ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಎಲ್ಲ ಹೃದಯಗಳು ಪ್ರೀತಿಯ ಕಡೆಗೆ

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಕಾದಂಬರಿ ಪ್ರಕಾರ ಮಗ್ಗುಲು ಬದಲಿಸಿ ಕಣ್ಣರಳಿಸುತ್ತಿರುವ ಸಂದರ್ಭದಲ್ಲಿ ಪ್ರಕಟಗೊಂಡಿರುವ ಎನ್‌. ಸಂಧ್ಯಾರಾಣಿ ಅವರ ‘ಇಷ್ಟುಕಾಲ ಒಟ್ಟಿಗಿದ್ದು...’ ಹೊಸ ಕಟಾವಿನ ಗಮನಾರ್ಹ ಫಸಲುಗಳಲ್ಲೊಂದು. ಸಾಹಿತ್ಯ ಮತ್ತು ಸಿನಿಮಾದ ವಿದ್ಯಾರ್ಥಿ ಸಂಧ್ಯಾರಾಣಿ, ಇದೇ ಮೊದಲ ಬಾರಿಗೆ ದೀರ್ಘ ಬರವಣಿಗೆಗೆ ತಮ್ಮನ್ನೊಡ್ಡಿಕೊಂಡಿದ್ದಾರೆ ಹಾಗೂ ಆ ಪ್ರಯೋಗದಲ್ಲಿ ಗಮನಾರ್ಹ ಯಶಸ್ಸನ್ನೂ ಸಾಧಿಸಿದ್ದಾರೆ.

‘ಇಷ್ಟುಕಾಲ ಒಟ್ಟಿಗಿದ್ದು...’ ಸಂಬಂಧಗಳ ಶೋಧದ ಕೃತಿ. ಪ್ರೀತಿಗಾಗಿ ಹಂಬಲಿಸುವ ಹಾಗೂ ಪ್ರೀತಿಯನ್ನು ಪಡೆಯುವಲ್ಲಿ ವ್ಯಕ್ತಿ ಘನತೆಯೊಂದಿಗೆ ರಾಜಿಯಾಗದ ದಿಟ್ಟ ಹೆಣ್ಣುಮಕ್ಕಳು ಈ ಕಾದಂಬರಿಯಲ್ಲಿದ್ದಾರೆ. ಹೊಸ ತಲೆಮಾರಿನ ಹೆಣ್ಣುಮಕ್ಕಳ ತವಕ ತಲ್ಲಣಗಳನ್ನು ಕಾದಂಬರಿ ಆಪ್ತವಾಗಿ, ಆರ್ದ್ರತೆಯಿಂದ ಕಟ್ಟಿಕೊಡುತ್ತದೆ. ಗೌರಿ, ಇನಾಯ, ಅರುಂಧತಿ ಹಾಗೂ ರಾಮಚಂದ್ರ ಎನ್ನುವ ಸಮಾನವಯಸ್ಕ ಗೆಳೆಯರ ಈ ಕಥೆಯಲ್ಲಿ ಸರೋಜಿನಿ ಎನ್ನುವ ಪ್ರೌಢ ವಯಸ್ಕ ಮಹಿಳೆಯ ವೃತ್ತಾಂತವೂ ಇದೆ.

ಇಲ್ಲಿನ ಮಹಿಳೆಯರು ಜಾಗತೀಕರಣ ಸಂದರ್ಭ ಕಲ್ಪಿಸಿದ ಆರ್ಥಿಕ ಸ್ವಾತಂತ್ರ್ಯದ ಫಲಾನುಭವಿಗಳು. ಆರ್ಥಿಕ ಸ್ವಾತಂತ್ರ್ಯದ ಕಾರಣದಿಂದಾಗಿ ಪುರುಷಪ್ರಧಾನ ಸಮಾಜದ ಪೂರ್ವಗ್ರಹಗಳನ್ನು ಪ್ರಶ್ನಿಸುವುದು ಅವರಿಗೆ ಸಾಧ್ಯವಾಗಿದೆ. ಸಾಮಾಜಿಕವಾಗಿ ಏನೆಲ್ಲ ಪ್ರಭಾವಳಿಗಳನ್ನು ಸೃಷ್ಟಿಸಿಕೊಂಡರೂ, ಅಂತರಂಗದಲ್ಲಿ ಪ್ರತಿಯೊಬ್ಬರೂ ಪ್ರೀತಿಗಾಗಿ ಹಂಬಲಿಸುವವರೇ ಆಗಿದ್ದಾರೆ ಎನ್ನುವುದನ್ನು ಕಾದಂಬರಿ ಕಾಣಿಸುತ್ತದೆ. ಕಥಾನಾಯಕಿಯರೇ ಇಲ್ಲಿ ಪ್ರಧಾನವಾಗಿದ್ದರೂ, ಹೆಣ್ಣಿನ ಅನನ್ಯತೆಯನ್ನು ಎತ್ತಿಹಿಡಿಯುವಲ್ಲಿ ಕಾದಂಬರಿ ವಿಶೇಷ ಆಸ್ಥೆ ವಹಿಸಿದ್ದರೂ, ಪುರುಷನನ್ನು ಎಲ್ಲೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ. ತನ್ನ ಬಾಳಿನಿಂದ ನಿರ್ಗಮಿಸಿದ ನಿರಂಜನನ ಬಗ್ಗೆ ಸರೋಜಿನಿಗೆ ಎಷ್ಟೇ ಪ್ರಶ್ನೆಗಳಿದ್ದರೂ, ಅವನನ್ನು ದ್ವೇಷಿಸುವುದು ಅವಳಿಂದ ಸಾಧ್ಯವಿಲ್ಲ. ಪ್ರತ್ಯೇಕವಾಗಿ ಬದುಕುತ್ತಿದ್ದರೂ, ತಂತುಹರಿದ ಸಂಬಂಧವನ್ನು ಯಾವುದೋ ರೂಪದಲ್ಲಿ ಉಳಿಸಿಕೊಳ್ಳುವುದರಲ್ಲಿ ಅವಳಿಗೆ ಸುಖವಿದೆ. ವ್ಯಕ್ತಿಘನತೆಯನ್ನು ಲಘುವಾಗಿ ಕಾಣದ ಕಾರಣದಿಂದಲೇ ಈ ಕಾದಂಬರಿಗೆ ವಿಶೇಷ ಚೆಲುವು ಪ್ರಾಪ್ತವಾಗಿದೆ.

ಸಂಬಂಧಗಳ ಶೋಧದ ನೆಪದಲ್ಲಿ ಸಂಧ್ಯಾರಾಣಿ ಅವರು ಸೃಷ್ಟಿಸಿರುವ ಪಾತ್ರಗಳು ಕುತೂಹಲಕರವಾಗಿವೆ. ತನ್ನ ಮೈಬಣ್ಣ ಹಾಗೂ ರೂಪದ ಕುರಿತಾದ ಕೀಳರಿಮೆಯೊಂದಿಗೆ ಕುಟುಂಬದ ಒಣಹೆಮ್ಮೆಯನ್ನೂ ನೀಗಿಕೊಳ್ಳುವ ಉದ್ದೇಶದಿಂದ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ ಅರುಂಧತಿ ಕಾದಂಬರಿಯಲ್ಲಿ ಗಮನಸೆಳೆಯುವ ಪಾತ್ರ. ತನಗಿಂತಲೂ ಹಿರಿಯನಾದ ರಾಜ್‌ದೀಪ್‌ನೊಂದಿಗೆ ಆಕೆ ಕಟ್ಟಿಕೊಳ್ಳುವ ಸಂಬಂಧ ಹಾಗೂ ಆ ನಂಟನ್ನು ನಿಭಾಯಿಸುವ ಪರಿ ಸುಲಭ ತರ್ಕಕ್ಕೆ ನಿಲುಕದಂತಹದ್ದು. ನಿರ್ಭಿಡೆಯಿಂದ ಮಾತನಾಡುವ, ಕುಟುಂಬದೊಂದಿಗೆ ವೃತ್ತಿಜೀವನವನ್ನೂ ನಿಭಾಯಿಸಲು ಹೆಣಗುವ ಇನಾಯ ಮತ್ತು ಅವಳಿಗೆ ಬೆಂಬಲವಾಗಿ ನಿಲ್ಲುವ ರಫಿಯ ದಾಂಪತ್ಯ ಒಂದು ಬದಿಗಿದ್ದರೆ, ವಿರುದ್ಧ ದಿಕ್ಕುಗಳಂತೆ ಕಾಣಿಸುವ ರಾಮಚಂದ್ರ ಹಾಗೂ ಅನುಪಮಾ ಅವರ ಸಹಜೀವನ ಇನ್ನೊಂದು ಬದಿಗಿದೆ. ಅಮ್ಮ ಸರೋಜಿನಿಯ ಬದುಕನ್ನು ಅನುಕಂಪದಿಂದ ನೋಡುತ್ತಲೇ, ಪ್ರೀತಿಯ ಸುಳಿಯೊಳಗೆ ಇಳಿಯುವ ಗೌರಿಯಿದ್ದಾಳೆ.

ಮದುವೆಯ ಚೌಕಟ್ಟು ಅಥವಾ ಆ ಚೌಕಟ್ಟಿಲ್ಲದೆಯೂ ಒಟ್ಟಿಗೆ ಜೀವನ ನಡೆಸುವ ಜೋಡಿಗಳು, ಇದ್ದಕ್ಕಿದ್ದಂತೆ ಎದುರಾದ ಸನ್ನಿವೇಶಗಳಿಂದ ವಿಚಲಿತಗೊಳ್ಳುವುದು ಹಾಗೂ ಸಂಬಂಧಗಳ ಅಸಲಿಯತ್ತನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಈ ಕಾದಂಬರಿಯ ಮುಖ್ಯ ಆಸಕ್ತಿ. ಕೊಂಚ ಹದತಪ್ಪಿದರೂ ಲಘುವಾಗಬಹುದಾದ ವ್ಯಕ್ತಿತ್ವಗಳನ್ನು ಕಾದಂಬರಿಕಾರ್ತಿ ಬಹು ಜತನದಿಂದ ಕಟ್ಟಿಕೊಟ್ಟಿದ್ದಾರೆ. ಯಾವ ಪಾತ್ರದ ವಕಾಲತ್ತನ್ನೂ ವಹಿಸದಿರುವುದು ಹಾಗೂ ಹೆಸರಿನ ಕಾರಣದಿಂದಾಗಿ ಸಂಬಂಧವನ್ನು ಎತ್ತರಕ್ಕೇರಿಸುವುದು ಅಥವಾ ಲಘುವಾಗಿಸುವುದನ್ನು ಮಾಡದಿರುವ ಆರೋಗ್ಯಕರ ಮನೋಧರ್ಮ ಈ ಕಾದಂಬರಿಯನ್ನು ರೂಪಿಸಿದೆ. ಯಾವುದೋ ನಂಟಿನ ಸೂತ್ರದಲ್ಲಿ ಪರಸ್ಪರ ಹೆಣೆದುಕೊಂಡ ಹೆಣ್ಣುಮಕ್ಕಳ ಬದುಕನ್ನು ಕಾದಂಬರಿಗಾರ್ತಿ ಎಷ್ಟು ಆಸ್ಥೆಯಿಂದ ಚಿತ್ರಿಸಿದ್ದಾರೆಂದರೆ, ಇವರೆಲ್ಲ ಯಾವುದೋ ಒಂದು ಬಗೆಯಲ್ಲಿ ನಮ್ಮೊಂದಿಗೆ ಒಡನಾಡುತ್ತಿರುವವರೇ ಎನ್ನಿಸಿಬಿಡುತ್ತದೆ.

‘ಇಷ್ಟುಕಾಲ ಒಟ್ಟಿಗಿದ್ದು...’ ಎನ್ನುವುದು ಕಾದಂಬರಿಯ ಎಲ್ಲ ಪಾತ್ರಗಳ ಅಂತರಂಗದ ಆಲಾಪ. ಆದರೆ, ಈ ಉದ್ಗಾರದ ನಂತರದ – ‘...ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ’ ಎನ್ನುವ ಪ್ರಶ್ನೆಯ ಮಾತನ್ನೂ ಗಮನಿಸಬೇಕು. ಅರಿತೆವೇನು ನಾವು ನಮ್ಮ ಅಂತರಾಳವ ಎನ್ನುವ ಜಿಜ್ಞಾಸೆ ಸಂಗಾತಿಯ ಕುರಿತಾದ ಪ್ರಶ್ನೆಯಷ್ಟೇ ಆಗಿರದೆ, ಕಾದಂಬರಿಯಲ್ಲಿ ನಮ್ಮನ್ನು ನಾವು ಅರಿಯುವ ಸ್ವವಿಮರ್ಶೆಯೂ ಆಗಿದೆ. ಸರೋಜಿನಿ, ರಾಮಚಂದ್ರ ಹಾಗೂ ಅವನ ಸಂಗಾತಿ ಅನುಪಮಾ ಸೇರಿದಂತೆ ಎಲ್ಲರೂ ಈ ಅರಿಯುವ ದಾರಿಯ ಪಥಿಕರೇ. ಸಂಗಾತಿ ತಮ್ಮನ್ನು ಅರಿಯಬೇಕೆನ್ನುವ ಅಪೇಕ್ಷೆ, ಏಕಮುಖವಾಗಿರಬಾರದೆನ್ನುವ ಎಚ್ಚರವನ್ನು ಇಲ್ಲಿನ ಪಾತ್ರಗಳು ಕಾಣಿಸುತ್ತವೆ.

ಸಂಧ್ಯಾರಾಣಿ ಅವರ ಕಾದಂಬರಿಯ ಶಕ್ತಿ ಪಾತ್ರಗಳ ಪೋಷಣೆಯಲ್ಲಿರುವಂತೆಯೇ ಬರವಣಿಗೆಯಲ್ಲಿಯೂ ಇದೆ. ಕಾದಂಬರಿಗಾರ್ತಿ ಒಂದು ಪಾತ್ರವೂ ಆಗಿರುವುದು ನಿರೂಪಣೆಗೆ ಲವಲವಿಕೆ ತಂದುಕೊಟ್ಟಿದೆ. ಸುರಳೀತ ಭಾಷೆಯಿಂದಾಗಿಯೂ ಗಮನಸೆಳೆಯುವ ಈ ಕಥನಕ್ಕೆ, ಒಂದೇ ಸಿಟ್ಟಿಂಗ್‌ನಲ್ಲಿ ಓದಿಸಿಕೊಳ್ಳುವ ತೀವ್ರತೆಯಿದೆ.

ಪಾತ್ರಗಳನ್ನು ಚಿತ್ರಿಸುವುದರಲ್ಲಿ ಗಮನಸೆಳೆಯುವ ಕಾದಂಬರಿಗಾರ್ತಿಗೆ, ಪರಿಸರವನ್ನೂ ಕಥನದ ಭಾಗವಾಗಿಸುವಲ್ಲಿ ಅಷ್ಟಾಗಿ ಆಸಕ್ತಿ ಇರುವಂತಿಲ್ಲ. ಪರಿಸರವೂ ಕಥನದ ಭಾಗವಾಗುವ ಸಾಧ್ಯತೆಗಳನ್ನೂ ಅವರು ಬಿಟ್ಟುಕೊಟ್ಟಿರುವುದಿದೆ. ಉದಾಹರಣೆಗೆ, ಅರುಂಧತಿಯ ದೆಹಲಿ ಭೇಟಿಯನ್ನು ಗಮನಿಸಬಹುದು. ಅರುಂಧತಿ ಮತ್ತು ರಾಜ್‌ದೀಪ್‌ ದೆಹಲಿಯ ವಿಶ್ವಪ್ರಸಿದ್ಧ ಚಾಂದನಿ ಚೌಕ್‌ಗೆ ಚಹಾ ಕುಡಿಯಲು ಹೋಗುತ್ತಾರೆ. ಚಾಂದನಿ ಚೌಕದ ಚೆಲುವು ಹಾಗೂ ಅಲ್ಲಿನ ಚಹಾದ ಸ್ವಾದ, ಅದಾಗತಾನೆ ಮೂಡುತ್ತಿದ್ದ ಸಂಬಂಧವೊಂದಕ್ಕೆ ಭಿತ್ತಿಯಾಗಿ ಒದಗಬಹುದಿತ್ತು. ಈ ಪ್ರಸಂಗ ಕಾದಂಬರಿಯಲ್ಲಿ ಎಷ್ಟು ಸರಾಗವಾಗಿ ರೂಪುಗೊಂಡಿದೆಯೆಂದರೆ, ಚಹಾ ಕುಡಿಯುವ ಪ್ರದೇಶ ಚಾಂದನಿ ಚೌಕ ಆಗಿರದಿದ್ದರೂ ಕಥನದಲ್ಲೇನೂ ವ್ಯತ್ಯಾಸವಾಗುತ್ತಿರಲಿಲ್ಲ.

ಇಷ್ಟುಕಾಲ ಒಟ್ಟಿಗಿದ್ದು...
ಲೇ: ಎನ್. ಸಂಧ್ಯಾರಾಣಿ
ಪ್ರ: ಸಾವಣ್ಣ ಎಂಟರ್‌ಪ್ರೈಸಸ್‌, ಬೆಂಗಳೂರು. ಮೊ: 9036312786

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT