ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕಥಾರೂಪ ತಾಳಿದ ಅನುಭವಗಳು

Last Updated 17 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಪತ್ರಕರ್ತರಾಗಿ, ಪ್ರವೃತ್ತಿಯಲ್ಲಿ ಲೇಖಕರಾಗಿ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಿತ ಲೇಖನಿ ಹಿಡಿಯುವ ಕಂ.ಕ.ಮೂರ್ತಿ ಅವರ ಹದಿನೈದು ಕಥೆಗಳ ಗುಚ್ಛ ಈ ಕೃತಿ.

ಕೆಲವು ಕಥೆಗಳಲ್ಲಿ ಮೂರ್ತಿ ಅವರ ಬಾಲ್ಯದ ನೆನಪುಗಳೇ ಕಥಾವಸ್ತುಗಳು. ಹೀಗಾಗಿಯೇ ಇರಬಹುದು ಒಂದು ತಿಂಗಳ ಅವಧಿಯಲ್ಲಿ ಈ ಕಥೆಗಳನ್ನು ಲೇಖಕರು ಬರೆದು ಮುಗಿಸಿದ್ದಾರೆ. ಪತ್ರಕರ್ತರಾಗಿ, ಸಂವೇದನಾಶೀಲ ವ್ಯಕ್ತಿಯಾಗಿ ಮೂರ್ತಿ ಅವರು ಅನುಭವಿಸಿದ ಅನುಭಾವವೇ ಕಥೆಗಳೊಳಗೆ ಹರಡಿವೆ. ಮಲೆನಾಡಿನ ಜೀವನ ಇಲ್ಲಿನ ಹಲವು ಕಥೆಗಳಲ್ಲಿ ತುಂಬಿವೆ. ಪಾತ್ರಗಳ ಮಾತು ಸರಳ. ಹೀಗಾಗಿ ಓದುಗನಿಗೆ ಬೇಗನೇ ಹತ್ತಿರವಾಗುವ ಸಾಮರ್ಥ್ಯ ಕಥೆಗಳಿಗಿವೆ. ‘ಕಥೆಗಳಲ್ಲಿನ ಪಾತ್ರಗಳು ಗ್ರಾಮಭಾರತದ ಬದುಕಿನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಓದುಗ ಅವುಗಳೊಂದಿಗೆ ತಾದ್ಯಾತ್ಮವನ್ನು ಸಾಧಿಸಬಲ್ಲ’ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಕೇಶವ ಮಳಗಿ.

ಉದಾಹರಣೆಗೆ, ಸಂಕಲನದ ಮೊದಲ ಕಥೆಯಲ್ಲಿ ‘ಶ್ರೀಗಂಧ’ ಸೂಸುವ ಸ್ಮೃತಿಯೇ ಕಥೆಯ ಜೀವಾಳ. ತಂದೆಯ ಸಾವಿನ ದುಃಖದ ನಡುವೆಯೂ ‘ನಾಗೇಶ’ ಮಲೆನಾಡಿನ ಚಿತ್ರಣವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ಸಾಗುವ ಕಥಾಪ್ರವೇಶ ಇಲ್ಲಿ ಉಲ್ಲೇಖಾರ್ಹ. ಶ್ರೀಗಂಧದ ಕೊರಡಿನ ಮೇಲೆ ಅಕ್ಷರರೂಪದಲ್ಲಿದ್ದ ‘ಸೀನ’, ಅಕ್ಷರಶಃ ಕಥೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋದಾಗ ‘ನಾಗೇಶ’ ಕನಸು, ಭ್ರಮೆಯ ಸುಳಿಯೊಳಗೆ ಸಿಲುಕುತ್ತಾನೆ.ಇಲ್ಲಿನ ಕಥನಕೌಶಲ ಮೆಚ್ಚುವಂಥದು.

ಅದೇ ರೀತಿ ‘ಮುಸ್ಸಂಜೆ’ ಕಥೆಯಲ್ಲಿನ ನಾರಾಯಣರಾವ್‌ ಪಾತ್ರ ಓದುಗರನ್ನು ಆರ್ದ್ರಗೊಳಿಸಬಲ್ಲದು. ಮುಸ್ಸಂಜೆ ಕೊನೆಗೊಳ್ಳುತ್ತಿದ್ದಂತೆಯೇ ಕಣ್ಣಂಚೂ ಒದ್ದೆಯಾದೀತು. ಕುಟುಂಬಗಳಲ್ಲಿ ಇರುವ ಪ್ರಸ್ತುತ ಸ್ಥಿತಿಗೆ ಕೈಗನ್ನಡಿ ಈ ಕಥೆ. ಕಥೆಯ ನಿರೂಪಣೆಯೂ ಚೊಕ್ಕ, ಅಷ್ಟೇ ತೀಕ್ಷ್ಣ. ಲೇಖಕರ ವೃತ್ತಿಯ ತುಣುಕೂ ಇಲ್ಲಿದೆ. ಕೃತಿಯ ಶೀರ್ಷಿಕೆ ಹೊತ್ತ ಕಥೆಗೂ ಈ ಕಥೆಗೂ ಸಾಮ್ಯತೆ ಇದೆ. ಪಾತ್ರಗಳು ಬೇರೆ ಬೇರೆಯಾದರೂ ತಿರುಳು ಅದೇ ಆಗಿದೆ. ಒಟ್ಟು, ಇಲ್ಲಿನ ಕಥೆಗಳು, ಅದರೊಳಗಿನ ಪಾತ್ರಗಳು ವಿವಿಧ ಸ್ತರದ ಬದುಕಿನ ಚಿತ್ರಣವನ್ನು ಧಾರಾಳವಾಗಿ ನೀಡಬಲ್ಲದು.

ಕೃತಿ: ಅಮೃತ ಬಳ್ಳಿ ಮತ್ತು ಇತರ ಕಥೆಗಳು

ಲೇ: ಕಂ.ಕ.ಮೂರ್ತಿ

ಪ್ರ: ಸಾಹಿತ್ಯಲೋಕ ಪಬ್ಲಿಕೇಷನ್ಸ್‌

ಸಂ: 9945939436

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT