ಶನಿವಾರ, ಜೂನ್ 19, 2021
22 °C

ಬ್ಯಾಸಿಗಿ ಹೊಡೆದದ ಬಿಸಿಲಿನಾ ಡೇರೆ...

ಅರ್ಪಣಾ ಎಚ್‌.ಎಸ್‌. Updated:

ಅಕ್ಷರ ಗಾತ್ರ : | |

Prajavani

ಸ್ನಾನ ಮಾಡೋಕೆ ನೀರು ಕಾಯಿಸೋದು ಸಾಮಾನ್ಯವಾಗಿ ಎಲ್ಲರೂ ಮಾಡುವ ಕೆಲಸ. ಸ್ನಾನ ಮಾಡೋಕೆ ನೀರು ತಣ್ಣಗೆ ಮಾಡಿಕೊಳ್ಳೋದು ಮಾತ್ರ ಹೈದ್ರಾಬಾದ್ ವಿಶೇಷ. ಇದರ ಅನುಭವ ಬೇಕೆಂದರೆ ನೀವು ಬಿರು ಬೇಸಿಗೆ ಕಾಲದಲ್ಲಿ ಹೈದ್ರಾಬಾದಿಗೆ ಭೇಟಿ ನೀಡಬೇಕು. ಸುಡು ಸುಡುವ ತಾಪಕ್ಕೆ ಬಸವಳಿದು ತಣ್ಣಗೆ ಸ್ನಾನ ಮಾಡೋಣ ಅಂದುಕೊಂಡರೆ ಧಗಧಗಿಸುವ ಸೂರ್ಯ ಬಿಟ್ಟಿಯಾಗಿ ನೀರು ಕಾಸಿ, ಬೇಕಿಲ್ಲದ ಕಾಲದಲ್ಲಿ 24 ಗಂಟೆಯೂ ಬಿಸಿ ನೀರಿನ ಸೌಲಭ್ಯ ಒದಗಿಸಿರುತ್ತಾನೆ. ಹೀಗಾಗಿ, ಹೈದ್ರಾಬಾದಿನ ಬಹುತೇಕ ಜನ ನೀರು ಬಕೆಟಿಗೆ ಬಿಟ್ಟು ತಣ್ಣಗಾಗುವುದಕ್ಕೆ ಕಾಯುತ್ತಾರೆ ಅಥವಾ ಇನ್ನೂ ಕೊಂಚ ಹೆಚ್ಚು ತಣ್ಣಗೆ ಬೇಕು ಎಂದಾದರೆ ಒಂದೆರಡು ಮಂಜುಗಡ್ಡೆಯ ತುಂಡು ನೀರಿಗೆ ಸೇರಿಸುತ್ತಾರೆ. ಇದು ಯಾವುದೇ ಉತ್ಪ್ರೇಕ್ಷೆಯ ಮಾತಲ್ಲ. ಹೀಗೆ ಮಾಡದೇ ಇದ್ದಲ್ಲಿ, ಸ್ನಾನ ಮುಗಿಸಿ ಹೊರಬಂದಾಗ ಮೈ ಒದ್ದೆಯಾಗಿರುವುದು ನೀರಿನಿಂದಲೋ ಬೆವರಿನಿಂದಲೋ ಎಂಬ ಪರಿಹಾರವಾಗದ ಗೊಂದಲಕ್ಕೆ ಒಳಗಾಗಬೇಕಾಗುತ್ತದೆ.

ಅಂತೂ ನೀರು ತಣ್ಣಗೆ ಮಾಡಿಕೊಂಡು ಸ್ನಾನಮಾಡಿ, ಮೈ ಒರೆಸಿಕೊಳ್ಳದೆ ನೀರನ್ನು ಹಾಗೆಯೇ ಆರಲು ಬಿಟ್ಟು, ಒಂದುಕ್ಷಣ ತಂಪಿನ ಅನುಭವ ಹೊಂದಿದರೂ ಮರುಕ್ಷಣವೇ ಮತ್ತೊಂದು ಘೋರ ಕಾದಿರುತ್ತದೆ. ಹಾಕಿಕೊಳ್ಳಲು ಎತ್ತಿಕೊಳ್ಳುವ ಬಟ್ಟೆ ಆಗಷ್ಟೇ ಹಂಚಿನಿಂದ ತೆಗೆದ ಗರಿಗರಿ ದೋಸೆಯಷ್ಟೇ ಬಿಸಿಯಾಗಿರುತ್ತದೆ. ಇದಕ್ಕೂ ಒಂದು ಪರಿಹಾರವಿದೆ. ಸ್ನಾನ ಮುಗಿಸಿ ಬಂದು ವಾರ್ಡ್ ರೋಬಿನಿಂದ ಬಟ್ಟೆ ತೆಗೆದುಕೊಳ್ಳುವ ಬದಲು ಫ್ರಿಜ್‌ನಿಂದ ತೆಗೆದು ಹಾಕಿಕೊಳ್ಳಬೇಕು. ಸ್ನಾನಕ್ಕೆ ಹೋಗುವ ಮೊದಲು ಹಾಕಿಕೊಳ್ಳಬೇಕಾದ ಬಟ್ಚೆಯನ್ನು ಫ್ರಿಜ್ ಒಳಗಿಟ್ಟಿರಬೇಕು ಅಷ್ಟೇ.

ಹಾಗೆ ನೋಡಿದರೆ, ನನಗೆ ಬಿಸಿಲು, ಸೆಕೆ, ಬೆವರು ಹೊಸದೇನೂ ಅಲ್ಲ. ಕರಾವಳಿಯಲ್ಲಿ ಬೆಳೆದ ಯಾರಿಗೇ ಆದರೂ ಸೆಕೆ ಎನ್ನುವುದು ಅನುದಿನದ ಸಂಗಾತಿ. ಹೊರಗೆ ಧಾರಾಕಾರ ಮಳೆ ಸುರಿಯುತ್ತಿದ್ದರೂ ಒಳಗೆ ಕೂತು ಬೆವರಲೇ ಬೇಕು. ಚಳಿಗಾಲ ಎನ್ನುವುದು ಕೇವಲ ಪಠ್ಯಪುಸ್ತಕದಲ್ಲಿ ಓದಿ ಗೊತ್ತೇ ಹೊರತು, ಕರಾವಳಿಯವರ ಪಾಲಿಗೆ ಇರುವುದು ಬೇಸಿಗೆಕಾಲ ಮತ್ತು ಮಳೆಗಾಲ ಮಾತ್ರ. ಆದರೂ, ಬಯಲುಸೀಮೆಯ ತಾಪಮಾನಕ್ಕೂ, ಕರಾವಳಿಯ ತಾಪಮಾನಕ್ಕೂ ಅಜಗಜಾಂತರ ಇದೆ. ಬಯಲುಸೀಮೆಯದ್ದು ಸುಡುವ ಬಿಸಿಲು, ಕರಾವಳಿಯದ್ದು ಬೆವರು ಹಿಂಡಿ ತೆಗೆಯುವ ಬಿಸಿಲು. ಕರಾವಳಿಯ ಆರ್ದ್ರ ಹವಾಮಾನದಿಂದಾಗಿ ಉಷ್ಣತೆ ಹೆಚ್ಚೆನಿಸಿದರೂ ಬೆವರಿ ಬೆವರಿ ರೇಜಿಗೆ ಬಂದರೂ ಸುಡುವಂತಹ ಬಿಸಿ ಗಾಳಿಯ ಕಾಟ ಅಷ್ಟಿಲ್ಲ. ಹೈದ್ರಾಬಾದನ್ನು ಆವರಿಸಿರುವ ಕಲ್ಲು ಬಂಡೆಗಳು ಕಾದ ಹಂಚಿನಂತಾದಾಗ, ಆ ಒಣಶಾಖಕ್ಕೆ ಇಡೀ ನಗರವೇ ಓವನ್ನಿನೊಳಗೆ ಇರುವಂತೆ ಭಾಸವಾಗುತ್ತದೆ. ಜನರೆಲ್ಲಾ, ಮರಳು ಬಿಸಿ ಮಾಡಿ ಹುರಿದ ಬಿಸಿ ಬಿಸಿ ಕಡ್ಲೆಕಾಯಿಯಂತಾಗಿರುತ್ತಾರೆ.

ಇನ್ನು ಆ ತಾಪಮಾನದಲ್ಲಿ ಮಲಗಿ, ನಿದ್ರಿಸುವುದು ಮತ್ತೊಂದು ನಿತ್ಯ ಸಾಹಸ. ಕೆಸರಲ್ಲಿ ಮುಳುಗಿ ಆನಂದಿಸುವ ಎಮ್ಮೆಯನ್ನು ಕಂಡು ಲೇವಡಿ ಮಾಡಿ ನಗುವವರು ಎಮ್ಮೆಗೆ ಪೈಪೋಟಿ ನೀಡಲು ಆರಂಭಿಸುತ್ತಾರೆ. ಏಕೆಂದರೆ, ಫ್ಯಾನ್ ಹಾಕಿದರೆ ಬಿಸಿ ಗಾಳಿ. ಎ.ಸಿ, ಏರ್ ಕೂಲರ್ ಎಲ್ಲರ ಕೈಗೆಟುಕುವ ವಸ್ತುವಲ್ಲ. ಹೀಗಾಗಿ, ರಾತ್ರಿ ಮಲಗಲು ಸಂಜೆ ವೇಳೆಗೆ ಸಿದ್ಧತೆ ಆರಂಭವಾಗುತ್ತದೆ. ಮಲಗುವ ಕೋಣೆಯ ಮೇಲೆ ನೆಲಕ್ಕೆ ನೀರು ಸುರಿದು ಫ್ಯಾನ್ ಹಾಕಿಬಿಟ್ಟರೆ, ರಾತ್ರಿಯ ವೇಳೆಗೆ ನೆಲ ಕೊಂಚ ತಂಪಾಗಿರುತ್ತದೆ. ಅಲ್ಲಲ್ಲಿ, ನೀರು ಹಾಗೇ ನಿಂತಿದ್ದರೆ ಇನ್ನೂ ಒಳ್ಳೆಯದು. ನೀರಿನಿಂದ ಒದ್ದೆಯಾದ ಆ ನೆಲದ ಮೇಲೆ ಮಲಗಿ ಹೊರಳಾಡಿ ಮಧ್ಯರಾತ್ರಿಯವರೆಗಂತೂ ಕಾಲ ತಳ್ಳಬಹುದು.

ಇಷ್ಟೆಲ್ಲಾ ಹೇಳಿದ ಮೇಲೆ ಬೇಸಿಗೆಯಲ್ಲಿ ಮಹಾನಗರಗಳಲ್ಲಿ ನೀರಿಗಾಗಿ ಏಳುವ ಹಾಹಾಕಾರವನ್ನು ಮರೆಯಲು ಸಾಧ್ಯವೇ? ಬಾಲ್ಯದಲ್ಲಿ ಕರಾವಳಿಯ ಸಮೃದ್ಧ ಹಳ್ಳಿಯಲ್ಲಿ, ತುಂಬಿ ತುಳುಕುವ ಬಾವಿ ನೋಡಿ ಬೆಳೆದಿದ್ದ ನಾನು, ‘ನೀರು ಉಳಿಸಿ’ ಎಂಬ ಮಾತನ್ನು ಮೊದಲಬಾರಿಗೆ ಕೇಳಿದಾಗ ನಕ್ಕಿದ್ದೆ. ಆದರೆ, ನೀರನ್ನು ನೀರಿನಂತೆ ಖರ್ಚು ಮಾಡುವ ಕಾಲ ಮುಗಿಯಿತು ಎಂಬ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ನೀರಿನ ಕೊರತೆಯ ಬಗ್ಗೆ ಬಯಲುಸೀಮೆ ಜನರ, ನಗರವಾಸಿಗಳ ಬಾಯಿಂದ ಕೇಳಿದ ಮೇಲೆ ನೀರು ಎಂತಹ ಅಮೂಲ್ಯ ವಸ್ತು ಎಂಬ ಅರಿವಾಗತೊಡಗಿತ್ತು. ಹೀಗಾಗಿ, ನೀರನ್ನು ಉಳಿಸಲು, ಜೋಪಾನ ಮಾಡಲು ಕಲಿತರೂ, ಸ್ವತಃ ನೀರಿನ ಕೊರತೆ ಮಾತ್ರ ಎಂದೂ ಅನುಭವಿಸಿರಲಿಲ್ಲ. ಎರಡು ವರ್ಷದ ಹಿಂದೆ ಹೈದ್ರಾಬಾದಿನ ಬೇಸಿಗೆ ಅದರ ಅನುಭವವನ್ನೂ ನೀಡಿತು. ಹೈದ್ರಾಬಾದಿನಲ್ಲಿ ಪ್ರತೀ ಬೇಸಿಗೆಯಲ್ಲೂ ಇದೇ ಸ್ಥಿತಿ. ಆದರೆ, ನಮಗೆ ಮಾತ್ರ ಅದರ ಬಿಸಿ ತಟ್ಟಿರಲಿಲ್ಲ ಅಷ್ಟೆ.

ಹೈದ್ರಾಬಾದಿನ ಬಿರುಬೇಸಿಗೆಯ ಕಷ್ಟಗಳನ್ನಷ್ಟೇ ಹೇಳಿದ್ದಾಯಿತು. ಈ ಬೇಸಿಗೆ ಅನಾವರಣಗೊಳಿಸುವ ನಗರದ ವಿವಿಧ ಮಾನವೀಯ ಮುಖಗಳಿಗೂ, ಸುಡು ಬಿಸಿಲಿಗೂ ಅಂಜದೆ ಮುನ್ನಡೆಯುವ ಶ್ರಮಿಕ ವರ್ಗಕ್ಕೂ, ನಗರ ಈ ಕಾಲದಲ್ಲಿ ತೊಡುವ ಹೊಸ ಹೊಸ ಬಗೆಯ ರಂಗಿಗೂ ಸಲಾಂ ಹೇಳಲೇಬೇಕು. ಬೇಸಿಗೆ ಶುರುವಾದ ಕೂಡಲೇ ಹೈದ್ರಾಬಾದ್ ಮಾತ್ರವಲ್ಲದೆ ತೆಲಂಗಾಣ, ಆಂಧ್ರದ ಎಲ್ಲಾ ಕಡೆ ಸಾವಿರಾರು ಸಂಖ್ಯೆಯಲ್ಲಿ ಚಲಿವೇಂದ್ರಗಳು ತಲೆ ಎತ್ತುತ್ತವೆ. ಇವು ಜನರಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಶುದ್ಧವಾದ, ತಂಪಾದ ಕುಡಿಯುವ ನೀರನ್ನು ಉಚಿತವಾಗಿ ಹಂಚುವ ಕೇಂದ್ರಗಳು. ಸರ್ಕಾರದ ಯಾವುದೇ ಸಹಾಯವಿಲ್ಲದೆ, ಹಲವು ಸಂಘ ಸಂಸ್ಥೆಗಳು ನಡೆಸುವ ಈ ಕುಡಿಯುವ ನೀರಿನ ಕೇಂದ್ರಗಳು ನಗರದ ಶ್ರಮಜೀವಿಗಳ ಜೀವನಾಡಿ.

ಪ್ರತಿಯೊಂದು ಬೀದಿಯಲ್ಲಿ, ತಿರುವುಗಳಲ್ಲಿ ಈ ಕೇಂದ್ರಗಳು ಬಾಯಾರಿ ಬಂದವರಿಗೆ ನಿರಂತರವಾಗಿ ನೀರು ತುಂಬಿ ಕೊಡುತ್ತವೆ. ಕೆಲವೊಮ್ಮೆ ತಣ್ಣನೆ ಮಜ್ಜಿಗೆಯನ್ನೂ ನೀಡುತ್ತವೆ. ರಾಮನವಮಿಯ ಆಸುಪಾಸಿನ ದಿನಗಳಲ್ಲಿ ಪಾನಕ, ಪ್ರಸಾದಗಳ ಹಂಚಿಕೆಗೂ ಕೊರತೆಯಿಲ್ಲ. ಇಂತಹ ಚಲಿವೇಂದ್ರಗಳು ತೆಲುಗುನಾಡಿನ ಸಂಸ್ಕೃತಿಯ ಭಾಗವಾಗಿ ಬಿಟ್ಟಿವೆ. ಇನ್ನು ಹೈದ್ರಾಬಾದಿನ ಪ್ರಸಿದ್ಧ ಫಲೂದಾಗಳಿಗೆ, ಕುಲ್ಫಿಗಳಿಗೆ, ತಣ್ಣನೆಯ ಸೋಡಾಗಳಿಗೆ, ತಂಪು ಬಾದಾಮಿ ಹಾಲಿಗೆ ಬೇಸಿಗೆಯಲ್ಲಿ ಹೊಸ ರುಚಿ ಬರುತ್ತದೆ. ತಳ್ಳುವ ಗಾಡಿಗಳಲ್ಲಿ, ಮೇಲೆ ಸೊಪ್ಪು ಮುಚ್ಚಿದ ಮಣ್ಣಿನ ಮಡಕೆಗಳಲ್ಲಿ ಇಟ್ಟುಕೊಂಡು ಮಾರುವ ಪುದೀನಾ ಪೇಯ, ಮಜ್ಜಿಗೆಯಂತೂ ಅಮೃತದಂತೆ ಭಾಸವಾದರೆ ಆಶ್ಚರ್ಯಪಡಬೇಕಿಲ್ಲ.

ಬೇಸಿಗೆಯ ಜೊತೆಜೊತೆಗೆ ಶುರುವಾಗುತ್ತದೆ ರಂಜಾನ್ ಮಾಸ. ಈ ಒಂದು ತಿಂಗಳು ಹೈದ್ರಾಬಾದಿನ ಖದರೇ ಬೇರೆ. ಚಾರ್ಮಿನಾರಿನಂತಹ ಹಳೆ ಹೈದ್ರಾಬಾದಿನ ಸ್ಥಳಗಳಿಗೆ ಹೋದರೆ ಎಲ್ಲೆಡೆಯೂ ಶಾಪಿಂಗ್ ಸಡಗರ. ನಸು ಬಣ್ಣದ, ತೆಳು ಕಾಟನ್ ಬಟ್ಟೆಗಳಲ್ಲೂ ಬೇಯುವ ಧಗೆ ಇರುವಾಗ, ಮೇಲಿನಿಂದ ಕೆಳಗಿನವರೆಗೂ ಕಪ್ಪು ಬುರ್ಕಾ ಧರಿಸಿ, ಉಪವಾಸವಿದ್ದು, ಅಂಗಡಿ ಅಂಗಡಿ ಅಲೆದು, ಚೌಕಾಸಿ ಮಾಡುತ್ತಾ ಸಡಗರದಿಂದ ಶಾಪಿಂಗ್ ಮಾಡುವ ಮಹಿಳೆಯರು ಜೀವನಪ್ರೀತಿಯ ಪ್ರತೀಕದಂತೆ ಕಾಣುತ್ತಾರೆ. ರಾತ್ರಿ ಇಡೀ ನಡೆಯುವ ರಂಜಾನ್ ಮಾರ್ಕೆಟ್, ನಗರದ ಉದ್ದಗಲಕ್ಕೂ ಎದ್ದೇಳುವ ಹಲೀಮ್ ಅಂಗಡಿಗಳು, ಇಫ್ತಾರ್ ಕೂಟಗಳು, ಅವ್ಯಾಹತವಾಗಿ ನಡೆಯುವ ದಾನಧರ್ಮಗಳು ಬೇಸಿಗೆಗೆ ತಂಪು ತರುತ್ತವೆ.

ಗರಿಷ್ಠ ತಾಪಮಾನ ಎಂಬುದು ಡಾಲರ್ ರೇಟಿನಂತೆ ದಿನದಿನಕ್ಕೆ ಏರುತ್ತಿರುವಾಗ, ಆಂಧ್ರ, ತೆಲಂಗಾಣದ ಜಿಲ್ಲೆಗಳು ಈ ವಿಷಯದಲ್ಲಿ ನಾ ಮುಂದೆ ತಾ ಮುಂದೆ ಎಂದು ಪೈಪೋಟಿ ನಡೆಸುತ್ತಿರುವಾಗ, ನಮ್ಮದೇ ಕರ್ನಾಟಕದ ಬಳ್ಳಾರಿ, ರಾಯಚೂರು, ಕಲಬುರ್ಗಿಗಳು ಅವುಗಳಿಗೆ ಸ್ಪರ್ಧೆ ಒಡ್ಡುತ್ತಿರುವಾಗ ಒಂದು ಸಂಜೆ ಥಟ್ಟನೆ ಮಳೆಯಾಗುತ್ತದೆ ನೋಡಿ, ಆಹಾ! ಅದರ ಮುಂದೆ ಸ್ವರ್ಗವೂ ಕಮ್ಮಿಯೇ! ಈ ಬೇಸಿಗೆ ಮಳೆ ಎಂತಹವರನ್ನಾದರೂ ಕವಿಯಾಗಿಸಿಬಿಡುತ್ತದೆ. ನಾಲಗೆ ಸಮೋಸ, ಬಜ್ಜಿಗಳನ್ನು ಕೇಳುತ್ತದೆ. ಬಿಸಿ ಬಿಸಿ ಇರಾನಿ ಚಾಯ್‌ನ ಆಸೆ ಹುಟ್ಟಿಸುತ್ತದೆ. ಇಂತಹ ಒಂದು ಸ್ವರ್ಗೀಯ ಘಟನೆಗೆ ಮರುದಿನದ ಪತ್ರಿಕೆಗಳು ‘ನಗರಕ್ಕೆ ತಂಪೆರೆದ ಮಳೆ’ ಎಂಬ ಮಾಮೂಲು ಶೀರ್ಷಿಕೆ ನೀಡುವುದನ್ನು ಅಪರಾಧವೆಂದು ಪರಿಗಣಿಸಬೇಕೆಂಬುದು ನನ್ನ ಆಗ್ರಹ. ಬೇಸಿಗೆ ಇಲ್ಲವಾದಲ್ಲಿ, ಈ ಮಳೆಯ, ಈ ಪರಿಯ ಸೊಬಗು ಅರಿವಾಗುತ್ತಿರಲಿಲ್ಲ ಎಂಬುದಕ್ಕಾದರೂ ಹೃದಯ ಬೇಸಿಗೆಗೆ ವಂದಿಸುತ್ತದೆ.

ಹೀಗಾಗಿಯೇ, ‘ಅಯ್ಯೋ ಹೈದ್ರಾಬಾದಲ್ಲಿ ಇರೋದಾ? ಅಲ್ಲಿನ ಬೇಸಿಗೆ ಹೇಗೆ ತಡ್ಕೊತೀರಾ’ ಎಂಬ ಮಾತು ಕೇಳಿದಾಗೆಲ್ಲಾ ಮನಸ್ಸು ಡಿಫೆನ್ಸ್ ಮೋಡಿಗೆ ಹೋಗಿ ಬಡಬಡಿಸುತ್ತದೆ – ‘ಬೆಂಗಳೂರಲ್ಲಿ ಏನು ಈಗ ಕಡಿಮೆ ಸೆಕೆಯಾಗುತ್ತಾ?  ಆಗಿನ ಕೂಲ್ ಕೂಲ್ ಬೆಂಗಳೂರು ಈಗ ಎಲ್ಲಿದೆ? ಹೆಸರಿಗೆ ತಕ್ಕ ಹಾಗೆ ಬೇಯುತ್ತಿರುವ ಕಾಳಿನಷ್ಚೇ ಬಿಸಿಯಾಗಿದೆ. ಅಪ್ಪಟ ಮಲೆನಾಡು ಶಿವಮೊಗ್ಗದಲ್ಲೇ ಈಗ ತಡೆಯೋಕಾಗದಷ್ಟು ಸೆಕೆ! ನಿಮ್ಮದೂ ಈಗ ಬಯಲುಸೀಮೆಯೇ ಆಗಿದೆ ಬಿಡಿ. ಎಲ್ಲರೂ ಈಗ ಸಮಾನ ತಾಪಮಾನ ತಪ್ತರೇ’!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು