ಶನಿವಾರ, ಸೆಪ್ಟೆಂಬರ್ 18, 2021
29 °C

ಪುಸ್ತಕ ವಿಮರ್ಶೆ: ನಾವೆಲ್ಲರೂ ಕ್ಷಮೆಯ ಸಾಲಗಾರರು...

‘ಡಾಲಿ’ ಧನಂಜಯ್ Updated:

ಅಕ್ಷರ ಗಾತ್ರ : | |

Prajavani

ನನ್ನ ‘ರತ್ನನ್ ಪ್ರಪಂಚ’ ಸಿನಿಮಾದ ಶೂಟಿಂಗ್‌ನಲ್ಲಿ ನನಗೆ ಅಕ್ಕಯ್ ಪದ್ಮಶಾಲಿ ಅವರು ಭೇಟಿಯಾದುದು. ಯಾವಾಗಲೂ ನಗುನಗುತ್ತ ಎಲ್ಲರೊಡನೆ ಒಡನಾಡಿಕೊಂಡಿದ್ದ ಅವರು, ನಿರ್ದೇಶಕರು ಕೆಲವೊಂದು ದೃಶ್ಯಗಳನ್ನು ವಿವರಿಸಿದಾಗ ಕಣ್ಣೀರಾಗಿ ಬಿಡುತ್ತಿದ್ದರು. ಒಂದು ಸಿನಿಮಾ ನೋಡುವಾಗ ಅಥವಾ ಯಾವುದೇ ಕಥೆ, ಕಾದಂಬರಿ ಓದುವಾಗ, ನಮ್ಮ ಬದುಕಿಗೆ ಹತ್ತಿರವಾಗಿರುವ, ನಂಟಿರುವ ಸನ್ನಿವೇಶಗಳು ಬಂದಾಗ ಭಾವುಕರಾಗುವುದು ಸಹಜ.

ಆದರೆ, ಅಕ್ಕಯ್‌ ಕಣ್ಣೀರಾಗುತ್ತಿರುವುದೆಂದರೆ ಮಾತಲ್ಲಿ ಹೇಳಲಾಗದ ಸಾವಿರ ಅರ್ಥಗಳಿದ್ದವು. ಅದರಲ್ಲಿ ಖುಷಿಯಿತ್ತು, ನೋವಿತ್ತು, ಹೋರಾಟದ ಕಿಚ್ಚಿತ್ತು ಮತ್ತು ಸಾರ್ಥಕತೆಯಿತ್ತು. ಅಲ್ಲದೆ, ಇನ್ನೂ ಈ ಸಮಾಜಕ್ಕೆ ಕೇಳಬೇಕಾದ ಅಸಂಖ್ಯಾತ ಪ್ರಶ್ನೆಗಳಿದ್ದವು. ಹೇಳಬೇಕಾದ ಉತ್ತರಗಳಿದ್ದವು. ಅಂದುಕೊಂಡದ್ದನ್ನು ಪಡೆಯುವ, ಸಮುದಾಯಕ್ಕೆ ಹೆಗಲಾಗಿ ನಿಲ್ಲುವ ಮನೋಸ್ಥೈರ್ಯವಿತ್ತು. ಇದೆಲ್ಲವೂ ನಿಮಗೆ ಅರ್ಥವಾಗಬೇಕೆಂದರೆ, ಅಕ್ಕಯ್ ಪದ್ಮಶಾಲಿ ಅವರ ನಿರಂತರ ಹೋರಾಟದ ಆತ್ಮಕಥನದ ಆಳಕ್ಕೆ ಇಳಿಯಬೇಕು.

‘ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಒಂದು ದೀರ್ಘ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವಂತಹದ್ದಲ್ಲ’ – ಪೂರ್ಣಚಂದ್ರ ತೇಜಸ್ವಿಯವರ ಈ ಮಾತುಗಳು ಅಕ್ಕಯ್‌ ಅವರ ಬದುಕಿನಲ್ಲಿ ನೂರರಷ್ಟು ಸತ್ಯವಾದುದು.

ಮನೆಯಲ್ಲಿನ ಭಯ, ಸಮಾಜದ ಭಯ, ಕಟ್ಟುಪಾಡುಗಳ ಸರಪಳಿ, ಎಲ್ಲ ಸಿದ್ಧಸೂತ್ರಗಳನ್ನು ಮುರಿದು, ಎಲ್ಲರನ್ನೂ ಎಲ್ಲವನ್ನೂ ಪ್ರಶ್ನಿಸಿ, ಎಲ್ಲರೂ ತನ್ನನ್ನು ತನ್ನ ಸಮುದಾಯವನ್ನು ತಮ್ಮಲೊಬ್ಬರಾಗಿ ಒಪ್ಪಿಕೊಳ್ಳಬೇಕು, ಒಪ್ಪಿಕೊಳ್ಳುವಂತಾಗಬೇಕು; ಅದಕ್ಕೆ ಸಮಾಜ ಮತ್ತು ತನ್ನ ಸಮುದಾಯ ಎರಡೂ ಕಡೆಯಿಂದ ಪ್ರಯತ್ನಗಳಾಗಬೇಕು–ಹೀಗೆಂದುಕೊಂಡು ಅದರೆಡೆಗೆ ಜೀವನವನ್ನೇ ಮುಡಿಪಾಗಿಟ್ಟು ಕೆಲಸ ಮಾಡಿರುವ ಜೀವ ಅಕ್ಕಯ್ ಪದ್ಮಶಾಲಿ.

ಹಾಗೆಯೇ ಸಂಸ್ಕೃತಿಯ ಹೆಸರಿನಲ್ಲಿ ತನ್ನ ಸಮುದಾಯದ ಒಳಗಿರುವ ಮೌಢ್ಯ, ಅನ್ಯಾಯಗಳನ್ನು ಪ್ರಶ್ನಿಸುತ್ತ, ತನ್ನೊಡನೆ ತನ್ನವರನ್ನು ಬೆಳಕಿನತ್ತ ಕೊಂಡೊಯ್ಯುತ್ತಿರುವ ಜೀವವಾಗಿದೆ. ಅಕ್ಕಯ್ ಪದ್ಮಶಾಲಿಯವರ ಬದುಕು ಮತ್ತು ಹೋರಾಟ ಇನ್ನೂ ಸಾವಿರಾರು ಜೀವಗಳಿಗೆ ಸ್ಫೂರ್ತಿ ಹಾಗೂ ಮಾದರಿ.

ಒಬ್ಬರು ನಮಗೆ ‘ಕರುಣೆ’ ತೋರಿಸುತ್ತಿದ್ದಾರೆ ಎಂದರೆ ಅದಕ್ಕಿಂತ ದುರಂತ ಸ್ಥಿತಿ ಮತ್ತೊಂದಿಲ್ಲ. ಈ ವಿಷಯದಲ್ಲಿ ಅಕ್ಕಯ್ ಮೊದಲ ಅಧ್ಯಾಯದಲ್ಲೇ ‘ನಿಮ್ಮ ಕರುಣೆಗೆ ಹೀಗೊಂದು ಸವಾಲು’ ಎಂದು ಸ್ವಾಭಿಮಾನ ಮೆರೆಯುತ್ತ, ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುತ್ತ, ನನಗೆ ನಿಮ್ಮ ಸಹಾನುಭೂತಿ ಬೇಡ ಪರಾನುಭೂತಿ (ಎಂಪಥಿ) ಬೇಕು ಎನ್ನುತ್ತಾರೆ.

ತಮ್ಮ ಬಾಲ್ಯದಿಂದಾದ ಎಲ್ಲ ಅನುಭವಗಳನ್ನು, ಅವಮಾನಗಳನ್ನು ತುಂಬಾ ನೇರವಾಗಿ ಹೇಳುತ್ತ, ತಾನು ಸತ್ತ ನಂತರ ತನ್ನ ದೇಹವನ್ನು ಆಸ್ಪತ್ರೆಗೆ ಅಧ್ಯಯನಕ್ಕೆ ನೀಡುತ್ತೇನೆ ಎಂದು ಹೇಳುವಲ್ಲಿ, ಅವರ ವೈಜ್ಞಾನಿಕ ಮನೋಭಾವ ಹಾಗೂ ದಾನ ಮಾಡುವ ಮನೋಭಾವದ ಜೊತೆಗೆ, ತಮ್ಮಂತಹವರ ದೇಹಗಳ ಬಗ್ಗೆ ಸಮಾಜಕ್ಕೆ ತುಂಬಾ ಕುತೂಹಲ ಇದೆ; ಅಧ್ಯಯನ ಮಾಡಿಕೊಳ್ಳಲಿ ಎಂಬ ನಮ್ಮ ಈ ಅಸ್ವಸ್ಥ ಸಮಾಜದ ಬಗೆಗಿನ ನೋವು ಹಾಗೂ ಕೋಪ ಎದ್ದು ಕಾಣುತ್ತದೆ.

ಹೀಗೆ ಬದುಕಿನುದ್ದಕ್ಕೂ ನಡೆದ ಎಲ್ಲ ಸಂಗತಿಗಳನ್ನೂ ಒಂಚೂರೂ ಪರಿಷ್ಕರಿಸದೆ ನೇರವಾಗಿ ಹೇಳುತ್ತಾ, ತಮ್ಮ ಆ್ಯಕ್ಟಿವಿಸಂ ಜೊತೆಗೆ, ತಾವು ಹೆಣ್ಣಾಗಿ ತಮ್ಮ ಪ್ರೇಮ, ಕಾಮ, ಸಂಸಾರ, ಅದರಾಚೆಗಿನ ಸಂಬಂಧಗಳು ಎಲ್ಲದರ ಬಗ್ಗೆಯೂ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ. ಜಗದೀಶ್ ಎಂಬ ಹುಡುಗ ಅಕ್ಕಯ್ ಪದ್ಮಶಾಲಿ ಎಂಬ ಹೆಣ್ಣಾಗಿ, ಪ್ರಪಂಚದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಸಮುದಾಯವನ್ನು ಪ್ರತಿನಿಧಿಸಿ, ಜಾಗೃತಿ ಮೂಡಿಸಿ, ತನ್ನೆಲ್ಲ ಅನುಭವವನ್ನು ಎಲ್ಲರೊಂದಿಗೆ ಹಂಚಿ
ಕೊಂಡು, ಗುಣದಲ್ಲಿ ಅಷ್ಟೈಶ್ವರ್ಯ ಸಂಪನ್ನೆ ದೊಡ್ಡಮನೆ ಅಕ್ಕಯಮ್ಮರಾಗಿ, ಸಮಾಜಕ್ಕೆ ಕೊಡುಗೆಯಾಗುವಂತಹ ಮನುಷ್ಯಳಾಗಿ ವಿಕಾಸವಾದದ್ದನ್ನು ಓದುತ್ತ, ನಾನು ಮತ್ತೂ ಮನುಷ್ಯನಾದೆ.

ಜೀವ ಜೀವಗಳ ಬಂಧವನ್ನು ಅರಿತುಕೊಳ್ಳದೆ, ಎಲ್ಲ ಜೀವಗಳೂ ಒಂದೇ ಎನ್ನುವುದನ್ನು ಒಪ್ಪಿಕೊಳ್ಳದೆ, ಇದು ನೈಸರ್ಗಿಕ, ಇದು ಅನೈಸರ್ಗಿಕ ಎಂದು ನಮಗೆ ನಾವೇ ತೀರ್ಮಾನಿಸಿಕೊಂಡು, ಅಕ್ಕಯ್‌ನಂತಹ ಎಷ್ಟೋ ಜೀವಗಳಿಗೆ ನೋವನಿತ್ತ ನಾವೆಲ್ಲರೂ ‘ಕ್ಷಮೆಯ ಸಾಲಗಾರರು’. ಇನ್ನಾದರೂ ಅರಿತುಕೊಳ್ಳದಿದ್ದರೆ, ನಮ್ಮ ಮುಂದಿನಪೀಳಿಗೆ ಕೂಡ ಕ್ಷಮೆಯ ಸಾಲಗಾರನಾಗಿಯೇ ಉಳಿಯುತ್ತದೆ.

ಪ್ರತಿಯೊಂದು ಸಾಧನೆಯ ಹಂತದಲ್ಲೂ, ತನ್ನ ಹೆಗಲನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು, ನಿಷ್ಠುರವಾಗಿ ಮುನ್ನುಗ್ಗುತ್ತಿರುವ ಅಕ್ಕಯ್ ಪದ್ಮಶಾಲಿಯವರಿಗೆ ಪ್ರಕೃತಿ ತನ್ನ ಶಕ್ತಿಯನ್ನೆಲ್ಲ ನೀಡಲಿ ಎಂದು ಹಾರೈಸುತ್ತೇನೆ.

ಲೇಖಕ: 'ಡಾಲಿ' ಧನಂಜಯ್, ನಟ


‘ಡಬಲ್‌ ರೋಲ್‌ ಮಾಡ್ತಿದ್ದೆ’

ಇಲ್ಲಿಯವರೆಗಿನ ಬದುಕಿನ ಪಯಣದ ಕುರಿತು ಹೇಳುವುದಾದರೆ, ಅದು ಸಾಮಾಜಿಕ ಆ್ಯಕ್ಟಿವಿಸಂನ ಸಣ್ಣಸಣ್ಣ ತುಣುಕುಗಳನ್ನು ಹೆಕ್ಕಿ ಹೆಣೆದಿರುವುದೇ ಆಗಿದೆ. ಅಕ್ಕಯ್ಯ ಅಂದರೆ ಯಾರು? ಆಕೆ ಈ ಆ್ಯಕ್ಟಿವಿಸಂಗೆ ಬಂದದ್ದಾದರೂ ಹೇಗೆ? ಹೀಗೆ ಕಥೆಯನ್ನು ಶುರು ಮಾಡಬಹುದು. ಅಂದರೆ ಈ ಪಯಣವನ್ನು ಬಾಲ್ಯದಿಂದಲೇ ಶುರು ಮಾಡಬಹುದಲ್ಲವೇ..?

ನನ್ನ ಹೆಸರು ಜಗದೀಶ್. ಮಧ್ಯಮ ವರ್ಗದ ಸಣ್ಣ ಕುಟುಂಬದಲ್ಲಿ ಗಂಡಾಗಿಯೇ ಹುಟ್ಟಿದ್ದು. ತಂದೆ ಭಾರತೀಯ ರಕ್ಷಣಾ ಸಚಿವಾಲಯದ ಏರೋನಾಟಿಕಲ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದರು. ಅಮ್ಮ ಗೃಹಿಣಿ. ಅಂತಹ ಕುಟುಂಬದ ಸಾಮಾನ್ಯ ನಿರೀಕ್ಷೆಯೆಂದರೆ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗುವಿದ್ದರೆ ಸಾಕು ಎನ್ನುವುದು. ಹಾಗೆಯೇ ಆಗಿತ್ತು. ಅಂದರೆ, ನನ್ನೊಡನೆ ಮತ್ತಿಬ್ಬರು ಒಡಹುಟ್ಟಿದವರು ಇದ್ದರು. ಹಿರಿಯಳಾದ ಅಕ್ಕನಿಗೆ ದಲಿತ ವ್ಯಕ್ತಿಯೊಡನೆ ಮದುವೆಯಾಗಿದೆ. ಆಕೆಗೆ ಇಬ್ಬರು ಗಂಡುಮಕ್ಕಳು. ತಮ್ಮನಿಗೆ ರೋಮನ್ ಕ್ಯಾಥೊಲಿಕ್‌ ಕ್ರೈಸ್ತ ಮಹಿಳೆಯೊಂದಿಗೆ ಮದುವೆಯಾಗಿದ್ದು, ಒಂದು ಮಗು ಇದೆ. ನಾನು ಈ ಇಬ್ಬರ ನಡುವಿನ ಮಗುವಾಗಿದ್ದೆ!

ಅಪ್ಪ-ಅಮ್ಮ ಇಬ್ಬರ ಕಡೆಯಿಂದಲೂ ಸಂಬಂಧಿಕರು ಹೆಚ್ಚು. ಇಂತಹ ಕುಟುಂಬದೊಳಗೆ ನಾನು ಹೆಣ್ಣುತನದತ್ತ ವಾಲಿದ್ದೆ, ಹುಡುಗಿಯಾಗಬೇಕೆಂದೇ ಇಚ್ಛಿಸಿದ್ದೆ. ಆ ಕುರಿತಂತೆ ಮಾತನಾಡಿದ್ದೂ ಇದೆ! ಗೆಜ್ಜೆ ತೊಟ್ಟು, ಅಮ್ಮನ ಸೀರೆಯುಟ್ಟು ಸಿಂಗಾರ ಮಾಡಿಕೊಳ್ಳುತ್ತಿದ್ದೆ. ಹಾಗೆಯೇ ಟವಲ್ ತೊಟ್ಟು, ಉದ್ದ ಕೂದಲಿನವಳೆಂದು ನಟಿಸುತ್ತಿದ್ದೆ.

ಅಕ್ಕನ ಚಪ್ಪಲಿಗಳನ್ನು ಕದ್ದು, ಅವುಗಳಲ್ಲಿ ಹೆಜ್ಜೆಯಿಟ್ಟು ನಡೆಯಲು ಪ್ರಯತ್ನಿಸುತ್ತಿದ್ದೆ. ಸ್ನೇಹಿತರ ನಡುವೆ ಹುಡುಗಿಯಂತೆಯೇ ವರ್ತಿಸುತ್ತಿದ್ದೆ. ತೊಟ್ಟಿದ್ದ ಪ್ಯಾಂಟ್ ಶರ್ಟ್ ನನಗೆ ಚೂಡಿದಾರವೇ ಆಗಿತ್ತು. ನಾನು ಹೆಣ್ಣಿನ ಲಕ್ಷಣಗಳನ್ನು ತೋರುತ್ತಿರುವುದನ್ನು ಪೋಷಕರು ಗಮನಿಸಿದ್ದರು. ಅದಕ್ಕವರು, ‘ನೀನು ಹುಡುಗನಾಗಿ ಹುಟ್ಟಿದ್ದೀಯ. ಹುಡುಗನಂತೆಯೇ ಮಾತನಾಡಬೇಕು. ಗಂಡಸಿನಂತೆಯೇ ನಡೀಬೇಕು’ ಎಂದು ಪ್ರತಿಕ್ರಿಯಿಸುತ್ತಿದ್ದರು.

ಆ ಸಮಯದಲ್ಲಿ ಪೋಷಕರು ಏನು ಹೇಳಿದರೂ, ಅದರಂತೆ ಮಾಡುತ್ತಿದ್ದೆ. ಹುಡುಗನಂತೆ ದಿಟ್ಟವಾಗಿ ನಡೆಯಲು ಪ್ರಯತ್ನಿಸಿದ್ದೂ ಹೌದು. ಹುಡುಗನಂತೆ ವರ್ತಿಸಲು, ಮಾತನಾಡಲು ಪ್ರಯತ್ನಿಸಿದಷ್ಟೂ ಕಷ್ಟವೇ ಆಗುತ್ತಿತ್ತು. ಹೀಗಿರುವಾಗ, ಎಂಟನೇ ವಯಸ್ಸಿನಲ್ಲಿಯೇ ಹುಡುಗನಲ್ಲ, ಹುಡುಗಿ ಎಂದು ಸಂಪೂರ್ಣವಾಗಿ ಅರಿತುಕೊಂಡೆ.

ಮರೆಯಲಾಗದ ಘಟನೆಯೊಂದು ನೆನಪಿಗೆ ಬರುತ್ತಿದೆ – ಅದೊಂದು ದಿನ ಹುಡುಗಿಯರೊಂದಿಗೆ ‘ಕುಂಟೆಬಿಲ್ಲೆ’ ಆಟವಾಡುತ್ತಿದ್ದೆ. ತಂದೆ ಉದ್ದ ವಿದ್ಯುತ್ ತಂತಿ ಹಿಡಿದು ಬಂದರು. ಎಲ್ಲರೆದುರು ಹೊಡೆಯಲು ಶುರು ಮಾಡಿದರು. ಹೊಡೆಯುತ್ತಲೇ ಬಾಬ್ ಕಟ್ ಕೂದಲನ್ನು ಹಿಡಿದೆಳೆಯುತ್ತಾ ಮನೆಯತ್ತ ಎಳೆದೊಯ್ದರು. ಮನೆಯೊಳಗೆ ಪಾತ್ರೆಯಲ್ಲಿ ಕುದಿಯುತ್ತಿದ್ದ ಬಿಸಿನೀರನ್ನು ಕಾಲುಗಳ ಮೇಲೆ ಸುರಿದರು. ಹಾಗೆ ಮಾಡುವ ಮೂಲಕ ನಾನು ಮತ್ತೆಂದೂ ಹುಡುಗಿಯಂತೆ ವರ್ತಿಸುವುದಿಲ್ಲ ಎಂದು ಭಾವಿಸಿದ್ದರು.

ಆಗ ನನಗೆ ಎಂಟು ಅಥವಾ ಒಂಬತ್ತು ವರುಷವಾಗಿತ್ತೆಂದು ಕಾಣುತ್ತೆ. ಜೋರಾಗಿ ಚೀರಿಕೊಂಡೆ. ಕೂಗು ಕೇಳಿದ ಅಕ್ಕಪಕ್ಕದವರೆಲ್ಲ ಅಲ್ಲಿಗೆ ಬಂದು ಏನಾಯಿತೆಂದು ಕೇಳಿದರು. ಆಗ ತಂದೆ, ‘ಈತ ನನ್ನ ಮಗ. ಈ ರೀತಿ ವರ್ತಿಸುತ್ತಿದ್ದಾನೆ... ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ಜನ ಅವನನ್ನು ಚಕ್ಕಾ, ಸಂಗ, ಒಂಬತ್ತು ಎಂದು ಕರೆಯುತ್ತಿದ್ದಾರೆ. ನಾ ಇದನ್ನು ಒಪ್ಪಿ ಸುಮ್ಮನಿರಬೇಕಾ...?’ ಎಂದರು.

ಕಾಲುಗಳು ಬೆಂದು ಹೋದವು. ಮಾತನಾಡಲು ಸಾಧ್ಯವಾಗುತ್ತಿಲ್ಲ. ತಾಯಿ ನಮ್ಮಿಬ್ಬರ ನಡುವೆ ಬಂದರು. ಒಡಹುಟ್ಟಿದವರು ಬಂದರು. ಆದರೂ ತಂದೆ ಕೋಪ ಕಡಿಮೆಯಾಗಲಿಲ್ಲ. ಈ ಎಲ್ಲದರ ನಂತರ, ಮೂರು ತಿಂಗಳು ನನ್ನನ್ನವರು ಮನೆಯಲ್ಲಿ ಕೂಡಿ ಹಾಕಿದ್ದರು. ಎಲ್ಲಿಯೂ ಹೋಗಲಾಗಲಿಲ್ಲ. ಸೂರ್ಯನನ್ನು ನೋಡಲಾಗಲಿಲ್ಲ. ಸ್ನೇಹಿತರನ್ನು ನೋಡಲು ಬಿಡಲಿಲ್ಲ. ಶಾಲೆಗೂ ಹೋಗಲು ಬಿಡಲಿಲ್ಲ.

ಮನೆಯಲ್ಲಿ ಬಂದಿಯಾದ ಆ ಸಮಯದಲ್ಲಿ ಪಾತ್ರೆ ತೊಳೆಯುತ್ತಿದ್ದೆ; ಅಮ್ಮನೊಡನೆ ಅಡುಗೆ ಮಾಡುವುದು; ಬಟ್ಟೆ ತೊಳೆದು ಮನೆಯನ್ನು ಒರೆಸಿ ಸ್ವಚ್ಛ ಮಾಡುವುದು... ಮುಂತಾದ ಕೆಲಸ ಮಾಡುತ್ತಿದ್ದೆ. ಹೀಗೆ, ಮಹಿಳೆಯರು ಮನೆಯಲ್ಲಿ ಏನು ಮಾಡುತ್ತಾರೋ, ಅದಕ್ಕೆ ಹೊಂದಿಕೊಂಡು ನಡೆದೆ. ರಂಗೋಲಿ ಹಾಕುವುದನ್ನು ಇಷ್ಟಪಟ್ಟು ಕಲಿತುಕೊಂಡೆ.

ಹೆತ್ತವರು ಹತ್ತಿರ ಬಂದಾಗ ಗಂಡಸಿನಂತೆ ವರ್ತಿಸಿ, ಗಂಡಸಿನಂತೆ ಹೆಜ್ಜೆ ಹಾಕುತ್ತಿದ್ದೆ. ಇದು ಸುಲಭವಿರಲಿಲ್ಲ. ದನಿ ಅಡಗಿ ಹೋಗಿತ್ತು. ನಾನು ಡಬಲ್ ರೋಲ್ ಮಾಡುತ್ತಿದ್ದೆ. ಹೊರಗೆ ಗಂಡಸು. ಆದರೆ ನನ್ನೊಳಗೆ ಹೆಣ್ಣಾಗಿದ್ದೆ. ಲಿಂಗ ಸಂಬಂಧವಾದ ಈ ದ್ವಿಪಾತ್ರ ಮನೋರಂಗದಲ್ಲಿ ದೊಡ್ಡ ಗದ್ದಲವನ್ನೇ ಎಬ್ಬಿಸಿತ್ತು.

ತಂದೆಯ ಪ್ರತಿಷ್ಠೆಯ ಕಾರಣ, ನನ್ನನ್ನು ಒಂದು ಪುರುಷ ವೈದ್ಯರ ಬಳಿ ಕರೆದೊಯ್ದರು. ವೈದ್ಯರು ತಂದೆಗೆ ‘ಮಗ ಪಕ್ಕಾ’ ಎಂದರು. ಸ್ವಲ್ಪ ಔಷಧಿ ನೀಡಿದರು; ನಂತರ ತಲೆ, ಎದೆ, ಬೆನ್ನು, ಶಿಶ್ನದ ಮೇಲೆ ಒಂದು ರೀತಿಯ ತಂತಿಯನ್ನು ಅಂಟಿಸಲಾರಂಭಿಸಿದರು. ಹೆದರಿಕೆಯಿಂದ ನಡುಗುತ್ತಿದ್ದೆ, ಅಲ್ಲಿ ಏನಾಗುತ್ತಿದೆ ಎಂದೂ ತಿಳಿಯಲಿಲ್ಲ. ಈ ಜನಕ್ಕೆ ಹೇಗೆ ಮುಖಾಮುಖಿಯಾಗೋದು? ವೈದ್ಯರ ಮುಂದೆ ನನ್ನ ಬಟ್ಟೆಗಳನ್ನು ಬಿಚ್ಚಿದರು. ಹೆತ್ತವರಿಗೂ ಅವಮಾನವಾಗಿತ್ತು.

ಇದೆಲ್ಲ ಆದ ಮೇಲೂ... ನಾನೊಬ್ಬಳು ಹೆಣ್ಣು ಎಂದೇ ಮನೆಗೆ ವಾಪಸ್ಸಾಗುತ್ತಿದ್ದೆ. ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಮೇಕಪ್‍ ಮಾಡಿಕೊಳ್ಳುತ್ತಿದ್ದೆ. ‘ನಾನೇಕೆ ಹೀಗೆ ಮಾಡಿಕೊಳ್ಳುತ್ತಿರುವೆ? ಜನರೇಕೆ ಒಪ್ಪಿಕೊಳ್ಳುತ್ತಿಲ್ಲ?’ ನನ್ನಷ್ಟಕ್ಕೇ ಕೇಳಿಕೊಳ್ಳುತ್ತಿದ್ದೆ.

(ಅಕ್ಕಯ್‌ ಆತ್ಮಕಥನದ ಕೆಲವು ತುಣುಕುಗಳು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು