ಸೋಮವಾರ, ಏಪ್ರಿಲ್ 19, 2021
23 °C

ವಿಮರ್ಶೆ: ಬದುಕಿನ ದಣಿವು ನೀಗಿ ಶಕ್ತಿ ತುಂಬುವ ಕಥೆಗಳು

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಅನಾರ್ಕಲಿಯ ಸೇಫ್ಟಿಪಿನ್
ಲೇ: ಜಯಂತ ಕಾಯ್ಕಿಣಿ
ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಫೋನ್: 080–2661 7100, 2661 7755

**
ಮನೆಯ ಚೌಕಟ್ಟಿನೊಳಗೆ ಹೆಣ್ಣೊಬ್ಬಳು ಅನುಭವಿಸುವ ಒಳಗುದಿಯನ್ನು ಶಮನಗೊಳಿಸುವ ಬಾವಿಕಟ್ಟೆಯಂತೆ; ಮನಸ್ಸಿಗೆ ಹೊಸ ಉಲ್ಲಾಸ ತುಂಬುವ ಕಾಡಿನ ಬಣ್ಣಗಳು, ನದಿಯ ಹರಿವು, ಜಲಪಾತದ ನೊರೆಧಾರೆ, ಪಕ್ಷಿಗಳ ಇಂಚರದಂತೆ ಜಯಂತ ಕಾಯ್ಕಿಣಿಯವರ ಕಥೆಗಳಿಗೂ ದಣಿದ ಮನಸ್ಸಿಗೆ ಹೊಸ ಹುರುಪು ತುಂಬುವ ಔಷಧಗುಣವಿದೆ. ತಮ್ಮ ತೆಕ್ಕೆಗೆ ಬಂದ ಸಹೃದಯರ ಅಂತರಂಗದ ಅಸ್ಪಷ್ಟ ತಲ್ಲಣಗಳನ್ನು ಅವರಿಗೇ ಕಾಣಿಸುತ್ತ, ಎದೆಗೂಡಿನಿಂದ ಆಗಸಕ್ಕೆ ಹಾರಿಬಿಡುವಂತೆ ಅವರ ಕಥೆಗಳು ಕಾಣಿಸುತ್ತವೆ.

‘ಅನಾರ್ಕಲಿಯ ಸೇಫ್ಟಿಪಿನ್‌’ ಜಯಂತರ ಏಳನೇ ಕಥಾ ಸಂಕಲನ. ಈ ಕಥಾಗುಚ್ಛದ ಒಂಬತ್ತೂ ಕಥೆಗಳನ್ನು ಅವರ ಕಥೆಯ ಶೈಲಿಯನ್ನೇ ಅನುಕರಿಸಿ ಹೇಳುವುದಾದರೆ, ಮದುವೆ ಮನೆಯಲ್ಲಿ ತಾರುಣ್ಯದ ತಂಗಾಳಿ ಚೆಲ್ಲುತ್ತ ನೆರಿಗೆಗಳನ್ನು ನಿಭಾಯಿಸುತ್ತ ಸುಳಿದಾಡುವ ಯುವತಿಯರಂತಿವೆ. ‘ಕುತನಿ ಕುಲಾವಿ’, ‘ಭಾಮೆ ಕೇಳೊಂದು ದಿನ’, ‘ವಾಯಾ ಚಿನ್ನದ ಕೇರಿ’, ‘ಅನಾರ್ಕಲಿಯ ಸೇಫ್ಟಿಪಿನ್‌’, ‘ಹಲೋ... ಮೈಕ್‌ ಟೆಸ್ಟಿಂಗ್‌...’ ರೀತಿಯ ಕಥೆಗಳ ಶೀರ್ಷಿಕೆಗಳೇ ಓದುವ ಆಸೆ ಹುಟ್ಟಿಸುವಷ್ಟು ಚೆಲುವಾಗಿವೆ.

ಸಂಕಲನದ ಬಹುತೇಕ ಕಥೆಗಳು ಆರಂಭವಾಗುವುದು ಪಾತ್ರವೊಂದರ ಓಟ, ಪಯಣ ಅಥವಾ ನಿರೀಕ್ಷೆಯಲ್ಲಿ. ಸಂಕಲನದ ಮೊದಲ ಕಥೆ ‘ಕುತನಿ ಕುಲಾವಿ’, ನಾಪತ್ತೆಯಾದ ಅಕ್ಕನ ಸುಳಿವನ್ನು ಅಮ್ಮನಿಗೆ ತಿಳಿಸಲು ರವ್ಯಾ ಓಡಿಬರುವುದರೊಂದಿಗೆ ಆರಂಭವಾಗುತ್ತದೆ. ಹಳ್ಳಿಯಿಂದ ಬರುವ ತನ್ನ ಅಪ್ಪಅಮ್ಮನನ್ನು ಕರೆತರಲು ರುಕ್ಮಾಂಗದ ನಸುಕಿನಲ್ಲಿ ಬಸ್‌ ನಿಲ್ದಾಣಕ್ಕೆ ಹೊರಡುವುದರೊಂದಿಗೆ ‘ಭಾಮೆ ಕೇಳೊಂದು ದಿನ’ ಆರಂಭವಾಗುತ್ತದೆ. ‘ಬೆಳಕಿನ ಬಿಡಾರ’ ಕಥೆ ಆರಂಭವಾಗುವುದು ತನ್ನ ಬಾಲ್ಯದ ಸ್ಮೃತಿಗಳ ಕರೆಗೆ ಓಗೊಟ್ಟು ಬರುವ ಮುನ್ನಾನ ಹುಡುಕಾಟದೊಂದಿಗೆ. ವಿಹಂಗಮನೆಂಬ ಚಿಗುರುಮೀಸೆಯ ತರುಣ ಮನೆ ಮನೆಗೆ ಪೇಪರ್‌ ಹಾಕುವ ಸುತ್ತಾಟದೊಂದಿಗೆ ‘ವಾಯಾ ಚಿನ್ನದ ಕೇರಿ’ ಹಾಗೂ ನಟಿಯೊಬ್ಬಳು ಶೂಟಿಂಗ್‌ ಸ್ಪಾಟ್‌ಗೆ ಹೋಗಲು ಕಾರು ಹತ್ತುವುದರೊಂದಿಗೆ ‘ಕಾಗದದ ಚೂರು’ ಕಥೆಗಳು ತೆರೆದುಕೊಳ್ಳುತ್ತವೆ. ‘ಅನಾರ್ಕಲಿಯ ಸೇಫ್ಟಿಪಿನ್‌’ ಶಾಲಾಮಕ್ಕಳ ಪ್ರವಾಸದ ಕಲರವದೊಂದಿಗೆ ಬಿಚ್ಚಿಕೊಳ್ಳುತ್ತದೆ.

ಹೀಗೆ, ಪಯಣ ಅಥವಾ ಹುಡುಕಾಟದ ಪ್ರಸಂಗವೊಂದರ ಮೂಲಕ ಕಥೆ ಆರಂಭಿಸುವ ಜಯಂತ್‌ ಅವರಿಗೆ ಮುಟ್ಟಬೇಕಾದ ಗುರಿಯ ಬಗ್ಗೆ ಲಕ್ಷ್ಯವಿಲ್ಲ. ಅವರ ಆಸಕ್ತಿಯಿರುವುದು, ದಾರಿಯಲ್ಲಿ ಎಡತಾಕುವ ಬಿಂಬಗಳ ಬಗ್ಗೆ. ಜೀವನದ ಬಗ್ಗೆ ಅಪಾರ ಪ್ರೇಮವುಳ್ಳ ವ್ಯಕ್ತಿಯೊಬ್ಬ, ತನ್ನ ದೈನಿಕದ ಪಯಣದಲ್ಲಿ ಎದುರಾಗುವ ಬಿಂಬಗಳೊಂದಿಗೆ ಒಡನಾಡುವುದು ಹಾಗೂ ಆ ಬಿಂಬಗಳ ಅಂತರಂಗವನ್ನು ಕಂಡು ಬೆರಗಾಗುವ ಬೆಚ್ಚಿಬೀಳುವ ಪರಿ ಇಲ್ಲಿನ ಕಥೆಗಳಲ್ಲಿದೆ. ಈ ಪಯಣ ವೈಯಕ್ತಿಕವಾಗಿರದೆ, ಸಾಮೂಹಿಕಪಯಣವಾಗಿ ರೂಪಾಂತರಿಸುವಲ್ಲಿ ಜಯಂತರ ಕಥೆಗಳ ಯಶಸ್ಸಿದೆ. ಅವರ ಕಥೆಗಳು, ಆರಂಭ ಮತ್ತು ಅಂತ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ದಾರಿಯಲ್ಲಿನ ಅನುಭವವನ್ನೇ ಮುಖ್ಯವಾಗಿಸಿಕೊಂಡಿವೆ.

ಜಯಂತರ ವಿಶಿಷ್ಟ ಕಥನಪ್ರತಿಭೆಗೆ ಉದಾಹರಣೆಯಾಗಿ, ‘ಕುತನಿ ಕುಲಾವಿ’ ಮತ್ತು ‘ಭಾಮೆ ಕೇಳೊಂದು ದಿನ’ ಕಥೆಗಳನ್ನು ನೋಡಬಹುದು. ಹೆತ್ತವರ ಸಮ್ಮುಖದಲ್ಲೇ ಮನೆಯನ್ನು ಬಿಟ್ಟು ಪ್ರೇಮಿಯೊಂದಿಗೆ ಓಡಿಹೋದ ಅಕ್ಕ ಚಿತ್ತಿಯ ಸುಳಿವು ಹಿಡಿದ ರವ್ಯಾ, ಅಮ್ಮನಿಗೆ ಸುದ್ದಿ ತಿಳಿಸಲು ಮನೆಗೆ ಓಡಿಬರುವುದರೊಂದಿಗೆ ಶುರುವಾಗುವ ಕಥೆ, ಅಕ್ಕನನ್ನು ಮನೆಗೆ ಕರೆದುಕೊಂಡು ಬರಲು ರವ್ಯಾ ಹೊರಡುವುದರೊಂದಿಗೆ ಕೊನೆಗೊಳ್ಳುತ್ತದೆ. ಚಿತ್ತಿ ಮತ್ತು ರವ್ಯಾರ ಅಪ್ಪನ ಬದುಕು ಕಟ್ಟಿಕೊಳ್ಳುವ ದಿನಗಳಿಗೆ ಹೊರಳುವ ಕಥೆ, ಧಾರವಾಡದ ಸಾಂಸ್ಕೃತಿಕ ಪಲ್ಲಟಗಳ ಬಗ್ಗೆ ಗಮನಸೆಳೆಯುತ್ತದೆ; ಹೆತ್ತವರನ್ನು ಊರುಗಳಲ್ಲಿ ಮನೆ ಕಾಯಲು ಬಿಟ್ಟು ದೂರದೇಶಗಳಲ್ಲಿ ನೆಲೆಸಿರುವ ಮಕ್ಕಳ ಅಸಂಗತ ನಡವಳಿಕೆಯನ್ನು ಗೇಲಿ ಮಾಡುತ್ತದೆ.

ಮಕ್ಕಳ ಕಣ್ಣಲ್ಲಿ ತಮ್ಮ ಬದುಕಿನ ಅರ್ಥಪೂರ್ಣತೆಯನ್ನು ಕಾಣಲು ಹಂಬಲಿಸುವ ಅಮ್ಮಅಪ್ಪ ಒಂದೆಡೆ, ಯೌವನದ ಉಮೇದಿನಲ್ಲಿ ಹೆತ್ತವರ ಕಾಳಜಿಯನ್ನು ನಿರ್ಲಕ್ಷಿಸಿ ಪ್ರೇಮಿಯೊಂದಿಗೆ ಬೈಕ್‌ ಹತ್ತುವ ಚಿತ್ತಿ ಇನ್ನೊಂದೆಡೆ – ಬದುಕಿನ ಬಹು ಆಯಾಮಗಳನ್ನು ‘ಕುತನಿ ಕುಲಾವಿ’ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಯೌವನದ ಕಾವು ಮತ್ತು ಇಳಿವಯಸ್ಸಿನ ಪ್ರೌಢ ಚೆಲುವು ಎರಡನ್ನೂ ಕಥೆ ಬದುಕಿನ ಸಹಜ ವರ್ತನೆಗಳೆನ್ನುವಂತೆ ಚಿತ್ರಿಸುತ್ತದೆ. ‘ಭಾಮೆ ಕೇಳೊಂದು ದಿನ’ ಕಥೆಯಲ್ಲೂ ಹೊಸ ತಲೆಮಾರಿನ ಹುಡುಗಹುಡುಗಿಯರ ಲೋಕದೊಂದಿಗೆ, ಇಳಿವಯಸ್ಸಿನ ದಂಪತಿಯ ಆರ್ದ್ರ ಚಿತ್ರಣವಿದೆ.

ನಿರ್ದಿಷ್ಟ ಪ್ರಸಂಗ ಅಥವಾ ಬದುಕಿನ ಯಾವುದೋ ಕ್ಷಣವೊಂದನ್ನು ಉಜ್ಜಿ ಉಜ್ಜಿ, ಅದರ ಹೊಳಪು ಅಪರಂಜಿತನವನ್ನು ಸಹೃದಯರಿಗೆ ಕಾಣಿಸುವುದು ಸಣ್ಣಕಥೆಯೊಂದರ ಉದ್ದೇಶವಷ್ಟೇ. ಇಂಥ ಚೌಕಟ್ಟನ್ನು ಜಯಂತರ ಕಥೆಗಳಲ್ಲಿ ಕಾಣುವುದು ಕಷ್ಟ. ಬೇಲಿ ಜಿಗಿಯಲಿಕ್ಕೆ ಸದಾ ತುದಿಗಾಲಲ್ಲಿ ನಿಂತಿರುವಂತೆ ಕಾಣಿಸುವ ಅವರ ರಚನೆಗಳಲ್ಲಿ ಕಥೆಯ ಕೇಂದ್ರ ಎನ್ನಬಹುದಾದ ನಿರ್ದಿಷ್ಟ ಕ್ಷಣವೊಂದನ್ನು ಗುರ್ತಿಸಬಹುದಾದರೂ, ಆ ಕ್ಷಣದ ಹಂಗು ತೊರೆದಂತೆ ಕಥೆ ಬೇರೆ ಬೇರೆ ದಿಕ್ಕಿನಲ್ಲಿ ಹರಿದುಬಿಡುತ್ತದೆ ಅಥವಾ ಕಥೆಗಾರರು ಹರಿಯಬಿಡುತ್ತಾರೆ.

ತಗ್ಗು ಸಿಕ್ಕಲ್ಲೆಲ್ಲ ನುಗ್ಗುವ ತೊರೆಯ ಚಲನೆಯಂತಹ ರಚನೆಗಳೊಂದಿಗೆ ಕೂಡಿಕೊಳ್ಳುವ ಹಳ್ಳಗಳು, ಕೆಲವೊಮ್ಮೆ ಹೊಳೆಯ ಉಗಮಸ್ಥಾನವನ್ನೇ ಮರೆಸಿಬಿಡುವಷ್ಟು ಉಜ್ವಲವಾಗಿವೆ. ಇದಕ್ಕೆ ಉದಾಹರಣೆಯಾಗಿ ಜಯಂತರ ಅತ್ಯುತ್ತಮ ಕಥೆಗಳಲ್ಲೊಂದಾದ ‘ಮೃಗನಯನಾ’ ನೋಡಬಹುದು. ಹಸ್ತಾಕ್ಷರ ಎನ್ನುವ ರಸಿಕ ಪ್ರೇಕ್ಷಕನೊಬ್ಬ ನಾಟಕ ಪ್ರಯೋಗವೊಂದಕ್ಕೆ ಮುಖಾಮುಖಿಯಾಗುವ ಮೂಲಕ ತೆರೆದುಕೊಳ್ಳುವ ಕಥೆ, ಕೆಫೆಯ ಸರ್ವರನೊಬ್ಬ ತನ್ನ ಕೆಲಸ ಮತ್ತು ನಾಟಕದ ಪಾತ್ರದ ನಡುವೆ ಒದ್ದಾಡುವ ಪ್ರಸಂಗವನ್ನು ಚಿತ್ರಿಸುತ್ತದೆ. ಎರಡು ಪಾತ್ರಗಳ ನಡುವಿನ ಈ ಒದ್ದಾಟ, ಒಮ್ಮಿಂದೊಮ್ಮೆಗೆ ಸ್ಥಾನಪಲ್ಲಟಗೊಂಡು, ವೇಟರನ ಜಾಗದಲ್ಲಿ ಹಸ್ತಾಕ್ಷರನ ತಾಯಿ ನಿಲ್ಲುತ್ತಾಳೆ. ಮುಂದೆ ಈ ಒದ್ದಾಟ ಕಥಾನಾಯಕನ ತಂದೆಯದಾಗುತ್ತದೆ. ಗಾಣಿಗಾಪುರ ಮತ್ತು ಭೀಮಾನದಿ ಹಾಗೂ ಮುಂಬಯಿ, ಸಮುದ್ರ, ಧೋಬಿಘಾಟ್‌ – ಕಥೆಯ ಎರಡು ತುದಿಗಳಂತೆ ಕಾಣಿಸುತ್ತವೆ. ವೇಟರನ ದ್ವಂದ್ವದೊಂದಿಗೆ ಆರಂಭವಾಗುವ ಕಥೆ ಕೊನೆಗೆ ಹಸ್ತಾಕ್ಷರನ ದ್ವಂದ್ವ ತಿಳಿಗೊಳ್ಳುವ ಸೂಚನೆಯಲ್ಲಿ ಕೊನೆಗೊಳ್ಳುತ್ತದೆ.

ಅವ್ಯವಸ್ಥಿತವಾದ ಬದುಕು ಮತ್ತು ಸಮಾಜವನ್ನು ಯಾವುದೋ ಎಳೆಯೊಂದು ಸುಸಂಗತವಾಗಿ ಇರಿಸಿರುವುದರ ದರ್ಶನವನ್ನು ಜಯಂತರ ಕಥೆಗಳು ನಮಗೆ ಕಾಣಿಸುತ್ತವೆ‌. ಅನಾರ್ಕಲಿಯ ಉದ್ದಲಂಗದ ಆಕಾರವನ್ನು ನೂರಾರು ಸೇಫ್ಟಿಪಿನ್ನುಗಳು ತಮ್ಮ ಮುಖದೋರದೆ ಹಿಡಿದಿಟ್ಟಿವೆ. ಇಂಥ ನಿಸ್ವಾರ್ಥ ಸೇಫ್ಟಿಪಿನ್‌ಗಳು ಜಯಂತರ ಎಲ್ಲ ಕಥೆಗಳಲ್ಲೂ ಬೇರೆ ಬೇರೆ ರೂಪದಲ್ಲಿವೆ. ಏನೆಲ್ಲ ಜಂಜಡಗಳ ನಡುವೆಯೂ ಈ ಜಗತ್ತು ಜೀವಿಸಲಿಕ್ಕೆ ಅಗತ್ಯವಾದ ತಾಯಿಗುಣವನ್ನು ಉಳಿಸಿಕೊಂಡಿವೆ ಎನ್ನುವ ಭರವಸೆಯನ್ನು ಅವರ ಕಥೆಗಳು ನೀಡುತ್ತವೆ. 

ಕತ್ತರಿಸಿ ತೆಗೆದರೆ ಸ್ವತಂತ್ರ ಕಿರುಗಥೆಗಳಂತೆ ತೋರುವ ಸಾಲುದೀಪಗಳು ಜಯಂತರ ಕಥೆಗಳಲ್ಲಿ ಇದ್ದಕ್ಕಿದ್ದಂತೆ ಎದುರಾಗಿ ಮನಸ್ಸನ್ನು ಬೆಳಗಿಸುತ್ತವೆ. ‘ಎಷ್ಟೆಲ್ಲ ಹಕ್ಕಿಗಳು ಕೂತು ಹಾಡಿ ಹೋದ ಮರದಂತಿತ್ತು’ ಎನ್ನುವ ಪಿಯಾನೊದ ಕುರಿತ ಬಣ್ಣನೆ, ‘ಇಲ್ಲೊಂದು ಅಸಹಜವಾದ ನಿಶ್ಶಬ್ದವಿತ್ತು. ಏಕೆಂದರೆ ಎಲ್ಲರೂ ತಂತಮ್ಮ ಮೊಬೈಲುಗಳೆಂಬ ಹಾಲಿನ ಬಾಟಲಿಗೆ ಅಂಟಿಕೊಂಡ ಶಿಶುವಾಗಿದ್ದರು’ ಎನ್ನುವಂಥ ಸಾಲುಗಳು, ಸಂದರ್ಭದಾಚೆಗೂ ಬೆಳಕು ಚೆಲ್ಲುವ ದೀಪಗಳಲ್ಲದೆ ಮತ್ತೇನು?

ಜಯಂತರ ಕಥೆಗಳು, ಸಾಹಿತ್ಯದ ವಿದ್ಯಾರ್ಥಿಗಳಿಗೆ ಪರಿಚಿತವಾದ ಸಣ್ಣಕಥೆಯ ಪರಿಕಲ್ಪನೆಗಳನ್ನು ಬುಡಮೇಲು ಮಾಡುವ ರಚನೆಗಳಂತೆ; ನುರಿತ ವಯ್ಯಾಕರಣಿಯೊಬ್ಬ ಮುರಿದುಕಟ್ಟಿದ ವ್ಯಾಕರಣದಂತೆ ಕಾಣಿಸುತ್ತವೆ. ರೂಢಿಗತ ಕಥನದ ಚೌಕಟ್ಟನ್ನು ಬಿಟ್ಟು, ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯುವ ಕಿಂದರಜೋಗಿಯಂತೆ ಜಯಂತ‌ ಓದುಗರನ್ನು ತಮ್ಮೊಂದಿಗೆ ಸಹಪಯಣಿಗರನ್ನಾಗಿ ಮಾಡಿಕೊಳ್ಳುತ್ತಾರೆ. ‘ಎವರ್ ಗ್ರೀನ್’ ಕಥೆಯೊಂದನ್ನು ಬಿಟ್ಟರೆ ಉಳಿದವೆಲ್ಲ ಕಥೆಯ ಸಾಧ್ಯತೆಗಳನ್ನು ಬೇರೆಯದೇ ರೀತಿಯಲ್ಲಿ ನೋಡಲು ಒತ್ತಾಯಿಸುವಂತಹವು. ಉಳಿದ ಕಥೆಗಾರರ ಬರವಣಿಗೆಯಲ್ಲಿ ಅನಗತ್ಯ ವಿವರಗಳ ಕಸರತ್ತಷ್ಟೇ ಆಗಬಹುದಾದ ಸಾಲುಗಳು ಜಯಂತರ ಬರವಣಿಗೆಯಲ್ಲಿ ಶಬ್ದಚಿತ್ರಗಳ ಮೆರವಣಿಗೆಯಾಗಿ ಕಂಗೊಳಿಸುತ್ತವೆ‌.

‘ಎವರ್‌ಗ್ರೀನ್‌’ ಜಯಂತರ ವ್ಯಕ್ತಿತ್ವಕ್ಕೂ ಅವರ ಕಥನಶೈಲಿಗೂ ಹೋಲಿಕೆಯಾಗಿ ಓದಿಕೊಳ್ಳಬಹುದಾದ ಕಥೆ. ಎದೆಮಟ್ಟಕ್ಕೆ ಬೆಳೆದ ಮಗನಿದ್ದರೂ, ತನ್ನ ತಾರುಣ್ಯದ ಚಾರ್ಮ್‌ ಮತ್ತು ಫಾರ್ಮ್‌ ಉಳಿಸಿಕೊಳ್ಳಲು ಹೆಣಗಾಡುವ ಎವರ್‌ಗ್ರೀನ್‌ ಹೀರೊ ಒದ್ದಾಡುತ್ತಾನೆ. ಕಥೆಯ ಹೀರೊ ದಣಿದಿರುವುದು ಮಗನ ಸ್ವಗತದಲ್ಲಿ ಸ್ಪಷ್ಟವಾಗುತ್ತದೆ. ಆದರೆ, ಜಯಂತ್‌ ದಣಿದಿಲ್ಲ ಎನ್ನುವುದಕ್ಕೆ ‘ಅನಾರ್ಕಲಿಯ ಸೇಫ್ಟಿಪಿನ್‌’ ಸಂಕಲನದ ಕಥೆಗಳು ಸಾಕ್ಷ್ಯನುಡಿಯುವಂತಿವೆ. ಸುಮಾರು ನಾಲ್ಕು ದಶಕಗಳ ಕಾಲ ಕಥೆಗಾರನಾಗಿ ಓದುಗರ ಕುತೂಹಲ ಉಳಿಸಿಕೊಂಡಿರುವುದು ಕನ್ನಡ ಸಾಹಿತ್ಯದ ಮಟ್ಟಿಗೆ ಒಂದು ವಿಶೇಷ ವಿದ್ಯಮಾನವೇ ಸರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.