ಸೋಮವಾರ, ಅಕ್ಟೋಬರ್ 26, 2020
25 °C

ಒಳನೋಟ: ಮುಸ್ಲಿಂ ಬದುಕಿನ ವಯೋವಿಕಾಸ ಕಥನ

ಕೇಶವ ಮಳಗಿ Updated:

ಅಕ್ಷರ ಗಾತ್ರ : | |

Prajavani

ಪದ ಕುಸಿಯೆ ನೆಲವಿಲ್ಲ

ಲೇ: ನಿಯಾಝ್ ಫಾರೂಕಿ

ಕನ್ನಡಕ್ಕೆ: ಡಿ. ಉಮಾಪತಿ

ಪ್ರಕಾಶಕರು: ಅಹರ್ನಿಶಿ ಪ್ರಕಾಶನ

ಮೊ: 9449174662/9448628511

ಭಾವುಕತೆಯನ್ನೇ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡ ಭಾರತೀಯ ಸಮಾಜ, ಯುಗಧರ್ಮ ಮತ್ತು ಸಾಮಾಜಿಕ ಒತ್ತಡಗಳಿಗೆ ಸಿಲುಕಿ ಕಾಲಕಾಲಕ್ಕೆ ಹೊಸ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿರುವುದನ್ನು ನಾವೆಲ್ಲ ಬಲ್ಲೆವು. ಎಪ್ಪತ್ತರ ದಶಕದಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟಗೊಂಡ ದಯಾ ಪವಾರರ `ಬಲೂತ' ಅಂತಹ ಹೊಸ ಅರಿವನ್ನು ಸ್ಫೋಟಿಸಿದ ಕೃತಿ. ಆನಂತರ ಬಂದ ಅಕ್ಕರಮಾಸಿ, ಉಚಲ್ಯಾ, ಗಬಾಳ ಥರದ ದಲಿತ ಕಥನಗಳು ಆಧುನಿಕ ಭಾರತೀಯ ಸಾಹಿತ್ಯಕ್ಕೆ ಹೊಸ ವ್ಯಾಖ್ಯಾನ ಬರೆದು, ಎಲ್ಲ ಕಾಲಕ್ಕೂ ಸಾಹಿತ್ಯ ದೃಷ್ಟಿಕೋನವನ್ನು ಬದಲಿಸಿದವು.

ಪ್ರಸ್ತುತ ಕೃತಿ ‘ಪದ ಕುಸಿಯೆ ನೆಲವಿಲ್ಲ’ (ಇಂಗ್ಲಿಷ್‌ ಶೀರ್ಷಿಕೆ: ಆ್ಯನ್ ಆರ್ಡಿನರಿ ಮ್ಯಾನ್ಸ್ ಗೈಡ್ ಟು ರ‍್ಯಾಡಿಕಲಿಸಂ-ಗ್ರೋಯಿಂಗ್ ಅಪ್ ಮುಸ್ಲಿಂ ಇನ್ ಇಂಡಿಯಾ) ಅಂತಹ ಹೊಸ ಅರಿವಿನ ಸ್ಫೋಟದ ಬೀಜವನ್ನು ತನ್ನೊಳಗೆ ಇರಿಸಿಕೊಂಡಿರುವ ಕೃತಿ. ಇಲ್ಲಿ ಓದುಗರು ಯುವ ಪತ್ರಕರ್ತನೋರ್ವನ ಶೋಧನಾ ಮನೋಭಾವ, ವಸ್ತುನಿಷ್ಠತೆ; ಈಗಷ್ಟೇ ಅರಳುತ್ತಿರುವ ಯುವ ಬರಹಗಾರನ ಸಂಕಟ ಹಾಗೂ ತಳಮಳ; ನಿರ್ದಿಷ್ಟ ಧರ್ಮಕ್ಕೆ ಸೇರಿರುವುದರಿಂದಲೇ ಎದುರಿಸಬೇಕಾದ ತಲ್ಲಣಗಳನ್ನು ಏಕಕಾಲಕ್ಕೆ ಎದುರುಗೊಳ್ಳಬಲ್ಲರು. 

ಈ ಕೃತಿಯನ್ನು ಮತ್ತು ಆರಂಭಿಕ ಮರಾಠಿ ದಲಿತ ಕಥನಗಳನ್ನು ‘ಆತ್ಮಚರಿತ್ರೆಗಳು’ ಎಂದು ಸುಲಭವಾಗಿ ಹೇಳಿ ಬಿಡಬಹುದು. ಆದರೆ, ಈ ಹೊಸ ಸಾಹಿತ್ಯ ಪ್ರಕಾರದ ಸಂಕಥನಗಳ ಉದ್ದೇಶ ‘ಹೀಗ್ಹೀಗೆ ಆಯಿತು’ ಎಂದು ಅರುಹುವುದು ಮಾತ್ರವೇ ಅಲ್ಲ. ಬದಲಿಗೆ, ಸಮಾಜದ ಭಾಗವೇ ಆಗಿದ್ದರೂ ತಮ್ಮ ಅಸ್ಮಿತೆಯನ್ನು, ಬದುಕಿನ ಋಜುತ್ವವನ್ನು ಪ್ರಮಾಣೀಕರಿಸಬೇಕಾದಾಗಿನ ಒತ್ತಡ ಹುಟ್ಟುಹಾಕುವ ಹಿಂಸೆ ಎಂಥದ್ದು, ನಿಮ್ಮೊಡನಿದ್ದೂ ನಿಮ್ಮಂತಾಗದೆ ಇರುವ ಪರಕೀಯತೆ ಸೃಷ್ಟಿಸುವ ಅಸಹನೀಯತೆ ಯಾವ ಬಗೆಯದು ಎಂಬುದನ್ನು ಸಮಾಜದ ಚರ್ಚಾ ವಿಷಯವಾಗಿಸುವುದಾಗಿದೆ.

ಜಾತಿಪದ್ಧತಿ ಮತ್ತು ಧರ್ಮಪೂರ್ವಗ್ರಹಗಳು ಈ ಪರಕೀಯತೆಯನ್ನು ಸೃಷ್ಟಿಸುತ್ತಿವೆ, ಎಂದು ಈ ಲೇಖಕರು ನಿರೂಪಿಸ ಬಯಸುತ್ತಿದ್ದಾರೆ. ಹೀಗಾಗಿಯೇ, ಈ ಲೇಖಕರು ತಮ್ಮ ಕಥೆಯನ್ನು ಹೇಳುತ್ತಿದ್ದಾರೆಂದು ಅನ್ನಿಸಿದರೂ ಅವರು ನಿಜಕ್ಕೂ ಕಥಿಸುತ್ತಿರುವುದು ತಾವು ಬದುಕುವ ಸಮಾಜದಲ್ಲಿ ಬೇರೂರಿರುವ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ಧಾರ್ಮಿಕ ಮತ್ತಿತರ ಕ್ಷೇತ್ರಗಳಲ್ಲಿ ಕಂದಕಗಳನ್ನು. ಈ ಕಥನಗಳು ಬಹುಸಂಖ್ಯಾತ ಸಮುದಾಯಗಳ ಜೀವನದೃಷ್ಟಿಯನ್ನು ನಿಕಷಕ್ಕೊಡ್ಡುವುದರಿಂದ ಇವು ಸಮಾಜೋ-ಮಾನವಶಾಸ್ತ್ರದ ವಿಮರ್ಶಾತ್ಮಕ ಕರಡುಗಳೂ ಹೌದು. ಈ ಬಗೆಯ ಪ್ರಕಾರವನ್ನು ಇಂಗ್ಲಿಷ್‌ನಲ್ಲಿ ‘ಕಮಿಂಗ್ ಆಫ್ ಏಜ್’ ಎಂದು ಗುರುತಿಸಲಾಗುತ್ತದೆ. ಆತ್ಮಕಥೆ ಪದದ ಬದಲು ನಮ್ಮಲ್ಲೂ ‘ವಯೋವಿಕಾಸ’ ಕಥನಗಳು ಎಂದು ಗುರುತಿಸಬಹುದು. 

ಈ ‘ವಯೋವಿಕಾಸ’ ಕಥನಗಳು ಲೇಖಕ ಪ್ರತಿನಿಧಿಸುವ ಸಮುದಾಯ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ತಮ್ಮ ಕುಟುಂಬ ಮತ್ತು ಜನಾಂಗಗಳ ಅಸ್ಮಿತೆಯನ್ನು ಪುನರ್ ನಿರ್ಮಿಸಿಕೊಳ್ಳುವಲ್ಲಿ ಎಂಥ ಭಯಾನಕ ವಾಸ್ತವವನ್ನು ಹಾದು ಬಂದವು ಎಂಬುದನ್ನು ತೆರೆದಿಡುತ್ತವೆ. ಸುಖದುಃಖಗಳನ್ನು ಸಮವಾಗಿ ಮುನ್ನೆಲೆಗೆ ತರುವ ಉಪಕಥೆ, ಸಣ್ಣ ಸಂಗತಿ, ಪ್ರಸಂಗ, ವಿನೋದ, ಕಟುವ್ಯಂಗ್ಯ, ವಾಸ್ತವದ ಹಿಂದೆ ಅಡಗಿರುವ ಕ್ರೌರ್ಯ ಮತ್ತು ಹಿಂಸೆ ಇಂತಹ ಕಥನಗಳಲ್ಲಿ ಸಹಜ. ಆಯಾ ಲೇಖಕನ ಪಕ್ವತೆ ಮತ್ತು ಸಂಯಮವನ್ನು ಆಧರಿಸಿ ಈ ಕಥನಗಳು ಓದುಗನನ್ನು ಬೆಚ್ಚಿ ಬೀಳಿಸಬಲ್ಲವು. ವಿಷಾದವುಕ್ಕಿಸಬಲ್ಲವು. ಅನುಕಂಪದಿಂದ ತುಳುಕುವಂತೆ ಮಾಡಿ ಮನಸ್ಸನ್ನು ಭಾರವಾಗಿಸಿ, ಕಣ್ಣನ್ನು ತೇವಗೊಳಿಸಬಲ್ಲವು. ನಾವು ಈವರೆಗೆ ಅರಿತಿರದ ವಾಸ್ತವಗಳನ್ನು ಇವು ಮುಂಚೂಣಿಗೆ ತರುವುದರಿಂದ ಇವು ‘ಸಂವಾದಿ ಸಂಕಥನ’ಗಳೂ ಹೌದು.

ಪ್ರಸ್ತುತ ಕೃತಿ ಕೂಡ ಮೇಲೆ ಸೂಚಿಸಿದ ಅಂಶಗಳನ್ನು ಸಂಯಮಪೂರ್ಣವಾಗಿ ನಿರುದ್ವಿಗ್ನ ಶೈಲಿಯಲ್ಲಿ ಅನಾವರಣಗೊಳಿಸುತ್ತದೆ. ಧರ್ಮಶ್ರದ್ಧೆ, ಪರಿಶ್ರಮ, ಪರೋಪಕಾರಗಳನ್ನು ಸಂಸ್ಕಾರವನ್ನಾಗಿಸಿಕೊಂಡ ಬಿಹಾರದ ಹಳ್ಳಿಯೊಂದರ ಕೃಷಿಯ ಕುಟುಂಬ ಹೊಸ ಕಾಲಮಾನದಲ್ಲಿ ಬದುಕು ಕಟ್ಟಿಕೊಳ್ಳುವ ಸಂಕಟಗಳನ್ನು ಅರುಹುತ್ತದೆ. ಕುಟುಂಬದ ನೈತಿಕ ಎಚ್ಚರವೇ ಆಗಿರುವ ಅಜ್ಜ ದಾದಾ, ಮಕ್ಕಳ ಏಳಿಗೆಗಾಗಿ ತುಳುಕುವ ಕಣ್ಣೀರನ್ನು ಪಾಪೆಯೊಳಗೆ ಹಿಡಿದಿಡಬಲ್ಲ ತಾಯಿ, ಸಂಸಾರಕ್ಕೆ ಹೊಸ ಘನತೆಯನ್ನು ತರಲು ಸ್ವಾರ್ಥವನ್ನು ತ್ಯಜಿಸಿ ಕೊಲ್ಲಿ ರಾಷ್ಟ್ರದಲ್ಲಿ ದುಡಿಯುತ್ತಿರುವ ತಂದೆ ಮತ್ತು ಚಿಕ್ಕಪ್ಪ... ಇಂಥ ಸಂಸಾರಗಳನ್ನು ದೇಶದುದ್ದಗಲಕ್ಕೂ ನಾವು ಕಾಣಬಲ್ಲೆವು. ಈ ಕುಟುಂಬಕ್ಕೆ ಧರ್ಮಪಾರಾಯಣತೆ ಹೇಗೆ ನಂಬಿಕೆಯ ಅಡಿಗಲ್ಲೋ ಹಾಗೆಯೇ ಕಬೀರ, ಕವಿ ಇಕ್ಬಾಲ್‍ರ ವಚನಗಳೂ ಪ್ರಮಾಣ. ಇಂತಹ ತಿಳಿವು ಮತ್ತು ಪಕ್ವತೆ ಪಡೆಯುತ್ತಿರುವುದು ಸಹ ಬದುಕಿನಿಂದಲೇ ಎಂದು ಲೇಖಕ ನಿಯಾಝ್ ಫಾರೂಕಿ ಮೃದುದನಿಯಲ್ಲಿ ಹೇಳ ಬಯಸುತ್ತಿದ್ದಾರೆ. 

ಪುಸ್ತಕದಲ್ಲಿ ಎರಡು ಭಾಗಗಳಿವೆ. ಹತ್ತು ವರ್ಷದ ಬಾಲಕ ಶಿಕ್ಷಣಕ್ಕಾಗಿ ಬಿಹಾರದ ತನ್ನ ಹಳ್ಳಿಯಿಂದ ದೆಹಲಿಯ, ಮುಸ್ಲಿಂ ಬಾಹುಳ್ಯವಿರುವ ಜಾಮಿಯಾ ನಗರಕ್ಕೆ ಬಂದಿಳಿಯುವಲ್ಲಿಂದ ಆರಂಭವಾದರೂ ಕಥನ ಸರಳ ರೇಖೆಯಂತಿರದೆ, ಹಿಂದೆಮುಂದೆ, ಸಿಕ್ಕುಸಿಕ್ಕಾಗಿ ಚಲಿಸುತ್ತ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಮೊಹಲ್ಲಗಳಲ್ಲಿನ ಮುಸ್ಲಿಂ ಜನಜೀವನ, ಅವರ ಕುರಿತು ಉಳಿದವರ ದೃಷ್ಟಿಕೋನ, ಸಣ್ಣಪುಟ್ಟ ಸಂಗತಿಗಳು, ಗೆಳೆತನ, ದೂರದಲ್ಲಿದ್ದರೂ ಸದಾ ತನ್ನ ಎಚ್ಚರವನ್ನು ಕಾಪಿಟ್ಟಿರುವ ಕುಟುಂಬದ ನೈತಿಕತೆ ಇತ್ಯಾದಿಗಳ ನಿರೂಪಣೆ ಮೇಲುಮಟ್ಟದ್ದಾಗಿದೆ. ಬಾಟ್ಲಾ ಹೌಸ್ (ಹುಸಿ) ಎನ್‍ಕೌಂಟರ್ ನಿರೂಪಕನ ಪ್ರಜ್ಞೆಯನ್ನು ಮತ್ತೊಂದು ಹೊರಳಿಗೆ ತರುತ್ತದೆ. ಕೆಲವೆಡೆ ತನಿಖಾ ಪತ್ರಿಕೋದ್ಯಮ ನೆನಪಿಸುವಷ್ಟು ರೋಚಕತೆಯಿದೆ. ಕಥನದ ಅಂತ್ಯ ಕೂಡ ತಾರ್ಕಿಕವಲ್ಲ. ಬದಲಿಗೆ, ಕಾಲದ ವ್ಯಂಗ್ಯ ಮತ್ತು ವಿನಾಕಾರಣದ ನಿರ್ದಯತೆಯನ್ನು ರೂಪಕವಾಗಿ ಬಳಸಿ ಮುಗಿಸಿರುವಂಥದ್ದು.

ಈ ಕೃತಿಯನ್ನು ದಶಕಗಳಿಂದ ದೆಹಲಿವಾಸಿಗಳಾದ, ಉತ್ತರ ಭಾರತದ ಕೋಮು ರಾಜಕಾರಣವನ್ನು ಅತ್ಯಂತ ಸಂವೇದನಾಶೀಲವಾಗಿ ಬರೆಯಬಲ್ಲ ಡಿ. ಉಮಾಪತಿ ಅನುವಾದಿಸಿದ್ದಾರೆ. ಪರಿಣತ ಪತ್ರಕರ್ತರೂ ಬರಹಗಾರರೂ ಆದ ಅವರ ಅನುವಾದದ ಭಾಷೆ, ಸರಾಗ ಮತ್ತು ಪರಿಣಾಮಕಾರಿ. ಉಮಾಪತಿಯವರ ತಲ್ಲೀನತೆ ಕೃತಿ ಕನ್ನಡದ್ದೇ ಎನ್ನುವಷ್ಟು ಸಹಜವಾಗಿಸಿದೆ. ಭಾಷೆಯ ಸೊಬಗು, ಹೊಸನುಡಿಗಟ್ಟುಗಳು ಕೃತಿಯ ಅನುವಾದವನ್ನು ಮೇಲುಸ್ತರಕ್ಕೆ ಏರಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು