರು ಸಾಯಲಿಕ್ಕೆಂದೇ ಸಹಿ ಮಾಡಿರುತ್ತಾರೆ. ಅದರಲ್ಲಿ ಗ್ರೇಟ್ ಅನ್ನುವಂಥದ್ದು ಏನೂ ಇಲ್ಲ’ ಎಂದು ಸೆಲೆಬ್ರಿಟಿಯೊಬ್ಬರು ಹೇಳಿದ್ದರ ಜೊತೆ ಅಮೆರಿಕದವರ ಮಾತನ್ನು ಹೋಲಿಕೆ ಮಾಡಿ ನೋಡಿ.

ಇವೆಲ್ಲ ಏನೇ ಇದ್ದರೂ, ಆ ಕುಟುಂಬಗಳು ತಮ್ಮ ಮಗ ಅಥವಾ ಮಗಳ ಬೆನ್ನಿಗೆ ನಿಲ್ಲುತ್ತವೆ. ದೇಶ ಮತ್ತು ದೇಶವಾಸಿಗಳನ್ನು ರಕ್ಷಿಸಲು ಬೇಕಿರುವ ಶಕ್ತಿಯನ್ನು ಕುಟುಂಬಗಳೇ ನೀಡುತ್ತವೆ. ಇಲ್ಲಿ ಉಳಿದವೆಲ್ಲ ನಗಣ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು